ಕೇರಳ ಪ್ರವಾಸೋದ್ಯಮಕ್ಕೆ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ಸ್ (PATA)ನ ಪ್ರಶಸ್ತಿ
ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕಾಗಿ ಕೇರಳ ಸರ್ಕಾರ ಕೈಗೊಂಡಿರುವ ಹಲವಾರು ಯೋಜನೆಗಳಿಗಾಗಿ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ಸ್ (PATA)ನ ಎರಡು ಚಿನ್ನದ ಪ್ರಶಸ್ತಿಯನ್ನು ನೀಡಲಾಗಿದೆ. ಕೇರಳ ಪ್ರವಾಸೋದ್ಯಮದ ಪ್ರವಾಸ ಜಾಹೀರಾತು ಪ್ರಸರಣ ಮಾಧ್ಯಮ ಮತ್ತು ಇ-ಸುದ್ದಿಪತ್ರ ವಿಭಾಗಕ್ಕೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಸೆಪ್ಟೆಂಬರ್ 9, 2016 ರಲ್ಲಿ ಇಂಡೋನೇಷ್ಯಾದ ಜಕರ್ತಾದಲ್ಲಿ ನಡೆಯಲಿರುವ PATA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.
- ಪ್ರವಾಸ ಜಾಹೀರಾತು ಪ್ರಸರಣ ಮಾಧ್ಯಮ ವಿಭಾಗದಲ್ಲಿ ಕೇರಳ ಪ್ರವಾಸೋದ್ಯಮದ “ವಿಸಿಟ್ ಕೇರಳ ದೂರದರ್ಶನ ಪ್ರಚಾರ ಅಭಿಯಾನವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
- ಇ-ಸುದ್ದಿ ವಿಭಾಗದಲ್ಲಿ ಕೇರಳ ಪ್ರವಾಸೋದ್ಯಮ ಜಾರಿಗೆ ತಂದಿರುವ ಇ-ಸುದ್ದಿಪತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
- 2015 ರಲ್ಲೂ ಸಹ ಕೇರಳ ಪ್ರವಾಸೋದ್ಯಮ PATA ಪ್ರಶಸ್ತಿಗೆ ಭಾಜನವಾಗಿತ್ತು. ಪಾರಂಪರಿಕ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಕೇರಳದ ಮೊಝಿರಿಸ್ ಪಾರಂಪರಿಕ ಯೋಜನೆಗೆ ಪ್ರಶಸ್ತಿಯನ್ನು ನೀಡಲಾಗಿತ್ತು.
PATA ಪ್ರಶಸ್ತಿಯ ಬಗ್ಗೆ:
- ಈ ಪ್ರಶಸ್ತಿಯನ್ನು ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ಸ್ ಮತ್ತು ಮಕಾವು (Macau) ಸರ್ಕಾರದ ಪ್ರವಾಸೋದ್ಯಮ ಕಚೇರಿ ಪ್ರಾಯೋಜಕತ್ವದಲ್ಲಿ ನೀಡಲಾಗುತ್ತಿದೆ.
- ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರವಾಸೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದ 25 ಪ್ರತ್ಯೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ನೀಡಲಾಗುತ್ತಿದೆ.
- ಪಿಎಟಿಎ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮದ ಜವಾಬ್ದಾರಿಯುತ ಬೆಳವಣಿಗೆಗಾಗಿ ರಚಿಸಲಾದ ಸಂಘವಾಗಿದೆ.
ದೇಶದ ಮೊದಲ ಜಲ ಮೆಟ್ರೋ ಯೋಜನೆ (Water Metro Project)ಗೆ ಕೇರಳದ ಕೊಚ್ಚಿಯಲ್ಲಿ ಚಾಲನೆ
ಕೇರಳ ಸರ್ಕಾರ ದೇಶದ ಮೊದಲ ಜಲ ಮೆಟ್ರೋ ಯೋಜನೆಯಾದ ಕೊಚ್ಚಿ ಜಲ ಮೆಟ್ರೋ ಯೋಜನೆಗೆ ಕೊಚ್ಚಿಯಲ್ಲಿ ಚಾಲನೆ ನೀಡದೆ. ಕೇರಳ ಮುಖ್ಯಮಂತ್ರಿ ಪಿನರಯಿ ವಿಜಯನ್ ರವರು ಈ ಯೋಜನೆಗೆ ಕೊಚ್ಚಿಯಲ್ಲಿ ಚಾಲನೆ ನೀಡಿದರು.
