ರಾಜ್ಯೋತ್ಸವ ಪ್ರಶಸ್ತಿ: ಮಾನದಂಡ ರೂಪಿಸಲು ಸಮಿತಿ ರಚಿಸಿದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯ ಸರ್ಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡುವ ಸಲುವಾಗಿ ಮಾನದಂಡ ರಚನೆಗೆ ಸಮಿತಿಯೊಂದನ್ನು ರಾಜ್ಯ ಸರ್ಕಾರ ರಚಿಸಿದೆ. ಕರ್ನಾಟಕ ಹೈಕೋರ್ಟ್ ನಿವೃತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾದ 22 ಜನ ಸದಸ್ಯರನ್ನು ಒಳಗೊಂಡಿದೆ.
- ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಲು ಮಾನದಂಡಗಳನ್ನು ರಚಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ. ಮಾನದಂಡ ರಚನೆ ನಂತರ ಸಮಿತಿ ವಿಸರ್ಜನೆಯಾಗಲಿದೆ.
- ಚಲನಚಿತ್ರ ನಿರ್ದೇಶಕ ನಾಗಾಭರಣ, ಪರಿಸರ ತಜ್ಞ ಸುರೇಶ್ ಹೆಬ್ಳಿಕರ್, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ,ಕಲಾವಿದರಾದ ಬಿ.ವಿ.ರಾಜಾರಾಂ, ಚೂಡಾಮಣಿ ನಂದಗೋಪಾಲ್, ಚಂದ್ರನಾಥ ಆಚಾರ್ಯ, ವೆಂಕಟಾಚಲಪತಿ, ಅನುಪಮಾ ಹೊಸ್ಕೆರೆ, ಅಪ್ಪಗೆರೆ ತಿಮ್ಮರಾಜು, ಕಿಶನ್ ಹೆಗಡೆ, ವಿಜ್ಞಾನ ಕ್ಷೇತ್ರದಿಂದ ಸುಧೀಂದ್ರ ಹಾಲ್ದೊಡ್ಡೇರಿ, ವೈದ್ಯ ನಾ.ಸೋಮೇಶ್ವರ, ಬರಹಗಾರ ನಾಗೇಶ ಹೆಗಡೆ, ಕ್ರೀಡಾಪಟು ಮಾಲತಿ ಹೊಳ್ಳ, ಸಾಹಿತಿಗಳಾದ ಡಾ. ಸಿದ್ದಲಿಂಗಯ್ಯ, ಎಸ್.ಜಿ.ಸಿದ್ದರಾಮಯ್ಯ, ಕಾ.ತ.ಚಿಕ್ಕಣ್ಣ, ಪ್ರೊ.ಮರುಳಸಿದ್ದಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಒಳಗೊಂಡಂತೆ 22 ಮಂದಿ ಸಮಿತಿಯಲ್ಲಿದ್ದಾರೆ.
