ದೇಶದ ಮೊದಲ ಹಸಿರು ರೈಲು ಕಾರಿಡರ್ ಗೆ ತಮಿಳುನಾಡಿನಲ್ಲಿ ಚಾಲನೆ
ದೇಶದ ಮೊದಲ ಹಸಿರು ರೈಲು ಮಾರ್ಗಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಲಾಯಿತು. ತಮಿಳುನಾಡಿನ ರಾಮೇಶ್ವರಂ-ಮನಮಧುರೈ ನಡುವಿನ 114 ಕಿ.ಮೀ ಅಂತರದ ಹಸಿರು ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರವರು ವಿಡಿಯೋ ಕಾನ್ಪರೆನ್ಸ್ ಮುಂಖಾತರ ಉದ್ಘಾಟಿಸಿದರು.
- ಈ ರೈಲು ಮಾರ್ಗದಲ್ಲಿ ಚಲಿಸುವ ರೈಲುಗಳ ಶೌಚಾಲಯದಿಂದ ಮಲ ಮೂತ್ರ ರೈಲು ಹಳಿಗಳ ಮೇಲೆ ಬೀಳದೆ ಸ್ವಚ್ಚತೆ ಕಾಪಾಡುವ ಸಲುವಾಗಿ ಹಸಿರು ಕಾರಿಡಾರ್ನ ಉದ್ದೇಶ. ಸ್ವಚ್ಛ ರೈಲು-ಸ್ವಚ್ಛ ಭಾರತ ಅಭಿಯಾನದಡಿ ಅಂಗವಾಗಿ ಈ ಕಾರಿಡರ್ ಅನ್ನು ಅಭಿವೃದ್ದಿಪಡಿಸಿದ್ದು, ಸ್ವಚ್ಛ ವಾತಾವರಣ ಸೃಷ್ಠಿಸುವುದು ಗುರಿಯಾಗಿದೆ.
- ಇದಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳಿಗೆ ಜೈವಿಕ ಶೌಚಾಲಯವನ್ನು (Bio toilets) ಅಳವಡಿಸಲಾಗಿದೆ. ಜೈವಿಕ ಶೌಚಾಲಯದಲ್ಲಿ ಮಾನವ ಮಲ ಮೂತ್ರಗಳು ರೈಲ್ವೆ ಬೋಗಿಯಲ್ಲೇ ಸಂಗ್ರಹವಾಗಲಿದ್ದು, ನಂತರ ಅದನ್ನು ಸಂಸ್ಕರಣೆ ಮಾಡಲಾಗುವುದು.
- ಇದೇ ವೇಳೆ ಚೆನ್ನೈನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಗೂಗಲ್ ಕಂಪನಿಯ ವತಿಯಿಂದ ಅಳವಡಿಸಿರುವ ವೈಫೈ ಸೌಲಭ್ಯವನ್ನು ಸುರೇಶ್ ಪ್ರಭು ಉದ್ಘಾಟಿಸಿದರು.
ವಿಶ್ವದ ಅತಿದೊಡ್ಡ ಭೂಜಲಚರ (Amphibious Aircraft) ವಿಮಾನ ನಿರ್ಮಿಸಿದ ಚೀನಾ
ಜಗತ್ತಿನ ಅತಿ ದೊಡ್ಡ ಭೂಜಲಚರ ವಿಮಾನವನ್ನು ಚೀನಾ ಅಭಿವೃದ್ದಿಪಡಿಸಿದೆ. ಈ ಅತ್ಯಾಧುನಿಕ ವಿಮಾನಕ್ಕೆ AG600 ಎಂದು ಹೆಸರಿಡಲಾಗಿದೆ. ಈ ಭೂಜಲಚರವನ್ನು ಚೀನಾದ ಏವಿಯೇಷನ್ ಇಂಡಸ್ಟ್ರಿ ಕಾಪೋರೇಷನ್ ಆಫ್ ಚೈನಾ (ಎವಿಐಸಿ) ಸಂಸ್ಥೆ ನಿರ್ಮಿಸಿದ್ದು, ಚೀನಾದ ದಕ್ಷಿಣ ಬಂದರು ನಗರ ಝಹಾಯ್ ನಲ್ಲಿ ಅನಾವರಣಗೊಳಿಸಲಾಗಿದೆ.
AG 600 ಬಗ್ಗೆ:
- ಸಮುದ್ರದ ಮೇಲೆ ಟೇಕಾಪ್ ಮತ್ತು ಲ್ಯಾಂಡಿಂಗ್ ಮಾಡುವ ಸಲುವಾಗಿ ಇದುವರೆಗೂ ನಿರ್ಮಿಸಲಾದ ವಿಮಾನಗಳ ಪೈಕಿ ಅತ್ಯಂತ ದೊಡ್ಡ ವಿಮಾನ ಇದಾಗಿದೆ.
- ಈ ಭೂಜಲಚರ ವಿಮಾನ 53.5 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
- 4,500 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸೆಣಸುವ ಸಾಮರ್ಥ್ಯ ಹೊಂದಿರುವ ಈ ವಿಮಾನವನ್ನು ಅರಣ್ಯದಲ್ಲಿ ಉಂಟಾಗುವ ಆಕಸ್ಮಿಕ ಬೆಂಕಿ ಹಾಗೂ ಇತರೆ ಕಡಲ ರಕ್ಷಣೆ ಕಾರ್ಯಗಳಿಗೆ ಬಳಸಲಾಗುವುದು.
- ವಿವಾದಿತ ಚೀನಾ ಸಮುದ್ರದಲ್ಲಿ ಚೀನಾದ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ವಿಮಾನ ಸಹಕಾರಿಯಾಗಲಿದೆ.
CSIR-CMERI ನಿಂದ ಸೌರ ಶಕ್ತಿ ಉತ್ಪಾದನೆಗೆ ಸೌರ ಶಕ್ತಿ ವೃಕ್ಷ ಅಭಿವೃದ್ದಿ
ಸೀಮಿತ ಸ್ಥಳದಲ್ಲಿ ಗರಿಷ್ಠ ಸೌರಶಕ್ತಿಯನ್ನು ಬಳಸಿ ಸೌರ ವಿದ್ಯುತ್ ಅನ್ನು ಉತ್ಪಾದಿಸುವ ಸಲುವಾಗಿ “ಸೌರ ಶಕ್ತಿ ವೃಕ್ಷ (Solar Power Tree)” ಎಂಬ ನಾವಿನ್ಯ ವಿಧಾನವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅಭಿವೃದ್ದಿಪಡಿಸಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಹರ್ಷ ವರ್ಧನ್ ರವರು ನವದೆಹಲಿಯಲ್ಲಿ ಇದನ್ನು ಉದ್ಘಾಟಿಸಿದರು.
- ಸಿಎಸ್ಐಆರ್ ನ ಸೆಂಟ್ರಲ್ ಮೆಕಾನಿಕಲ್ ಇಂಜನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಸೌರ ಶಕ್ತಿ ವೃಕ್ಷವನ್ನು ಅಭಿವೃದ್ದಿಪಡಿಸಿದೆ.
- ಈ ಹೊಸ ವಿಧಾನದಲ್ಲಿ ಸೌರ ಕೋಶಗಳನ್ನು ಲಂಭ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಸೌರ ವಿದ್ಯುತ್ ಅನ್ನು ಉತ್ಪಾದಿಸಬಹುದಾಗಿದೆ.
- ಸಾಂಪ್ರಾದಾಯಿಕ ಸೌರ ವಿದ್ಯುತ್ ಉತ್ಪಾದನೆ ತಂತ್ರಜ್ಞಾನಕ್ಕೆ ಹೋಲಿಸಿದಾಗ ಈ ತಂತ್ರಜ್ಞಾನಕ್ಕೆ ಅತಿ ಕಡಿಮೆ ಸ್ಥಳಾವಕಾಶ ಬೇಕಾಗಿರುವುದರಿಂದ ಸೀಮಿತ ಪ್ರದೇಶಗಳಲ್ಲಿ ಇದನ್ನು ಅಳವಡಿಸಬಹುದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡಕ್ಕೂ ಸೂಕ್ತವಾಗಿದೆ.
- ಕೇವಲ 4 ಚದರ ಅಡಿ ವಿಸ್ತೀರ್ಣದಲ್ಲಿ 5KW ಸಾಮರ್ಥ್ಯದ ಸೌರ ಶಕ್ತಿ ವೃಕ್ಷವನ್ನು ಸ್ಥಾಪಿಸಬಹುದಾಗಿದೆ ಆದರೆ ಸಾಂಪ್ರದಾಯಿಕ ವಿಧಾನ ಇಷ್ಟೇ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಲು 400 ಚದರ ಅಡಿ ಬೇಕಾಗಲಿದೆ.
- ಸೌರ ಫಲಕಗಳ ಸ್ವಯಂ ಸ್ವಚ್ಚತೆಗಾಗಿ ನೀರಿನ ಸಿಂಪರಣೆ ವ್ಯವಸ್ಥೆಯನ್ನು ಸೌರ ಫಲಕಗಳ ಮೇಲೆ ಅಳವಡಿಸಲಾಗಿದೆ. ಇದರಿಂದ ಸೌರ ಫಲಕಗಳ ಕಾರ್ಯಕ್ಷಮತೆ ಕೂಡ ಹೆಚ್ಚಾಗಲಿದೆ.