- ಈ ಯೋಜನೆಯು ಕೊಚ್ಚಿ ಸುತ್ತಮುತ್ತಲಿನ ದ್ವೀಪ ಪ್ರದೇಶ ಹಾಗೂ ನಗರದ ನಡುವೆ ಜಲ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
- ಈ ಯೋಜನೆಯನ್ನು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಉಪ ಸೇವೆಯಾಗಿ ಅಭಿವೃದ್ದಿಪಡಿಸಲಿದ್ದು, ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದೆ.
- ಜರ್ಮನ್ ಡೆಮಲಪ್ಮೆಂಟ್ ಬ್ಯಾಂಕ್ ಈ ಯೋಜನೆಗೆ ಆರ್ಥಿಕ ನೆರವು ನೀಡಲಿದ್ದು, ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
- ಕೊಚ್ಚಿ ಹಿನ್ನೀರಿನಲ್ಲಿರುವ ದ್ವೀಪ ಪ್ರದೇಶಗಳೊಂದಿಗೆ ಮುಖ್ಯ ನಗರವನ್ನು ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿ.
ಪ್ರಸಿದ್ದ ಗಾಯಕ ಬಪಿ ಲಹಿರಿಗೆ ಪಶ್ಚಿಮ ಬಂಗಾಳದ ಮಹನಾಯಕ್ ಪ್ರಶಸ್ತಿ
ಖ್ಯಾತ ಸಂಗೀತಾ ನಿರ್ದೇಶಕ ಹಾಗೂ ಗಾಯಕ ಬಪಿ ಲಹಿರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡುವ ಮಹನಾಯಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರು ಖ್ಯಾತ ಬಂಗಾಳಿ ನಟ ಉತ್ತಮ್ ಕುಮಾರ್ ರವರ 36ನೇ ಪುಣ್ಯ ತಿಥಿ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಲಹಿರಿಗೆ ಪ್ರಧಾನ ಮಾಡಿದರು.
- ಇದೇ ಸಂದರ್ಭದಲ್ಲಿ ಬಂಗಾಳಿ ಚಿತ್ರಗಳಾದ “ಬೆಲ ಶೆಶೆ” ಹಾಗೂ “ಶಂಕಚಿಲ್” ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನರಾದವು.
- ಮಹನಾಯಕ್ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಸರ್ಕಾರ 2012 ರಿಂದ ಕೊಡ ಮಾಡುತ್ತಿದೆ. ಬಂಗಾಳದ ಪ್ರಸಿದ್ದ ನಟ ಉತ್ತಮ್ ಕುಮಾರ್ ರವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಜ್ಯಾವೆಲಿನ್ ಥ್ರೋನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ನೀರಜ್ ಚೋಪ್ರ
ಭಾರತದ ಜ್ಯಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ರವರು ಕಿರಿಯರ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದಾರೆ. ಆ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದ್ದಾರೆ.
- ನೀರಜ್ ರವರು ಪೋಲೆಂಡ್ನ ಬೈಡ್ಗೊಸಿಗ್ಜ್ನಲ್ಲಿ ನಡೆದ ಐಎಎಎಫ್ ವಿಶ್ವ ಯು-20 ಚಾಂಪಿಯನ್ಶಿಪ್ನಲ್ಲಿ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ 86.48 ಮೀ ದೂರಕ್ಕೆ ಎಸೆಯುವ ಮೂಲಕ ವಿಶ್ವ ಚಾಂಪಿಯನ್ ಆಗಿ ದಾಖಲೆ ಬರೆದಿದ್ದಾರೆ.
- ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಅವರದಾಗಿದೆ.
- ದಕ್ಷಿಣ ಆಫ್ರಿಕಾದ ಜೋಹಾನ್ ಗ್ರಾಬ್ಲರ್ ಅವರು 80.59 ಮೀ. ದೂರಕ್ಕೆ ಎಸೆದು ಎರಡನೇ ಸ್ಥಾನ (ಬೆಳ್ಳಿ) ಗಳಿಸಿದರೆ, 79.65 ಮೀ ದೂರಕ್ಕೆ ಎಸೆದ ಗ್ರನಡಾದ ಆಯಂಡರ್ಸನ್ ಪೀಟರ್ಸ್ ಅವರು ಕಂಚಿನ ಪದಕ (3ನೇ ಸ್ಥಾನ)ವನ್ನು ಪಡೆದುಕೊಂಡರು.
- ಚೋಪ್ರಾ ರವರು ಲ್ಯಾಟಿವಿಯನ್ ಜಿಗಿಸಮುಂಡ್ಸ್ ಸಿರ್ಮಾಯಿಸ್ ಅವರು 84.69 ಮೀಟರ್ ದೂರಕ್ಕೆ ಜ್ಯಾವೆಲಿನ್ ಎಸೆದು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
- ಚೋಪ್ರಾ ರವರು ಐಎಎಎಫ್ ವಿಶ್ವ ಯು-20 ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ. ಈ ಹಿಂದೆ ಡಿಸ್ಕಸ್ ಥ್ರೋ ಕ್ರೀಡಾಪಟುಗಳಾದ ಸೀಮಾ ಅಂಟಿಲ್ ಪುಣಿಯ (2002 ರಲ್ಲಿ ಕಂಚಿನ ಪದಕ) ಮತ್ತು ನವಜೀತ್ ಕೌರ್ ದಿಲ್ಲಾನ್ (2014 ರಲ್ಲಿ ಕಂಚು) ಪದಕವನ್ನು ಗೆದ್ದಿದ್ದರು.
ನವ್ಯ ಭಾರತದ ಕಲಾವಿದ ಸಯ್ಯದ್ ಹೈದರ್ ರಝಾ ವಿಧಿವಶ
ವಿಶ್ವ ಪ್ರಖ್ಯಾತಿ ಆಧುನಿಕ ಭಾರತದ ಕಲಾವಿದ ಸಯ್ಯದ್ ಹೈದರ್ ರಝಾ ರವರು ವಿಧಿವಶರಾದರು. 94 ವರ್ಷ ವಯ್ಸಸಿನ ರಝಾ ರವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾರತೀಯ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿಗೊಳಿಸಿದ ಕೀರ್ತಿ ರಝಾ ಅವರಿಗೆ ಸಲ್ಲಬೇಕು.
ಎಸ್.ಎಚ್.ರಝಾ ರವರ ಬಗ್ಗೆ
- ರಝಾ ಅವರು 1922 ರಲ್ಲಿ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಬಬಾರಿಯಾ ಎಂಬಲ್ಲಿ ಜನಸಿದರು. ತನ್ನ 12ನೇ ವಯಸ್ಸಿನಲ್ಲೇ ರಝಾ ಅವರು ಚಿತ್ರಕಲೆಯಿಂದ ಆಕರ್ಷಿತರಾಗಿದ್ದರು.
- ಮೊದಲು ನಾಗ್ಪುರ ಚಿತ್ರ ಕಲಾ ಶಾಲೆಯಲ್ಲಿ (1939-44) ಅನಂತರ ಮುಂಬಯಿಯ ಜೆಜೆ ಸ್ಕೂಲ್ ಆಫ್ ಆರ್ಟ್ನಲ್ಲಿ (1943-47)ಅವರು ಚಿತ್ರಕಲೆಯನ್ನು ಅಭ್ಯಸಿಸಿದರು. 1950ರಲ್ಲಿ ಚಿತ್ರ ಕಲೆ ಅಭ್ಯಸಿಸುವ ಸುಲವಾಗಿ ಫ್ರಾನ್ಸ್ ಗೂ ತೆರಳಿದ್ದರು.
- ತಮ್ಮ ಚಿತ್ರಕಲೆಯಲ್ಲಿ ರಝಾ ರವರು “ಪುರುಷ-ಪ್ರಕೃತಿ” “ಬಿಂದು” ಮತ್ತು “ನಾರಿ” ಕಲ್ಪನೆಗಳನ್ನು ಸೊಗಸಾಗಿ ತೋರಿಸಿದ್ದರು.
