ಬೆನ್ನು ಕ್ಷುದ್ರಗ್ರಹ (Bennu Asteroid)ದಲ್ಲಿ ಮಾದರಿ ಸಂಗ್ರಹಣೆಗಾಗಿ ನಾಸಾದಿಂದ “OSIRIS-Rex” ಬಾಹ್ಯಕಾಶ ನೌಕೆ

ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) “101955 ಬೆನ್ನು ಕ್ಷುದ್ರಗ್ರಹ (Bennu Asteroid)”ನ ಅಧ್ಯಯನಕ್ಕಾಗಿ “ಒಸಿರಿಸ್-ರೆಕ್ಸ್” ಬಾಹ್ಯಕಾಶ ನೌಕೆಯನ್ನು ಹಾರಿ ಬಿಟ್ಟಿದೆ. OSIRIS-Rex  ಎಂದರೆ Origins, Spectral Interpretation, Resource Identification, Security-Regolith Explorer ಎಂದರ್ಥ. ಈ ನೌಕೆಯು ಕ್ಷುದ್ರಗ್ರಹ ಅಧ್ಯಯನಕ್ಕಾಗಿ ಅಭಿವೃದ್ದಿಪಡಿಸಿರುವ ನಾಸಾದ ಮೊದಲ ಬಾಹ್ಯಕಾಶ ನೌಕೆಯಾಗಿದೆ. ಅಟ್ಲಾಸ್ V ರಾಕೆಟ್ ಬಳಸಿ ಕೇಪ್ ಕನವರೆಲ್ ಏರ್ ಫೋರ್ಸ್ ಸ್ಟೇಷನ್ ನಿಂದ ಉಡಾಯಿಸಲಾಯಿತು.

ಪ್ರಮುಖಾಂಶಗಳು:

  • ಭೂಮಿಯ ಸಮೀಪದಲ್ಲಿರುವ 101955 ಬೆನ್ನು ಕ್ಷುದ್ರಗ್ರಹದಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಿ ತರುವ ಮಹತ್ವದ ಕಾರ್ಯಕ್ಕಾಗಿ ಈ ನೌಕೆಯನ್ನು ಕಳುಹಿಸಲಾಗಿದೆ.
  • ಈ ನೌಕೆ ಎರಡು ವರ್ಷಗಳ ಸುದೀರ್ಘ ಪ್ರಯಾಣ ನಡೆಸಿ 2018ರಲ್ಲಿ ಬೆನ್ನು ಕ್ಷುದ್ರಗ್ರಹವನ್ನು ತಲುಪಲಿದೆ. ಬೆನ್ನು ಕ್ಷುದ್ರಗ್ರಹ ಸಣ್ಣ ಪರ್ವತದ ಗಾತ್ರದಷ್ಟಿದ್ದು, ಭೂಮಿಗೆ ಸಮೀಪದಲ್ಲಿದೆ.

ನೌಕೆಯ ಉದ್ದೇಶ:

  • “101955 ಬೆನ್ನು ಕ್ಷುದ್ರಗ್ರಹ”ವನ್ನು ಅಧ್ಯಯನ ನಡೆಸುವುದು ಇದರ ಮುಖ್ಯ ಉದ್ದೇಶ. ಇದೊಂದ ಇಂಗಾಲ ಕ್ಷುದ್ರಗ್ರಹವಾಗಿದೆ.
  • ಬೆನ್ನು ಕ್ಷುದ್ರಗ್ರಹದ ಮೇಲ್ಮೈ ಭಾಗದಿಂದ ಕನಿಷ್ಠ 60ಗ್ರಾಂನಷ್ಟು ಮಣ್ಣು ಮತ್ತು ಧೂಳಿನ ಕಣಗಳನ್ನು ಸಂಗ್ರಹಿಸಿ 2023 ರ ವೇಳಗೆ ಭೂಮಿಗೆ ಮರಳಿ ತರಲಿದೆ.
  • ಬೆನ್ನು ಕ್ಷುದ್ರಗ್ರಹವನ್ನು ಸಂಕ್ಷಿಪ್ತವಾಗಿ ಅಧ್ಯಯನ ನಡೆಸಿದರೆ ಸೌರಮಂಡಲದ ಉಗಮ ಸೇರಿದಂತೆ, ಭೂಮಿಯ ಮೇಲೆ ಲಭ್ಯವಿರುವ ನೀರು ಮತ್ತು ಸಾವಯವ ವಸ್ತುಗಳ ಹುಟ್ಟಿನ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದರ ಮಹತ್ವ:

