ಬ್ರಿಟನ್ ನ ನೂತನ ಪ್ರಧಾನಿಯಾಗಿ ತೆರೆಸಾ ಮೇ ಅಧಿಕಾರ ಸ್ವೀಕಾರ
ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಕನ್ಸರ್ವೇಟಿವ್ ಪಕ್ಷದ ನಾಯಕಿ ತೆರೆಸಾ ಮೇ ರವರು ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಬ್ರಿಟನ್ ನ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
- ಬ್ರಿಟನ್ ನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಬ್ರೆಕ್ಸಿಟ್ ಗಾಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಪ್ರಧಾನಿ ಹುದ್ದೆಯನ್ನು ತೆರೆಸಾ ವಹಿಸಿಕೊಂಡಿದ್ದಾರೆ. ಡೇವಿಡ್ ಕ್ಯಾಮರೂನ್ ರವರು ಆರು ವರ್ಷಗಳ ಕಾಲ ಬ್ರಿಟನ್ ಪ್ರಧಾನಿ ಆಗಿದ್ದರು.
- ಮಾರ್ಗರೇಟ್ ಥ್ಯಾಚರ್ ಬ್ರಿಟನ್ ನ ಮೊದಲ ಮಹಿಳಾ ಪ್ರಧಾನಿ ಆಗಿದ್ದರು. ಥ್ಯಾಚರ್ ರವರು 1979-90ರ ತನಕ ಅಧಿಕಾರದಲ್ಲಿದ್ದರು. 59 ವರ್ಷದ ತೆರೆಸಾ ಬ್ರಿಟನ್ ನ ಎರಡನೇ ಮಹಿಳಾ ಪ್ರಧಾನಿ ಆಗಿದ್ದಾರೆ.
ತೆರೆಸಾ ಮೇ ಹಿನ್ನಲೆ:
- ರಾಜಕೀಯ ಕ್ಷೇತ್ರವನ್ನ ಸೇರುವ ಮುನ್ನ ತೆರೆಸಾ ರವರು ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ 1977 ರಿಂದ 1983 ರ ತನಕ ಸೇವೆ ಸಲ್ಲಿಸಿದ್ದರು
- ರಾಜಕೀಯ ಪ್ರವೇಶದ ಬಳಿಕ 1986 ರಿಂದ 1994 ರವರೆಗೆ ಲಂಡನ್ ಬರೋ ಆಫ್ ಮೆರ್ಟನ್ ನ ಕೌನ್ಸಿಲರ್ ಆಗಿದ್ದರು. 1997 ರಿಂದ ತೆರೆಸಾ ರವರು ಪಾರ್ಲಿಮೆಂಟ್ ಆಫ್ ಮೆಡನ್ ಹೆಡ್ ನ ಸದಸ್ಯೆಯಾಗಿದ್ದಾರೆ.
- ಪ್ರಧಾನಿ ಹುದ್ದೆ ತ್ಯಜಿಸಿರುವ ಡೆವಿಡ್ ಕ್ಯಾಮರೂನ್ ರವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ತೆರೆಸಾ ರವರು ಬ್ರಿಟನ್ ನ ಗೃಹ ಸಚಿವೆಯಾಗಿದ್ದರು. ಬ್ರಿಟನ್ ಇತಿಹಾಸದಲ್ಲೇ ದೀರ್ಘ ಕಾಲ ಗೃಹ ಸಚಿವೆ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ತೆರೆಸಾ ಅವರದು.
ಎ.ಕೆ. ಪಟ್ನಾಯಕ್ ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್ ನ (NATGRID)ನ ನೂತನ ಸಿಇಒ
ಹಿರಿಯ ಐಪಿಎಸ್ ಅಧಿಕಾರಿ ಎ.ಕೆ.ಪಟ್ನಾಯಕ್ ರವರನ್ನು ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್ (NATGRID)ನ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಮಂಡಳಿ ಎ.ಕೆ.ಪಟ್ನಾಯಕ್ ಅವರನ್ನು ಸಿಇಒ ಹುದ್ದೆಗೆ ಆಯ್ಕೆಮಾಡಿದೆ. ಪಟ್ನಾಯಕ್ ರವರು 2018ರ ತನಕ ಈ ಹುದ್ದೆಯಲ್ಲಿ ಮುಂದೆವರಿಯಲ್ಲಿದ್ದಾರೆ.
