ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಹನೀಫ್ ಮುಹಮ್ಮದ್ ನಿಧನ
ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ, ‘ಲಿಟ್ಲ್ ಮಾಸ್ಟರ್’ ಎಂದೇ ಖ್ಯಾತರಾಗಿದ್ದ ಹನೀಫ್ ಮುಹಮ್ಮದ್(81) ನಿಧನರಾದರು. ವಯೋ ಸಂಬಂಧಿ ಮತ್ತು ಶ್ವಾಸ ಕೋಶದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹನೀಫ್ ಮುಹಮ್ಮದ್ ಅವರು ಕರಾಚಿಯ ಆಗಾ ಖಾನ್ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
- ಹನೀಫ್ ಮುಹಮ್ಮದ್ 1954-55ರಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.
- 1952-53 ರಿಂದ 1969-70ರ ನಡುವಿನ ಸುದೀರ್ಘ ವೃತ್ತಿ ಜೀವನದಲ್ಲಿ 55 ಟೆಸ್ಟ್ಗಳನ್ನು ಆಡಿದ್ದಾರೆ.
- 1957-58ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ 337ರನ್ ದಾಖಲಿಸಿದ್ದರು. ಈ ಟೆಸ್ಟ್ನಲ್ಲಿ ಅವರು 970 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ದರು. ಇದು ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಬ್ಯಾಟಿಂಗ್ ನಡೆಸಿದ ಅಪೂರ್ವ ದಾಖಲೆಯಾಗಿದೆ.
- ಟೆಸ್ಟ್ ಕ್ರಿಕೆಟ್ ನಲ್ಲಿ 223 ಬಾಲುಗಳಿಂದ 20 ರನ್ ಗಳಿಸುವ ಮೂಲಕ ಅತ್ಯಂತ ನಿಧಾನವಾದ ಆಟವಾಡಿದ ದಾಖಲೆ ಅವರದು.
- ಹನೀಫ್ ಮುಹಮ್ಮದ್ 55 ಟೆಸ್ಟ್ಗಳಲ್ಲಿ ಅವರು 12 ಶತಕ ಮತ್ತು 15 ಅರ್ಧಶತಕಗಳನ್ನು ಒಳಗೊಂಡ 3915 ರನ್ ದಾಖಲಿಸಿ 1 ವಿಕೆಟ್ ಪಡೆದಿದ್ದರು. 238 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 55 ಶತಕ ಮತ್ತು 66 ಅರ್ಧಶತಕಗಳನ್ನು ಒಳಗೊಂಡ 17,059 ರನ್ ಮತ್ತು 53 ವಿಕೆಟ್ ಸಂಪಾದಿಸಿದ್ದರು.
- 1968 ರಲ್ಲಿ ಇವರನ್ನು ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು.
- 1969ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಆಡಿದ್ದರು
- 2009 ರಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಅನಾವರಣಗೊಂಡಾಗ ಹನೀಫ್ ಸೇರಿದಂತೆ ಪಾಕಿಸ್ತಾನದ ಇಮ್ರಾನ್ ಖಾನ್ ಮತ್ತು ಜಾವೇದ್ ಮಿಯಾಂದಾದ್ ಅವರನ್ನು ಐಸಿಸಿ ಹಾಲ್ ಫೇಮ್ ಗೆ ಸೇರ್ಪಡೆಗೊಳಿಸಲಾಗಿತ್ತು.
ಫೋರ್ಬ್ಸ್ ನಿಯತಕಾಲಿಕೆಯ ನೂರು ಶ್ರೀಮಂತ ತಂತ್ರಜ್ಞಾನ ಉದ್ಯಮಿಗಳ ಪಟ್ಟಿಯಲ್ಲಿ ಪ್ರೇಮ್ ಜಿ, ಶಿವ ನಾದರ್
ಫೋರ್ಬ್ಸ್ ನಿಯತಕಾಲಿಕೆ ಇತ್ತೀಚೆಗೆ ಬಿಡುಗಡೆ ಮಾಡಿದ ನೂರು ಶ್ರೀಮಂತ ತಂತ್ರಜ್ಞಾನ ಉದ್ಯಮಿಗಳ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹಾಗೂ ಎಚ್ಸಿಎಲ್ ಸಮೂಹ ಸಂಸ್ಥೆಗಳ ಸಹ ಸಂಸ್ಥಾಪಕ ಶಿವ ನಾದಾರ್ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ಭಾರತೀಯರು ಮೊದಲ 20 ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿರುವುದಾಗಿ ವಿಶೇಷ.