ಪ್ರಶಸ್ತಿಗಳು:
- 1981ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. 1983ರಲ್ಲಿ ಅವರು ಲಲಿತ ಕಲಾ ಅಕಾಡೆಮಿಯ ಫೆಲೋ ಆಗಿ ಪುರಸ್ಕೃತರಾಗಿದ್ದರು. 2007ರಲ್ಲಿ ಪದ್ಮ ಭೂಷಣ ಮತ್ತು 2013 ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.
- ಫ್ರೆಂಚ್ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ “ಲೆಜಿಯನ್ ಆಪ್ ಆನರ್’ ಪೌರ ಪುರಸ್ಕಾರವನ್ನು 2015 ರಲ್ಲಿ ನೀಡಲಾಗಿತ್ತು.
ಫೇಸ್ ಬುಕ್ ನ ಇಂಟರ್ ನೆಟ್ ಡ್ರೋನ್ “ಅಖ್ವಿಲಾ” ಪರೀಕ್ಷಾರ್ಥ ಹಾರಾಟ ಯಶಸ್ವಿ
ಪ್ರಸಿದ್ದ ಸಾಮಾಜಿಕ ತಾಣ ಫೇಸ್ ಬುಕ್ ನ ಬಹುನಿರೀಕ್ಷಿತ ಇಂಟರ್ ನೆಟ್ ಡ್ರೋನ್ “ಅಖ್ವಿಲಾ” ಯಶಸ್ವಿಯಾಗಿ ಹಾರಾಟ ನಡೆಸಿದೆ. ಅಮೆರಿಕಾದ ಅರಿಜೋನಾ ಬಳಿ ಹಾರಿಬಿಡಲಾದ ಡ್ರೋನರ್ ಗಳು 96 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿವೆ. ಮೊದಲಿಗೆ ಡ್ರೋನರ್ ಗಳನ್ನು ಕೇವಲ 30 ನಿಮಿಷಗಳ ಕಾಲ ಹಾರಾಟ ಮಾಡಿಸುವ ಗುರಿಯನ್ನು ಹೊಂದಲಾಗಿತ್ತು.
ಅಖ್ವಿಲಾ (Aquila) ಬಗ್ಗೆ:
- ಜಗತ್ತಿನ ದೂರ ಪ್ರದೇಶಗಳಿಗೆ ಉಚಿತ ಇಂಟರ್ ನೆಟ್ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಅಖ್ವಿಲಾ ಡ್ರೋನ್ ಗಳನ್ನು ಸಾಮಾಜಿಕ ತಾಣ ಫೇಸ್ ಬುಕ್ ತಯಾರಿಸಿದೆ.
- ಸೌರಶಕ್ತಿ ಆಧಾರಿಸಿ ಹಾರಾಟ ನಡೆಸುವ ಈ ಡ್ರೋನ್ ಗಳನ್ನು ಫೇಸ್ ಬುಕ್ ಕನೆಕ್ಟಿವಿಟಿ ಲ್ಯಾಬ್ ಅಭಿವೃದ್ದಿಪಡಿಸಿದೆ.
- ಕಾರ್ಬನ್ ಫೈಬರ್ ಗಳಿಂದ ಮಾಡಲಾಗಿರುವ ಡ್ರೋನ್ ಗಳು 1000 ಫೌಂಡ್ ಗಿಂತ ಕಮ್ಮಿ ತೂಕದಾಗಿವೆ.
- ಭೂಮಿಯಿಂದ ಸುಮಾರು 18 ರಿಂದ 27 ಕಿ.ಮೀ ಎತ್ತರದಲ್ಲಿ ಡ್ರೋನ್ ಗಳ ಹಾರಾಟ ಮಾಡಲಿದ್ದು, ವಾತಾವರಣದ ಯಾವುದೇ ಪರಿಣಾಮ ಇವುಗಳ ಮೇಲಾಗುವುದಿಲ್ಲ. ಒಂದು ಡ್ರೋನ್ ಸುಮಾರು 60 ಮೈಲಿವರೆಗೆ ಇಂಟರ್ ನೆಟ್ ಸಂಪರ್ಕವನ್ನು ಕಲ್ಪಿಸಲಿವೆ.