- 1983ರ ಗುಜರಾತ್ ಬ್ಯಾಚ್ ಐಪಿಎಸ್ ಅಧಿಕಾರಿ ಅಶೋಕ್ ಪಟ್ನಾಯಕ್ ಸದ್ಯ ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರ ಅಳಿಯ ಕೂಡ ಆಗಿದ್ದಾರೆ.
- NATGRID ನ ಪ್ರಥಮ ಸಿಇಒ ಆಗಿದ್ದ ರಘು ರಾಮನ್ ರವರ ಅವಧಿ ಜೂನ್ 2015ಕ್ಕೆ ಮುಗಿದಿದ್ದ ಕಾರಣ ಅಂದಿನಿಂದ ಈ ಹುದ್ದೆ ಖಾಲಿಯಾಗಿತ್ತು.
ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್ ಬಗ್ಗೆ:
- ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್ ಅನ್ನು 26/11ರ ಮುಂಬೈ ದಾಳಿಯ ಬಳಿಕ ಅಂದಿನ ಕೇಂದ್ರ ಸರ್ಕಾರ ರಚಿಸಿತ್ತು.
- ದೇಶದ ಭಯೋತ್ಪಾದನೆ ವಿರುದ್ದ ಹೋರಾಡುವ ಸಾಮರ್ಥ್ಯವನ್ನು ಬಲಪಡಿಸುವ ಮಹದಾಸೆಯ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ. ನ್ಯಾಟ್ ಗ್ರಿಡ್ ದೇಶದ ರಕ್ಷಣೆಯ ವಿಷಯದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುತ್ತದೆ. ದೇಶದಲ್ಲಿ ಗುಪ್ತಚರಕ್ಕೆ ಸಂಬಂಧಿಸಿದಂತೆ 21 ಬಹುಮುಖ್ಯ ಸಂಸ್ಥೆಗಳಿವೆ. ಅಷ್ಟು ಸಂಸ್ಥೆಗಳಿಗೆ ಬರುವ ಮಾಹಿತಿ ಕೊನೆಗೆ ಶೇಕರವಾಗುವುದು ನ್ಯಾಟ್ ಗ್ರಿಡ್ ಸಂಸ್ಥೆಯಲ್ಲೇ ಅಷ್ಟೊಂದು ಪ್ರಮುಖ ಸ್ಥಾನವನ್ನು ಈ ಸಂಸ್ಥೆಗೆ ಕಲ್ಪಿಸಲಾಗಿದೆ.
ಸೂಡಾನ್ ನಲ್ಲಿ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಆಪರೇಷನ್ “ಸಂಕಟ್ ಮೋಚನ್”
ಯುದ್ಧ ಪೀಡಿತ ದಕ್ಷಿಣ ಸೂಡಾನ್ನ ಜುಬಾದಲ್ಲಿ ಅಪಾಯಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರವು ‘ಸಂಕಟ ಮೋಚನ್’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ. ಭಾರತೀಯ ಸೇನಾ ಪಡೆ ಕೈಗೊಳ್ಳಲಿರುವ ಈ ಕಾರ್ಯಾಚರಣೆ ಮುಂದಾಳತ್ವವನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್ ವಹಿಸಲಿದ್ದಾರೆ. ಹಿಂದಿ ಭಾಷೆಯಲ್ಲಿ ಸಂಕಟ್ ಮೋಚನ್ ಎಂದರೆ ಅಪಾಯದಿಂದ ಪಾರು ಮಾಡುವುದು ಎಂದರ್ಥ.
- ಯುದ್ಧ ಪೀಡಿತ ದಕ್ಷಿಣ ಸೂಡಾನ್ನಲ್ಲಿ ಸುಮಾರು 600 ಜನ ಭಾರತೀಯರು ಸಿಲುಕಿದ್ದು, ಅದರಲ್ಲಿ ರಾಜಧಾನಿ ಜುಬಾದಲ್ಲಿ 450 ಜನ ನೆಲೆಸಿದ್ದರೆ, ಇನ್ನುಳಿದವರು ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದಾರೆ.
- ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತರಲು ಎರಡು ಸಿ-17 ಮಿಲಿಟರಿ ಸಾರಿಗೆ ವಿಮಾನವನ್ನು ಭಾರತೀಯ ಸೇನಾ ಪಡೆ ಬಳಸಲಿದೆ.
- ದಕ್ಷಿಣ ಸೂಡಾನಿನ ಭಾರತ ರಾಯಭಾರಿ ಕಚೇರಿ ವಕ್ತಾರ ಮೆನನ್ ಸಹಕಾರದೊಂದಿಗೆ ರಕ್ಷಣಾ ಕಾರ್ಯ ನಡೆಯಲಿದೆ.