ಸರಕು ಮತ್ತು ಸೇವಾ (GST) ಮಸೂದೆಗೆ ಅನುಮೋದನೆ ನೀಡಿದ ಮೊದಲ ರಾಜ್ಯ “ಅಸ್ಸಾಂ”
ಈಶಾನ್ಯ ರಾಜ್ಯಗಳ ಅಸ್ಸಾಂ ರಾಜ್ಯ ಸರಕು ಮತ್ತು ಸೇವಾ ಮಸೂದೆ-2014 (ಸಂವಿಧಾನ 122ನೇ ತಿದ್ದುಪಡಿ)ಗೆ ಅನುಮೋದನೆ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಬಂಧ ಅಸ್ಸಾಂ ವಿಧಾನಸಭೆಯಲ್ಲಿ ಅವಿರೋಧವಾಗಿ ಜಿಎಸ್’ಟಿಯನ್ನು ಅನುಮೋದನೆ ಮಾಡಲಾಗಿದೆ.
- ಜಿಎಸ್’ಟಿ ಮಸೂದೆಯನ್ನು ಆಗಸ್ಟ್ 2016 ರಲ್ಲಿ ಸಂಸತ್ತು ಅನುಮೋದನೆಗೊಳಿಸಿ, ಸಂವಿಧಾನದ ಕಲಂ 368 ಪ್ರಕಾರ ಅನುಮೋದನೆಗೆ ರಾಜ್ಯಗಳಿಗೆ ಕಳುಹಿಲಾಗಿತ್ತು. ಸಂವಿಧಾನದ ಕಲಂ 368 ಪ್ರಕಾರ ಶೇ 50% ರಾಜ್ಯಗಳು ಅಂದರೆ 29 ರಲ್ಲಿ 15 ರಾಜ್ಯಗಳು ಅನುಮೋದನೆ ನೀಡಿದರೆ ಮಾತ್ರ ಈ ಮಸೂದೆ ಜಾರಿಗೆ ಬರಲಿದೆ.
ಸಂವಿಧಾನದ ಕಲಂ 368:
- ಯಾವುದೇ ಸಂವಿಧಾನ ತಿದ್ದುಪಡಿ ಮಸೂದೆಯು ಒಕ್ಕೂಟ ವ್ಯವಸ್ಥೆಗೆ ಬದಲಾವಣೆ ತರುವಂತದಾಗಿದ್ದರೆ, ವಿಶೇಷ ಬಹುಮತದೊಂದಿಗೆ, ಶೇ50 ರಷ್ಟು ರಾಜ್ಯಗಳು ಅನುಮೋದನೆ ನೀಡಬೇಕಾಗುವುದು ಕಡ್ಡಾಯ.
- ಈ ಕಲಂ ಅನ್ವಯ ಎರಡೂ ಸದನಗಳಲ್ಲಿ ಇದು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರಗೊಳ್ಳಬೇಕು.
- ಜೊತೆಗೆ, ಸರಳ ಬಹುಮತದ ಮೂಲಕ ಶೇ 50% ರಷ್ಟು ರಾಜ್ಯಗಳು (15/ 29 ರಾಜ್ಯಗಳು) ಅನುಮೋದಿಸಬೇಕು.
ಜಿಎಸ್’ಟಿ:
- ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆವ್ಯಾಟ್, ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿಯನ್ನು ಜಾರಿಗೆ ತರಲಾಗುತ್ತದೆ.
- ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ.ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ.
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಒಪ್ಪಿಗೆ
ನಾಡಫ್ರಭು ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸಮ್ಮತಿ ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಧಿಕಾರ ಸ್ಥಾಪನೆ ಮಾಡಲು 5 ಕೋಟಿ ರೂ.ಗಳ ಅನುದಾನ ನೀಡಲಾಗುತ್ತದೆ.
ಹಿನ್ನಲೆ:
- ‘ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಯಲು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಸಂಶೋಧನೆ ಮಾಡಿಸಬೇಕೆಂಬ ಕೂಗು ಬಹುದಿನಗಳಿಂದ ಇತ್ತು. ಈ ಹಿನ್ನಲೆಯಲ್ಲಿ ಪ್ರಾಧಿಕಾರವನ್ನು ರಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪ್ರಾಧಿಕಾರದ ಬಗ್ಗೆ:
- ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರಾಗಿದ್ದು, ಪ್ರಾದೇಶಿಕ ಆಯುಕ್ತರು ನೋಡಲ್ ಅಧಿಕಾರಿಯಾಗಿರುತ್ತಾರೆ.
- ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವರು ಹಾಗೂ 25 ಶಾಸಕರು ಸದಸ್ಯರಾಗಿರುವ ಪ್ರಾಧಿಕಾರ ರಚಿಸಬೇಕು ಎಂಬ ಬೇಡಿಕೆ ಇತ್ತು. ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದ ಬಳಿಕ ಸದಸ್ಯರ ಸಂಖ್ಯೆಯನ್ನು 15ಕ್ಕೆ ಮಿತಿಗೊಳಿಸಲು ತೀರ್ಮಾನಿಸಲಾಗಿದೆ.
- ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ಗಳು, ಮತ್ತು ಸ್ಪೆಷಲ್ ಕಮಷಿನರ್ಗಳು ಪ್ರಾಧಿಕಾರಕ್ಕೆ ಸದಸ್ಯರಾಗಿರುತ್ತಾರೆ.
