ಮಾಜಿ ಪುಟ್ ಬಾಲ್ ಆಟಗಾರ ಸಯ್ಯದ್ ನಯೀಮುದ್ದೀನ್ ಗೆ ಮೊಹುನ್ ಬಾಗನ್ ರತ್ನ ಪ್ರಶಸ್ತಿ
ಭಾರತದ ಶ್ರೇಷ್ಠ ಮಾಜಿ ಪುಟ್ ಬಾಲ್ ಆಟಗಾರ ಸಯ್ಯದ್ ನಯೀಮುದ್ದೀನ್ ರವರಿಗೆ ಮೊಹುನ್ ಬಾಗನ್ ಪುಟ್ ಬಾಲ್ ಕ್ಲಬ್ ನ ಅತ್ಯುನ್ನತ ಪ್ರಶಸ್ತಿಯಾ ಮೊಹುನ್ ಬಾಗನ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಆ ಮೂಲಕ ಸಯ್ಯದ್ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ 16 ನೇ ಆಟಗಾರ.
ಸಯ್ಯದ್ ನಯೀಮುದ್ದೀನ್ ಬಗ್ಗೆ:
- ಸಯ್ಯದ್ ರವರು ಭಾರತ ಕಂಡ ಶ್ರೇಷ್ಠ ಮಾಜಿ ಪುಟ್ ಬಾಲ್ ಆಟಗಾರ ಹಾಗೂ ಭಾರತ ಪುಟ್ ಬಾಲ್ ತಂಡ ಕೋಚ್.
- 1970 ರ ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ಪುಟ್ ಬಾಲ್ ತಂಡ ಸಯ್ಯದ್ ರವರ ನಾಯಕತ್ವದಲ್ಲಿ ಕಂಚಿನ ಪದಕ ಗೆದ್ದಿತ್ತು.
- ಭಾರತ ಪುಟ್ ಬಾಲ್ ತಂಡದ ಕೋಚ್ ಆಗಿ ಇವರು 1997 ರಲ್ಲಿ ನೇಮಕಗೊಂಡಿದ್ದರು. ಇವರ ತರಭೇತಿಯಲ್ಲಿ ಭಾರತ ಪುಟ್ ಬಾಲ್ ತಂಡ ದಕ್ಷಿಣಾ ಏಷ್ಯಾ ಪುಟ್ಬಾಲ್ ಫೆಡರೇಷನ್ ಕಪ್ ಅನ್ನು ಗೆದ್ದಿತ್ತು.
- ಅರ್ಜುನ ಪ್ರಶಸ್ತಿ ಹಾಗೂ ದ್ರೋಣಚಾರ್ಯ ಪ್ರಶಸ್ತಿ ಎರಡನ್ನು ಪಡೆದ ಏಕೈಕ ಪುಟ್ಬಾಲ್ ಆಟಗಾರ.
ಮೊಹುನ್ ಬಾಗನ್ ರತ್ನ
- ಮೊಹುನ್ ಬಾಗನ್ ರತ್ನ ಪ್ರಶಸ್ತಿಯು ಮೊಹುನ್ ಬಾಗನ್ ಪುಟ್ ಬಾಲ್ ತಂಡದ ಅತ್ಯುನ್ನತ ಪ್ರಶಸ್ತಿ
- ಮೊಹುನ್ ಬಾಗನ್ ಪುಟ್ ಬಾಲ್ ತಂಡದ ಶ್ರೇಯಸ್ಸಿಗೆ ಗಣನೀಯ ಸೇವೆ ನೀಡಿದ ಪುಟ್ ಬಾಲ್ ಆಟಗಾರರಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
- ಪ್ರತಿ ವರ್ಷ ಮೊಹುನ್ ಬಾಗನ್ ದಿನವಾದ ಜುಲೈ 29 ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಳೆದ ವರ್ಷ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ಕರುಣ ಶಂಕರ್ ಭಟ್ಟಚಾರ್ಯರವರಿಗೆ ನೀಡಲಾಗಿತ್ತು.
