ಕರ್ನಾಟಕ “ವೈಮಾನಿಕ ನೀತಿ 2013-23” ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ
‘ಕರ್ನಾಟಕ ವೈಮಾನಿಕ ನೀತಿ 2013-23’ಕ್ಕೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ವೈಮಾನಿಕ ಉದ್ಯಮವನ್ನು ಪ್ರೋತ್ಸಾಹಿಸಿ ಜಾಗತಿಕ ಮಟ್ಟದ ಕೈಗಾರಿಕೆಗಳನ್ನು ಆಕರ್ಷಿಸಲು ಪೂರಕವಾಗುವ ಸಲುವಾಗಿ ತಿದ್ದುಪಡಿ ತರಲು ಸಮ್ಮಿಸಲಾಗಿದೆ. ಕರ್ನಾಟಕ ವೈಮಾನಿಕ ನೀತಿ 2013-23 ಅನ್ನು ಫೆಬ್ರವರಿ 7, 2013 ರಂದು ಅಂದಿನ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಬಿಡುಗಡೆಗೊಳಿಸಿದ್ದರು, ಆ ಮೂಲಕ ದೇಶದಲ್ಲೇ ವೈಮಾನಿಕ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎನಿಸಿತ್ತು.
ತಿದ್ದುಪಡಿ ಏಕೆ?
- ರಾಜ್ಯದಲ್ಲಿ 2013ರ ಫೆಬ್ರುವರಿ 13 ರಿಂದ ‘ಕರ್ನಾಟಕ ವೈಮಾನಿಕ ನೀತಿ 2013-23’ ಚಾಲನೆಯಲ್ಲಿದೆ. ಕರ್ನಾಟಕ ಕೈಗಾರಿಕಾ ನೀತಿ 2014-19ರಲ್ಲಿರುವ ಎಲ್ಲ ವಿನಾಯಿತಿಗಳು ಅಂಶಗಳು ವೈಮಾನಿಕ ನೀತಿ 2013-23ರಲ್ಲೂ ಇರುವುದರಿಂದ ವಿನಾಯಿತಿ ಮತ್ತು ಪ್ರೋತ್ಸಾಹ ನೀಡುವಾಗ ಗೊಂದಲ ಉಂಟಾಗಿದೆ. ಈ ಕಾರಣಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
ತಿದ್ದುಪಡಿಯ ಪ್ರಮುಖಾಂಶಗಳು
- ‘ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಅವಕಾಶ ಮತ್ತಿತರ ಗುರಿಯನ್ನು ಈ ಪ್ರತ್ಯೇಕ ನೀತಿ ಹೊಂದಿದೆ’.
- ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ತನ್ನ ನಾಯಕತ್ವ ಉಳಿಸಿಕೊಳ್ಳಲು ಅನುಕೂಲವಾಗುವಂತೆ ವೈಮಾನಿಕ ನೀತಿಗೆ ತಿದ್ದುಪಡಿ ತರಲಾಗಿದೆ. ಅಲ್ಲದೇ, ರಾಜ್ಯವನ್ನು ಏಷ್ಯಾದಲ್ಲೇ ಶಾಶ್ವತ ವೈಮಾನಿಕ ತಾಣವಾಗಿ ಮಾಡಲು ಉದ್ದೇಶಿಸಲಾಗಿದೆ.
ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಪಾತ್ರ:
- ರಾಜ್ಯದಲ್ಲಿ ಫ್ರಾನ್ಸ್, ಅಮೆರಿಕ ಮತ್ತಿತರ ಮುಂದುವರಿದ ದೇಶಗಳ ವೈಮಾನಿಕ ವಿನ್ಯಾಸ ಮತ್ತು ಬಿಡಿಭಾಗಗಳು ತಯಾರಾಗುತ್ತಿದೆ.
- ರಾಜ್ಯದ ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲೂ ಪರ್ಯಾಯವಾಗಿ ಸಂಶೋಧನಾ ಘಟಕ ಕಾರ್ಯನಿರ್ವಹಿಸುತ್ತಿದೆ.
- ‘ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿ ವೈಮಾನಿಕ ಬಿಡಿಭಾಗಗಳ ಕೈಗಾರಿಕಾ ಘಟಕಗಳಿವೆ.
- ರಾಷ್ಟ್ರದ ಶೇ 40ರಷ್ಟು ವೈಮಾನಿಕ ಬಿಡಿಭಾಗಗಳು ರಾಜ್ಯದಲ್ಲಿ ತಯಾರಿ ಆಗುತ್ತಿವೆ.
ಶಸ್ತ್ರಾಸ್ತ್ರ ಆಮದು ಮೇಲೆ ಅವಲಂಬನೆ ತಪ್ಪಿಸಲು “ಆರ್ಮಿ ವಿನ್ಯಾಸ ಬ್ಯೂರೋ” ಸ್ಥಾಪಿಸಿದ ಇಂಡಿಯನ್ ಆರ್ಮಿ
ಶಸ್ತ್ರಾಸ್ತ್ರಗಳ ಪೂರೈಕೆಗೆ ವಿದೇಶಗಳ ಮೇಲೆ ಅವಲಂಬಿತವಾಗದೆ ಸ್ಥಳೀಯವಾಗಿ ಅಭಿವೃದ್ದಿಪಡಿಸಿ ಪೂರೈಸುವ ಸಲುವಾಗಿ ಭಾರತೀಯ ಸೇನೆ “ಆರ್ಮಿ ವಿನ್ಯಾಸ ಬ್ಯೂರೋ”ವನ್ನು ಸ್ಥಾಪಿಸಿದೆ. ಮೇಕ್ ಇನ್ ಇಂಡಿಯಾ ಅಭಿಯಾನದಡಿ ಈ ಬ್ಯೂರೋವನ್ನು ಸ್ಥಾಪಿಸಲಾಗಿದೆ.
ಆರ್ಮಿ ವಿನ್ಯಾಸ ಬ್ಯೂರೋ (Army Design Bureau) ಬಗ್ಗೆ:
- ಸೇನಾ ಅಕಾಡೆಮಿ, ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿ ಉನ್ನತ ತಂತ್ರಜ್ಞಾನದ ರಕ್ಷಣಾ ಸಾಮಾಗ್ರಿಗಳ ಅಭಿವೃದ್ದಿಗೆ ಬೇಕಾಗಿರುವ ಅಗತ್ಯತೆಗಳನ್ನು ಆರ್ಮಿ ವಿನ್ಯಾಸ ಬ್ಯೂರೋ ಒದಗಿಸಲಿದೆ.
- ಬಂಡವಾಳ ಹೂಡಿಕೆದಾರರು ಮತ್ತು ಭಾರತೀಯ ಸೇನೆ ನಡುವೆ ಏಕ ಸಂಪರ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಸ್ಥಳೀಯವಾಗಿ ಸಂಶೋಧನೆ ಮತ್ತು ಅಭಿವೃದ್ದಿ (R&D) ಕೈಗೊಳ್ಳಲು ಸಹಾಯವಾಗಲಿದೆ.
- ತಂತ್ರಜ್ಞಾನದಲ್ಲಾಗುತ್ತಿರುವ ಕ್ಷಿಪ್ರ ಬದಲಾವಣೆಗಳು ಮತ್ತು ಯುದ್ದ ಹೋರಾಟ ತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಈ ಬ್ಯೂರೋವನ್ನು ಸ್ಥಾಪಿಸಲಾಗಿದೆ.
- ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಆಧುನೀಕರಣಗೊಳಿಸಲು ಈ ಬ್ಯೂರೋ ಸಹಾಯ ಮಾಡಲಿದೆ.
2016 ಬ್ರಿಕ್ಸ್ ಪ್ರವಾಸೋದ್ಯಮ ಸಮ್ಮೇಳನಕ್ಕೆ ಮಧ್ಯಪ್ರದೇಶದಲ್ಲಿ ಚಾಲನೆ
2016 ಬ್ರಿಕ್ಸ್ ಪ್ರವಾಸೋದ್ಯಮ ಸಮ್ಮೇಳನಕ್ಕೆ ಮಧ್ಯಪ್ರದೇಶದ ವಿಶ್ವ ಪರಂಪರಿಕ ತಾಣ ಖಜುರಾಹೊದಲ್ಲಿ ಚಾಲನೆ ನೀಡಲಾಯಿತು. ಬ್ರಿಕ್ಸ್ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎರಡು ದಿನದ ಈ ಸಮ್ಮೇಳನವನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ರಾಜ್ಯ ಸಚಿವರಾದ ಡಾ.ಮಹೇಶ್ ಶರ್ಮಾ ಉದ್ಘಾಟಿಸಿದರು.
- ಎರಡು ದಿನದ ಸಮ್ಮೇಳನದಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
- ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿಚಾರ, ತಂತ್ರಜ್ಞಾನ ಮತ್ತು ನಾವೀನ್ಯ ಪರಿಕಲ್ಪನೆ ವಿನಿಮಯ ಮಾಡಿಕೊಳ್ಳಲು ಇದು ವೇದಿಕೆಯಾಗಲಿದೆ.
- ಅಲ್ಲದೇ ಬ್ರಿಕ್ಸ್ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮ ಅಭಿವೃದ್ದಿಗೆ ಪರಸ್ಪರ ಸಹಕಾರ ನೀಡಲು ಒತ್ತು ನೀಡಲಾಗುವುದು.
- ಈ ಸಮ್ಮೇಳನದಲ್ಲಿ ದೇಶದ ವಿವಿದ ಸಂಸ್ಕೃತಿ, ಕಲೆ, ಕರಕುಶಲತೆ ಹಾಗೂ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಗುವುದು.
ಖಜುರಾಹೊ ದೇವಸ್ಥಾನ:
- ಖಜರಾಹೊ ಹಿಂದು ಮತ್ತು ಜೈನ ಧರ್ಮಕ್ಕೆ ಸೇರಿದ ದೇವಸ್ಥಾನಳಿಂದ ಪ್ರಸಿದ್ದಿಯಾಗಿದೆ. ಚಾಂದೇಲ ವಂಶದ ರಾಜರು ಈ ದೇವಸ್ಥಾನಗಳನ್ನು ಕ್ರಿ.ಶ 950 ಮತ್ತು ಕ್ರಿ.ಶ 1050 ನಡುವೆ ನಿರ್ಮಿಸಿದ್ದಾರೆ. ಪ್ರಸ್ತುತ ಖಜರಾಹೊ ಯುನೆಸ್ಕೊ ಪರಂಪರಿಕ ತಾಣವಾಗಿದೆ.
ಉಮ್ಮತ್ತೂರು ಅರಣ್ಯಪ್ರದೇಶವನ್ನು ಕೃಷ್ಣಮೃಗ ವನ್ಯಜೀವಿಧಾಮವಾಗಿ ಘೋಷಿಸಲು ಒಪ್ಪಿಗೆ
ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಅರಣ್ಯ ಪ್ರದೇಶವನ್ನು ಕೃಷ್ಣಮೃಗ ವನ್ಯಜೀವಿಧಾಮವಾಗಿ ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ಸಭೆಯು ಒಪ್ಪಿಗೆ ಸೂಚಿಸಿದೆ. ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಕೃಷ್ಣಮೃಗ ವನ್ಯಜೀವಿಧಾಮಗಳ ಸಂಖ್ಯೆ ಮೂರಕ್ಕೇರಲಿದೆ. ಸದ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮೈದನಹಳ್ಳಿಯಲ್ಲಿ ಕೃಷ್ಣಮೃಗ ವನ್ಯಜೀವಿಧಾಮಗಳಿವೆ. ಈಗ ಉಮ್ಮತ್ತೂರು ಅರಣ್ಯವು ಕರ್ನಾಟಕದ ಮೂರನೇ ಕೃಷ್ಣಮೃಗ ವನ್ಯಜೀವಿಧಾಮಕ್ಕೆ ಪಾತ್ರವಾಗಲಿದೆ. ರಾಜ್ಯ ವನ್ಯಜೀವಿ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮ್ಮತ್ತೂರು ಅರಣ್ಯವನ್ನು ಕೃಷ್ಣಮೃಗಧಾಮವಾಗಿ ಘೋಷಿಸಲು ಒಪ್ಪಿಗೆ ನೀಡಿದ್ದಾರೆ. ಸಭೆಯ ನಡಾವಳಿಗಳಿಗೆ ಸಹಿ ಹಾಕಿದ ಬಳಿಕ ಅಧಿಕೃತ ಆದೇಶ ಹೊರ ಬೀಳಲಿದೆ.
ಉಮ್ಮತ್ತೂರು ಅರಣ್ಯ ಪ್ರದೇಶದ ಬಗ್ಗೆ:
- ಉಮ್ಮತ್ತೂರು ಅರಣ್ಯ (ಬಾಗಳಿ ಗ್ರಾಮದ ಸರ್ಕಾರಿ ಜಮೀನು ಒಳಗೊಂಡಂತೆ) ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ್ದು, 1,500 ಎಕರೆ ವಿಸ್ತೀರ್ಣ ಹೊಂದಿದೆ.
- ಈ ಅರಣ್ಯಕ್ಕೆ ಹೊಂದಿಕೊಂಡಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ, ದಾಸನೂರು ಮತ್ತು ಹನುಮನಪುರ ಗ್ರಾಮ ಬರುತ್ತವೆ. ಈ ಪ್ರದೇಶ ವಿಸ್ತಾರವಾದ ಹುಲ್ಲುಗಾವಲು ಹೊಂದಿದೆ. ಇಲ್ಲಿ 200ಕ್ಕೂ ಹೆಚ್ಚು ಕೃಷ್ಣಮೃಗಗಳಿವೆ ಎಂದು ಅಂದಾಜಿಸಲಾಗಿದೆ.
- ಈ ಅರಣ್ಯದಲ್ಲಿ ಮುಳ್ಳುಹಂದಿ, ಚಿಪ್ಪುಹಂದಿ ಸೇರಿದಂತೆ 40ಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಪ್ರಭೇದಕ್ಕೆ ಸೇರಿದ ಪ್ರಾಣಿಗಳಿವೆ.
ಹಿನ್ನಲೆ:
- ವೈವಿದ್ಯಮಯ ಜೀವಿಗಳಿಗೆ ಆಶ್ರಯವಾಗಿರುವ ಉಮ್ಮತ್ತೂರು ಅರಣ್ಯ ಪ್ರದೇಶವನ್ನು ಕೃಷ್ಣಮೃಗ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಪರಿಸರವಾದಿಗಳು ಒತ್ತಾಯಿಸಿದ್ದರು. ಅದರಂತೆ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.
- ಇದೀಗ ಈ ಪ್ರದೇಶವನ್ನು ಕೃಷ್ಣಮೃಗ ಸಂರಕ್ಷಿತ ಪ್ರದೇಶವೆಂದು ಘೋಷಿಸಿರುವುದರಿಂದ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ.
ಕೃಷ್ಣಮೃಗಗಳಿಗೆ ಕಂಟಕ:
- ಉಮ್ಮತ್ತೂರು ಅರಣ್ಯ ಸೇರಿದಂತೆ ನಲ್ಲೂರು, ಹೊಂಡ ರಬಾಳು, ಅಮೃತಭೂಮಿಯ ಸುತ್ತಮು ತ್ತಲೂ ಕೃಷ್ಣಮೃಗಗಳು ಕಾಣಸಿಗುತ್ತವೆ. ಈ ಭಾಗದಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಿದೆ. ಕೆಲವು ಜಮೀನಿನ ಮಾಲೀಕರು ಸೌರ ಬೇಲಿ ಅಳವಡಿಸಿಲ್ಲ. ರಾತ್ರಿವೇಳೆ ಅನಧಿಕೃತವಾಗಿ ಜಮೀನಿನ ಸುತ್ತಲೂ ಅಳವಡಿಸಿದ ತಂತಿಗೆ ವಿದ್ಯುತ್ ಹರಿಸುತ್ತಾರೆ. ಮೇವು ಅರಸಿ ಬರುವ ಕೃಷ್ಣಮೃಗಗಳು ವಿದ್ಯುತ್ ಪ್ರವಹಿಸಿ ಸಾಯುತ್ತಿವೆ. ಜತೆಗೆ, ಈ ಭಾಗದ ಬೇಟೆಗಾರರ ಗುಂಡೇಟಿಗೆ ಬಲಿಯಾಗುತ್ತಿವೆ.
ರಾಜ್ಯದ ಚಿಟ್ಟೆಯಾಗಿ “ಸದರ್ನ್ ಬರ್ಡ್ ವಿಂಗ್ (Southern Birdwing)”ಅನ್ನು ಅಳವಡಿಸಿಕೊಳ್ಳಲು ಒಪ್ಪಿಗೆ
ದೇಶದಲ್ಲಿ ಕಾಣಬಹುದಾದ ಚಿಟ್ಟೆಗಳ ಪ್ರಭೇದಗಳಲ್ಲಿ ಅತಿ ದೊಡ್ಡ ಚಿಟ್ಟೆ ಎನಿಸಿರುವ “ಸದರ್ನ್ ಬರ್ಡ್ ವಿಂಗ್” ಅನ್ನು ರಾಜ್ಯ ಚಿಟ್ಟಿಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮಹಾರಾಷ್ಟ್ರದ ನಂತರ ಚಿಟ್ಟೆಯೊಂದನ್ನು ನಾಡ ಚಿಟ್ಟೆಯನ್ನಾಗಿ ಅಳವಡಿಸಿಕೊಳ್ಳಲಿರುವ ಎರಡನೇ ರಾಜ್ಯ ಕರ್ನಾಟಕ. ವಿಶಿಷ್ಟವಾದ ಕೆಂಪು ಮತ್ತು ಹಳದಿ ಬಣ್ಣದ ಪಟ್ಟಿಯನ್ನು ಹೊಂದಿರುವ ಸದರ್ನ್ ಬರ್ಡ್ ವಿಂಗ್ ಅನ್ನು ನಾಡ ಚಿಟ್ಟೆಯನ್ನಾಗಿ ಅಳವಡಿಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿದ್ದು, ರಾಜ್ಯ ಸರ್ಕಾರದ ಅಂತಿಮ ಒಪ್ಪಿಗೆ ಕಳುಹಿಸಲಾಗಿದೆ.
“ಸದರ್ನ್ ಬರ್ಡ್ ವಿಂಗ್” ಬಗ್ಗೆ:
- ಸದರ್ನ್ ಬರ್ಡ್ ವಿಂಗ್ ಚಿಟ್ಟೆ ದೇಶದಲ್ಲಿ ಸಿಗುವ ಚಿಟ್ಟೆಗಳ ಪೈಕಿ ಅತಿದೊಡ್ಡ ಚಿಟ್ಟೆಯಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಈ ಚಿಟ್ಟೆ ಪ್ರಭೇದ ಕರ್ನಾಟಕದಲ್ಲಿ ಹೇರಳವಾಗಿ ಕಾಣಬಹುದಾಗಿದೆ.
- ಈ ಚಿಟ್ಟೆಯ ರೆಕ್ಕೆಗಳು 140-190 ಮಿಮಿ ಇದ್ದು, ಹೆಣ್ಣು ಚಿಟ್ಟೆಗಳು 190 ಮಿಮಿ ದೊಡ್ಡದಾಗಿರುತ್ತವೆ.
- ಇದರ ಬಣ್ಣ ಕೆಂಪು ಮತ್ತು ಹಳದಿ ಇದ್ದು, ರಾಜ್ಯ ಬಾವುಟವನ್ನು ಹೋಲುವ ಕಾರಣ ನಾಡ ಚಿಟ್ಟೆಯನ್ನಾಗಿ ಆಯ್ಕೆಮಾಡಲಾಗಿದೆ.
- ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಈ ಚಿಟ್ಟೆ ಕಾಣಸಿಗುತ್ತದೆ. ಭೂಮಿಯಿಂದ ಸುಮಾರು 30-40 ಅಡಿ ಎತ್ತರದಲ್ಲಿ ಇವು ಹಾರುತ್ತವೆ.
- Troides Minos ಇದು ಈ ಚಿಟ್ಟೆಯ ವೈಜ್ಞಾನಿಕ ಹೆಸರು.
ರಾಜ್ಯ ಪ್ರಾಣಿ ಮತ್ತು ಪಕ್ಷಿ:
- ಆನೆ ಕರ್ನಾಟಕ ರಾಜ್ಯ ಪ್ರಾಣಿಯಾಗಿದೆ.
- ಇಂಡಿಯನ್ ರೋಲರ್ ಅಥವಾ ನೀಲಕಂಠ ಎಂದು ಕರೆಯಲ್ಪಡುವ ಪಕ್ಷಿ ರಾಜ್ಯದ ಪಕ್ಷಿಯಾಗಿದೆ. ಇಂಡಿಯನ್ ರೋಲರ್ ತೆಲಂಗಣ ರಾಜ್ಯದ ರಾಜ್ಯ ಪಕ್ಷಿ ಸಹ ಆಗಿದೆ.
very useful