ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾಗಿ ಸಿ ವಿದ್ಯಾಸಾಗರ್ ರಾವ್ ನೇಮಕ
ಮಹಾರಾಷ್ಟ್ರದ ರಾಜ್ಯಪಾಲ ಚೆನ್ನಮನೇನಿ ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಾಧೀಶರಾದ ಸಂಜಯ್ ಕೃಷ್ಣ ಕೌಲ್ ಅವರು ವಿದ್ಯಾಸಾಗರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ತಮಿಳುನಾಡಿನ ರಾಜ್ಯಪಾಲರಾಗಿದ್ದ ಕೆ.ರೋಸಯ್ಯ ಅವರ ಅವಧಿ ಆಗಸ್ಟ್ 31 ಮುಕ್ತಾಯವಾದ ಕಾರಣ ರಾಷ್ಟ್ರಪತಿಯವರು ಸಂವಿಧಾನದ ಕಲಂ 153 ರಡಿ ವಿದ್ಯಾಸಾಗರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಾರೆ.
ವಿದ್ಯಾಸಾಗರ್ ರಾವ್ ಬಗ್ಗೆ:
- ವಿದ್ಯಾಸಾಗರ್ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಗಸ್ಟ್ 2014 ರಲ್ಲಿ ರಾಜ್ಯಪಾಲರಾಗಿ ಇವರು ನೇಮಕಗೊಂಡಿದ್ದರು.
- ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನಿಯಾಗಿದ್ದಾಗ ಇವರು ಗೃಹ ವ್ಯವಹಾರ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಸಚಿವರಾಗಿ 1999 ರಿಂದ 2004 ರವರೆಗೆ ಕಾರ್ಯನಿರ್ವಹಿಸಿದ್ದರು.
- ತೆಲಂಗಣದ ಕರೀಂನಗರ ಕ್ಷೇತ್ರದಿಂದ 12 ಮತ್ತು 13ನೇ ಲೋಕಸಭೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರು.
ಕಿರಣ್ ಮಜುಂದಾರ್ ಷಾ ರವರಿಗೆ ಫ್ರಾನ್ಸ್ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿ
ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ನೈಟ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಫ್ರೆಂಚ್ ಲಿಜ್ಹನ್ ಆಫ್ ಹಾನರ್” (Knight of the National Order of the French Legion of Honour (Chevalier de l’Ordre National de la Légion d’Honneur))ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಬಯೋಸೈನ್ಸ್ ಮತ್ತು ಸಂಶೋಧನೆಗೆ ಷಾ ರವರು ನೀಡಿರುವ ಜಾಗತಿಕ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಯನ್ನು ಫ್ರೆಂಚ್ ಅಧ್ಯಕ್ಷರು ಈ ವರ್ಷದ ಕೊನೆಯಲ್ಲಿ ಪ್ರಧಾನ ಮಾಡಲಿದ್ದಾರೆ.
ಮಜುಂದಾರ್ ಷಾ ಬಗ್ಗೆ:
- ಕಿರಣ್ ಮಜುಂದಾರ್ ಷಾ ಭಾರತದ ಪ್ರತಿಷ್ಠಿತ ಮಹಿಳಾ ಉದ್ಯಮಿ ಮತ್ತು ಐಐಎಮ್-ಬೆಂಗಳೂರಿನ ಚೇರಮನ್ ಆಗಿದ್ದಾರೆ.
- ಬೆಂಗಳೂರಿನಲ್ಲಿ ಪ್ರಖ್ಯಾತ ಬಯೋಟೆಕ್ನಾಲಜಿ ಸಂಸ್ಥೆ ಬಯೋಕಾನ್ ನ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಹ ಆಗಿದ್ದಾರೆ.
- ವಿಜ್ಞಾನ ಮತ್ತು ರಸಾಯನ ಶಾಸ್ತ್ರ ವಿಭಾಗಕ್ಕೆ ಇವರು ನೀಡಿರುವ ಸೇವೆಯನ್ನು ಗುರುತಿಸಿ 2014 ರಲ್ಲಿ ಒಥ್ಮರ್ ಗೋಲ್ಡ್ ಮೆಡಲ್ (Othmer Gold Medal) ಪ್ರಶಸ್ತಿಯನ್ನು ನೀಡಲಾಗಿದೆ. ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಷಾ ಅವರು 85ನೇ ಸ್ಥಾನವನ್ನು ಪಡೆದುಕೊಂಡಿದ್ದರು.
ಪ್ರಶಸ್ತಿ ಬಗ್ಗೆ:
- ಫ್ರಾನ್ಸ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿದೆ. ಈ ಹಿಂದೆ ಈ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ನಂದಿತಾ ದಾಸ್ ಶಾರೂಖ್ ಖಾನ್ ಮತ್ತು ಶಿವಾಜಿ ಗಣೇಶನ್ ಅವರಿಗೆ ನೀಡಲಾಗಿದೆ.
“ಗುಮ್ಥಾಲ ಗರ್ಹು (Gumthal Garhu)” ಹರಿಯಾಣದ ಮೊದಲ ವೈಫೈ ಹಾಟ್ ಸ್ಪಾಟ್ ಹಳ್ಳಿ
ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ “ಗುಮ್ಥಾಲ ಗರ್ಹು” ಹಳ್ಳಿಗೆ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಹರಿಯಾಣದ ಮೊದಲ ವೈಫೈ ಹಾಟ್ ಸ್ಪಾಟ್ ಹಳ್ಳಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಅವರು ಈ ಸೇವೆಗೆ ಚಾಲನೆ ನೀಡಿದರು. ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಗ್ರಾಮೀಣ ಭಾಗಗಳಿಗೆ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ಈ ಸೇವೆಯನ್ನು ಜಾರಿಗೊಳಿಸಿದೆ.
- ಈ ಸೇವೆಯಡಿ ಬಿಎಸ್ಎನ್ಎಲ್ 10MB ಬ್ಯಾಂಡ್ ವಿಡ್ತ್ ವೇಗದಲ್ಲಿ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲಿದೆ. ಹಲವು ಬಳಕೆದಾರರು ಒಂದೇ ಬಾರಿ ಇಂಟರ್ ನೆಟ್ ಬಳಸಬಹುದಾಗಿದೆ.
- ಇದಕ್ಕಾಗಿ ಹೊರಾಂಗಣದಲ್ಲಿ ಹತ್ತು ಮತ್ತು ಒಳಾಂಗಣದಲ್ಲಿ ಒಂದು ಸಂಪರ್ಕ ಕೇಂದ್ರಗಳನ್ನು ಅಳವಡಿಸಲಾಗಿದೆ. ಪ್ರತಿ ಸಂಪರ್ಕ ಕೇಂದ್ರದ ನಡುವೆ 100ಮೀ ಅಂತರವಿದ್ದು, ಇಡೀ ಗ್ರಾಮವನ್ನು ಒಳಪಡಿಸಲಾಗಿದೆ.
- ಹರಿಯಾಣ ವಿಭಾಗದ ಬಿಎಸ್ಎನ್ಎಲ್ ಸಂಸ್ಥೆಯು ಹರಿಯಾಣದಲ್ಲಿ 238 ವೈಫೈ ಹಾಟ್ ಸ್ಪಾಟ್ ನಿರ್ಮಿಸಲು ನಿರ್ಧರಿಸಿದ್ದು, ಇದೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳಲಿದೆ.
ಸಾಗರ ಸಾರಿಗೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತ-ಈಜಿಪ್ಟ್ ಒಪ್ಪಂದ
ಭಾರತ ಮತ್ತು ಈಜಿಪ್ಟ್ ಸಾಗರ ಸಾರಿಗೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಮಹತ್ವದ ಒಪ್ಪಂದಕ್ಕೆ ಸಹಿಹಾಕಿವೆ. ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸೀಸಿ ಮತ್ತು ಪ್ರಧಾನಿ ಮೋದಿ ನಡುವೆ ನಡೆದ ಮಾತುಕತೆ ವೇಳೆ ಈ ಒಪ್ಪಂದಕ್ಕೆ ಸಹಿಹಾಕಲಾಯಿತು. ಈ ಒಪ್ಪಂದದಿಂದ ಉಭಯ ದೇಶಗಳ ನಡುವಿನ ಸಹಕಾರ ಬಲಿಷ್ಠಗೊಳ್ಳಲಿದೆ. ಜೊತೆಗೆ ಕಡಲ ವಿಷಯಗಳ ಮೇಲೆ ನಿರಂತರ ಸಹಕಾರ ಮತ್ತು ಸಲಹೆಗಳಿಗೆ ನಾಂದಿಯಾಗಲಿದೆ.
ಒಪ್ಪಂದ ಉದ್ದೇಶ:
- ಉಭಯ ದೇಶಗಳ ನಡುವೆ ಸಾಗರ ಸಾರಿಗೆ ಮತ್ತು ಮರ್ಚೆಂಟ್ ಶಿಪ್ಪಿಂಗ್ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಉತ್ತಮಪಡಿಸುವುದು.
- ಎರಡೂ ದೇಶಗಳ ನಡುವೆ ಕಡಲ ಸಂಬಂಧಿತ ವಿಷಯಗಳನ್ನು ಪ್ರೋತ್ಸಾಹಿಸಿ ಅಭಿವೃದ್ದಿಪಡಿಸುವುದು ಮತ್ತು ಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವುದು.
- ವಿವಿಧ ಕಡಲ ಸಂಸ್ಥೆಗಳಲ್ಲಿ ಎರಡೂ ದೇಶಗಳ ನಡುವೆ ತರಭೇತಿ ಮತ್ತು ಸಿಬ್ಬಂದಿ ವಿನಿಮಯ ಮಾಡಿಕೊಳ್ಳುವುದು.
- ಸಾಗರ ಮತ್ತು ಬಂದಿರನಲ್ಲಿ ವಾಣಿಜ್ಯ ಸರಕುಗಳ ಸಾಗಣಿಕೆಯನ್ನು ಹೆಚ್ಚಿಸಲು ಅಗತ್ಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು.
ಉಜ್ಬೇಕಿಸ್ತಾನದ ಅಧ್ಯಕ್ಷ ‘ಇಸ್ಲಾಮ್ ಕರಿಮೋವ್’ ನಿಧನ
ಅನಾರೋಗ್ಯದಿಂದ ಬಳಲುತ್ತಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಇಸ್ಲಾಂ ಕರಿಮೋವ್ ನಿಧನರಾಗಿದ್ದಾರೆ. ಕಠಿಣ ಮುಸ್ಲಿಂ ಕಾನೂನುಗಳ ಮೂಲಕ ಮಧ್ಯ ಏಷ್ಯಾ ರಾಷ್ಟ್ರಗಳ ರಕ್ಷಕ ಎಂದೇ ಅವರು ಖ್ಯಾತರಾಗಿದ್ದರು. 78 ವರ್ಷದ ಕರಿವೋವ್ ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಕರಿಮೋವ್ ಬಗ್ಗೆ:
- ಕರಿಮೊವ್ 1989ರಿಂದ ಉಜ್ಬೇಕಿಸ್ತಾನದ ಅಧ್ಯಕ್ಷರಾಗಿದ್ದರು.
- ಆರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥನಾಗಿ ಹಾಗೂ 1991ರಿಂದ ನೂತನ ಸ್ವತಂತ್ರ ರಿಪಬ್ಲಿಕ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
- ಸೋವಿಯತ್ ಒಕ್ಕೂಟದಿಂದ ಅಧಿಕಾರ ಕಿತ್ತುಕೊಳ್ಳುವ ಸಂದರ್ಭ 27 ವರ್ಷಗಳ ಕಾಲ ರಾಷ್ಟ್ರದಲ್ಲಿ ಭಾರಿ ಹಿಂಸಾಚಾರ ನಡೆಸಿದ್ದರು.
- ಕರಿಮೊವ್ ತನ್ನ ಉತ್ತರಾಧಿಕಾರಿಯಾಗಿ ಯಾರನ್ನೂ ನಿಯೋಜಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.