ಜುಲೈ 29 ಅಂತರರಾಷ್ಟ್ರೀಯ ಹುಲಿ ದಿನ (International Tiger Day)
ಅಂತರರಾಷ್ಟ್ರೀಯ ಹುಲಿ ದಿನವನ್ನು ಪ್ರತಿ ವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹುಲಿ ಮತ್ತು ಅವುಗಳ ಸ್ವಾಭಾವಿಕ ವಾಸಸ್ಥಾನಗಳ ಸಂರಕ್ಷಣೆ ಮೂಡಿಸುವುದು ಈ ದಿನದ ಉದ್ದೇಶ. 2010 ರಲ್ಲಿ ನಡೆದ ಸೆಂಟ್ ಪೀಟರ್ಸಬರ್ಗ್ ಹುಲಿ ಸಮ್ಮೇಳನದಲ್ಲಿ ಜುಲೈ29 ನ್ನು ಹುಲಿದಿನವೆಂದ ಘೋಷಿಸಲಾಯಿತು.
- ಸೆಂಟ್ ಪೀಟರ್ಸಬರ್ಗ್ ಘೋಷಣೆ 2022 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಮುಹತ್ವದ ಗುರಿ ಹೊಂದಿದೆ.
- ಸಮೀಕ್ಷೆಯ ಪ್ರಕಾರ ಕಳೆದ ಶತಮಾನದಲ್ಲಿ ಶೇ 97% ರಲ್ಲಿ ಹುಲಿಗಳು ಕಣ್ಮರೆಯಾಗಿವೆ ಎಂದು ಹೇಳಲಾಗಿದೆ. ಪ್ರಸ್ತುತ ವಿಶ್ವದಾದ್ಯಂತ ಸುಮಾರು 3,000 ಹುಲಿಗಳು ಮಾತ್ರ ಉಳಿದಿವೆ. ಆದ್ದರಿಂದ ಅಪಾಯದ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆ ಅತ್ಯಂತ ಪ್ರಮುಖ ವಿಷಯ.
ಹುಲಿ ಸಂರಕ್ಷಣೆಗೆ ಕರ್ನಾಟಕದ ಕೊಡುಗೆ:
- ಕಳೆದ ವರ್ಷ ಕೈಗೊಳ್ಳಲಾದ ಹುಲಿ ಗಣತಿ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 406 ಹುಲಿಗಳು ಇವೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ದೇಶದಲ್ಲೆ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ.
- ನೇಚರ್ ಕನ್ಸರ್ವೇಷನ್ ಫೌಂಡೇಷನ್ ಈ ವರ್ಷದ ಜನವರಿಯಲ್ಲಿ ಕೈಗೊಂಡಿದ್ದ ಸಮೀಕ್ಷೆಯಲ್ಲಿ 14 ಹೆಚ್ಚು ಹುಲಿಗಳು ಇರುವುದಾಗಿ ಕಂಡುಬಂದಿದೆ. ಆ ಮೂಲಕ ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 420ಕ್ಕೆ ಏರಿದೆ.
- ರಾಜ್ಯದಲ್ಲಿ ಒಟ್ಟು ಐದು ಹುಲಿ ಸಂರಕ್ಷಣಾ ಧಾಮಗಳಿವೆ ಅವುಗಳೆಂದರೆ ಬಂಡೀಪುರ, ಭದ್ರ, ದಾಂಡೇಲಿ-ಅಂಶಿ, ನಾಗರಹೊಳೆ ಮತ್ತು ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಣಾ ಧಾಮ.
- ಸುಮಾರು 1517 ಚದರ ಕಿ.ಮೀ ವಿಸ್ತೀರ್ಣವಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಣೆ ಧಾಮಗಳ ಪ್ರದೇಶ ವ್ಯಾಪ್ತಿಯಲ್ಲಿ 221 ಹುಲಿಗಳಿವೆ.
