ಪೊಸ್ಕೋ (POSCO) ಇ-ಬಾಕ್ಸ್ ಗೆ ಕೇಂದ್ರ ಸರ್ಕಾರದಿಂದ ಚಾಲನೆ

ಲೈಂಗಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಇ-ಬಾಕ್ಸ್ ವ್ಯವಸ್ಥೆಗೆ ನವದೆಹಲಿಯಲ್ಲಿ ಚಾಲನೆ ನೀಡಿದೆ.  ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಮೇನಕಾ ಗಾಂಧಿ ಅವರು ಈ ವ್ಯವಸ್ಥೆಗೆ ಚಾಲನೆ ನೀಡಿದರು.

ಇ-ಬಾಕ್ಸ್ ಬಗ್ಗೆ:

  • ಇ-ಬಾಕ್ಸ್ ಒಂದು ಆನ್ ಲೈನ್ ದೂರು ನಿರ್ವಹಣೆ ವ್ಯವಸ್ಥೆಯಾಗಿದ್ದು, ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆಯ ದೂರನ್ನು ಸರಳವಾಗಿ ಮತ್ತು ನೇರವಾಗಿ ದಾಖಲಿಸಬಹುದಾಗಿದೆ. ಆ ಮೂಲಕ ಆರೋಪಿ ವಿರುದ್ದ ಪೊಸ್ಕೊ (Protection of Children from Sexual Offenses) ಕಾಯಿದೆ ಅಡಿ ಕ್ರಮ ಜರುಗಿಸಬಹುದು.
  • ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆಯ ದೂರನ್ನು ನೇರವಾಗಿ ಆಲ್ ಲೈನ್ನಲ್ಲಿ ದಾಖಲಿಸಲು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಪ್ರಮುಖ ಕಾರ್ಯಕ್ರಮವಾಗಿದೆ.
  • ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ವೆಬ್ ಸೈಟ್ http://ncpcr.gov.in/. ನಲ್ಲಿ ಇ-ಬಾಕ್ಸ್ ಅಳವಡಿಸಲಾಗಿದೆ.
  • ದೂರುದಾರರು ವೆಬ್ ಸೈಟ್ ಗೆ ತೆರಳಿ ಅಗತ್ಯವಾದ ಮಾಹಿತಿ ಅಂದರೆ ಹೆಸರು, ಮೊಬೈಲ್, ಇ-ಮೇಲ್ ವಿಳಾಸ ಮತ್ತು ಶೋಷಣೆ ವಿವರರನ್ನು ತುಂಬಿ ದೂರನ್ನು ದಾಖಲಿಸಬಹುದು.

NBAGR ನಿಂದ ಒಂಬತ್ತು ಹೊಸ ತಳಿಯ ಜಾನುವಾರು ಮತ್ತು ಕೋಳಿ ನೋಂದಣಿ

ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲ (National Bureau of Animal Genetic Resources (NBAGR)) ಸಂಸ್ಥೆಯು ಒಂಬತ್ತು ಹೊಸ ಜಾನುವಾರು ಮತ್ತು ಕೋಳಿ ತಳಿಗಳನ್ನು ಗುರುತಿಸಿದ್ದು, ನೋಂದಣಿ ಮಾಡಿದೆ. ವೈಜ್ಞಾನಿಕವಾಗಿ ಲಭ್ಯವಾದ ದಾಖಲೆಗಳನ್ನು ಪರಿಶೀಲಿಸಿ ಹೊಸ ತಳಿಯನ್ನು ಗುರುತಿಸಲಾಗಿದೆ.

