ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಖಾಯಂ ಭಾರತೀಯ ನಿವಾಸಿ ಸ್ಥಾನಮಾನ ನೀಡಲು ಕೇಂದ್ರ ಒಪ್ಪಿಗೆ
ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿಯರಿಗೆ ಖಾಯಂ ಭಾರತೀಯ ನಿವಾಸಿ (Permanent Residency Status) ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ ಈ ಯೋಜನೆಯು ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಕ್ಕೆ ಕಾಲಕಾಲಕ್ಕೆ ತರುವ ಬದಲಾವಣೆಗೆ ಒಳಪಟ್ಟಿರುತ್ತದೆ. ದೇಶದಲ್ಲಿ ವಿದೇಶಿ ಹೂಡಿಕೆ ಹಾಗೂ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ಯೋಜನೆಯ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ ಎನ್ನಲಾಗಿದೆ.
ಪ್ರಮುಖಾಂಶಗಳು:
- ಈ ಯೋಜನೆಯಡಿ ಭಾರತೀಯ ನಿವಾಸಿಗಳ ಸ್ಥಾನಮಾನ ನೀಡುವ ಸಲುವಾಗಿ ವೀಸಾ ಕೈಪಿಡಿಯಲ್ಲಿ ಸೂಕ್ತ ನಿಬಂಧನೆಗಳನ್ನು ಅಳವಡಿಸಲಾಗುವುದು.
- ಈ ಯೋಜನೆಯ ಅನುಕೂಲವನ್ನು ಪಡೆಯ ಬಯಸುವ ವಿದೇಶಿಗರು ಕನಿಷ್ಠ ರೂ 10 ಕೋಟಿ ಬಂಡವಾಳವನ್ನು 18 ತಿಂಗಳೊಳಗೆ ಅಥವಾ ರೂ 25 ಕೋಟಿಯನ್ನು 36 ತಿಂಗಳೊಳಗೆ ಹೂಡಬೇಕು.
- ಯೋಜನೆಯಡಿ ಭಾರತೀಯ ನಿವಾಸಿ ಸ್ಥಾನಮಾನವನ್ನು 10 ವರ್ಷಗಳ ಕಾಲ ನೀಡಲಾಗುವುದು. ಅಗತ್ಯವೆನಿಸಿದರೆ ಇನ್ನು 10 ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ.
TERI ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಶೋಕ್ ಚಾವ್ಲ ನೇಮಕ
ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲ ಅವರು “ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ ಟಿಟ್ಯೂಟ್ (TERI)” ನ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಚಾವ್ಲ ಅವರು ಕಳೆದ ಫೆಬ್ರವರಿಯಿಂದ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿದ್ದಾರೆ. TERIಯ ಮುಖ್ಯಸ್ಥ ಮತ್ತು ಕುಲಪತಿಯಾಗಿದ್ದ ಆರ್.ಕೆ.ಪಚೌರಿ ಅವರು ಮಹಿಳಾ ಸಿಬ್ಬಂದಿಯೊಬ್ಬರಿಗೆ ಲೈಂಗಿಕ ಆರೋಪ ನೀಡಿದ ಹಿನ್ನಲೆಯಲ್ಲಿ ವಜಾಗೊಂಡಿದ್ದರು.
ಅಶೋಕ್ ಚಾವ್ಲ ಬಗ್ಗೆ:
- ಚಾವ್ಲ ಅವರು 1973ನೇ ಸಾಲಿನ ಗುಜರಾತ್ ಕ್ಯಾಡ್ರೆಯ ಐಎಎಸ್ ಅಧಿಕಾರಿ. ಇವರು ಭಾರತೀಯ ಸ್ಪರ್ಧಾತ್ಮಕ ಆಯೋಗದ ಅಧ್ಯಕ್ಷರಾಗಿ ಮತ್ತು ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ ಟಿಟ್ಯೂಟ್ (TERI):
- ಇಂಧನ, ಪರಿಸರ ಮತ್ತು ಸುಸ್ಥಿರ ಅಭಿವೃದ್ದಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ.