ಹಿನ್ನಲೆ:
- ಕಳೆದ 60 ವರ್ಷಗಳಿಂದ ನೀಡಲಾಗುತ್ತಿರುವ ರಾಜ್ಯೋತ್ಸವ ಪ್ರಶಸ್ತಿಗೆ ಯಾವ ಮಾನದಂಡಗಳಲ್ಲಿದೆ ನೀಡುತ್ತಿರುವುದು ವಿವಾದಕ್ಕೆ ಗುರಿಯಾಗಿತ್ತು. ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವ ಆಧಾರದ ಮೇಲೆ ನೀಡಲಾಗುತ್ತಿದೆ ಎಂಬುದನ್ನು ಪ್ರಶ್ನಿಸಿ ಸಾಹಿತಿ ಸತ್ಯನಾರಾಯಣ ರಾವ್ ರವರು ಹೈಕೋರ್ಟ್ ಮೊರೆ ಹೋಗಿದ್ದರು. 90 ಕೃತಿಗಳನ್ನು ರಚಿಸಿರುವ ಸತ್ಯನಾರಾಯಣ ರಾವ್ ರವರು ಕಳೆದ ಮೂರು ವರ್ಷಗಳಿಂದ ತಮಗೆ ರಾಜ್ಯೋತ್ಸವ ಪ್ರಶಸ್ತಿ ನೀಡದ ಕಾರಣ ಸೂಕ್ತ ಮಾನದಂಡಗಳನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವಿಶ್ವ ಹೆಪಟಿಟಿಸ್ ದಿನವನ್ನು ಪ್ರತಿವರ್ಷ ಜುಲೈ 28 ರಂದು ಆಚರಿಸಲಾಗುತ್ತದೆ. ಹೆಪಟಿಟಿಸ್ ಕಾಯಿಲೆ ಬಗ್ಗೆ ಜಾಗತಿಕ ಅರಿವು ಮೂಡಿಸುವುದು ಈ ದಿನದ ಉದ್ದೇಶ. ಹೆಪಟಿಟಿಸ್ ಕಾಯಿಲೆಯು ಹೆಪಟಿಟಿಸ್ ಎ, ಬಿ, ಸಿ, ಡಿ ಮತ್ತು ಇ ಎಂಬ ಐದು ಬಗೆಯಿದ್ದು, ಪ್ರತಿವರ್ಷ ಸುಮಾರು 1.2 ಮಿಲಿಯನ್ ಜನರು ವಿಶ್ವದಾದ್ಯಂತ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.
ವಿಶ್ವ ಹೆಪಟಿಟಿಸ್ ದಿನ-2016 ಧ್ಯೇಯ ವಾಕ್ಯ: ಹೆಪಟಿಟಿಸ್ ತಡೆಗಟ್ಟಿ: ಇದು ನಿಮಗೆ ಬಿಟ್ಟಿದ್ದು
ಹೆಪಟಿಟಿಸ್ ಬಗ್ಗೆ:
- ಹೆಪಟಿಟಿಸ್ ಎಂಬುದು ಯಕೃತ್ತು (ಪಿತ್ತಜನಕಾಂಗ)ದ ಉರಿಯೂತ. ಮುಖ್ಯವಾಗಿ ೫ ರೀತಿಯ ಹೆಪಟಿಟಿಸ್ ವೈರಾಣುಗಳಿವೆ ಮತ್ತು ಇವುಗಳನ್ನು ಎಬಿಸಿಡಿಇ ಎಂಬುದಾಗಿ ಗುರ್ತಿಸಲಾಗಿದೆ. ಹೆಪಟಿಟಿಸ್ ಗೆ ಹೆಪಟಿಟಿಸ್ ರೋಗಾಣುವೇ ಸಾಮಾನ್ಯ ಕಾರಣವಾದರೂ ಇತರೆ ಸೋಂಕುಗಳೂ ಕಾರಣವಾಗಬಹುದು (ಉದಾ: ಆಲ್ಕೋಹಾಲ್, ಕೆಲವು ಔಷಧಗಳು). ಕಲುಷಿತ ನೀರು ಮತ್ತು ಆಹಾರದಿಂದ ಹೆಪಟಿಟಿಸ್ ಸೋಂಕು ತಗುಲಬಲ್ಲದು.
- ಹೆಪಟಿಟಿಸ್ ಬಿ ಮತ್ತು ಸಿ ಅತ್ಯಂತ ಗಂಭೀರ ಸ್ವರೂಪದಾಗಿದ್ದು, ಬಹಳಷ್ಟು ಜನರ ಸಾವಿಗೆ ಕಾರಣವಾಗಿದೆ.
- ಹೆಪಟಿಟಿಸ್ ಅನ್ನು ನಿರ್ಲಕ್ಷಿಸಿದರೆ ಸೈರೊಸಿಸ್ ಮತ್ತು ಕ್ಯಾನ್ಸರ್ ರೋಗಕ್ಕೆ ದಾರಿಯಾಗಬಹುದು, ಆದ್ದರಿಂದ ರೋಹ ಬಂದಾಗ ಚಿಕಿತ್ಸೆ ಪಡೆಯುವುದು ಅತಿ ಅವಶ್ಯಕ.