- ಭೂಮಿಯಿಂದಲೇ ಈ ಡ್ರೋನ್ ಗಳ ಎತ್ತರ, ದಿಕ್ಕನ್ನು ಸಾಪ್ಟವೇರ್ ಮೂಲಕ ನಿರ್ವಹಿಸಬಹುದಾಗಿದೆ. ಒಂದು ಬಾರಿ ಹಾರಿಸಲಾದ ಡ್ರೋನ್ ಮೂರು ತಿಂಗಳ ಕಾಲ ಸತತವಾಗಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ.
- ಡ್ರೋನ್ ನ ಸಂಪರ್ಕ ಉಪಕರಣವು ಲೇಸರ್ ತಂತ್ರಜ್ಞಾನ ಬಳಸಿ ಡಾಟಾ ವನ್ನು ಭೂಮಿಗೆ ರವಾನಿಸಲಿದೆ.
ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ದ್ವಿಶತಕ ಬಾರಿಸಿದ ಭಾರತದ ಮೊದಲ ಕ್ರಿಕೆಟ್ ನಾಯಕ
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ರವರು ವೆಸ್ಟ್ ಇಂಡೀಸ್ ವಿರುದ್ದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಭಾರತ ಕ್ರಿಕೆಟ್ ನ ನಾಯಕನೊಬ್ಬ ವಿದೇಶಿ ನೆಲದ್ದಲ್ಲಿ ಈ ಸಾಧನೆ ಮಾಡಿದ ಮೊದಲಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ನ ಅಂಟಿಗ್ವುದಲ್ಲಿರುವ ಸರ್ ವಿವಿಯನ್ ರಿಚರ್ಡ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯದ ಎರಡನೇ ದಿನದಂದು ಕೊಹ್ಲಿ ದ್ವಿಶತಕ ಸಿಡಿಸಿದರು.
- ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೂರನೇ ನಾಯಕ ಕೊಹ್ಲಿ ಆಗಿದ್ದಾರೆ. ಇಂಗ್ಲೆಂಡ್ ನ ಲೆನ್ ಹಟ್ಟನ್ 1953-54 ರಲ್ಲಿ ಹಾಗೂ ಆಸ್ಟ್ರೇಲಿಯಾದ ಬಾಬಿ ಸಿಂಪನ್ಸ್ (1964-65) ರಲ್ಲಿ ದ್ವಿಶತಕ ಮಾಡಿದ್ದ ಇತರೆ ನಾಯಕರು.
- ಇದುವರೆಗೂ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ನ್ಯೂಜಿಲೆಂಡ್ ವಿರುದ್ಧ ಅಕ್ಲೆಂಡ್ ನಲ್ಲಿ 1990ರಲ್ಲಿ 192ರನ್ ಗಳಿಸಿದ್ದೆ ಗರಿಷ್ಟ ಸ್ಕೋರ್ ಆಗಿತ್ತು, ಇದನ್ನು ಕೊಹ್ಲಿ ಅಳಿಸಿ ಹಾಕಿದ್ದಾರೆ.
- ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿದ ಭಾರತದ ಐದನೇ ನಾಯಕ ವಿರಾಟ್ ಕೊಹ್ಲಿ. ಇದಕ್ಕೂ ಮುಂಚೆ ಮನ್ಸೂರ್ ಆಲಿ ಖಾನ್ ಪಟೌಡಿ 203 ಅಜೇಯ vs ಇಂಗ್ಲೆಂಡ್, ದೆಹಲಿ, ಸುನಿಲ್ ಗವಾಸ್ಕರ್ 205 vs ವೆಸ್ಟ್ ಇಂಡೀಸ್, ಮುಂಬೈ, 1978 1964, ಸಚಿನ್ ತೆಂಡೂಲ್ಕರ್ 217 vs ನ್ಯೂಜಿಲೆಂಡ್, ಅಹಮದಾಬಾದ್,199, ಮಹೇಂದ್ರ ಧೋನಿ 224 vs ಆಸ್ಟ್ರೇಲಿಯಾ, ಚೆನ್ನೈ, 2013 ದ್ವಿಶತಕ ದಾಖಲಿಸಿದ್ದರು.