- ಫೋರ್ಬ್ಸ್ ‘2016ರ ವಿಶ್ವದ ನೂರು ಶ್ರೀಮಂತ ತಂತ್ರಜ್ಞಾನ ಶತಕೋಟ್ಯಧೀಶ ಉದ್ಯಮಿಗಳು’ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಎರಡನೇ ಸ್ಥಾನದಲ್ಲಿ ಹಾಗೂ ಫೇಸ್ ಬುಕ್ ಸಂಸ್ಥಾಪಕ, ಸಿಇಓ ಮಾರ್ಕ್ ಝುಕರ್ಬರ್ಗ್ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
- ಫೋರ್ಬ್ಸ್ ಪಟ್ಟಿಯಲ್ಲಿ ಪ್ರೇಮ್ ಜಿ 13ನೇ ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಮೊತ್ತ 16 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ನದರ್ 17ನೇ ಸ್ಥಾನದಲ್ಲಿದ್ದು, ಅವರಲ್ಲಿ 11.6 ಶತಕೋಟಿ ಡಾಲರ್ ನಷ್ಟು ಆಸ್ತಿ ಮೌಲ್ಯವಿದೆ.
- ಕೇವಲ ಐದು ಮಹಿಳಾ ಉದ್ಯಮಿಗಳು ಮಾತ್ರ ಈ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಲು ಸಫಲರಾಗಿದ್ದಾರೆ. ಭಾರತ ಮೂಲದ ಅಮೆರಿಕ ಸಾಫ್ಟವೇರ್ ಉದ್ಯಮಿಗಳಾದ ಸಿಂಫೋನಿ ಟೆಕ್ನಾಲಜಿ ಗ್ರೂಪ್ ಸಿಇಒ ರೊಮೇಶ್ ವಾಧ್ವಾನಿ, ಹೊರಗುತ್ತಿಗೆ ಸಂಸ್ಥೆ ಸಿಂಟೆಲ್ ಸಂಸ್ಥಾಪಕ ಭರತ್ ದೇಸಾಯಿ ಮತ್ತು ಅವರ ಪತ್ನಿ ನೀರಜ್ ಸೇಠಿ ಕೂಡ ಈ ಪಟ್ಟಿಯಲ್ಲಿದ್ದಾರೆ.
- ಈ ಪಟ್ಟಿಯಲ್ಲಿರುವ 51 ಜನರು ಅಮೆರಿಕದವರೇ ಆಗಿದ್ದಾರೆ. ಮೊದಲ ಹತ್ತು ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಅಮೆರಿಕಾದವರ ಪಾಲಾಗಿದೆ. ಆ ಮೂಲಕ ವಿಶ್ವದಲ್ಲಿ ಅಮೆರಿಕಾ ಅತಿ ಹೆಚ್ಚು ಶ್ರೀಮಂತ ತಂತ್ರಜ್ಞಾನ ಉದ್ಯಮಿಗಳನ್ನು ಹೊಂದಿದ್ದಾರೆ. ಅಮೆರಿಕವನ್ನು ಹೊರತುಪಡಿಸಿದರೆ ಚೀನಾದ 19 ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಆ ಪೈಕಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಎಂಟನೇ ಕ್ರಮಾಂಕದಲ್ಲಿದ್ದಾರೆ.
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ AUSC ತಂತ್ರಜ್ಞಾನ ಅಭಿವೃದ್ದಿ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಡ್ವಾನ್ಸ್ಡ್ಅಲ್ಟ್ರಾ ಸೂಪರ್ ಕ್ರಿಟಿಕಲ್ ಟೆಕ್ನಾಲಜಿಯನ್ನು ಅಭಿವೃದ್ದಿಪಡಿಸಲು ಸಂಶೋಧನೆ ಮತ್ತು ಅಭಿವೃದ್ದಿ ಯೋಜನೆ ಪ್ರಸ್ತಾವನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದೆ. ಈ ಯೋಜನೆಯ ಅಂದಾಜು ಮೊತ್ತ ರೂ 1554 ಕೋಟಿ. ಈ ಯೋಜನೆಯನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಮೂರು ವರ್ಷಗಳಲ್ಲಿ ಅನುಷ್ಟಾನಗೊಳಿಸಲಿದ್ದು, ಇದಕ್ಕಾಗಿ ಒಂದೇ ಬಾರಿಗೆ ರೂ 900 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಲಿದೆ.
ಪ್ರಮುಖಾಂಶಗಳು:
- ಈ ಯೋಜನೆಯಿಂದ ಸ್ಥಳೀಯ ಕೈಗಾರಿಕೆಗಳು ಸ್ವದೇಶಿ ತಂತ್ರಜ್ಞಾನ ಮತ್ತು ತಯಾರಿಕಾ ವಿಧಾನವನ್ನು ಬಳಸಿಕೊಂಡು ಸುರಕ್ಷಿತ ಮತ್ತು ಹೆಚ್ಚು ಕಾರ್ಯದಕ್ಷತೆ ಹೊಂದಿರುವ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗಲಿದೆ.
- ಇದೇ ಮೊದಲ ಬಾರಿಗೆ ಯಾವುದೇ ವಿದೇಶಿ ಕಂಪನಿಗಳ ಜೊತೆ ತಾಂತ್ರಿಕ ಸಹಾಯ ಮತ್ತು ತಂತ್ರಜ್ಞಾನ ಪರವಾನಗೆ ಒಪ್ಪಂದವಿಲ್ಲದೇ ದೊಡ್ಡ ವಿದ್ಯುತ್ ಸ್ಥಾವರಗಳಿಗೆ ಬೇಕಾಗುವ ಉಪಕರಣಗಳನ್ನು ಸುಧಾರಿತ ತಂತ್ರಜ್ಞಾನದಿಂದ ಅಭಿವೃದ್ದಿಪಡಿಸಲಾಗುತ್ತಿದೆ.
ಪರಿಸರಕ್ಕೆ ಆಗುವ ಅನುಕೂಲ:
- ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ ಅಳವಡಿಕೆಯಿಂದ ವಿದ್ಯುತ್ ಸ್ಥಾವರಗಳಿಂದ ಬಿಡುಗಡೆಯಾಗುವ ಇಂಗಾಲದಡೈಆಕ್ಸೈಡ್ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಅಲ್ಲದೇ ಕಲ್ಲಿದ್ದಲ ಬಳಕೆ ಪ್ರಮಾಣ ಕೂಡ ಕಡಿಮೆಯಾಗಲಿದೆ. ಪ್ರಸ್ತುತ ಕಲ್ಲಿದ್ದಲಿನಿಂದ ವಿದ್ಯುತ್ ತಯಾರಿಸುವ ಪ್ರಕ್ರಿಯೆಯು ವಾತಾವರಣದಲ್ಲಿ ಶೇ 38 ಇಂಗಾಲದಡೈಆಕ್ಸೈಡ್ ಮಾಲಿನ್ಯಕ್ಕೆ ಕಾರಣವಾಗಿದೆ.
ಹಿನ್ನಲೆ:
- ಭವಿಷ್ಯದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲ ಬಳಕೆ ಹಾಗೂ ಇಂಗಾಲದಡೈಆಕ್ಸೈಡ್ ಹೊರಸೂಸುವಿಕೆಯನ್ನು ಪ್ರಮಾಣ ಕಡಿಮೆಗೊಳಿಸುವುದಕ್ಕಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ ಅಳವಡಿಸುವ ಸಲುವಾಗಿ ಸಂಶೋಧನೆ ಮತ್ತು ಅಭಿವೃದ್ದಿ ಯೋಜನೆಗಾಗಿ ದೇಶದ ಮೂರು ಸರ್ಕಾರಿ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆ ಮೂರು ಸಂಸ್ಥೆಗಳು ಮತ್ತು ಈ ಯೋಜನೆಗೆ ತೊಡಗಿಸಲಿರುವ ಮೊತ್ತ ಹೀಗಿದೆ.
ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (270 ಕೋಟಿ), ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (234 ಕೋಟಿ) ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (50 ಕೋಟಿ). ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಯೋಜನೆಗೆ ಕೈಜೋಡಿಸಲಿದ್ದು, 100 ರೂ ಕೋಟಿಯನ್ನು ಹೂಡಲಿದೆ. ಬಾಕಿ 900 ರೂ ಕೋಟಿಯನ್ನು ಡಿಪಾರ್ಟ್ ಮೆಂಟ್ ಆಫ್ ಹೆವಿ ಇಂಡಸ್ಟ್ರೀಸ್ ನೀಡಲಿದೆ.
Good job karunadu