ಇತರೆ ನಿರ್ಣಯಗಳು:
ನಾಡಪ್ರಭು ಕೆಂಪೇಗೌಡರ ಹೆಸರನ್ನು ಚಿರಾಯುವಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ ನಿರ್ಮಾಣ. 50 ಎಕರೆ ಪ್ರದೇಶ ಸಮಗ್ರ ಅಭಿವೃದ್ಧಿ. ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಸಂಶೋಧನಾ ಕೇಂದ್ರ ಸ್ಥಾಪನೆ. ಕೆಂಪೇಗೌಡ ಬಡಾವಣೆಯ 11 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಸಾಂಸ್ಕøತಿಕ ಭವನ ನಿರ್ಮಾಣ. ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯ ಪುಸ್ತಕದಲ್ಲಿ 5 ಪುಟಗಳ ಕೆಂಪೇಗೌಡರ ಜೀವನ ಚರಿತ್ರೆ ಅಳವಡಿಕೆಯಾಗಲಿದೆ.
ಶೇಖ್ ಮಸ್ತಾನ್ ಸಮಿತಿ:
- ಕೆಂಪೇಗೌಡರ ಪುಣ್ಯಭೂಮಿಯನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಬಗ್ಗೆ ಬೆಂಗಳೂರು ವಿವಿ ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಶೇಖ್ ಮಸ್ತಾನ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸನ್ನು ಚರ್ಚಿಸಲಾಗಿ ರಾಜ್ಯ ಸರ್ಕಾರ ಮೇಲಿನ ನಿರ್ಧಾರಗಳನ್ನು ಕೈಗೊಂಡಿದೆ.
ಬಿಪಿಎಲ್ ಕಾರ್ಡ್ ನಿಯಮಗಳನ್ನು ಸಡಿಲಗೊಳಿಸದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಅಕ್ರಮವಾಗಿ ರೇಷನ್ ಕಾರ್ಡ್ ಹೊಂದುವುದನ್ನು ತಡೆಯುವ ಸಲುವಾಗಿ ಮತ್ತು ಅರ್ಹರು ಬಿಪಿಎಲ್ ರೇಷನ್ ಕಾರ್ಡ್ ಸಿಗದೇ ವಂಚಿತರಾಗುವುದನ್ನು ತಪ್ಪಿಸಲು ನಿಯಮಾವಳಿ ಸರಳೀಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಸದ್ಯ ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಎಂಬ ಬಗ್ಗೆ ಇದ್ದ 14 ಮಾನದಂಡಗಳ ಪೈಕಿ ಅವೈಜ್ಞಾನಿಕ ಅಂಶಗಳನ್ನು ತೆಗೆದು ಕೇವಲ ನಾಲ್ಕು ಮಾನದಂಡಗಳನ್ನು ಮಾತ್ರ ನಿಗದಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಪಿಎಲ್ ಕಾರ್ಡ್ ಯಾರಿಗಿಲ್ಲ:
- ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವಾಣಿಜ್ಯ ತೆರಿಗೆ ಪಾವತಿಸುವವರು.
- ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣ ಅಥವಾ ಕೃಷಿ ಭೂಮಿ ಹೊಂದಿರುವವರು. ಮಹಾನಗರ ಪಾಲಿಕೆ, ನಗರ ಪಾಲಿಕೆಗಳಲ್ಲಿ 10 ಚದರ ಮನೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ 12 ಚದರ ಮನೆ ಹೊಂದಿರುವವರು.
- ಸ್ವಂತಕ್ಕಾಗಿ ನಾಲ್ಕು ಚಕ್ರ ಅಥವಾ ಅದಕ್ಕಿಂತ ಹೆಚ್ಚು ಚಕ್ರಗಳ ವಾಹನ ಹೊಂದಿರುವವರು.
- ಪ್ರತಿ ತಿಂಗಳು 150 ಯೂನಿಟ್ ಹಾಗೂ ಅದರ ಮೇಲ್ಪಟ್ಟು ವಿದ್ಯುತ್ ಬಳಕೆ ಮಾಡುವವರು.
ರೇಷನ್ ಕಾರ್ಡ್ ಗೆ ಹೊಸ ಹೆಸರು:
ಪ್ರಸ್ತುತ ಚಾಲ್ತಿಯಲ್ಲಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ಬದಲಿಗೆ ಆದ್ಯತೆ ಮತ್ತು ಆದ್ಯತೆಯೇತರ ವಲಯ ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಹಾರ ಭದ್ರತೆ ಕಾಯ್ದೆ ಹಿನ್ನೆಲೆಯಲ್ಲಿ ಬಿಪಿಎಲ್, ಎಪಿಎಲ್ ನಂತಹ ಮತ್ತಿತರ ವಿಭಾಗಗಳನ್ನು ತೆಗೆದುಹಾಕಿ, ಆದ್ಯತಾ ವಲಯ ಎಂಬ ಒಂದೇ ವ್ಯವಸ್ಥೆ ಅಡಿ ತರಲು ಉದ್ದೇಶಿಸಿದೆ. ಗ್ರಾಹಕರಿಗೆ ಇನ್ನು ಮುಂದೆ ನೀಡಲಾಗುವ ಪಡಿತರ ಚೀಟಿಗಳ ಮೇಲೆಯೇ ಇದನ್ನು ಅಧಿಕೃತವಾಗಿ ಮುದ್ರಣ ಮಾಡಿ ಸರ್ಕಾರ ನೀಡಲಿದೆ.