ಪೋಪ್ ಫ್ರಾನ್ಸಿಸ್ ರವರಿಂದ ಮದರ್ ತೆರೆಸಾಗೆ ಸಂತ ಪದವಿ ಪ್ರದಾನ
ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮನ್ನಣೆಗಳಿಸಿದ ಮದರ್ ತೆರೆಸಾ ಅವರಿಗೆ ಸಂತ ಪದವಿ ಪ್ರದಾನ ಮಾಡಲಾಯಿತು. ವ್ಯಾಟಿಕನ್ನ ಸೇಂಟ್ ಪೀಟರ್ ಸ್ಕ್ವೇರ್ನಲ್ಲಿ ನಡೆದ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ತೆರೆಸಾ ಅವರಿಗೆ ಸಂತ ಪದವಿ ಪ್ರದಾನ ಮಾಡಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾರತದ ನಿಯೋಗದ ನೇತೃತ್ವವಹಿಸಿದ್ದರು. ತೆರೆಸಾ ಅವರು ಸಂತ ಪದವಿ ಪಡೆದ ಭಾರತದ ನಾಲ್ಕನೇಯವರು. ಈ ಹಿಂದೆ ಫಾದರ್ ಕುರಿಯಾಕೊಸ್ ಎಲಿಯಾಸ್ ಚಾವರ, ಸಿಸ್ಟರ್ ಅಲ್ಪೊನ್ಸ ಮತ್ತು ಸಿಸ್ಟರ್ ಯುಪ್ರೆಸಿಯಾಗಿ ಸಂತ ಪದವಿ ಪ್ರದಾನ ಮಾಡಲಾಗಿತ್ತು.
ಮದರ್ ತೆರೆಸಾ
- ಮದರ್ ತೆರೇಸಾ ರವರು ಹುಟ್ಟಿದ್ದು 26 ಆಗಸ್ಟ್ 1910 ರಂದು. ಇವರ ಮೊದಲ ಹೆಸರು ಆಗ್ನೆಸೇ ಗೋನ್ಕ್ಸೆ ಬೋಜಕ್ಸಿಯು.
- 1950ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಕೋಲ್ಕೊತ್ತಾ(ಕಲ್ಕತ್ತಾ)ದಲ್ಲಿ ಸ್ಥಾಪಿಸಿದರು. ಮಿಷನರೀಷ್ ಆಫ್ ಚಾರಿಟೀಸ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಮೊದಲು ಭಾರತಾದ್ಯಂತ ವಿಸ್ತರಿಸಲು ಮಾರ್ಗದರ್ಶಿ ಯಾಗಿ, ನಂತರ ವಿಶ್ವದ ಇತರೆ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.
- ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು.1970ರ ವೇಳೆಗೆ ಇವರು ಒಬ್ಬ ಮಾನವತಾವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಅಲ್ಲದೆ ಬಡವರ,ಅಸಹಾಯಕರ ಪರ ಪ್ರಬಲ ಪ್ರತಿಪಾದಕರಾಗಿದ್ದರು.
- ತೆರೆಸಾ ಅವರು 1997 ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
ಪ್ರಶಸ್ತಿಗಳು:
- 1962 ರಲ್ಲಿ ಪದ್ಮಶ್ರೀ, 1962 ರೆಮನ್ ಮ್ಯಾಗ್ಸಸೆ ಪ್ರಶಸ್ತಿ, 1979 ನೊಬೆಲ್ ಶಾಂತಿ ಮತ್ತು 1980 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
“ಬಿಜು ಕನ್ಯಾ ರತ್ನ ಯೋಜನೆ” ಆರಂಭಿಸಿದ ಒಡಿಶಾ ಸರ್ಕಾರ
ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ ಒಡಿಶಾ ಸರ್ಕಾರ ಬಿಜು ಕನ್ಯಾ ರತ್ನ ಯೋಜನೆಯನ್ನ ಜಾರಿಗೊಳಿಸಿದೆ. ಲಿಂಗಾನುಪಾತದಲ್ಲಿ ತೀವ್ರ ಹಿಂದೆ ಬಿದ್ದಿರುವ ರಾಜ್ಯದ ಮೂರು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಗಂಜಮ್, ಡೆಂಕನಲ್ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮೂರು ವರ್ಷಗಳ ಕಾಲ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು.
