ಲಾವೋಸ್ನ ವಿಯೆಂಟಿಯಾನ್ ನಲ್ಲಿ 2016 ಅಸಿಯಾನ್ ಶೃಂಗಸಭೆ
ಆಗ್ನೇಯ ಏಷ್ಯಾ ರಾಷ್ಟ್ರಗಳ (ASEAN) 28 ಮತ್ತು 29ನೇ ಶೃಂಗಸಭೆ ಲಾವೋಸ್ ನ ವಿಯೆಂಟಿಯಾನ್ ನಲ್ಲಿ ಸೆಪ್ಟೆಂಬರ್ 6 ರಿಂದ 8 ರವರೆಗೆ ನಡೆಯಿತು. ಲಾವೋಸ್ ರಾಷ್ಟ್ರದ ಪ್ರಧಾನಿ “ಥಾನ್ಗ್ಲೌನ್ ಸಿಸೌಲಿಥ್ (Thongloun Sisoulith)” ಅವರು ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. Turning Vision into Reality for a Dynamic ASEAN Community” ಇದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿತ್ತು. ಅಸಿಯಾನ್ 10 ರಾಷ್ಟ್ರಗಳಾದ ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಥಾಯ್ ಲ್ಯಾಂಡ್, ಸಿಂಗಾಪುರ, ಬ್ರೂನಿ, ಲಾವೋ, ವಿಯೆಟ್ನಾಂ, ಮಯನ್ಮಾರ್ ಮತ್ತು ಕಾಂಬೋಡಿಯಾ ದೇಶಗಳ ನಾಯಕರುಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಇಂಡಿಯಾ-ಅಸಿಯಾನ್:
- 14ನೇ ಇಂಡಿಯಾ-ಅಸಿಯಾನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
- ರಾಜಕೀಯ ಮತ್ತು ಆರ್ಥಿಕ ಸಂಘಟಿತವಾದ, ಸಾಮಾಜಿಕ ಜವಾಬ್ದಾರಿ ಹಾಗೂ ಜನರಿಂದ ಜನ ಉದ್ದೇಶಕ್ಕಾಗಿರುವ ಭಾರತ-ಅಸಿಯಾನ್ ಸಮುದಾಯ ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಲಾಯಿತು
- ಅಸಿಯಾನ್ ಸಮುದಾಯಕ್ಕೆ ಭಾರತ ನೀಡುತ್ತಿರುವ ಕೊಡುಗೆಯನ್ನು ಅಸಿಯಾನ್ ನಾಯಕರು ಮುಕ್ತ ಕಂಠದಿಂದ ಹೊಗಳಿದರು.
- ಅಸಿಯಾನ ರಾಷ್ಟ್ರವ್ಯಾಪ್ತಿಯಲ್ಲಿ ಹರಡಿರುವ ಭಯೋತ್ಪಾದನೆ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು. ಭಯೋತ್ಪಾದನೆಯನ್ನು ಮಟ್ಟಹಾಕಲು ಅಸಿಯಾನ್ ರಾಷ್ಟ್ರಗಳು ಸಂಪೂರ್ಣವಾಗಿ ಬೆಂಬಲಿಸಬೇಕೆಂದು ಹೇಳಿದರು.
- ಮುಕ್ತ ವ್ಯಾಪಾರ, ಶಾಂತಿ ಸುವ್ಯವಸ್ಥೆ, ದಕ್ಷಿಣಾ ಚೀನಾ ಸಮುದ್ರ ಮೇಲೆ ವಿಮಾನ ಹಾರಾಟ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಅಸಿಯಾನ್ ಬಗ್ಗೆ:
- ಅಸೋಸಿಯೇಶನ್ ಆಫ್ ಸೌಥ್ ಈಸ್ಟ್ ಏಷಿಯನ್ ನೇಷನ್ (ASEAN) ಆಗಸ್ಟ್ 8, 1967 ರಲ್ಲಿ ಸ್ಥಾಪಿಸಲಾಗಿದೆ. ಅಸಿಯಾನ್ ಘೋಷಣೆ (ಅಥವಾ ಬ್ಯಾಂಕಕ್ ಘೋಷಣೆ) ನಂತರ ಈ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದೆ.
- ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಆರ್ಥಿಕ ಏಕೀಕರಣ ಅನುವುಗೊಳಿಸುವುದು ಒಕ್ಕೂಟದ ಮೂಲ ಧ್ಯೇಯವಾಗಿದೆ.
- ಸದಸ್ಯ ರಾಷ್ಟ್ರಗಳು: ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಥಾಯ್ ಲ್ಯಾಂಡ್, ಸಿಂಗಾಪುರ, ಬ್ರೂನಿ, ಲಾವೋ, ವಿಯೆಟ್ನಾಂ, ಮಯನ್ಮಾರ್ ಮತ್ತು ಕಾಂಬೋಡಿಯಾ.
- “ಒನ್ ವಿಷನ್, ಒನ್ ಐಡೆಂಟಿಟಿ, ಒನ್ ಕಮ್ಯೂನಿಟಿ” ಇದರ ತಿರುಳಾಗಿದೆ.
ಇಸ್ರೋದಿಂದ ಸುಧಾರಿತ ಹವಾಮಾನ ಉಪಗ್ರಹ INSAT-3DR ಯಶಸ್ವಿಯಾಗಿ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸ೦ಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಬಳಸಿರುವ GSLV- F05 ಉಡಾವಣ ವಾಹಕದಿಂದ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಯಿತು. IRNSS ಮತ್ತು ಸ್ಕ್ರಾಮ್ ಜೆಟ್ ಎಂಜಿನ್ ಸೇರಿದಂತೆ ಇಸ್ರೋ ಈ ವರ್ಷದಲ್ಲಿ ಯಶಸ್ವಿಯಾಗಿ ಪೂರೈಸಿದ ಏಳನೇ ಮಿಷನ್ ಇದಾಗಿದೆ.
INSAT-3DR ಬಗ್ಗೆ:
- 2211 ಕೆ.ಜಿ. ತೂಕದ ಇನ್ಸಾಟ್ -3ಡಿಆರ್ ಉಪಗ್ರಹ ಈ ಹಿಂದೆ 2013ರಲ್ಲಿ ಫ್ರಾನ್ಸನ ಗಯಾನದಿಂದ ಉಡಾವಣೆ ಮಾಡಲಾಗಿದ್ದ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹಕ್ಕೆ ಪೂರಕವಾಗಿ ಸೇವೆಯನ್ನು ಒದಗಿಸಲಿದೆ. ಇದರ ಕಾರ್ಯಾಚರಣೆ ಅವಧಿ 10 ವರ್ಷ.
- ಈ ಉಪಗ್ರಹವನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸೇರಿಸಲಾಗಿದೆ (Geostationary Transfer Orbit (GTO).
INSAT-3DR ಹೊಂದಿರುವ ಉಪಕರಣಗಳು:
- ಮಲ್ಟಿ ಸ್ಪೆಕ್ಟ್ರಲ್ ಇಮೇಜರ್: ಪ್ರತಿ 26 ನಿಮಿಷಗಳಿಗೊಮ್ಮೆ ಭೂಮಿಯ ಚಿತ್ರಣವನ್ನು ರವಾನಿಸುವ ಮೂಲಕ ಸಾಗರದ ಮೇಲ್ಮೈ ತಾಪಮಾನ, ಹಿಮ ಹೊದಿಕೆ, ಗಾಳಿಯ ಚಲನೆ ಬಗ್ಗೆ ಮಾಹಿತಿ ನೀಡಲಿದೆ.
- ಸೌಂಡರ್: ತಾಪಮಾನ ಮತ್ತು ಸಾಂದ್ರತೆ ಬಗ್ಗೆ ಮಾಹಿತಿ ನೀಡಲಿದೆ.
- ಡಾಟ-ರಿಲೇ ಟ್ರಾನ್ ಸ್ಪಂಡರ್: ಹವಾಮಾನ, ಹೈಡ್ರಾಲಾಜಿಕಲ್ ಮತ್ತು ಸಾಗರ ಸಂಬಂಧಿಸಿದ ಮಾಹಿತಿ ನೀಡಲಿದೆ.
- ಸಟಲೈಟ್ ಅಡೆಡ್ ಸರ್ಚ್ ಅಂಡ್ ರೆಸ್ಕ್ಯೂ ಟ್ರಾನ್ ಸ್ಪಂಡರ್: ಎಚ್ಚರಿಕೆ ಸಂಕೇತಗಳನ್ನು ಸ್ವೀಕರಿಸಲು ಬಳಸಲಾಗುತ್ತದೆ.
ಉಪಯೋಗ:
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ INSAT ಉಪಗ್ರಹಗಳಿಗೆ ಪೂರಕವಾಗಿ ಸೇವೆಯನ್ನು ಒದಗಿಸಲಿದೆ. ಜೊತೆಗೆ ಸುಧಾರಿತ ಹವಾಮಾನ ಮುನ್ಸೂಚನೆ ಸೇವೆಯನ್ನು ಒದಗಿಸಲಿದೆ.
GSLV-F05
- GSLV-F05 GSLV ಉಡಾವಣ ವಾಹಕ ಶ್ರೇಣಿಯ ಹತ್ತನೇಯದಾಗಿದೆ. ಸ್ವದೇಶಿ ನಿರ್ಮಿತ CE-7.5 ಕ್ರಯೋಜನಿಕ್ ಎಂಜಿನ್ ಬಳಸಿರುವ ನಾಲ್ಕನೇ GSLV ವಾಹಕ. ಮೊದಲ ಮೂರು ವಾಹಕಗಳಲ್ಲಿ ಕ್ರಯೋಜನಿಕ್ ಎಂಜಿನ್ ಅನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಕ್ರಯೋಜನಿಕ್ ಎಂಜಿನ್ ಬಳಸಿ ಯಶಸ್ವಿಯಾಗಿ ಉಪಗ್ರಹ ಉಡಾಯಿಸಿದ ಮೊದಲ GSLV ವಾಹಕವಾಗಿದೆ.
- GSLV ಮೂರು ಹಂತದ ರಾಕೆಟ್ ಆಗಿದ್ದು 2-2.5 ಟನ್ ತೂಕದ ಉಪಗ್ರಹವನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸೇರಿಸಲು ಅಭಿವೃದ್ದಿಪಡಿಸಲಾಗಿದೆ. ಮೊದಲ ಹಂತದಲ್ಲಿ ಘನ ಇಂಧನ, ಎರಡನೇ ಹಂತದಲ್ಲಿ ದ್ರವ ಇಂಧನ ಮತ್ತು ಮೂರನೇ ಹಂತದಲ್ಲಿ ಕ್ರಯೋಜನಿಕ್ ಎಂಜಿನ್ ಒಳಗೊಂಡಿದೆ.
ಹೆಚ್ಎಎಲ್ ನಿಂದ “ಲೈಟ್ ಯುಟಿಲಿಟಿ ಹೆಲಿಕಾಪ್ಟರ್” ಯಶಸ್ವಿ ಹಾರಾಟ
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಸಂಸ್ಥೆ ನಿರ್ಮಿಸಿರುವ ಹಗುರ ಯುದ್ಧ ಹೆಲಿಕಾಪ್ಟರ್ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಸ್ವದೇಶಿ ನಿರ್ಮಿತ ಈ ಹೆಲಿಕಾಪ್ಟರ್ ಅನ್ನು ಹೆಚ್ಎಎಲ್ ನ ಇಬ್ಬರು ನುರಿತ ಪೈಲಟ್ ಗಳು ಸುಮಾರು 15 ನಿಮಿಷಗಳ ಕಾಲ ಚಲಾಯಿಸಿದ್ದು, ಹೆಲಿಕಾಪ್ಟರ್ ತಾಂತ್ರಿಕವಾಗಿ ಸಮರ್ಥವಾಗಿದೆ.
ಪ್ರಮುಖಾಂಶಗಳು:
- ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅನ್ನು ಭಾರತೀಯ ಸೇನೆ ಸೇವೆಗಾಗಿ ಅಭಿವೃದ್ದಿಪಡಿಲಾಗಿದೆ. ಇಬ್ಬರು ಪೈಲಟ್ ಗಳು ಸೇರಿದಂತೆ ಒಟ್ಟು 8 ಮಂದಿ ಆಸೀನರಾಗಬಹುದಾಗಿದ್ದು, ಅಭಿವೃದ್ದಿ ಹಂತದಲ್ಲಿದೆ.
- ಈ ಹೆಲಿಕಾಪ್ಟರ್ ತನ್ನ ಭಾರ ಸೇರಿದಂತೆ ಒಟ್ಟು 3,150 ಕೆ.ಜಿ. ತೂಕದ ಸಾಮಗ್ರಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ . 750 ಕಿ.ವ್ಯಾಟ್ನ ಸಫ್ರಾನ್ ಎಚ್ಇ ಆರ್ಡಿಡೆನ್ 1 ಯು ಎಂಜಿನ್ ಅಳವಡಿಸಲಾಗಿದೆ.
- ಈ ಹೆಲಿಕಾಪ್ಟರ್ ಗೆ ಒಮ್ಮೆ ಇಂಧನ ತುಂಬಿಸಿದರೆ ಸುಮಾರು 350 ಕಿ.ಮೀ ಗಳ ವರೆಗೂ ಸಾಗ ಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, 6.5 ಕಿ.ಮೀ. ಎತ್ತರದಲ್ಲಿ ಹಾರಬಲ್ಲದಾಗಿದೆ. ಸಮುದ್ರ ಮಟ್ಟದಿಂದ ಹಿಮಾಲಯದ ಎತ್ತರದವರೆಗೂ ಈ ಲಘು ಹೆಲಿಕಾಪ್ಟರ್ ಹಾರುವ ಸಾಮರ್ಥ್ಯ ಹೊಂದಿದೆ.
- ಪ್ರಮುಖವಾಗಿ ರಕ್ಷಣಾ ವಲಯಕ್ಕೆ, ಸಾರಿಗೆ ಕ್ಷೇತ್ರಕ್ಕೆ, ರಕ್ಷಣಾ ಕಾರ್ಯ ಮತ್ತು ಸಾಮಗ್ರಿಗಳ ಸಾಗಣೆಗೆ ಈ ಲಘು ಹೆಲಿಕಾಪ್ಟರ್ ಅನ್ನು ಬಳಕೆ ಮಾಡಬಹುದಾಗಿದೆ.
ಭಾರತ “ಯಾಸ್ (Yaws), ತಾಯಿ ಮತ್ತು ನವಜಾತ ಧನುರ್ವಾಯು ಮುಕ್ತ ರಾಷ್ಟ್ರ” WHO ಘೋಷಣೆ
ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಯಾಸ್, ತಾಯಿ ಮತ್ತು ನವಜಾತ ಧನುರ್ವಾಯು ಮುಕ್ತ ರಾಷ್ಟ್ರವೆಂದು ಘೋಷಿಸಿದೆ. ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ 69ನೇ ಆಗ್ನೇಯ ಏಷ್ಯಾ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು.
- ವಿಶ್ವ ಆರೋಗ್ಯ ಸಂಸ್ಥೆ ಮೇ 2016ರಲ್ಲಿ ಭಾರತವನ್ನು ಯಾಸ್ ಮುಕ್ತ ರಾಷ್ಟ್ರವೆಂದು ಘೋಷಿಸಿತ್ತು. ತಜ್ಞರ ತಂಡ ಭಾರತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
- ವಿಶ್ವ ಆರೋಗ್ಯ ಸಂಸ್ಥೆಯ 2012 ನಿರ್ಲಕ್ಷ್ಯ ಉಷ್ಣವಲಯದ ರೋಗಗಳು ಮಾರ್ಗದರ್ಶನದಡಿ ಯಾಸ್ ರೋಗವನ್ನು ನಿರ್ಮೂಲನೆ ಮಾಡಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ.
- ಭಾರತ ತಾಯಿ ಮತ್ತು ನವಜಾತ ಧನುರ್ವಾಯು ಮುಕ್ತ ರಾಷ್ಟ್ರವೆಂದು ಕಳೆದ ವರ್ಷ ಆಗಸ್ಟ್ ನಲ್ಲಿ ಘೋಷಿಸಲಾಯಿತು. ದೇಶದ 675 ಜಿಲ್ಲೆಗಳಲ್ಲಿ 1000 ಸಜೀವ ಜನನದಲ್ಲಿ ಒಂದಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾದ ದಾಖಲಾದ ಕಾರಣ ಭಾರತವನ್ನು ತಾಯಿ ಮತ್ತು ನವಜಾತ ಧನುರ್ವಾಯು ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿತ್ತು.
ಯಾಸ್:
- ಯಾಸ್ ಒಂದು ಬ್ಯಾಕ್ಟೀರಿಯಾ ಸೋಂಕಿನಿಂದ ಬರುವ ಕಾಯಿಲೆಯಾಗಿದ್ದು ಚರ್ಮ, ಮೃದ್ವಸ್ಥಿ ಮತ್ತು ಮೂಳೆಗಳು ಈ ಸೋಂಕಿಗೆ ತುತ್ತಾಗುವ ಪ್ರಮುಖ ಅಂಗಗಳಾಗಿವೆ.
- ಇದು ಸೋಂಕಿತ ವ್ಯಕ್ತಿಯ ಗಾಯದಿಂದ ದ್ರವ ಸಂಪರ್ಕ ಮೂಲಕ ಹರಡುತ್ತದೆ. 15ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ.
ಇದು ಮುಖ್ಯವಾಗಿ ನೀರು, ನೈರ್ಮಲ್ಯ ಮತ್ತು ಆರೋಗ್ಯ ಸೇವೆಗಳಂತಹ ಮೂಲ ಸೌಲಭ್ಯಗಳನ್ನು ಸೀಮಿತವಾಗಿರುವ ಕಿಕ್ಕಿರಿದ ಸಮುದಾಯ ಪ್ರದೇಶಗಳಲ್ಲಿ ಕಂಡುಬರುತ್ತದೆ
Thank u
THANK U SIR
Thanks sir but daily pdo question change madi sir and Kannada,English grammar vishya post madtiri sir helpagatte
Thank you so much sir
Thank you sir