  • ಒಂಬತ್ತು ಹೊಸ ತಳಿಯ ಜಾನುವಾರಗಳ ಪೈಕಿ ಒಂದು ಹಸು ತಳಿ, ಎರಡು ಮೇಕೆ ಮತ್ತು ಕುರಿ ತಳಿ, ಮೂರು ಹಂದಿ ತಳಿ ಮತ್ತು ಒಂದು ಕೋಳಿ ತಳಿ ಸೇರಿವೆ.
  • ಉತ್ತರಖಂಡದ ಬದ್ರಿ ಹಸು (Badri cow), ತಮಿಳುನಾಡಿನ ಕೊಡಿ ಆಡು ಮೇಕೆ (Kodi Adu goat), ನಿಕೋಬರ್ ದ್ವೀಪ ಪ್ರದೇಶದ ಟೆರೆಸ್ಸಾ ಮೇಕೆ (Teressa goat), ಓಡಿಶಾದ ಕೆಂದ್ರಪಡ ಕುರಿ (Kendrapada sheep), ತಮಿಳುನಾಡಿನ ಚೆವಾದು ಕುರಿ (Chevaadu sheep), ನಿಕೋಬರ್ ದ್ವೀಪದ ನಿಕೋಬರಿ ಹಂದಿ (Nicobari pig), ನಾಗಲ್ಯಾಂಡ್ ನ ತೆನ್ಯಿ ವೊ ಹಂದಿ (Tenyi Vo pig), ಅಸ್ಸಾಂ ಡೂಮ್ ಹಂದಿ(Doom pig) ಮತ್ತು ಮಣಿಪುರದ ಕೌನಯೆನ್ ಕೋಳಿ(Kaunayenchicken) ಹೊಸದಾಗಿ ನೋಂದಣಿಯಾಗಿರುವ ತಳಿಗಳಾಗಿವೆ.
  • ಇದರೊಂದಿಗೆ ಸ್ವದೇಶಿ ಜಾನುವಾರು ತಳಿಗಳ ಸಂಖ್ಯೆ 160 ತಲುಪಿದೆ. ಇದರಲ್ಲಿ 40 ಹಸು ತಳಿ, 13 ಎಮ್ಮೆ ತಳಿ, 26 ಮೇಕೆ ತಳಿ, 42 ಕುರಿ ತಳಿ, 6 ಕುದುರೆ ತಳಿ, 9 ಒಂಟೆ ತಳಿ, 6 ಹಂದಿ ತಳಿ, 1 ಕತ್ತೆ ಮತ್ತು 17 ಕೋಳಿ ತಳಿಗಳು ಒಳಗೊಂಡಿವೆ.

ನೋಂದಣಿಯ ಉದ್ದೇಶ:

  • ನಿರ್ದಿಷ್ಟ ಪ್ರದೇಶಕ್ಕೆ ಹೊಂದಿಕೊಂಡಿರುವ ಮತ್ತು ರೋಗ ನಿರೋಧಕ ಸಾಮರ್ಥ್ಯವಿರುವ ಸ್ವದೇಶಿ ತಳಿಗಳನ್ನು ನೋಂದಾಯಿಸಿಕೊಳ್ಳುವ ಮೂಲಕ ಸಂರಕ್ಷಿಸುವುದು ಪ್ರಮುಖ ಉದ್ದೇಶ. ಆ ಮೂಲಕ ಸ್ಥಳೀಯ ಜನತೆಗೆ ತಳಿ ಮಹತ್ವವನ್ನು ವಿವರಿಸಿ ವಿನಾಶವಾಗದಂತೆ ಕ್ರಮವಹಿಸಲು ಅನುಕೂಲವಾಗಲಿದೆ.

ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲ ಸಂಸ್ಥೆ:

  • ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲ ಸಂಸ್ಥೆ ಹರಿಯಾಣದ ಕರ್ನಲ್ ನಲ್ಲಿದೆ. 1995 ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಸ್ವದೇಶಿ ಜಾನುವಾರು ಮತ್ತು ಕೋಳಿ ತಳಿಗಳನ್ನು ಗುರುತಿಸುವುದು, ವಿಂಗಡಿಸುವುದು, ಮೌಲ್ಯಮಾಪನ ಮಾಡುವುದು ಮತ್ತು ಸಂರಕ್ಷಿಸುವುದು ಇದರ ಪ್ರಮುಖ ಕಾರ್ಯ.

ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ ಸೇವೆ ಸಿಂಗಾಪುರದಲ್ಲಿ ಆರಂಭ

ಜಗತ್ತಿನ ಮೊದಲ ಸ್ವಯಂಚಾಲಿತ ಟ್ಯಾಕ್ಸಿ ಸೇವೆಯನ್ನು ಸಿಂಗಾಪುರದಲ್ಲಿ ಆರಂಭಿಸಿಲಾಗಿದೆ. ತಂತ್ರಜ್ಞಾನ ಬಳಕೆಯಿಂದ ಗಮನ ಸೆಳೆದಿರುವ ಈ ವಿಶಿಷ್ಠ ಸೇವೆ ಮುಂದಿನ ದಿನಗಳಲ್ಲಿ ಸಾರಿಗೆ ಸೇವೆಯಲ್ಲಿ ಮಹತ್ವದ ಬದಲಾವಣೆ ತರುವ ಸೂಚನೆ ನೀಡಿದೆ. ಸಿಂಗಾಪುರ ಮೂಲದ ಸ್ಟಾರ್ಟಪ್ ಸಂಸ್ಥೆ ನುಟುನೋಮಿ (nuTonomy) ಇದನ್ನು ಅಭಿವೃದ್ದಿಪಡಿಸಿದ್ದು, ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ ಸ್ಟಾರ್ಟ್ ಆಫ್ ಎನಿಸಿದೆ. ನುಟನೋಮಿ ಮೂಲತಃ ಅಮೆರಿಕದ ಎಂಐಟಿಯ ಪದವೀಧರರಾದ ಲ್ಯಾಗ್ನೆಮ್ಮಾ ಮತ್ತು ಎಮಿಲಿಯೋ ಎಂಬ ತಂತ್ರಜ್ಞರು 2013ರಲ್ಲಿ ಹುಟ್ಟುಹಾಕಿದ್ದ ಸಂಸ್ಥೆಯಾಗಿದೆ.

  • ಚಾಲಕ ರಹಿತ ಈ ವಿನೂತನ ಪರಿಕಲ್ಪನೆಯ ಟ್ಯಾಕ್ಸಿ ಸೇವೆಗೆ ಸಿಂಗಾಪುರ ಸರ್ಕಾರ ಕಳೆದ ತಿಂಗಳು ಅನುಮತಿ ನೀಡಿತ್ತು.
  • ಆರಂಭಿಕ ಹಂತದಲ್ಲಿ ಆರು ಕಾರುಗಳನ್ನು ಪ್ರಾಯೋಗಿಕವಾಗಿ ಬಿಡಲಾಗಿದ್ದು, ನಗರದ 6.5 ಚದರ ಮೈಲು ಸುತ್ತಳತೆಯ ಪ್ರದೇಶಕ್ಕೆ ಮಾತ್ರ ಈ ಸೇವೆ ಸೀಮಿತವಾಗಿದೆ. ಇದಕ್ಕಾಗಿ ಜಪಾನ್ ನ ಮಿತ್ಸುಬಿಷಿ ಹಾಗೂ ಫ್ರಾನ್ಸ್ ಮೂಲದ ರೆನಾಲ್ಟ್ ಸಂಸ್ಥೆಗಳ ಸಣ್ಣ ಕಾರುಗಳನ್ನು ಬಳಸಿಕೊಳ್ಳಾಗಿದೆ.
  • ಪ್ರತಿ ಕಾರಿನಲ್ಲೂ ಆರು ಲಿಡರ್ ಸೆಟ್ (Light Detection and Ranging) ಅಳವಡಿಸಲಾಗಿದ್ದು, ಲೇಸರ್ ತಂತ್ರಜ್ಞಾನ ಮೂಲಕ ಸ್ವಯಂಚಾಲಿತವಾಗಿ ಚಲಿಸುವಂಥ ಸಾಫ್ಟ್ ವೇರ್ ಅಭಿವೃದ್ದಿಪಡಿಸಲಾಗಿದೆ.
  • ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಎರಡು ಕ್ಯಾಮೆರಗಳನ್ನು ಅಳವಡಿಸಲಾಗಿದ್ದು, ದಾರಿಯಲ್ಲಿ ಅಡ್ಡಬರುವ ವಸ್ತುಗಳನ್ನು ಹಾಗೂ ಟ್ರಾಪಿಕ್ ಸಿಗ್ನಲ್ ದೀಪದಲ್ಲಿ ಆಗುವ ಬದಲಾವಣೆಯನ್ನು ಗುರುತಿಸಲಿದೆ.

