ಬೆಂಗಳೂರಿನಲ್ಲಿ 15ನೇ ಪ್ರವಾಸಿ ಭಾರತೀಯ ದಿವಸ್
ಹದಿನೈದನೆ ಪ್ರವಾಸಿ ಭಾರತೀಯ ದಿವಸ್ ಅನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. 2017ರ ಜನವರಿ 7ರಿಂದ 9ರವರೆಗೆ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳಲಿದ್ದಾರೆ. ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 2500ಕ್ಕೂ ಅಧಿಕ ಎನ್ಆರ್ಐಗಳು ಭಾಗವಹಿಸುವ ನಿರೀಕ್ಷೆಯಿದೆ.
- ಪ್ರವಾಸಿ ಭಾರತೀಯ ದಿವಸ್ನ 3 ದಿನ ಸಂಜೆ ಕರ್ನಾಟಕದ ಹಿರಿಮೆ ಯನ್ನು ಪ್ರದರ್ಶಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿನ ಕಲೆ, ಸಂಸ್ಕೃತಿ, ಪ್ರವಾಸಿ ತಾಣ ಹಾಗೂ ಉದ್ಯಮಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು.
- ಜನವರಿ 7ರಂದು ಯುವ ಪ್ರವಾಸಿ ಭಾರತೀಯರ ದಿನ ಆಚರಿಸಲಾಗುತ್ತಿದ್ದು, ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಲಿದ್ದಾರೆ.
ಪ್ರವಾಸಿ ಭಾರತೀಯ ದಿವಸ್:
- ಪ್ರವಾಸಿ ಭಾರತೀಯ ದಿವಸ್ ಅನ್ನು ಪ್ರತಿ ವರ್ಷ ಜನವರಿ 9ರಂದು ಆಚರಿಸಲಾಗುತ್ತದೆ. ಭಾರತದ ಅಭಿವೃದ್ದಿಗೆ ಸಾಗರೋತ್ತರ ಭಾರತೀಯ ಸಮುದಾಯ (NRI) ನೀಡುತ್ತಿರುವ ಕೊಡುಗೆಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
- ಪ್ರವಾಸಿ ಭಾರತೀಯ ದಿವಸ್ ಅನ್ನು 2003 ರಿಂದ ಆಚರಿಸಲಾಗುತ್ತಿದ್ದು, ಮಹಾತ್ಮ ಗಾಂಧೀರವರು ದಕ್ಷಿಣಾ ಆಫ್ರಿಕಾದಿಂದ ಭಾರತಕ್ಕೆ ಜನವರಿ 9, 1915 ರಲ್ಲಿ ಹಿಂತಿರುಗಿ ಬಂದ ಸ್ಮರಣಾರ್ಥ ಈ ದಿನದಂದು ಆಚರಿಸಲಾಗುತ್ತಿದೆ.
- ಭಾರತ ಸರ್ಕಾರ ರಚಿಸಿದ್ದ ಎಲ್.ಎಂ.ಸಿಂಘ್ವಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಪ್ರವಾಸಿ ಭಾರತೀಯ ದಿವಸ್ ಜಾರಿಗೆ ಬಂದಿದೆ.
- 2016 ರಲ್ಲಿ 14ನೇ ಪ್ರವಾಸಿ ಭಾರತೀಯ ದಿವಸ್ ನವದೆಹಲಿಯಲ್ಲಿ ನಡೆದಿತ್ತು.
ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ಪ್ರಮಾಣ ವಚನ ಸ್ವೀಕಾರ
ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ ರವರು ಪ್ರಮಾಣ ವಚನ ಸ್ವೀಕರಿಸಿದರು. ಅನಿರೀಕ್ಷಿತ ಬೆಳವಣಿಗೆಯಿಂದ ಆನಂದಿಬೆನ್ ಪಟೇಲ್ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ತೆರವಾಗಿತ್ತು. ಗುಜರಾತ್ ರಾಜ್ಯಪಾಲ ಕೆ.ಪಿ.ಒಲಿ ಅವರು ಪ್ರಮಾಣ ವಚನ ಬೋಧಿಸಿದರು.
- ವಿಜಯ್ ರೂಪಾಣಿ ಪ್ರಸ್ತುತ ಗುಜರಾತ್ನ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪಕ್ಷದೊಂದಿಗೆ ದೀರ್ಘಕಾಲದ ನಂಟಿರುವ ಇವರು ಗುಜರಾತ್ನಲ್ಲಿ ಪಕ್ಷದ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿ, ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
- ಆಗಸ್ಟ್ 2014ರಂದು ವಜುಬಾಯ್ ವಾಲ ರವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ಬಳಿಕ ತೆರವಾದ ರಾಜ್ ಕೋಟ್ ಕ್ಷೇತ್ರದಲ್ಲಿ ರೂಪಾಣಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
- ರೂಪಾಣಿ ಅವರು ಗುಜರಾತ್ನ 16ನೇ ಮುಖ್ಯಮಂತ್ರಿ.
ನಿತಿನ್ ಪಟೇಲ್ ಉಪಮುಖ್ಯಮಂತ್ರಿ
- ಗುಜರಾತ್ನ ಮತ್ತೊಬ್ಬ ಹಿರಿಯ ರಾಜಕಾರಣಿ ನಿತಿನ್ ಪಟೇಲ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಮಾಡಲಾಗಿದೆ. ಇದೇ ಮೊದಲ ಬಾರಿಗೆ ಗುಜರಾತ್ನಲ್ಲಿ ಈ ಹುದ್ದೆ ಸೃಷ್ಟಿಸಲಾಗಿದೆ.