ಖ್ಯಾತ ತಬಲ ವಾದಕ ಪಂಡಿತ್ ಲಚ್ಚು ಮಹಾರಾಜ್ ವಿಧಿವಶ
ಪ್ರಸಿದ್ದ ತಬಲ ವಾದಕ ಪಂಡಿತ್ ಲಚ್ಚು ಮಹಾರಾಜ್ ರವರು ವಾರಣಾಸಿ, ಉತ್ತರ ಪ್ರದೇಶದಲ್ಲಿ ನಿಧನರಾದರು. ಲಚ್ಚು ರವರಿಗೆ 72 ವರ್ಷ ವಯ್ಸಸಾಗಿತ್ತು, ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
- ಲಚ್ಚು ರವರ ನಿಜವಾದ ಹೆಸರು ಲಕ್ಷಿ ನಾರಾಯಣ ಸಿಂಗ್. ಲಚ್ಚು ರವರು ಬನಾರಸ್ ಘರಣಾ ಶಾಸ್ತ್ರೀಯ ಸಂಗೀತಾದಲ್ಲಿ ಪರಿಣಿತಿ ಹೊಂದಿದ್ದರು.
- ತನ್ನ ತಂದೆ ವಾಸುದೇವ ಸಿಂಗ್ ರವರ ಮಾರ್ಗದರ್ಶನದಲ್ಲಿ 10 ನೇ ವಯಸ್ಸಿನಲ್ಲಿಯೇ ತಬಲಾ ನುಡಿಸುವುದನ್ನು ಲಚ್ಚು ರವರು ಕರಗತ ಮಾಡಿಕೊಂಡಿದ್ದರು.
- ಬನರಸ್ ಶೈಲಿಯಲ್ಲಿ ಪ್ರಖ್ಯಾತರಾಗಿದ್ದ ಇವರು, ತಮ್ಮದೇ ಆದ ವೈಶಿಷ್ಠ ರೀತಿಯಲ್ಲಿ ತಬಲ ನುಡಿಸುವ ಮೂಲಕ ಲಚ್ಚು ಮಹಾರಾಜ್ ಎಂಬ ಬಿರುದಿಗೆ ಪಾತ್ರರಾಗಿದ್ದರು.
- ಸರಳ ಜೀವನವನ್ನ ಅಳವಡಿಸಿಕೊಂಡಿದ್ದ ಲಚ್ಚು ರವರು ಪ್ರಚಾರ, ಪ್ರಶಸ್ತಿಗಳಿಂದ ದೂರ ಉಳಿದುಕೊಂಡರು. ಭಾರತ ಸರ್ಕಾರ ಇವರನ್ನು ಪದ್ಮಶ್ರೀ ಪ್ರಶಸ್ತಿಗೆ ಪರಿಗಣಿಸಿತ್ತಾದರೂ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.
- ವಿಶ್ವದಾದ್ಯಂತ ವೃತ್ತಿಪರ ಪ್ರದರ್ಶನಗಳಲ್ಲದೆ, ಹಲವು ಬಾಲಿವುಡ್ ಸಿನೆಮಾಗಳ ಸಂಗೀತಕ್ಕೂ ಅವರು ತಬಲಾ ನುಡಿಸಿದ್ದರು.