IEI-IEEE ಮೊದಲ ಪ್ರಶಸ್ತಿಗೆ ಭಾಜನರಾದ ಜಿ.ಸತೀಶ್ ರೆಡ್ಡಿ

ರಕ್ಷಣ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO)ಯ ಹಿರಿಯ ವಿಜ್ಞಾನಿ ಜಿ.ಸತೀಶ್ ರೆಡ್ಡಿ ಅವರು IEI-IEEE ಇದೇ ಮೊದಲ ಬಾರಿಗೆ ನೀಡುತ್ತಿರುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ಷಿಪಣಿ ಮತ್ತು ಅಂತರಿಕ್ಷಯಾನ ತಂತ್ರಜ್ಞಾನ ಅಭಿವೃದ್ದಿಗೆ ಸತೀಶ್ ನೀಡಿರುವ ಅಗಾಧ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಸತೀಶ್ ರೆಡ್ಡಿ ಬಗ್ಗೆ:

  • ಸತೀಶ್ ಅವರು ಹೆಸರಾಂತ ಏರೋಸ್ಪೇಸ್ ಮತ್ತು ನ್ಯಾವಿಗೇಷನ್ ವಿಜ್ಞಾನಿ. ಪ್ರಸ್ತುತ ಇವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು DRDOದ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • DRDOದ ಅಂಗಸಂಸ್ಥೆಯಾದ ರಿಸರ್ಚ್ ಸೆಂಟರ್ ಇಮರತ್ (Research Centre Imarat)ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಭಾರತ ಕ್ಷಿಪಣೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ದಿಯಲ್ಲಿ ರೆಡ್ಡಿ ಅವರು ಮುಂಚೂಣೆಯಲ್ಲಿದ್ದಾರೆ. ಮಧ್ಯಮ ಶ್ರೇಣಿಯ ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣೆ ವ್ಯವಸ್ಥೆ (Medium Range Surface-to-Air Weapon System) ಸೇರಿದಂತೆ ಗೈಡೆಡ್ ಬಾಂಬ್ ಅಭಿವೃದ್ದಿಯಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
  • ಅಗ್ನಿ-V ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗುವಲ್ಲಿ ಸತೀಶ್ ಮಹತ್ವದ ಪಾತ್ರವಹಿಸಿದ್ದರು.
  • 2015 ರಲ್ಲಿ ರಾಯಲ್ ಇನ್ಸ್ ಟಿಟ್ಯೂಟ್ ಆಫ್ ನ್ಯಾವಿಗೇಷನ್ ಇಂದ ಫೇಲೊಶಿಪ್ ಪಡೆದ ಮೊದಲ ಭಾರತೀಯ ಎನಿಸಿದ್ದಾರೆ.

IEI-IEEI ಪ್ರಶಸ್ತಿ ಬಗ್ಗೆ:

  • Institution of Engineers (India) and the Institute of Electrical and Electronics Engineers, 50ನೇ ಸಂಸ್ಥಾಪನ ದಿನದ ಅಂಗವಾಗಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಮೊದಲ ಪ್ರಶಸ್ತಿಯನ್ನು ಸತೀಶ್ ರೆಡ್ಡಿ ಪಡೆದುಕೊಂಡಿದ್ದಾರೆ.

One Thought to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 23, 2016”

Leave a Comment

This site uses Akismet to reduce spam. Learn how your comment data is processed.