- ಕಳೆದ ವರ್ಷ ನಡೆಸಲಾದ ಹುಲಿ ಗಣತಿ ಪ್ರಕಾರ ದೇಶದಲ್ಲಿ 2,226 ಹುಲಿಗಳಿವೆ. 2010 ರ ಗಣತಿಗೆ ಹೋಲಿಸಿದಾಗ ಹುಲಿ ಸಂಖ್ಯೆಯಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ. ವಿಶ್ವದ ಶೇ 60 ರಷ್ಟು ಹುಲಿಗಳು ಭಾರತದಲ್ಲಿವೆ.
- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಕಾರ 2015 ರಲ್ಲಿ ದೇಶದಲ್ಲಿ 78 ಹುಲಿಗಳು ಸಾವನ್ನಪ್ಪಿವೆ. ಕಳೆದ ವರ್ಷ ಸಾವನ್ನಪ್ಪಿದ ಹುಲಿಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಕಳೆದ ವರ್ಷ 15 ಹುಲಿಗಳು ಮರಣಹೊಂದಿವೆ.
2015 ರ ರಾಜ್ಯ ಚಲನಚಿತ್ರ ಪ್ರಶಸ್ತಿ: ಹರಿಣಿ, ರಾಜನ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಗೆ ಪ್ರಶಸ್ತಿ
2015 ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ತಡೆಹಿಡಿಯಲಾಗಿದ್ದ, ಡಾ. ರಾಜ್ ಕುಮಾರ್ ಪ್ರಶಸ್ತಿ, ಡಾ.ವಿಷ್ಣುವರ್ಧನ್ ಪ್ರಶಸ್ತಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಡಾ.ರಾಜ್ ಕುಮಾರ್ ಪ್ರಶಸ್ತಿ: ಹಿರಿಯ ನಟಿ ಹರಿಣಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹರಿಣಿರವರು 1950ರಿಂದ 1970ರ ಅವದಿಯಲ್ಲಿ 29ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಜಗನ್ಮೋಹಿನಿ’ ಚಿತ್ರದಿಂದ ಖ್ಯಾತಿ ಪಡೆದ ಅವರು, ಡಾ. ರಾಜ್ ಜತೆ 10ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂದಾದೀಪ, ನಾಂದಿ, ಕನ್ಯಾದಾನ ಅವುಗಳಲ್ಲಿ ಪ್ರಮುಖವಾದವು.
ಡಾ.ವಿಷ್ಣುವರ್ಧನ್ ಪ್ರಶಸ್ತಿ: ಖ್ಯಾತ ಸಂಗೀತಾ ನಿರ್ದೇಶಕ ರಾಜನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಾಜನ್ ರವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿ 370ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನಾಗತಿಹಳ್ಳಿ ರವರ ಮೊದಲ ನಿರ್ದೇಶನದ ಚಿತ್ರ ಉಂಡು ಹೋದ ಕೊಂಡು ಹೋದ’. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಅವರ ‘ಕೋಟ್ರೇಶಿ ಕನಸು’, ‘ಅಮೆರಿಕ ಅಮೆರಿಕ’, ‘ಹೂಮಳೆ’ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.
- ಹಿರಿಯ ನಿರ್ದೇಶಕ ಭಗವಾನ್ ನೇತೃತ್ವದ ಸಮಿತಿ ಈ ಮೂವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಗಳು 2 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ನಾಣ್ಯವನ್ನು ಒಳಗೊಂಡಿರುತ್ತವೆ.