ಜಾಹೀರಾತುದಾರ ಶ್ರೀನಿವಾಸ್ ಮೂರ್ತಿಗೆ AAAI ಜೀವಮಾನ ಸಾಧನೆ ಪ್ರಶಸ್ತಿ
ಪ್ರಸಿದ್ದ ಜಾಹೀರಾತುದಾರ ಶ್ರೀನಿವಾಸ್ ಮೂರ್ತಿರವರಿಗೆ ಭಾರತೀಯ ಜಾಹೀರಾತು ಏಜೆನ್ಸಿಸ್ ಅಸೋಸಿಯೇಷನ್ (Advertising Agencies Association of India) ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಸುಂದರ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ಶ್ರೀನಿವಾಸ್ ಮೂರ್ತಿರವರು ಹಿರಿಯ ಜಾಹೀರಾತು ಉದ್ಯಮಿ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ನಾಲ್ಕು ದಶಕಗಳ ಅಗಾಧ ಅನುಭವನ್ನು ಹೊಂದಿದ್ದಾರೆ.
- ಶ್ರೀನಿವಾಸ ಮೂರ್ತಿ ರವರು ಆರ್.ಕೆ. ಸ್ವಾಮಿ ಹಂಸ, ಮಾರ್ಕೆಟಿಂಗ್ ಕಮ್ಯೂನಿಕೇಷನ್ ಗ್ರೂಪ್ ನ ಅಧ್ಯಕ್ಷರು.
- 2004 ರಿಂದ 2007 ರವರೆಗೆ ಸತತ ಮೂರು ಬಾರಿ ಭಾರತೀಯ ಜಾಹೀರಾತು ಏಜೆನ್ಸಿಸ್ ಅಸೋಸಿಯೇಷನ್ (Advertising Agencies Association of India) ನ ಅಧ್ಯಕ್ಷರಾಗಿದ್ದರು.
- ಪ್ರಸ್ತುತ ಇವರು ಭಾರತದ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ (ASCI) ನ ಉಪಾಧ್ಯಕ್ಷರು ಮತ್ತು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ ನ ಸದಸ್ಯರಾಗಿದ್ದಾರೆ.
ಪ್ರಶಸ್ತಿಯ ಬಗ್ಗೆ:
- ಭಾರತೀಯ ಜಾಹೀರಾತು ಏಜೆನ್ಸಿಸ್ ಅಸೋಸಿಯೇಷನ್ ನ ಜೀವಮಾನ ಸಾಧನೆ ಪ್ರಶಸ್ತಿಯನ್ನು 1988 ರಲ್ಲಿ ಸ್ಥಾಪಿಸಲಾಗಿದ್ದು, ಜಾಹೀರಾತು ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಭಾರತೀಯ ವ್ಯಕ್ತಿಗೆ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.
ಭಾರತೀಯ ಜಾಹೀರಾತು ಏಜೆನ್ಸಿಸ್ ಅಸೋಸಿಯೇಷನ್ ಬಗ್ಗೆ:
- ಜಾಹೀರಾತು ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಸ್ಥಾಪಿತವಾಗಿರುವ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, 1945 ರಲ್ಲಿ ಸ್ಥಾಪಿಸಲಾಗಿದೆ.
- ತನ್ನ ಸ್ಥಾಪನೆಯ ತತ್ವಗಳ ಮೂಲಕ ಜಾಹೀರಾತುದಾರರು ಮತ್ತು ಏಜೆನ್ಸಿಗಳ ತಾತ್ವಿಕ ವ್ಯವಹಾರವನ್ನು ಎತ್ತಿಹಿಡಿಯುವ ಉದ್ದೇಶವನ್ನು ಹೊಂದಿದೆ.
ಅಂಥ್ರಿಕ್ಸ್-ದೇವಾಸ್ ಒಪ್ಪಂದ: ಭಾರತದ ವಿರುದ್ದ ತೀರ್ಪು ನೀಡಿದ ಹೇಗ್ ನ್ಯಾಯಾಲಯ
ಉಪಗ್ರಹ ತರಂಗ ಹಂಚಿಕೆ ಸಂಬಂಧಿಸಿದಂತೆ ಇಸ್ರೋದ ಅಂಥ್ರಿಕ್ಸ್ ಸಂಸ್ಥೆ ಮತ್ತು ಖಾಸಗಿ ಮಲ್ಟಿಮೀಡಿಯಾ ಸಂಸ್ಥೆ ದೇವಾಸ್ ನಡುವೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿದ್ದ ಭಾರತ ಸರ್ಕಾರದ ಕ್ರಮ ಸರಿಯಲ್ಲವೆಂದು ಹೇಗ್ ನ ಅಂತರರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದೆ. ಆ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆ ಇಸ್ರೋಗೆ ಭಾರಿ ಹಿನ್ನಡೆ ಆಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಭಾರತ 1 ಬಿಲಿಯನ್ ಡಾಲರ್ ಗೂ ಹೆಚ್ಚು ದಂಡ ತೆರಬೇಕಿದೆ.
ಏನಿದು ಒಪ್ಪಂದ?
- 2005 ರಲ್ಲಿ ಇಸ್ರೋದ ಅಂಗ ಸಂಸ್ಥೆಯಾದ ಅಂಥ್ರಿಕ್ಸ್ ಮತ್ತು ದೇವಾಸ್ ನಡುವೆ ಎಸ್ ಬ್ಯಾಂಡ್ ತರಂಗ ಹಂಚಿಕೆ ಸಂಬಂಧ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಒಪ್ಪಂದದ ಅನ್ವಯ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಿ ದೇವಾಸ್ ಗೆ ತರಂಗ ಹಂಚಿಕೆ ಮಾಡುವಾದಗಿತ್ತು.
- ಈ ಉಪಗ್ರಹಗಳ ಮೂಲಕ ಭಾರತದಾದ್ಯಂತ ನಿಸ್ತಂತು ಆಡಿಯೋ ವಿಷುಯಲ್, ಬ್ರಾಡ್ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆ ಸರಬರಾಜು ಒಂದು ಸಂವಹನ ಜಾಲ ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು.
- ಆದರೆ 2011 ರಲ್ಲಿ ಅಂಥ್ರಿಕ್ಸ್ ಸಂಸ್ಥೆ ಈ ಒಪ್ಪಂದವನ್ನು ಕೈಬಿಡಲು ತೀರ್ಮಾನಿಸಿತು. ಬದಲಾದ ಭಾರತೀಯ ಬಾಹ್ಯಕಾಶ ನೀತಿ ಮತ್ತು ಎಸ್-ಬ್ಯಾಂಡ್ ತರಂಗಗಳನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಬಹುದೆಂದು ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಹೇಳಿತ್ತು.
- ದೆವಾಸ್-ಆಂಥ್ರಿಕ್ಸ್ ಒಪ್ಪಂದಕ್ಕೆ ತಿಲಾಂಜಲಿ ಇಟ್ಟ ಬಳಿಕ 2015 ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಒಪ್ಪಂದವನ್ನು ಕೈಬಿಟ್ಟ ಕಾರಣ ತನಗಾದ 1.6 ಬಿಲಿಯನ್ ಡಾಲರ್ಸ್ ನಷ್ಟವನ್ನು ತುಂಬಿಸಿಕೊಡಬೇಕೆಂದು ಕೇಳಿತ್ತು.
ಅಂಥ್ರಿಕ್ಸ್ ಸಂಸ್ಥೆ ಬಗ್ಗೆ: ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ವಾಣಿಜ್ಯ ಅಂಗವಾಗಿದೆ. ಇದು ಸಂಸ್ಕೃತ ಪದವಾದ ಅಂತರೀಕ್ಷದ ಆಂಗ್ಲ ಆವೃತ್ತಿಯಾಗಿದ್ದು, “ಸ್ಪೇಸ್” ಎಂದು ಅರ್ಥ. ಇದು ಬಾಹ್ಯಕಾಶ (DOS) ಇಲಾಖೆ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಇಲಾಖೆಯು ನೇರವಾಗಿ ಪ್ರಧಾನಿಯ ಅಡಿಯಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದೆ.