ಒಡಿಶಾದಲ್ಲಿ ಭಾರತದ ಮೊದಲ ಅಡುಗೆ ಅನಿಲ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ

ಭಾರತದ ಮೊದಲ ಅಡುಗೆ ಅನಿಲ (Cooking Gas) ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ಒಡಿಶಾದ ಭುಬನೇಶ್ವರದಲ್ಲಿ ಆರಂಭಗೊಂಡಿತು. ಎರಡು ದಿನಗಳ ಸಮ್ಮೇಳನವನ್ನು ಜಾರ್ಖಂಡ್ ರಾಜ್ಯಪಾಲ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.

  • ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಸಂಸ್ಥೆಗಳು ಈ ಸಮ್ಮೇಳನವನ್ನ ಆಯೋಜಿಸಿದ್ದು, ಸಾಂಪ್ರದಾಯಿಕ ಇಂಧನಗಳ ಬಳಕೆ ಬದಲಾಗಿ LPG ಅನಿಲ ಬಳಕೆ ಪ್ರೋತ್ಸಾಹಿಸುವುದು ಸಮ್ಮೇಳನದ ಉದ್ದೇಶವಾಗಿದೆ.
  • ಸಾಂಪ್ರದಾಯಿಕ ಅಡುಗೆ ಇಂಧನಗಳಿಂದ ಆರೋಗ್ಯ ಮತ್ತು ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಒತ್ತು ನೀಡುವುದು.
  • ಈ ಸಮ್ಮೇಳನದಲ್ಲಿ ಬ್ರೆಜಿಲ್, ಘಾನ, ನೈಜೀರಿಯಾ, ನೇಪಾಳ ಮತ್ತು ಶ್ರೀಲಂಕಾ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ 10 ಸಿಮೆಂಟ್ ಕಂಪನಿಗಳಿಗೆ ದಂಡ

ಹತ್ತು ಸಿಮೆಂಟ್ ಕಂಪನಿಗಳು ಮತ್ತು ಅವುಗಳ ಸಿಮೆಂಟ್ ಉತ್ಪಾದನ ಸಂಘಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಭಾರಿ ದಂಡ ವಿಧಿಸಿದೆ. ಒಕ್ಕೂಟ ರಚಿಸಿಕೊಂಡು ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಮತ್ತು ಆರ್ಥಿಕ ವ್ಯವಸ್ಥೆಗೆ ಹಾನಿ ಉಂಟುಮಾಡಿದ ಕಾರಣ ದಂಡವನ್ನು ವಿಧಿಸಲಾಗಿದೆ. ಎಸಿಎಲ್, ಬಿನಾನಿ, ಸೆಂಚುರಿ, ಇಂಡಿಯಾ ಸಿಮೆಂಟ್, ಜೆಕೆ ಸಿಮೆಂಟ್, ಲಫರ್ಜ್, ರಾಮ್ಕೋ, ಅಲ್ಟ್ರಾ ಟೆಕ್ ಮತ್ತು ಜಯಪ್ರಕಾಶ್ ಅಸೋಸಿಯೆಟ್ಸ್ ದಂಡಕ್ಕೊಳಗಾದ ಕಂಪನಿಗಳಾಗಿವೆ.

ಏನಿದು ವಿವಾದ?

  • ಒಕ್ಕೂಟ ರಚಿಸಿಕೊಂಡು ಗ್ರಾಹಕರು ಮತ್ತು ಒಟ್ಟಾರೆ ಆರ್ಥಿಕತೆಗೆ ಹಾನಿಯುಂಟು ಮಾಡುತ್ತಿರುವುದಾಗಿ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಸಿಮೆಂಟ್ ಕಂಪನಿ ಮತ್ತು ಸಂಘದ ವಿರುದ್ದ ಪ್ರಕರಣ ಹೂಡಿತ್ತು. ಸಿಮೆಂಟ್‌ ತಯಾರಕರ ಸಂಘ (ಸಿಎಂಎ) ಮತ್ತು ಸಿಮೆಂಟ್ ಕಂಪನಿಗಳು ಬೆಲೆ, ತಯಾರಿಕೆ, ಪೂರೈಕೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದ ಮಾಡಿಕೊಂಡು ಸಿಮೆಂಟ್ ಲಭ್ಯತೆ ಮತ್ತು ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದು ಸ್ಪರ್ಧಾತ್ಮಕ ಕಾಯಿದೆ-2002 ಕ್ಕೆ ವಿರುದ್ದವಾಗಿದೆ ಎನ್ನಲಾಗಿತ್ತು. ಇದರಿಂದ ಗ್ರಾಹಕರು ಮತ್ತು ಆರ್ಥಿಕತೆಗೆ ನಷ್ಟವಾಗುವುದರ ಜೊತೆಗೆ, ಕಟ್ಟಡ ನಿರ್ಮಾಣಕ್ಕೆ ಮೂಲವಾಗಿ ಬೇಕಾಗಿರುವ ಸಿಮೆಂಟ್ ಪೂರೈಕೆಯಲ್ಲಿ ಹಿನ್ನಡೆ ಆಗಿದೆ ಎಂದು ದಂಡವಿಧಿಸಲಾಗಿದೆ.

ಭಾರತೀಯ ಸ್ಪರ್ಧಾತ್ಮಕ ಆಯೋಗ (Competition Commission of India):

  • ಭಾರತೀಯ ಸ್ಪರ್ಧಾತ್ಮಕ ಆಯೋಗ ಒಂದು ಅರೆ ನ್ಯಾಯಾಂಗ ಶಾಸನಬದ್ದ ಸಂಸ್ಥೆಯಾಗಿದ್ದು, ಸ್ಪರ್ಧಾತ್ಮಕ ಕಾಯಿದೆ-2002 ರಡಿ ಸ್ಥಾಪಿಸಲಾಗಿದೆ.
  • 2003ರಲ್ಲಿ ಕಾರ್ಯರಂಭ ಮಾಡಿದ ಆಯೋಗವು ವಿವಿಧ ಉದ್ಯಮಗಳಲ್ಲಿ ಪ್ರತಿಕೂಲ ಸ್ಪರ್ಧಾತ್ಮಕ ವ್ಯವಸ್ಥೆಗೆ ವಿರುದ್ದವಾದ ವ್ಯವಸ್ಥೆಯನ್ನು ತಡೆಯುವುದು ಮತ್ತು ಗ್ರಾಹಕರ ಹಿತರಕ್ಷಣೆ ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದೆ.
  • ದೇವೆಂದ್ರ ಕುಮಾರಿ ಸಿಕ್ರಿ ಭಾರತೀಯ ಸ್ಪರ್ಧಾತ್ಮಕ ಆಯೋಗದ ಈಗಿನ ಅಧ್ಯಕ್ಷರಾಗಿದ್ದಾರೆ.

ಗಂಗಾನದಿಯಲ್ಲಿ ತುಂಬಿರುವ ಹೂಳು ಅಧ್ಯಯನ ನಡೆಸಲು ಎ.ಕೆ.ಸಿನ್ಹಾ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಬಿಹಾರದ ಬಳಿ ಗಂಗಾನದಿಯಲ್ಲಿ ತುಂಬಿರುವ ಹೂಳಿನ (Silt) ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ನಾಲ್ಕು ಜನ ತಜ್ಞರ ಸಮಿತಿಯನ್ನು ರಚಿಸಿದೆ. ಗಂಗಾ ಪ್ರವಾಹ ನಿಯಂತ್ರಣ ಆಯೋಗದ ಸದಸ್ಯರಾದ ಎ.ಕೆ.ಸಿನ್ಹಾ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು 10 ದಿನದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಕೇಂದ್ರ ಜಲ ಆಯೋಗದ ಮುಖ್ಯ ಎಂಜನಿಯರ್ ಆಗಿರುವ ಎಸ್.ಕೆ.ಸಾಹು, ಐಐಟಿ ಫ್ರೋಫೆಸರ್ ಎ.ಕೆ.ಗೊಸೇನ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರಾದ ಡಾ.ರಜನೀಶ್ ರಂಜನ್ ಸಮಿತಿಯ ಇತರೆ ಸದಸ್ಯರಾಗಿದ್ದರೆ.

  • ಇತ್ತೀಚೆಗೆ ಬಿಹಾರದಲ್ಲಿ ಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಪ್ರಾಣಹಾನಿ ಸೇರಿದಂತೆ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು. ಬಿಹಾರದಲ್ಲಿ ಗಂಗಾನದಿಯಲ್ಲಿ ಹೂಳು ತುಂಬಿರುವುದೇ ಪ್ರವಾಹಕ್ಕೆ ಮೂಲ ಕಾರಣವಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಆ ವೇಳೆ ಪ್ರಧಾನಿ ಅವರನ್ನು ಕೋರಲಾಗಿತ್ತು.
  • ಇದೇ ವೇಳೆ ವಿವಿಧ ನದಿಗಳಿಂದ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನ್ಯಾಷನಲ್ ಸಿಲ್ಟ್ ಪಾಲಿಸಿಯನ್ನು ಜಾರಿಗೆ ತರುವಂತೆ ನಿತೀಶ್ ಕುಮಾರ್ ಮನವಿ ಮಾಡಿದ್ದರು.

Leave a Comment

This site uses Akismet to reduce spam. Learn how your comment data is processed.