ಲೆಪ್ಟಿನೆಂಟ್ ಗವರ್ನರ್ ದೆಹಲಿಯ ಮುಖ್ಯಸ್ಥರು: ದೆಹಲಿ ಹೈಕೋರ್ಟ್ ತೀರ್ಪು
ದೆಹಲಿ ಈಗಲೂ ಕೇಂದ್ರಾಡಳಿತ ಪ್ರದೇಶವಾಗಿದ್ದು, ಲೆಪ್ಟಿನೆಂಟ್ ಗವರ್ನರ್ ದೆಹಲಿಯ ಮುಖ್ಯಸ್ಥರೇ ವಿನಾ ಮುಖ್ಯಮಂತ್ರಿಯಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ. ರೋಹಿಣೆ ಮತ್ತು ಜಯಂತ್ ನಾಥ್ ಒಳಗೊಂಡ ಹೈಕೋರ್ಟ್ ಪೀಠ ಈ ತೀರ್ಪು ನೀಡಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತು ದೆಹಲಿಯ ಲೆಪ್ಟಿನೆಂಟ್ ಗವರ್ನರ್ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿದೆ.
ತೀರ್ಪಿನಲ್ಲಿರುವ ಅಂಶಗಳು:
- ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ದೆಹಲಿಯನ್ನು ನ್ಯಾಷನಲ್ ಕ್ಯಾಪಿಟಲ್ ಟೆರಿಟೊರಿ (NCT) ಎಂದು ಘೋಷಿಸಿದ್ದರೂ ಸಹ ದೆಹಲಿ ಈಗಲೂ ಕೇಂದ್ರಾಡಳಿತ ಪ್ರದೇಶವೆಂದು ಕೋರ್ಟ್ ಹೇಳಿದೆ.
- ದೆಹಲಿಯಲ್ಲಿ ಯಾವುದೇ ಕಾನೂನು ಜಾರಿಗೆ ತರುವ ಮುನ್ನ ಲೆಪ್ಟಿನೆಂಟ್ ಗವರ್ನರ್ ಗಮನಕ್ಕೆ ತರಬೇಕು ಹಾಗೂ ಗವರ್ನರ್ ತೀರ್ಮಾನವೇ ಅಂತಿಮ ತೀರ್ಮಾನ.
- ದೆಹಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (DDCA) ಮತ್ತು CNG ಹಗರಣಗಳ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿರುವುದು ಕಾನೂನು ಬಾಹಿರ. ಏಕೆಂದರೆ ಲೆಪ್ಟಿನೆಂಟ್ ಗವರ್ನರ್ ಪೂರ್ವಾನುಮತಿ ಇಲ್ಲದೇ ತನಿಖೆಗೆ ಆದೇಶಿಸಲಾಗಿದೆ. ಇದೇ ವೇಳೆ ರಾಜ್ಯಪಾಲರ ಅನುಮೋದನೆ ಇಲ್ಲದೇ ಕೇಜ್ರಿವಾಲ್ ಸರಕಾರ ಕೈಗೊಂಡ ಅನೇಕ ಮಹತ್ವದ ಕ್ರಮಗಳನ್ನೂ ಹೈಕೋರ್ಟ್ ರದ್ದುಗೊಳಿಸಿದೆ.
- ದೆಹಲಿ ಹೈಕೋರ್ಟ್ ತನ್ನ ತೀರ್ಪನ್ನು ಸಂವಿಧಾನದ ಪರಿಚ್ಛೇದ 239 ಮತ್ತು 239ಎಎ ಆಧಾರಿಸಿ ಪ್ರಕಟಿಸಿದೆ.
ಪರಿಚ್ಛೇದ 239:
- ಸಂವಿಧಾನದ ಪರಿಚ್ಛೇದ 239ರ ಪ್ರಕಾರ ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ರಾಷ್ಟ್ರಪತಿ ಆಡಳಿತದಲ್ಲಿ ಇರಲಿವೆ. ರಾಷ್ಟ್ರಪತಿಯವರು ತಮ್ಮ ಅಧಿಕಾರವನ್ನು ತಾನು ನೇಮಕಮಾಡಿದ ಅಡ್ಮಿನಿಸ್ಟ್ರೇಟರ್/ಲೆಪ್ಟಿನೆಂಟ್ ಗವರ್ನರ್ ಮೂಲಕ ಚಲಾಯಿಸುತ್ತಾರೆ. ಈ ಪರಿಚ್ಛೇದ ರಾಷ್ಟ್ರಪತಿರವರಿಗೆ ಅಡ್ಮಿನಿಸ್ಟ್ರೇಟರ್/ಲೆಪ್ಟಿನೆಂಟ್ ಗವರ್ನರ್ ನೇಮಕ ಮಾಡುವ ಅಧಿಕಾರ ನೀಡಿದೆ.
ಪರಿಚ್ಛೇದ 239ಎಎ:
- ಈ ಪರಿಚ್ಛೇದವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯನ್ನು ನ್ಯಾಷನಲ್ ಕ್ಯಾಪಿಟಲ್ ಟೆರಿಟೊರಿ ಆಫ್ ದೆಹಲಿ ಎಂಬ ವಿಶೇಷ ಸ್ಥಾನಮಾನವನ್ನು ನೀಡಿದೆ. ದೆಹಲಿಯಲ್ಲಿ ವಿಧಾನಸಭೆ ರಚನೆಗೆ ಇದು ಅವಕಾಶ ನೀಡಿದ್ದು, ವಿಧಾನಸಭೆಯ ಸ್ಥಾನಗಳಿಗೆ ನೇರವಾಗಿ ಜನರಿಂದ ಚುನಾಯಿಸುವ ಅವಕಾಶ ಕಲ್ಪಿಸಿದೆ.