ಮಹಿಳಾ ಸ್ವಸಹಾಯ ಸಂಘಗಳಿಗೆ ಶೇ. 7 ಬಡ್ಡಿದರದಲ್ಲಿ ಸಾಲ: RBI
ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ (Self Help Group) ವಾರ್ಷಿಕ ಶೇ. 7ರ ಬಡ್ಡಿದರದಲ್ಲಿ ರೂ 3ಲಕ್ಷಗಳ ವರೆಗೆ ಸಾಲ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಈ ಸಾಲದ ಯೋಜನೆಯನ್ನು 2015-16ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ-ಅಜೀವಿಕಾ (NRLM) ಅಡಿ ನೀಡಲಾಗುವುದು.
- ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಈ ಸಾಲದ ಯೋಜನೆಯನ್ನು ಜಾರಿಗೆ ತರಲಾಗಿದೆ.
- 2016-17ರ ಪರಿಷ್ಕ್ರತ ಮಾರ್ಗಸೂಚಿಯಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳಾ ಸ್ವ ಸಹಾಯ ಸಂಘಗಳು ಶೇ. 7ರ ಬಡ್ಡಿದರದಲ್ಲಿ ರೂ. 3 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
- ಸ್ವರ್ಣಜಯಂತಿ ಗ್ರಾಮ ಸ್ವರಾಜ್ ಯೋಜನೆ ಅಡಿ ಸಬ್ಸಿಡಿ ಪಡೆಯುತ್ತಿರುವ ಸ್ವ ಸಹಾಯ ಗುಂಪುಗಳು ಈ ಸಾಲ ಸೌಲಭ್ಯ ಪಡೆಯಲು ಅರ್ಹವಲ್ಲ.
- ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ಗುಂಪುಗಳಿಗೆ ಉತ್ತೇಜನ ನಿಡುವ ಉದ್ದೇಶದಿಂದ ಸರ್ಕಾರ ಹೆಚ್ಚುವರಿಯಾಗಿ ಶೇ. 3ರಷ್ಟು ಅನುದಾನ ನೀಡಲಾಗುವುದು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ
- ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ-ಅಜೀವಿಕಾವನ್ನು ಜೂನ್ 2011ರಲ್ಲಿ ಜಾರಿಗೆ ತಂದಿತು. ನವೆಂಬರ್ 2015ರಲ್ಲಿ ಈ ಯೋಜನೆಯನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆಯೆಂದು ಮರುನಾಮಕರಣ ಮಾಡಿ ಅನುಷ್ಟಾನ ಮಾಡಲಾಗುತ್ತಿದೆ.
- ಈ ಯೋಜನೆಯನ್ನು ವಿಶ್ವ ಬ್ಯಾಂಕ್ ಆರ್ಥಿಕ ಸಹಾಯದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ.
- ಗ್ರಾಮೀಣ ಬಡಜನರ ಕೌಟುಂಬಿಕ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
- ಇದು ವಿಶ್ವದ ಅತಿ ದೊಡ್ಡ ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣ ಯೋಜನೆಯಾಗಿದ್ದು, ಸುಮಾರು 70 ಮಿಲಿಯನ್ ಗ್ರಾಮೀಣ ಕುಟುಂಬಗಳನ್ನು ತಲುಪುವ ಗುರಿ ಹೊಂದಿದೆ.
ಕೇಂದ್ರ ಸರ್ಕಾರದಿಂದ ದೃಷ್ಟಿ ಮಾಂದ್ಯರಿಗೆ “ಸುಗಮ್ಯ ಪುಸ್ತಕಾಲಯ” ಇ-ಲೈಬ್ರರಿಗೆ ಚಾಲನೆ
ದೃಷ್ಟಿ ಮಾಂದ್ಯ ಓದುಗರಿಗೆ ಅನುಕೂಲವಾಗುವ ಸಲುವಾಗಿ ಕೇಂದ್ರ ಸರ್ಕಾರ ಸುಗಮ್ಯ ಪುಸ್ತಕಾಲಯ ಎಂಬ ಇ-ಲೈಬ್ರರಿಯನ್ನು ಇತ್ತೀಚೆಗೆ ಆರಂಭಿಸಿದೆ. ಪ್ರಧಾನ ಮಂತ್ರಿ ಸುಗಮ್ಯ ಭಾರತ್ ಅಭಿಯಾನದಡಿ ಈ ವಿನೂತನ ಲೈಬ್ರಿರಿಯನ್ನು ಸ್ಥಾಪಿಸಲಾಗಿದೆ. ಕೇಂದ್ರ ಸಚಿವರುಗಳಾದ ರವಿ ಶಂಕರ್ ಪ್ರಸಾದ್, ಪ್ರಕಾಶ್ ಜಾವೇದಕರ್ ಮತ್ತು ಥಾವರ್ ಚೆಂದ್ ಗೆಹ್ಲೊಟ್ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಟಿಯಾಗಿ ಈ ಲೈಬ್ರರಿಗೆ ಚಾಲನೆ ನೀಡಿದರು.
ಸುಗಮ್ಯ ಪುಸ್ತಕಾಲಯದ ಬಗ್ಗೆ:
- ಸುಗಮ್ಯ ಪುಸ್ತಕಾಲಯ ಒಂದು ಆನ್ ಲೈನ್ ಲೈಬ್ರರಿಯಾಗಿದ್ದು, ದೃಷ್ಟಿ ಮಾಂದ್ಯ ಓದುಗರಿಗಾಗಿ ಸ್ಥಾಪಿಸಲಾಗಿದೆ. ಈ ಲೈಬ್ರರಿಯು ಹಲವು ಭಾಷೆಯ, ವಿಭಿನ್ನ ವಿಷಯಗಳ ಪುಸ್ತಕಗಳನ್ನು ಒಳಗೊಂಡಿದೆ.
- ಡೈಸಿ ಫೋರಂ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ವಿಷುಯಲಿ ಹ್ಯಾಂಡಿಕ್ಯಾಪ್ಡ್ ಮತ್ತು ಬುಕ್ ಶೇರ್ ಸಹಯೋಗದೊಂದಿಗೆ ಈ ಲೈಬ್ರರಿಯನ್ನು ಸ್ಥಾಪಿಸಲಾಗಿದೆ. ಟಿಸಿಎಸ್ ಅಕ್ಸೆಸ್ ಇದಕ್ಕೆ ನೆರವು ನೀಡಿದೆ.
- ಈ ಲೈಬ್ರರಿಯಲ್ಲಿ ದೃಷ್ಟಿ ಹೀನರು ಮತ್ತು ಇತರೆ ಮುದ್ರಣ ವಿಕಲಾಂಗರಿಗೆ ಸುಲಭವಾಗಿ ಓದಬಹುದಾದ ಪುಸ್ತಕಗಳು ಲಭ್ಯವಿರಲಿವೆ.
- ಸುಮಾರು 2 ಲಕ್ಷಕ್ಕೂ ಹೆಚ್ಚು ವಿವಿಧ ಭಾಷೆಯ ಪುಸ್ತಕಗಳು ಇಲ್ಲಿವೆ. ಜೊತೆಗೆ ದೇಶ ವಿದೇಶದ ವಿವಿಧ ಲೈಬ್ರರಿಗಳೊಂದಿಗೆ ಸಂಪರ್ಕ ಹೊಂದಿರಲಿದೆ.
ಬಾಂಗ್ಲದೇಶದ ಬಂಗಾಳಿ ಕೇಳುಗರಿಗೆ ಆಕಾಶವಾಣಿ ಮೈತ್ರಿ ಚಾನೆಲ್
ಬಂಗಾಳಿ ಕೇಳುಗರಿಗಾಗಿ ಆಕಾಶವಾಣಿ ಮೈತ್ರಿ ಚಾನೆಲ್ ಮತ್ತು ಅದರ ವೆಬ್ ಸೈಟ್ ಅನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೊಲ್ಕತ್ತಾದಲ್ಲಿ ಉದ್ಘಾಟಿಸಿದರು. ಮೈತ್ರಿ ಚಾನೆಲ್ ಕೊಲ್ಕತ್ತ ಆಕಾಶವಾಣಿ ಕೇಂದ್ರದ ವಿಶಿಷ್ಟ ಯೋಜನೆಯಾಗಿದ್ದು, ಭಾರತ ಮತ್ತು ಬಾಂಗ್ಲಾದೇಶದ ಕೇಳುಗರಿಗೆ ಸಮಾನ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಈ ಹೊಸ ವಾಹಿನಿಯನ್ನು ಆರಂಭಿಸಲಾಗಿದೆ.
- ಈ ವಾಹಿನಿಯನ್ನು ಹೊಸ ಬಗೆಯ ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವ 1000kw DRM (Digital Radio Mondiale) ಟ್ರಾನ್ಸಮಿಟರ್ ಮೂಲಕ ಪ್ರಸಾರ ಮಾಡಲಾಗುವುದು.
- ಇದು ಮಧ್ಯಮ ತರಂಗದ ಮೂಲಕ ಬಾಂಗ್ಲದೇಶದ ಉದ್ದಗಲ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಮೂಲಕವೂ ಕೇಳಬಹುದಾಗಿದೆ.
- ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಢಾಕಾಕ್ಕೆ ಭೇಟಿ ನೀಡಿದಾಗ ಹೊಸ ಚಾನೆಲ್ ವಿಚಾರ ಕಲ್ಪನೆಯನ್ನು ಹುಟ್ಟುಹಾಕಿದ್ದರು.
ಆಕಾಶವಾಣಿ ಮೈತ್ರಿ:
- ಬಾಂಗ್ಲದೇಶ ವಿಮೋಚನ ಚಳುವಳಿ 1971ರಲ್ಲಿ ಪಶ್ಚಿಮ ಬಂಗಾಳದಲ್ಲಿ ಆಲ್ ಇಂಡಿಯಾ ರೇಡಿಯೋ ಆಕಾಶವಾಣಿ ಮೈತ್ರಿಯನ್ನು ಆರಂಭಿಸಿತ್ತು. ಬಾಂಗ್ಲದೇಶ ವಿಭಜನೆಯ ಹೋರಾಟದಲ್ಲಿ ಈ ವಾಹಿನಿ ಐತಿಹಾಸಿಕ ಪಾತ್ರವಹಿಸಿತ್ತು. ಆದರೆ 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.
ಪುನರ್ ಆರಂಭ ಏಕೆ?
- ಭಾರತ ಮತ್ತು ಬಾಂಗ್ಲದೇಶ ನಡುವೆ ಸಂಬಂಧಗಳನ್ನು ಉತ್ತಮಪಡಿಸುವುದು.
- ಉಭಯ ದೇಶಗಳಲ್ಲಿ ಬಂಗಾಳಿ ಕೇಳುಗರನ್ನು ಆಕರ್ಷಿಸಿ, ಸಾಮರಸ್ಯ ಮೂಡಿಸುವುದು.
- ಈ ಪ್ರದೇಶದಲ್ಲಿ ಅಧಿಪತ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾ ರೇಡಿಯೋದ ಪ್ರಭಾವವನ್ನು ತಗ್ಗಿಸುವುದು.
Thanks sir