ಸ್ಕ್ರಾಮ್ ಜೆಟ್ (Scram Jet)ಎಂಜಿನ್ ಯಶಸ್ವಿಯಾಗಿ ಪರೀಕ್ಷಿಸಿದ ಇಸ್ರೋ

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಕ್ರಾಮ್ ಜೆಟ್ (Supersonic Combusting Ramjet) ಎಂಜಿನ್ ನ ಮೊದಲ ಪರೀಕ್ಷೆಯಲ್ಲೇ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಯಶಸ್ವಿಯಾಗುವ ಮೂಲಕ ಇಸ್ರೋ ಮತ್ತೊಂದು ಗೆಲುವಿನ ನಗೆ ಬೀರಿದೆ.

  • ಸ್ವದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ಅನ್ನು RH-560 ಸೌಂಡಿಂಗ್ ರಾಕೆಟ್ ನಲ್ಲಿ ಅಳವಡಿಸಿ ಪರೀಕ್ಷೆಸಲಾಯಿತು. RH-560 ಎರಡು ಹಂತದ ಸುಧಾರಿತ ತಂತ್ರಜ್ಞಾನದ ವಾಹನವಾಗಿದೆ(Advanced Technology Vehicle (ATV)).
  • ATV ಮತ್ತು ಸ್ಕ್ರಾಮ್ ಜೆಟ್ ನ ಒಟ್ಟು ತೂಕ 3277 ಕೆ.ಜಿ. ಈ ಪರೀಕ್ಷ ವೇಳೆಯಲ್ಲಿ ಎಟಿವಿ ಮ್ಯಾಕ್ 6 (ಶಬ್ದಕ್ಕಿಂತಲೂ ಆರು ಪಟ್ಟು ಹೆಚ್ಚು ವೇಗ) ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ತೋರಿದೆ.
  • ಸ್ಕ್ರಾಮ್ ಜೆಟ್ ಎಂಜಿನ್ ಜಲಜನಕದ ಇಂಧನವನ್ನು ದಹಿಸಲು ವಾತಾವರಣದಲ್ಲಿರುವ ಆಮ್ಲಜನಕವನ್ನು ಆಕ್ಸಿಡೈಸರ್ ಆಗಿ ಬಳಸಿಕೊಳ್ಳಲಿದೆ.
  • ಅಮೆರಿಕಾ, ಜಪಾನ್ ಮತ್ತು ಚೀನಾ ನಂತರ ಈ ಎಂಜಿನ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ದಿಪಡಿಸಿದ ದೇಶ ಭಾರತ ಆಗಿದೆ.

      ಸ್ಕ್ರಾಮ್ ಜೆಟ್ ಬಗ್ಗೆ:

  • ಸ್ಕ್ರಾಮ್ ಜೆಟ್ ಏರ್ ಬ್ರೆಥಿಂಗ್ ಪ್ರೊಪುಲ್ಶನ್ ಸಿಸ್ಟಮ್ (Air Breathing Propulsion System (ABPS))ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಈ ತಂತ್ರಜ್ಞಾನದಲ್ಲಿ ರಾಕೆಟ್ ನಲ್ಲಿ ಬಳಸುವ ಇಂಧನವು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿ ದಹಿಸಲಿದೆ. ಆದ್ದರಿಂದ ಆಕ್ಸಿಡೈಸರ್ ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ಉಡಾವಣೆ ವೆಚ್ಚದಲ್ಲಿ ಸಾಕಷ್ಟು ಕಡಿಮೆಯಾಗಲಿದೆ.

      ಉಪಯೋಗಗಳು:

  • ದ್ರವೀಕೃತ ಆಮ್ಲಜನಕವನ್ನು ಒತ್ತೊಯ್ಯುವ ಅವಶ್ಯಕತೆ ಇಲ್ಲದಿರುವುದರಿಂದ ಉಡಾವಣ ತೂಕ ಗಣನೀಯವಾಗಿ ಕಡಿಮೆಯಾಗಲಿದೆ.
  • ಇದರಿಂದ ರಾಕೆಟ್ ಕಾರ್ಯಕ್ಷಮತೆ ಹೆಚ್ಚಲಿದ್ದು, ಉಡಾವಣ ವೆಚ್ಚ ಕಡಿಮೆಯಾಗಲಿದೆ.
  • ಈ ಎಂಜಿನ್ ನಲ್ಲಿ ತಿರುಗುವ ಭಾಗಗಳು ಇಲ್ಲದ ಕಾರಣ ವಿಫಲವಾಗುವ ಸಾಧ್ಯತೆ ತೀರಾ ಕಡಿಮೆ.

ಖ್ಯಾತ ಚಿತ್ರಕಾರ, ಲೇಖಕ ಮತ್ತು ಕಲಾ ಚರಿತ್ರೆಕಾರ ದೀನನಾಥ ಪಥಿ ನಿಧನ

ಒಡಿಶಾದ ಪ್ರಸಿದ್ದ ಚಿತ್ರಕಾರ, ಲೇಖಕ ಮತ್ತು ಕಲಾ ಚರಿತ್ರೆಕಾರ ದೀನನಾಥ ಪಥಿ ಅವರು ಹೃದಯಸ್ತಂಭನದಿಂದ ನಿಧನರಾದರು. ವಿಶಿಷ್ಟ ಪ್ರತಿಭೆಯಿಂದ ಪ್ರಸಿದ್ದರಾಗಿದ್ದ ಪಥಿ, ನವದೆಹಲಿ ಮತ್ತು ಭುಬನೇಶ್ವರ ಲಲಿತಾ ಅಕಾಡೆಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ದೀನನಾಥ ಪಥಿ ಬಗ್ಗೆ:

  • ಪಥಿ ಅವರು ಭುವನೇಶ್ವರದ ಬಿ.ಕೆ. ಕಾಲೇಜ್ ಆಫ್ ಆರ್ಟ್ ಆಯಂಡ್ ಕ್ರಾಫ್ಟ್ಸ್ ನ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು. ಕಲೆ, ಕವನ ಹಾಗೂ ಬೋಧನೆಗಳಿಂದ ಒಡಿಶಾದ ಕಲೆಯನ್ನು ವಿಶ್ವಾದ್ಯಂತ ಪಸರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
  • ಒಡಿಶಾದಲ್ಲಿ ಕಲಾ ಚಳುವಳಿಯನ್ನು ಆರಂಭಿಸಿದ ಮೊದಲಿಗ ಎಂಬ ಖ್ಯಾತಿ ಪಥಿ ಅವರದು.
  • ಸಾಹಿತಿಯಾಗಿ ಒಡಿಯಾ, ಇಂಗ್ಲೀಷ್ ಮತ್ತು ಜರ್ಮನ್ ಭಾಷೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದರು
  • ಚಿತ್ರಕಲೆಗಾಗಿ ‘ಭಾರತದ ರಾಷ್ಟ್ರಪತಿಯ ರಜತ ಫಲಕ’ದ ಗೌರವಕ್ಕೆ ಪಾತ್ರರಾಗಿದ್ದರು. ಭಾರತೀಯ ಕಲಾ ಚರಿತ್ರೆಯ ಸಂಶೋಧನೆಗೆ ನೀಡಿದ ಕೊಡುಗೆಗಾಗಿ ಅವರು, ಸ್ವಿಟ್ಜರ್ಲ್ಯಾಂಡ್ನ ರೈಟ್ಬರ್ಗ್ ಸೊಸೈಟಿಯ ಪ್ರತಿಷ್ಠಿತ ರೈಟ್ ಬರ್ಗ್ ಪ್ರಶಸ್ತಿಗೆ 2014ರಲ್ಲಿ ನಾಮಕರಣಗೊಂಡಿದ್ದರು. ಅವರ ಆತ್ಮಕತೆ “ಡ್ರಾಯಿಂಗ್ ಮಾಸ್ಟರ್ ಆಫ್ ದಿಗಪಹಂದಿ” ಗಾಗಿ ಒಡಿಶಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಪರಸ್ಪರ ಸಹಕಾರ: ಭಾರತ-ಮ್ಯಾನ್ಮಾರ್ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಮಯನ್ಮಾರ್ ನಡುವೆ ಪರಸ್ಪರ ಸಹಕಾರ ಮತ್ತು ಸಂಬಂಧವನ್ನು ಉತ್ತಮಗೊಳಿಸುವ ಸಲುವಾಗಿ ಉಭಯದೇಶಗಳು ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿಹಾಕಿದವು. ಭಾರತ ಭೇಟಿಯಲ್ಲಿರುವ ಮ್ಯಾನ್ಮಾರ್ ಅಧ್ಯಕ್ಷ ಯು ತಿನ್ ಕ್ಯಾವ್ ಮತ್ತು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಸಹಿಹಾಕಿದರು. ಯು ತಿನ್ ಕ್ಯಾವ್ ಅವರು ಭಾರತಕ್ಕೆ ಭೇಟಿ ನೀಡಿದ ಮ್ಯಾನ್ಮಾರ್ ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಮೊದಲ ಅಧ್ಯಕ್ಷ.

ಸಹಿಮಾಡಲಾದ ಒಪ್ಪಂದಗಳು:

  • ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಒಪ್ಪಂದ
  • 69 ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಪ್ಪಂದ
  • ಸಾಂಪ್ರದಾಯಿಕ ಔಷಧ ಪದ್ದತಿಗೆ ಸಂಬಂಧಿಸಿದಂತೆ ಒಪ್ಪಂದ
  • ಕಲೆವ-ಯಾಗ್ಯಿ ರಸ್ತೆ ನಿರ್ಮಾಣ ಮತ್ತು ಉನ್ನತೀಕರಣಕ್ಕೆ ಸಂಬಂಧಿಸಿದ ಒಪ್ಪಂದ

ಮೊದಲ ಹಂತದ ಸೌನಿ (SAUNI) ನೀರಾವರಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಸೌರಾಷ್ಟ್ರ ನರ್ಮದಾ ಅವತರಣ್ ಇರಿಗೇಷನ್ (ಸೌನಿ) ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ಮೋದಿ ಅವರು ಗುಜರಾತ್ ನ ಜಾಮ್ ನಗರದ ಸನೊದರ ಬಳಿ ಚಾಲನೆ ನೀಡಿದರು. ಸೌನಿ ಯೋಜನೆ ಗುಜರಾತ್ನ ಬರಪೀಡಿತ ಪ್ರದೇಶವಾದ ಸೌರಾಷ್ಟ್ರ ಭಾಗದ ನೀರಿನ ಸಮಸ್ಯೆಗಳನ್ನು ಬಗೆಹರಿಸುವ ವಿವಿಧೋದ್ದೇಶ ಯೋಜನೆಯಾಗಿದೆ.

ಸೌನಿ ನೀರಾವರಿ ಯೋಜನೆ ಬಗ್ಗೆ:

  • ಸರ್ದಾರ ಸರೋವರ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಸೌರಾಷ್ಟ್ರ ಭಾಗದ 115 ಅಣೆಕಟ್ಟುಗಳಿಗೆ ಹರಿಸಿ ತುಂಬಿಸುವ ಯೋಜನೆಯಾಗಿದೆ.
  • ಮೊದಲ ಹಂತದಲ್ಲಿ ರಾಜ್ ಕೋಟ್, ಜಾಮ್ ನಗರ್ ಮತ್ತು ಮೊರ್ಬಿ ಜಿಲ್ಲೆಗಳ 10 ಅಣೆಕಟ್ಟುಗಳನ್ನು ನರ್ಮದಾ ನದಿ ನೀರಿಂದ ತುಂಬಿಸಿ ಆ ಮೂಲಕ ನೀರಾವರಿ ಮತ್ತು ಕುಡಿಯುವ ಯೋಜನೆಗಳಿಗೆ ಬಳಸಲಾಗುವುದು.
  • ಈ ಯೋಜನೆಯಡಿ ನೀರನ್ನು ಹರಿಸಲು ತೆರದ ಕಾಲುವೆ ನಿರ್ಮಿಸದೆ ಪೈಪ್ ಮೂಲಕ ಹರಿಸಲಾಗುವುದು. ಇದರಿಂದ ಭೂ ಸ್ವಾಧೀನ ಮಾಡಿಕೊಳ್ಳಬೇಕಗಿಲ್ಲ.
  • ಸುಮಾರು 1, 125 ಕಿ.ಮೀ ನೀರಾವರಿ ಪೈಪ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ರೈತರ ಜಮೀನುಗಳಿಗೆ ನೀರರಿಸಬಹುದಾಗಿದೆ.

ಹಿನ್ನಲೆ:

  • ಸೌನಿ ಯೋಜನೆಯನ್ನು 2012ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿಸಲಾಗಿತ್ತು. ಸೌರಾಷ್ಟ್ರ ಭಾಗವು 11 ಜಿಲ್ಲೆಗಳನ್ನು ಒಳಗೊಂಡಿದ್ದು, ತೀವ್ರ ಮಳೆಯ ಕೊರತೆಯಿಂದ ಜಲಕ್ಷಾಮ ಎದಿರುಸುತ್ತಿರುವ ಭಾಗವಾಗಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ನ ರಾಯಭಾರಿಯಾಗಿ ಪಿ.ವಿ.ಸಿಂಧು ನೇಮಕ

ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ,ಸಿಂಧು ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ರಾಯಭಾರಿಯನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಇದರ ಗೌರವ ಕಮಾಂಡಂಟ್ ಆಗಿಯೂ ಪಿ.ವಿ.ಸಿಂಧು ನೇಮಕಗೊಳ್ಳಲಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್ ಕೆ.ದುರ್ಗ ಪ್ರಸಾದ್ ಅವರು ನೇಮಕಾತಿಯನ್ನು ಖಚಿತಪಡಿಸಿದ್ದು, ಸಿಂಧು ಇದಕ್ಕೆ ಸಮ್ಮತಿಸಿದ್ದಾರೆ. ಸದ್ಯ ನೇಮಕಾತಿ ಕುರಿತ ಪ್ರಸ್ತಾವನೆಯನ್ನು ಗೃಹ ಸಚಿವಾಲಯದ ಅನುಮತಿಗೆ ಸಲ್ಲಿಸಲಾಗಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆ:

  • ಕೇಂದ್ರ ಮೀಸಲು ಪೊಲೀಸ್ ಪಡೆ ಭಾರತದ ಅತಿದೊಡ್ಡ ಪ್ಯಾರಮಿಲಿಟರಿ ಪಡೆಯಾಗಿದೆ. ಕೇಂದ್ರ ಗೃಹ ಸಚಿವಾಲಯದಡಿ ಇದು ಕಾರ್ಯನಿರ್ವಹಿಸುತ್ತಿದೆ.
  • ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಪೊಲೀಸ್ ಕಾರ್ಯಾಚರಣೆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವುದು ಇದರ ಪ್ರಮುಖ ಕಾರ್ಯವಾಗಿದೆ.
  • 1939 ರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆ ಕಾಯಿದೆ-1949 ರ ಅನ್ವಯ ಶಾಸನಬದ್ದಗೊಳಿಸಲಾಗಿದೆ.
  • ಪ್ರಸ್ತುತ ಕೇಂದ್ರ ಮೀಸಲು ಪೊಲೀಸ್ ಪಡೆ ವಿಶ್ವದ ಅತಿ ದೊಡ್ಡ ಪ್ಯಾರಮಿಲಿಟರಿ ಪಡೆಯಾಗಿದ್ದು, 228 ಬೆಟಾಲಿಯನ್ ಹಾಗೂ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿದೆ.

Leave a Comment

This site uses Akismet to reduce spam. Learn how your comment data is processed.