ಪ್ರಸಿದ್ದ ಸಾಹಿತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ ನಿಧನ
ಖ್ಯಾತ ಸಾಹಿತಿ ಹಾಗೂ ಪ್ರಸಿದ್ದ ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ ರವರು ನಿಧನರಾದರು. 91 ವರ್ಷ ವಯಸ್ಸಿನ ಅವರು ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು, ಬಹು ಅಂಗಾಗಳ ವೈಫಲ್ಯದಿಂದ ಕೊನೆಯುಸಿರೆಳೆದರು.
ಮಹಾಶ್ವೇತಾ ದೇವಿ ಬಗ್ಗೆ:
- ಮಹಾಶ್ವೇತಾ ದೇವಿ ರವರು 1927 ರಲ್ಲಿ ಡಾಕಾ (ಈಗಿನ ಬಾಂಗ್ಲದೇಶದಲ್ಲಿ) ದಲ್ಲಿ ಸಾಹಿತ್ಯ ಪ್ರಧಾನ ಕುಟುಂಬದಲ್ಲಿ ಜನಿಸಿದರು.
- ಅವರ ಮೊದಲ ಕಾದಂಬರಿ “ಜಾನ್ಸಿ ರಾಣಿ” 1956 ರಲ್ಲಿ ಪ್ರಕಟಗೊಂಡಿತ್ತು.
- ತಮ್ಮ 50 ವರ್ಷಗಳ ಸಾಹಿತ್ಯ ಜೀವನದಲ್ಲಿ ಮಹಾಶ್ವೇತಾ ದೇವಿರವರು 120 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇದರಲ್ಲಿ 100 ಕಾದಂಬರಿಗಳು ಹಾಗೂ 20 ಸಣ್ಣಕಥೆಗಳನ್ನು ಸೇರಿವೆ.
- ಅವರ ಹಜಾರ್ ಚೌರಾಶಿರ್ ಮಾ, ಬ್ರೆಸ್ಟ್ ಸ್ಟೋರಿಸ್, ಟಿನ್ ಕೊರಿರ್ ಸಾಧ್ ಸೇರಿದಂತೆ ಅನೇಕ ಕೃತಿಗಳು ಜನಪ್ರಿಯತೆ ಗಳಿಸಿದ್ದಲ್ಲದೆ, ಸಿನಿಮಾಗಳಿಗೂ ಕಥೆ ಒದಗಿಸಿತ್ತು.
- ಅಗ್ನಿಗರ್ಭ, ಡಸ್ಟ್ ಆನ್ ದಿ ರೋಡ್, ಓಲ್ಡ್ ವುಮೆನ್, ಅರಣ್ಯೆರ್ ಅಧಿಕಾರ್ ಇವರ ಪ್ರಮುಖ ಪುಸ್ತಕಗಳು ಆಗಿವೆ.
- ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಇವರು ಪಶ್ಚಿಮ ಬಂಗಾಳದ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ಖೇರಿಯಾ-ಶಬರ್ ಬುಡಕಟ್ಟು ಜನರೊಂದಿಗೇ ಒಬ್ಬರಾಗಿ ಸಾಮಾಜಿಕ ಕಳಕಳಿಯಿಂದ ದುಡಿದವರು. 1980 ರಲ್ಲಿ ಬುಡಕಟ್ಟು ನಿಯತಕಾಲಿಕೆ “ಬೊರ್ಟಿಕ” ವನ್ನು ಹೊರತಂದಿದ್ದರು.
ಪ್ರಶಸ್ತಿಗಳು:
- 1979 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1986 ಪದ್ಮ ಶ್ರೀ, 1997 ರಲ್ಲಿ ಜ್ಞಾನಪೀಠ ಪ್ರಶಸ್ತಿ, 1997 ರಲ್ಲಿ ರೇಮನ್ ಮ್ಯಾಗ್ಸೆಸ್ ಪ್ರಶಸ್ತಿ ಮತ್ತು 1999 ರಲ್ಲಿ ದೇಶಿಕೊತ್ತಮ ಪ್ರಶಸ್ತಿ ಲಭಿಸಿದೆ.