  • ಈ ನೌಕೆ ಬೆನ್ನು ಕ್ಷುದ್ರಗ್ರಹದಿಂದ ಮರಳಿ ಭೂಮಿಗೆ ತರಲಿರುವ ಮಣ್ಣು ಮತ್ತು ಧೂಳಿನ ಮಾದರಿ ಸೌರವ್ಯೂಹದ ರಚನೆ ಮತ್ತು ಉಗಮದ ಬಗ್ಗೆ ವಿಜ್ಞಾನಿಗಳಿಗೆ ಹೆಚ್ಚು ತಿಳಿಯಲು ಮಹತ್ವದ ಪಾತ್ರವಹಿಸಲಿದೆ. ಜೊತೆಗೆ ಪ್ರಾರಂಭಿಕ ಹಂತದಲ್ಲಿ ಗ್ರಹದ ರಚನೆ ಮತ್ತು ಭೂಮಿಯ ಮೇಲೆ ಜೀವಿಗಳ ಉಗಮಕ್ಕೆ ಕಾರಣವಾದ ವಸ್ತುಗಳ ಮೂಲದ ಬಗ್ಗೆ ಬೆಳಕು ಚೆಲ್ಲಲಿದೆ.
  • ಸೌರಮಂಡಲ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ ಮೂರನೇ ಬಾಹ್ಯಕಾಶ ನೌಕೆ ಇದಾಗಿದೆ. ಈ ಹಿಂದೆ ನಾಸಾ ಜುನೋ ಮತ್ತು ನ್ಯೂ ಹಾರಿಜಾನ್ಸ್ ನೌಕೆಯನ್ನ ಕಳುಹಿಸಿಕೊಟ್ಟಿದೆ.

ಬೆನ್ನು ಕ್ಷುದ್ರಗ್ರಹದ ಬಗ್ಗೆ:

  • ಇದೊಂದು ಇಂಗಾಲ ಕ್ಷುದ್ರಗ್ರಹ (Carbonaceous Asteroid) ಆಗಿದ್ದು, ಅಪೊಲೊ ಗ್ರೂಪ್ ನಲ್ಲಿದೆ. 1999 ರಲ್ಲಿ LINER ಪ್ರಾಜೆಕ್ಟ್ ಮೂಲಕ ಇದನ್ನು ಪತ್ತೆಹಚ್ಚಲಾಗಿದೆ.

2016 ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ಮರಿಯಪ್ಪನ್ ತಂಗವೇಲು

2016 ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಮರಿಯಪ್ಪನ್ ತಂಗವೇಲು ರವರು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಪ್ಯಾರಾಲಿಂಪಿಕ್ಸ್ ಟಿ-42 ಹೈಜಂಪ್ ನಲ್ಲಿ ತಂಗವೇಲು ಚಿನ್ನದ ಪದಕವನ್ನು ಗೆದ್ದುಕೊಂಡರು. ಹೈಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ಎತ್ತರ ಜಿಗಿದು ಈ ಸಾಧನೆ ಮಾಡಿದರು. ಆ ಮೂಲಕ ಪ್ಯಾರಾಲಿಂಪಿಕ್ಸ್ ಹೈಜಂಪ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲಿಗ ಎಂಬ ದಾಖಲೆ ಬರೆದಿದ್ದಾರೆ.  ವರುಣ್ ಸಿಂಗ್ ಭಾಟಿ 1.96 ಮೀಟರ್ ಜಿಗಿದು ಮೂರನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕಂಚು ಪದಕವನ್ನು ತಮ್ಮದಾಗಿಸಿಕೊಂಡರು.

  • ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇದು ಮೂರನೇ ಚಿನ್ನ. 1972ರಲ್ಲಿ ಹೈಡೆಲ್ಬರ್ಗ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿತ್ತು. ಈಜುಗಾರ ಮುರಳಿಕಾಂತ್ ಪೆಟ್ಕರ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು.
  • 2004ರಲ್ಲಿ ಜಾವೆಲಿನ್ ಎಸೆತಗಾರ ದೇವೇಂದ್ರ ಝಾಹರಿಯಾ ಚಿನ್ನ ಗೆದ್ದು ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಇದೇ ಕ್ರೀಡಾಕೂಟದಲ್ಲಿ ಪವರ್ ಲಿಪ್ಟಿಂಗ್ ನಲ್ಲಿ ರಾಜಿಂದರ್ ಸಿಂಗ್ ಬೆಳ್ಳಿ ಗೆದ್ದಿದ್ದರು.
  • 2012 ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಂದು ಬೆಳ್ಳಿ ಪದಕ ಮಾತ್ರ ಲಭಿಸಿತ್ತು. ಕರ್ನಾಟಕ ಗಿರೀಶ್ ನಾಗರಾಜಗೌಡ ಹೈಜಂಪ್ ನಲ್ಲಿ ಈ ಸಾಧನೆ ಮಾಡಿದ್ದರು.

ಹರಿಯಾಣಕ್ಕೆ ಅತ್ಯುತ್ತಮ ತೋಟಗಾರಿಕೆ ರಾಜ್ಯ (Best Horticulture State) ಪ್ರಶಸ್ತಿ

ಇಂಡಿಯನ್ ಕೌನ್ಸಿಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ (ICFA) ನೀಡುವ ಈ ಪ್ರಶಸ್ತಿಯನ್ನು ಅತ್ಯುತ್ತಮ ತೋಟಗಾರಿಕೆ ರಾಜ್ಯ ಪ್ರಶಸ್ತಿಗೆ ಹರಿಯಾಣ ಭಾಜನವಾಗಿದೆ.. ನವದೆಹಲಿಯಲ್ಲಿ ICFA ಪ್ರಾಯೋಜಕತ್ವದ 9ನೇ ಕೃಷಿ ನಾಯಕತ್ವ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ತೋಟಗಾರಿಕೆಯನ್ನು ಪ್ರೋತ್ಸಾಹಿಸಿ ರೈತರ ಆದಾಯವನ್ನು ಹೆಚ್ಚಿಸಲು ಹರಿಯಾಣ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹರಿಯಾಣದ ಕೃಷಿ ಸಚಿನ ದಂಕರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

  • ಇದೇ ವೇಳೆ ಅತ್ಯುತ್ತಮ ಕೃಷಿ ರಾಜ್ಯ ಪ್ರಶಸ್ತಿಯನ್ನು ಒಡಿಶಾ ರಾಜ್ಯ ಪಡೆದುಕೊಂಡಿದೆ. ಕೃಷಿ ಉತ್ತೇಜನ ಮೂಲಕ ಗ್ರಾಮೀಣ ಸಮೃದ್ದಿಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.

ಹರಿಯಾಣದಲ್ಲಿ ತೋಟಗಾರಿಕೆ ಹಿನ್ನೋಟ:

  • ಪ್ರಸ್ತುತ ಹರಿಯಾಣದ ಸುಮಾರು 2.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ. ಆದರೆ ಸರ್ಕಾರ 9 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಹರಿಯಾಣ ಸರ್ಕಾರ ಮುಂದಾಗಿದೆ.
  • ಇದರೆ ಜೊತೆ ರಾಜ್ಯದಲ್ಲಿ 340 ತೋಟಗಾರಿಕೆ ಹಳ್ಳಿಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
  • ಫ್ರಾನ್ಸ್ ಮತ್ತು ಚೀನಾದಲ್ಲಿರುವಂತೆ ರಾಜ್ಯದ ಗನೌರ್ ಬಳಿ ದೇಶದ ಅತಿದೊಡ್ಡ ತೋಟಗಾರಿಕೆ ಮಂಡಿಯನ್ನು ಸ್ಥಾಪಿಸಲಾಗುವುದು.

Leave a Comment

This site uses Akismet to reduce spam. Learn how your comment data is processed.