24 ಅಗತ್ಯ ಔಷಧಗಳ ಬೆಲೆ ಮೇಲೆ ಮಿತಿ ಹೇರಿದ ಕೇಂದ್ರ ಸರ್ಕಾರ
ಕ್ಯಾನ್ಸರ್, ಎಚ್ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಖಿನ್ನತೆ ಮತ್ತು ಹೃದಯ ರೋಗಗಳ ಚಿಕಿತ್ಸೆಗೆ ಬಳಸುವ 24 ಅಗತ್ಯ ಔಷಧಗಳ ಬೆಲೆಗೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಈ ಸಂಬಂಧ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಈ 24 ಔಷಧಗಳ ಬೆಲೆ ಶೇ 25 ರಷ್ಟು ಕಡಿಮೆಯಾಗಲಿದೆ. ಇದಲ್ಲದೆ ಔಷಧ ಬೆಲೆ ನಿಯಂತ್ರಣ ಆದೇಶದಡಿಯಲ್ಲಿ 31 ಔಷಧ ಮಿಶ್ರಣಗಳ ರಿಟೈಲ್ ದರದ ಮೇಲು ಮಿತಿ ಹೇರಲಾಗಿದೆ
- ಔಷಧ (ಬೆಲೆ ನಿಯಂತ್ರಣ) ತಿದ್ದುಪಡಿ ಆದೇಶ 2016ರ ಪ್ರಕಾರ ಷೆಡ್ಯೂಲ್–1 ವಿಭಾಗದಲ್ಲಿ ಈ 24 ಔಷಧಗಳು ಬರುತ್ತವೆ.
- ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವೂ ಅಗತ್ಯ ಔಷಧಗಳ ಬೆಲೆ ಮೇಲೆ ಔಷಧ ಬೆಲೆ ನಿಯಂತ್ರಣ ಆದೇಶ-2013 ರಡಿಯಲ್ಲಿ ಮಿತಿ ಹೇರುತ್ತಿದೆ. ಮೇ 15ರಿಂದ ಇದರ ಅಡಿಯಲ್ಲಿ 680 ಔಷಧ ಮಿಶ್ರಣಗಳನ್ನು ಸೇರಿಸಲಾಗಿದೆ.
ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (National Pharmaceutical Pricing Authority (NPPA)
- ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವನ್ನು 1997ರಲ್ಲಿ ಸ್ಥಾಪಿಸಲಾಗಿದೆ. ಔಷಧಗಳ ಬೆಲೆ ನಿಗದಿ, ಪರಿಷ್ಕರಣೆ ಮತ್ತು ಬೆಲೆ ಮೇಲೆ ನಿಗಾ ಈ ಸಂಸ್ಥೆಯ ಕೆಲಸ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.
- ಔಷಧ ನೀತಿ ಮತ್ತು ಬೆಲೆ ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು. ಜೊತೆಗೆ, ಔಷಧ ನೀತಿಯಲ್ಲಿ ಬದಲಾವಣೆಗಳನ್ನು / ಪರಿಷ್ಕರಣೆಗೆ ಕೇಂದ್ರ ಸರ್ಕಾರಕ್ಕೆ ಸಲಹೆ ಸಲ್ಲಿಸುವುದು ಎಪಿಪಿಎ ಯ ಪ್ರಮುಖ ಕೆಲಸ.
ರಾಣಿ ಸಿಂಗ್ ನಾಯರ್ ಕೇಂದ್ರ ನೇರ ತೆರಿಗೆ ಮಂಡಳಿ(CBDT)ಯ ನೂತನ ಚೇರಮನ್
ಹಿರಿಯ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿ ರಾಣಿ ಸಿಂಗ್ ನಾಯರ್ ರವರನ್ನು ಕೇಂದ್ರ ನೇರ ತೆರಿಗೆ ಮಂಡಳಿ (Central Board of Direct Tax) ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ನಾಯರ್ ರವರ ನೇಮಕಾತಿಯನ್ನು ಧೃಡೀಕರಿಸಿದೆ. ನಾಯರ್ ರವರು 31 ಅಕ್ಟೋಬರ್ 2016 ರವರೆಗೆ ಅಧಿಕಾರದಲ್ಲಿರಲಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಅತುಲೇಶ್ ಜಿಂದಾಲ್ ರವರು ಜುಲೈ 30 ರಂದು ನಿವೃತ್ತಿ ಹೊಂದಿದ ಕಾರಣ ಈ ಹುದ್ದೆ ತೆರವಾಗಿತ್ತು.