ಪ್ರಮುಖಾಂಶಗಳು:
- ಈ ಮೂರು ಜಿಲ್ಲೆಗಳಲ್ಲಿ ಶಿಶು ಮತ್ತು ಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.
- ಹೆಣ್ಣು ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳುವುದು, ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಗುರುತಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಉತ್ತಮ ಪರಿಸರವನ್ನು ರೂಪಿಸುವ ಉದ್ದೇಶವನ್ನು ಒಳಗೊಂಡಿದೆ.
- ಲಿಂಗ ತಾರತಮ್ಯ, ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅಗತ್ಯವಿರುವ ಪೋಷಕಾಂಶಗಳ ಬಗ್ಗೆ ಅರಿವನ್ನು ಮೂಡಿಸುವುದು ಸಹ ಯೋಜನೆಯ ಭಾಗವಾಗಿದೆ.
- ಪ್ರತಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಸ್ವಯಂ ರಕ್ಷಣೆ ತರಭೇತಿ ಅವಕಾಶವನ್ನು ಯೋಜನೆಯಡಿ ಕಲ್ಪಿಸಲಾಗಿದೆ.
- ಗಂಜಮ್, ಡೆಂಕನಲ್ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಮಕ್ಕಳ ಲಿಂಗಾನುಪಾತ ತೀವ್ರವಾಗಿ ಕುಸಿದಿದೆ. 1991 ರ ಜನಗಣತಿ ಪ್ರಕಾರ 967 ಇದ್ದು 2011 ಜನಗಣತಿ ಪ್ರಕಾರ 941ಕ್ಕೆ ಕುಸಿದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಬ್ಯಾಂಕರ್ ಉರ್ಜಿತ್ ಪಟೇಲ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಟೇಲ್ ರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಆಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಂ ರಾಜನ್ ಅವರ ಅವಧಿ ಮುಕ್ತಾಯವಾದ ಕಾರಣ ಗವರ್ನರ್ ಸ್ಥಾನವನ್ನು ಉರ್ಜಿತ್ ಪಟೇಲ್ ಅಲಂಕರಿಸಿದ್ದಾರೆ. ಪಟೇಲ್ ಅವರು ಮೂರು ವರ್ಷಗಳ ಕಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 2013ರಿಂದ ಇಲ್ಲಿಯವರೆಗೆ ಉಪ ಗವರ್ನರ್ ಆಗಿ ಪಟೇಲ್ ಸೇವೆ ಸಲ್ಲಿಸುತ್ತಾ ಬಂದಿದ್ದರು. ಡೆಪ್ಯೂಟಿ ಗವರ್ನರ್ ಹುದ್ದೆಯಿಂದ ಗವರ್ನರ್ ಆಗಿ ನೇಮಕಗೊಂಡ ಎಂಟನೇಯವರು.
ಉರ್ಜಿತ್ ಪಟೇಲ್ ಬಗ್ಗೆ:
- 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.
- ಕೇಲ್ಕರ್ ಸಮಿತಿಯ ನೇರ ತೆರಿಗೆಗಳ ಕಾರ್ಯಪಡೆ, ನಾಗರಿಕ ಮತ್ತು ರಕ್ಷಣಾ ಸೇವೆ ಪಿಂಚಣಿ ವ್ಯವಸ್ಥೆಯ ಪರಾಮರ್ಶೆಯ ಉನ್ನತ ಮಟ್ಟದ ತಜ್ಞರ ಸಮಿತಿ, ಪ್ರಧಾನ ಮಂತ್ರಿಗಳ ಮೂಲಭೂತ ಸೌಕರ್ಯಗಳ ಕಾರ್ಯಪಡೆ, ಟೆಲಿಕಾಂ ಮ್ಯಾಟರ್ಸ್ ನ ಸಚಿವರ ಗುಂಪು, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿಯೂ ಪಟೇಲ್ ಕೆಲಸ ಮಾಡಿದ್ದಾರೆ
- ಖಾಸಗಿ ಮತ್ತ ಸಾರ್ವಜನಿಕ ಹಣಕಾಸು ವಲಯದಲ್ಲಿ ಅಪಾರ ಅನುಭವ ಮತ್ತು ಜ್ಞಾನ ಹೊಂದಿರುವ ಪಟೇಲ್ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಣದುಬ್ಬರ, ವಿದೇಶಿ ಬಂಡವಾಳ ಹೂಡಿಕೆ ಮತ್ತು ಪರಿಣಾಮ, ಅರ್ಥ ವ್ಯವಸ್ಥೆ ಸುಧಾರಣೆ ಸೇರಿದಂತೆ ಹಲವಾರು ಸವಾಲುಗಳು ಪಟೇಲ್ ಮುಂದಿವೆ.
ಪರಿಸರಶಾಸ್ತ್ರಜ್ಞ ಬಿಭೂತಿ ಲಹ್ಕರ್ ಗೆ ಪ್ರತಿಷ್ಠಿತ ಐಯುಸಿಎನ್ 2016 ಹೆರಿಟೇಜ್ ಹೀರೋಸ್ ಪ್ರಶಸ್ತಿ
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ನೀಡುವ ಹೆರಿಟೇಜ್ ಹೀರೋಸ್ ಪ್ರಶಸ್ತಿಯು ಭಾರತದ ಪ್ರಸಿದ್ದ ಪರಿಸರಶಾಸ್ತ್ರಜ್ಞ ಮತ್ತು ಸಂರಕ್ಷಣಗಾರ ಬಿಭೂತಿ ಲಹ್ಕರ್ ಅವರಿಗೆ ಲಭಿಸಿದೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಏಷ್ಯಾದ ಹಾಗೂ ಭಾರತದ ಮೊದಲಿಗ ಎನಿಸಿದ್ದಾರೆ. ಹವಾಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ವಿಶ್ವ ಸಂರಕ್ಷಣ ಕಾಂಗ್ರೆಸ್ ನಲ್ಲಿ ಪ್ರಶಸ್ತಿಯನ್ನು ಲಹ್ಕರ್ ಅವರಿಗೆ ನೀಡಲಾಯಿತು. ಲಹ್ಕರ್ ಸೇರಿದಂತೆ ವಿಶ್ವದ ಐದು ಪರಿಸರ ಸಂರಕ್ಷಣಕಾರರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ವಿಶ್ವ ಪರಂಪರಿಕ ತಾಣಗಳನ್ನು ಸಂರಕ್ಷಿಸಲು ಮಹಾನ್ ಸೇವೆ ನೀಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬಿಭೂತಿ ಲಹ್ಕರ್ ಬಗ್ಗೆ:
- ಲಹ್ಕರ್ ಅವರು ಕಳೆದ ಎರಡು ದಶಕಗಳಿಂದ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಹುಲ್ಲುಗಾವಲು, ಸಸ್ಯ ಹಾಗೂ ಪ್ರಾಣಿ ಪ್ರಭೇದ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
- ಪ್ರಸ್ತುತ ಇವರು ಈಶಾನ್ಯ ಭಾರತದಲ್ಲಿ ಜೀವವೈವಿಧ್ಯತೆ ಸಂರಕ್ಷಣೆಯಲ್ಲಿ ನಿರತವಾಗಿರುವ ಅರಣ್ಯಕ್ ಹೆಸರಿನ NGO ದಲ್ಲಿ ಲ್ಯಾಂಡ್ಸ್ಕೇಪ್ ಅಡ್ಮಿನಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಮಾನಸ್ ಹುಲ್ಲುಗಾವಲನ್ನು ಮತ್ತು ಹಿಮಾಲಯ ಪರ್ವತದ ತಪ್ಪಲಿನ ಪ್ರಾಣಿ, ಸಸ್ಯ ಪ್ರಭೇದಗಳನ್ನು ಆಳವಾಗಿ ಲಹ್ಕರ್ ರವರು ಅಧ್ಯಯನಮಾಡಿ ವಿಶ್ವ ಮನ್ನಣೆಗಳಿಸಿದ್ದಾರೆ.
- ಭೂತಾನ್ ನ ರಾಯಲ್ ಮಾನಸ್ ರಾಷ್ಟ್ರೀಯ ಉದ್ಯಾನವನದ ಜೊತೆ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನ್ನು ಬೆಸೆಯುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
- ಅಷ್ಟೇ ಅಲ್ಲದೇ ಮೊದಲ ಬಾರಿಗೆ ಮಾನಸ್ ಪ್ರದೇಶದ ಜಿಐಎಸ್ (GIS) ಸಮೀಕ್ಷೆ ಮಾಡಿದ ಕೀರ್ತಿ ಇವರದು. ಇವರ ಈ ಸಮೀಕ್ಷೆ ಮಾನಸ್ ಹುಲಿ ಸಂರಕ್ಷಣಾ ಧಾಮ ನಿರ್ಮಾಣಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿತ್ತು.
ಕುಷ್ಠರೋಗ ನಿರ್ಮೂಲನೆಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಭಿಯಾನ
ಕುಷ್ಠರೋಗ ನಿರ್ಮೂಲನೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯ “ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ(Leprosy Case Detection Campaign (LCDC)”)” ವನ್ನು ಇತ್ತೀಚೆಗೆ ಆರಂಭಿಸಿದೆ. ಎರಡು ವಾರಗಳ ಈ ಅಭಿಯಾನಕ್ಕೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಚಾಲನೆ ನೀಡಿದರು. ಕುಷ್ಠರೋಗ ಪ್ರಕರಣ ಹೆಚ್ಚಿರುವ ದೇಶದ 20 ರಾಜ್ಯಗಳ 149 ಜಿಲ್ಲೆಗಳಲ್ಲಿ ಈ ಅಭಿಯಾನ ಅನುಷ್ಟಾನಗೊಳಿಸಲಾಗುವುದು.
- ದೇಶದ 20 ಜಿಲ್ಲೆಗಳ 149 ಜಿಲ್ಲೆಗಳ 1,600 ಬ್ಲಾಕ್ ಗಳನ್ನು ಅಭಿಯಾನದಡಿ ತರಲಾಗುವುದು. ಮೂರು ಲಕ್ಷಕ್ಕೂ ಹೆಚ್ಚು ಆರೋಗ್ಯ ತಂಡಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಮೂಲಕ ಕುಷ್ಠರೋಗ ಪ್ರಕರಣವನ್ನು ಪತ್ತೆಹಚ್ಚಲಿವೆ.
- ಭೇಟಿಯ ವೇಳೆ ಕುಷ್ಠರೋಗ ಪ್ರಕರಣ ಪತ್ತೆ, ಚಿಕಿತ್ಸೆ ಮತ್ತು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನ ಸೆಪ್ಟೆಂಬರ್ 18 ರಂದು ಕೊನೆಗಳ್ಳಲಿದೆ.
- ಕುಷ್ಠರೋಗವನ್ನು ರಾಷ್ಟ್ರಮಟ್ಟದಲ್ಲಿ ಈಗಾಗಲೇ ನಿರ್ಮೂಲನೆ ಮಾಡಲಾಗಿದೆ. ಬಹುತೇಕ ರಾಜ್ಯಗಳು ಸಹ ಈ ರೋಗದಿಂದ ಮುಕ್ತಿಹೊಂದಿವೆ. ಆದರೆ ಜಿಲ್ಲಾ ಮಟ್ಟದಲ್ಲಿ ಹೊಸ ಪ್ರಕರಣಗಳು ಈಗಲೂ ಪತ್ತೆಯಾಗುತ್ತಿವೆ.
- ಕೇಂದ್ರ ಪ್ರಾಯೋಜಿತ ಯೋಜನೆಯಾದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮ (National Leprosy Eradication Programme) ದಡಿ ಭಾರತದಲ್ಲಿ 10,000ಕ್ಕೆ 1 ಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾಗುವ ಮೂಲಕ ಕುಷ್ಠರೋಗ ನಿರ್ಮೂಲನೆ ಗುರಿಯನ್ನು 2005 ರಲ್ಲೇ ಸಾಧಿಸಿದೆ.