- 1974 ರಲ್ಲಿ ಟಾಟಾ ಎನರ್ಜಿ ರಿಸರ್ಚ್ ಇನ್ಸ್ ಟಿಟ್ಯೂಟ್ ಆಗಿ ಸ್ಥಾಪಿಸಲಾಗಿದೆ. 2003 ರಲ್ಲಿ ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ ಟಿಟ್ಯೂಟ್ ಎಂದು ಮರುನಾಮಕರಣ ಮಾಡಲಾಗಿದೆ.
- ಪರಿಸರ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದು, ಸಂಶೋಧನೆಯಲ್ಲಿ ತೊಡಗಿದ್ದಾರೆ.
ಬೇಜ್ವಾಡ ವಿಲ್ಸನ್ ಮತ್ತು ಕೃಷ್ಣ ರವರಿಗೆ 2016 ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ
ಮಾನವ ಹಕ್ಕು ಹೋರಾಟಗಾರ ಬೇಜ್ವಾಡ ವಿಲ್ಸನ್ ಹಾಗೂ ಪ್ರಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ರವರಿಗೆ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ-2016 ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಆಗಸ್ಟ್ 31 ರಂದು ಫಿಲಿಫೈನ್ಸ್ ಮನಿಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು. ಆಗಸ್ಟ್ 31 ಫಿಲಿಪ್ಪೀನ್ಸ್ನ ಮೂರನೇ ಅಧ್ಯಕ್ಷರಾದ ರೇಮನ್ ಮ್ಯಾಗ್ಸೆಸೆ ಅವರ ಜನ್ಮದಿನ. ಏಷ್ಯಾದ ನೊಬೆಲ್ ಎಂದೇ ಪ್ರಸಿದ್ದಿ ಹೊಂದಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಈ ಬಾರಿ ಆರು ಜನರನ್ನು ಆಯ್ಕೆಮಾಡಲಾಗಿದ್ದು, ಭಾರತದಿಂದ ಈ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.
ಪ್ರಶಸ್ತಿಗೆ ಆಯ್ಕೆಯಾದವರ ಬಗ್ಗೆ:
ಬೇಜ್ವಾಡ ವಿಲ್ಸನ್: ಮೂಲತಃ ಕರ್ನಾಟಕದ ಕೆಜಿಎಪ್ ನವರಾದ ಬೇಜ್ವಾಡ ವಿಲ್ಸನ್ ರವರು ಪ್ರಮುಖ ಮಾನವ ಹಕ್ಕು ಹೋರಾಟಗಾರರು. ಮಾನವೀಯ ಘನತೆಯ ಪರಭಾರೆ ಮಾಡಲಾಗದ ಹಕ್ಕು ಸ್ಥಾಪಿಸಲು ಬೇಜ್ವಾಡ ರವರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ತೊಡಗಿಕೊಂಡು ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದ್ದಾರೆ. ದೇಶದಾದ್ಯಂತ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
ತೊಡುರ್ ಮದಬುಸಿ ಕೃಷ್ಣ: ಟಿ.ಎಂ.ಕೃಷ್ಣ ರವರು ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು. ಸಂಸ್ಕೃತಿಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆಗೆ ಅವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಆರಿಸಲಾಗಿದೆ.
ಕೊಂಚಿಟಾ ಕಾರ್ಪಿಯೊ ಮೊರಾಲಿಸ್ (ಫಿಲಿಫೈನ್ಸ್): ಫಿಲಿಫೈನ್ಸ್ ರವರಾದ ಮೊರಾಲಿಸ್ ಅವರನ್ನು ಕಾನೂನಿನಲ್ಲಿ ನಂಬಿಕೆ ಉಳಿಸುವ ಸಲುವಾಗಿ ಮಹತ್ವದ ಪಾತ್ರವಹಿಸಿದ್ದ ಸಲುವಾಗಿ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ.
ದೋಪೆಟ್ ಧುವಾಪಾ (ಇಂಡೋನೇಷಿಯಾ): ಇಂಡೋನೇಷಿಯಾದ ಝಕತ್ ನಲ್ಲಿ ಪರಿವರ್ತನೆಯ ಪರಿಣಾಮವನ್ನು ವಿಸ್ತರಿಸಿದಕ್ಕಾಗಿ ಪರಿಗಣಿಸಲಾಗಿದೆ.
ವೈಂಟಿಯೀನ್ ರೆಸ್ಕ್ಯೂ ಸಂಸ್ಥೆ(ಲಾವೋಸ್): ಸ್ವಯಂ ಪ್ರೇರೆಪಣೆಯಿಂದ ಅಪಾಯದಲ್ಲಿರುವ ಜೀವಗಳ ರಕ್ಷಣೆ ಮಾಡಿದ ಶ್ಲಾಘನೀಯ ಸೇವೆಗಾಗಿ ಈ ಸಂಸ್ಥೆಯನ್ನು ಆಯ್ಕೆಮಾಡಲಾಗಿದೆ.
ಓವರ್ಸೀಸ್ ಕೋ ಆಪರೇಷನ್ ಸ್ವಯಂ ಸೇವಾ ತಂಡ (ಜಪಾನ್): ವಿಶ್ವ ನಿರ್ಮಾಣಕ್ಕಾಗಿ ಸಂಸ್ಥೆ ನೀಡಿರುವ ಗಣನೀಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಗುರುತಿಸಲಾಗಿದೆ.
ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯ ಬಗ್ಗೆ:
- ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು 1957 ರಲ್ಲಿ ಸ್ಥಾಪನೆ ಮಾಡಲಾಯಿತು. ಇದನ್ನು ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.
- ಫಿಲಿಪ್ಪೀನ್ಸ್ನ ಮೂರನೇ ಅಧ್ಯಕ್ಷರಾದ ರೇಮನ್ ಮ್ಯಾಗ್ಸೆಸೆ ರವರು ವಾಯು ದುರಂತದಲ್ಲಿ ಮರಣ ಹೊಂದಿದರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
- ಪ್ರಶಸ್ತಿಯನ್ನು ವಾರ್ಷಿಕವಾಗಿ ಏಷ್ಯಾ ಪ್ರದೇಶದಲ್ಲಿ ಪರಹಿತ ಚಿಂತನೆ ಮತ್ತು ಪರೋಪಕಾರಿ ಸೇವೆ ಮಾಡಿದ ವ್ಯಕ್ತಿಗಳು ಅಥವಾ ಸಂಸ್ಥೆಗೆ ನೀಡಲಾಗುತ್ತಿದೆ.
ಮ್ಯಾಗ್ಸೆಸೆ ಪಡೆದ ಇತರ ಕನ್ನಡಿಗರು : ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.
ಕೇಂದ್ರ ಒಳನಾಡು ಜಲಸಾರಿಗೆ ನಿಗಮ ವಿಸರ್ಜನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಕೇಂದ್ರ ಒಳನಾಡು ಜಲಸಾರಿಗೆ ನಿಗಮ (Central Inland Water Transport Corporation Limited (CIWTC)) ವಿಸರ್ಜನಗೆ ಸಲ್ಲಿಸಿಲಾಗಿದ್ದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಒಳನಾಡು ಜಲಸಾರಿಗೆ ನಿಗಮವನ್ನು ಕಂಪನಿ ಕಾಯಿದೆ 1956 ರಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ 1967 ರಲ್ಲಿ ಸ್ಥಾಪಿಸಲಾಗಿದೆ.
ವಿಸರ್ಜನೆ ಯಾಕೆ?
- ಸ್ಥಾಪನೆಯಾದ ಆರಂಭದ ದಿನಗಳಿಂದಲೂ ಈ ಸಂಸ್ಥೆ ಸೌಲಭ್ಯ ಮತ್ತು ಮೂಲಭೂತ ಸೌಕರ್ಯ ಕೊರೆತೆಯಿಂದ ನಷ್ಟವನ್ನು ಅನುಭವಿಸಿತ್ತು.
- ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇತರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚುವಂತೆಯೇ ಈ ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಲಾಗಿದೆ.
- ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿಲೇವಾರಿ ನಂತರ ವಿಸರ್ಜನೆಗೆ ಚಾಲನೆ ನೀಡಲಾಗುವುದು.
ಗಡಿ ಭದ್ರತೆ: ವರದಿ ಸಲ್ಲಿಸಿದ ಮಧುಕರ್ ಗುಪ್ತಾ ಸಮಿತಿ
ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಭದ್ರತೆಯ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಕೇಂದ್ರ ಸರ್ಕಾರ ರಚಿಸಿದ್ದ ಮಧುಕರ್ ಗುಪ್ತಾ ಸಮಿತಿ ತನ್ನ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ. ಪಠಾಣ್ಕೋಟ್ ದಾಳಿಯ ಬಳಿಕ ಗಡಿ ಭದ್ರತೆ ಬಲಗೊಳಿಸುವ ನಿಟ್ಟಿನಿಂದ ಸಲಹೆ ನೀಡಲು ಈ ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ರಮುಖಾಂಶಗಳು:
- ಪಾಕಿಸ್ಥಾನದ ಜತೆ ಗಡಿ ಹಂಚಿಕೊಳ್ಳುವ ಜಮ್ಮು-ಕಾಶ್ಮೀರ, ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳು ಒಂದೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಮಿತಿ ತಿಳಿಸಿದೆ.
- ವಿವಿಧ ಭೂಲಕ್ಷಣ ಮತ್ತು ಸಮಸ್ಯೆಗಳನ್ನು ಹೊಂದಿರುವ ನಾಲ್ಕು ರಾಜ್ಯಗಳಿಗೆ ಪ್ರತ್ಯೇಕ ಶಿಫಾರಸ್ಸನ್ನು ಸಮಿತಿ ನೀಡಿದೆ.
- ಭಾರತ- ಪಾಕ್ ಗಡಿಯ ಬೇಲಿಗಳು ದುರ್ಬಲವಾಗಿವೆ ಮತ್ತು ಉಗ್ರರು ನುಸುಳಬಹುದಾದ ಸಂದುಗಳು ಇದ್ದು, ವೈಜ್ಞಾನಿಕ ತಂತ್ರಜ್ಞಾನ ಮತ್ತು ತೀಕ್ಷ್ಣ ಕಣ್ಗಾವಲು ಇರಿಸಬೇಕಿದೆ ಎಂದು ಸಮಿತಿ ತಿಳಿಸಿದೆ.
- ಉಗ್ರರು ಒಳನುಸುಳುವಿಕೆ ನಡೆಸಿದ ಜಾಗದಲ್ಲಿ ವೈಜ್ಞಾನಿಕ ವಿಧಾನಗಳಾದ ಲೇಸರ್ ಗೋಡೆಗಳನ್ನು ಅಳವಡಿಸಲಾಗಿರಲಿಲ್ಲ. ನದಿಗಳು ಪಾತ್ರದ ಜವುಗು ಪ್ರದೇಶಗಳಲ್ಲಿ ಬೇಲಿಗಳನ್ನು ಇದುವರೆಗೂ ಅಳವಡಿಸಲಾಗಿಲ್ಲ ಎಂಬ ಅಂಶವನ್ನು ಬಹಿರಂಗಗೊಳಿಸಿದೆ.
ಪಾಕಿಸ್ತಾನದ ಜೊತೆ ಗಡಿ ಹಂಚಿಕೊಳ್ಳುವ ರಾಜ್ಯಗಳು:
- ಭಾರತದ ನಾಲ್ಕು ರಾಜ್ಯಗಳು ಪಾಕಿಸ್ತಾನದೊಂದಿಗೆ 3,323 ಕಿ.ಮೀ ದೂರದ ಗಡಿಭಾಗವನ್ನು ಹೊಂದಿವೆ.
- ಇವುಗಳಲ್ಲಿ ಜಮ್ಮು ಮತ್ತು ಕಾಶ್ಮೀರ 1,225 ಕಿ.ಮೀ, ರಾಜಸ್ತಾನ 1,037 ಕಿ.ಮೀ, ಪಂಜಾಬ್ 553 ಕಿ.ಮೀ ಮತ್ತು ಗುಜರಾತ್ 508 ಕಿ.ಮೀ ಗಡಿಯನ್ನು ಹಂಚಿಕೊಂಡಿವೆ.
This is nice…
Nice
Super
Supper
Nice work