ರಾಣಿ ಸಿಂಗ್ ನಾಯರ್ ಬಗ್ಗೆ:
- ರಾಣಿ ಸಿಂಗ್ ರವರು 1979 ನೇ ಬ್ಯಾಚ್ ನ ಭಾರತೀಯ ಕಂದಾಯ ಸೇವೆ ಅಧಿಕಾರಿ
- ನೇಮಕಾತಿಗೂ ಮುನ್ನ ಇವರು ಕೇಂದ್ರ ನೇರ ತೆರಿಗೆ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
- ಮಹತ್ವದ ಆದಾಯ ಘೋಷಣೆ ಯೋಜನೆ ಜಾರಿಗೆ ತರುವ ಮೂಲಕ ಆದಾಯ ಹೆಚ್ಚಳ ಮಾಡುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು.
ಕೇಂದ್ರ ನೇರ ತೆರಿಗೆ ಮಂಡಳಿ:
- ಸಿಬಿಡಿಟಿಯನ್ನು ಸೆಂಟ್ರಲ್ ಬೋರ್ಡ್ ಆಪ್ ರೆವಿನ್ಯೂ ಆಕ್ಟ್-1963 ರಡಿಯಲ್ಲಿ ಸ್ಥಾಪಿಸಲಾಗಿದೆ. ಇದೊಂದು ಶಾಸನಬದ್ದ ಸಂಸ್ಥೆಯಾಗಿದ್ದು, ಒಬ್ಬ ಅಧ್ಯಕ್ಷ ಮತ್ತು ಆರು ಜನ ಸದಸ್ಯರನ್ನು ಒಳಗೊಂಡಿದೆ.
- ಆದಾಯ ತೆರಿಗೆ ಇಲಾಖೆಯ ನೊಡೆಲ್ ಸಂಸ್ಥೆಯಾದ ಸಿಬಿಡಿಟಿಯು ನೇರ ತೆರಿಗೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಸರ್ವೊಚ್ಚ ಸಂಸ್ಥೆಯಾಗಿದೆ. ಸಿಬಿಡಿಟಿಯು ಕೇಂದ್ರ ಆರ್ಥಿಕ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.
ಟೊರಾಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿ ನೊವಾಕ್ ಜೊಕೊವಿಕ್ ಚಾಂಪಿಯನ್
ಸರ್ಬಿಯಾದ ನೊವಾಕ್ ಜೊಕೊವಿಕ್ ರವರು ಟೊರಾಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಶ್ವದ ನಂ.1 ಆಟಗಾರ ಜೊಕೊವಿಕ್ ರವರು ಫೈನಲ್ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ಕೀ ನಿಶಕೋರಿರವರನ್ನು 6-3, 7-5 ಅಂತರದಿಂದ ಮಣಿಸುವ ಮೂಲಕ ವಿಜೇತರಾದರು.
- ಟೊರಾಂಟೊ ಟೂರ್ನಿಯನ್ನು ರೋಜರ್ಸ್ ಕ್ಲಬ್ ಟೈಟಲ್ ಎಂತಲೂ ಕರೆಯಲಾಗುತ್ತದೆ. ಈ ಟೂರ್ನಿಯಲ್ಲಿ ಜೊಕೊವಿಕ್ ಗೆ ಇದು ನಾಲ್ಕನೇ ಪ್ರಶಸ್ತಿ.
- ಪ್ರಸ್ತಕ ಸಾಲಿನಲ್ಲಿ ಜೊಕೊವಿಕ್ ರವರು ಆಸ್ಟ್ರೇಲಿಯಾ ಮತ್ತು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಸಿದ್ದಾರೆ.
ಮಹಿಳೆಯರ ಸಿಂಗಲ್ಸ್:
- ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವದ ನಂ.5 ಆಟಗಾರ್ತಿ ಸಿಮೊನ ಹಲೆಪ್ ರವರು ಅಮೆರಿಕಾದ ಮಡಿಸನ್ ಕೀ ರವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.
ಪುರುಷರ ಡಬ್ಬಲ್ಸ್:
- ಕ್ರೊಯೊಟಿಯಾದ ಇವಾನ್ ದೊಡಿಗ್ ಮತ್ತು ಬ್ರೆಜಿಲ್ ನ ಮರ್ಸೆಲೊ ಮೆಲೊ ಜೋಡಿ ಸ್ಕಾಟಲ್ಯಾಂಡ್ ನ ಜಮಿ ಮುರ್ರೆ ಹಾಗೂ ಬ್ರೆಜಿಲ್ ನ ಬ್ರುನೊ ಸೋರ್ಸ್ ಜೋಡಿ ವಿರುದ್ದ ಜಯ ಸಾಧಿಸಿತು.
ಮಹಿಳೆಯರ ಡಬ್ಬಲ್ಸ್:
- ರಷ್ಯಾದ ಎಕಟೆರಿನ ಮಕರೋವ ಮತ್ತು ಎಲೆನ ವೆಸ್ನಿನ ಜೋಡಿಯು ರೋಮೆನಿಯಾದ ಜೋಡಿ ಸಿಮೊನ ಹಲೆಪ್ ಮತ್ತು ಮೊನಿಕ ನಿಕೊಲೆಸ್ಕು ಜೋಡಿಯನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು.