ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂವಿಧಾನದ ಪರಿಚ್ಚೇದ 279ಎ ಅಡಿ ಈ ಮಂಡಳಿ ರಚನೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಇತರೆ ತೀರ್ಮಾನಗಳು:
- ನವಹದೆಹಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಾರ್ಯಾಲಯದ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.
- ಕಂದಾಯ ಕಾರ್ಯದರ್ಶಿಯನ್ನು ಈ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಕಮಾಡಿಕೊಳ್ಳಲು ಒಪ್ಪಿಗೆ
- ಕೇಂದ್ರ ಅಬಕಾರಿ ಸುಂಕ ಮಂಡಳಿ (CBSE) ಅಧ್ಯಕ್ಷರು ಈ ಮಂಡಳಿಯ ಎಲ್ಲಾ ಕಾರ್ಯಕಲಾಪಗಳಿಗೆ ಶಾಶ್ವತ ಆಮಂತ್ರಿತರಾಗಿರುತ್ತಾರೆ. ಆದರೆ ಇವರಿಗೆ ಮಂಡಳಿಯ ನಿರ್ಣಯದಲ್ಲಿ ಮತದಾನ ಮಾಡುವ ಹಕ್ಕಿಲ್ಲ.
- ಜಿಎಸ್ ಟಿ ಕಾರ್ಯಾಲಯದಲ್ಲಿ ಒಂದು ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಲ್ಕು ಕಮೀಷನರ್ ಹುದ್ದೆಗಳ ಸೃಜನೆಗೆ ಒಪ್ಪಿಗೆ.
ಹಿನ್ನಲೆ:
- ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವ ಸಲುವಾಗಿ ಸಂವಿಧಾನದ 122ನೇ ತಿದ್ದುಪಡಿ ಮಸೂದೆಯನ್ನು 18 ರಾಜ್ಯಗಳು ಅನುಮೋದಿಸಿದ ಬಳಿಕ ರಾಷ್ಟ್ರಪತಿಗಳು ಇತ್ತೀಚೆಗೆ ಅಂಕಿತ ಹಾಕಿದರು.
- ರಾಷ್ಟ್ರಪತಿಗಳ ಅಂಕಿತ ಬಳಿಕ ಮಸೂದೆಯು ಕಾನೂನು ಆಗಿ ಜಾರಿಗೆ ಬಂದಿದ್ದು, ಸಂವಿಧಾನದ 101 ನೇ ತಿದ್ದುಪಡಿ ಕಾಯಿದೆ-2016 ಆಗಿ ಅಧಿಸೂಚನೆ ಹೊರಡಿಸಲಾಗಿದೆ. ಸಂವಿಧಾನದ 101ನೇ ತಿದ್ದುಪಡಿ ಕಾಯಿದೆ ಮೂಲಕ 279ಎ ಪರಿಚ್ಛೇದವನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.
- ಸಂವಿಧಾನದ ಪ್ರಕರಣ 279ಎ (1) ರಂತೆ ಈ ಪ್ರಕರಣ ಜಾರಿಗೆ ಬಂದ ಅರವತ್ತು (60) ದಿನದೊಳಗೆ ರಾಷ್ಟ್ರಪತಿಯವರು ಸರಕು ಮತ್ತು ಸೇವಾ ತೆರಿಗೆ ಮಂಡಳಿಯನ್ನು ರಚಿಸಬೇಕು.
ಗಮನಿಸಿ: ಸಂವಿಧಾನ 122ನೇ ತಿದ್ದುಪಡಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದೆ ಆದರೆ ಇದನ್ನು ರಾಷ್ಟ್ರಪತಿಗಳ ಅಂಕಿತ ಪಡೆದ ಮೇಲೆ 101ನೇ ತಿದ್ದುಪಡಿ ಕಾನೂನು ಆಗಿ ಅಧಿಸೂಚನೆ ಹೊರಡಿಸಲಾಗಿದೆ. ಇದರ್ಥ ಇನ್ನು 21 ಮಸೂದೆಗಳು ಕಾನೂನು ಆಗಿ ರೂಪುಗೊಳ್ಳಲು ಬಾಕಿ ಇವೆ.
ಮಂಡಳಿಯ ಸ್ವರೂಪ:
ಸಂವಿಧಾನದ ಪ್ರಕರಣ 279ಎ ರಂತೆ ಮಂಡಳಿಯು ಕೇಂದ್ರ ಮತ್ತು ರಾಜ್ಯಗಳ ಜಂಟಿ ವೇದಿಕೆಯಾಗಿದ್ದು, ಈ ಕೆಳಗಿನವರುಗಳನ್ನು ಒಳಗೊಂಡಿದೆ.
- ಕೇಂದ್ರ ಹಣಕಾಸು ಸಚಿವರು (ಅಧ್ಯಕ್ಷರು)
- ಕಂದಾಯ ಇಲಾಖೆ ಹೊಣೆಗಾರಿಕೆಯ ರಾಜ್ಯ ಸಚಿವ
- ರಾಜ್ಯ ಹಣಕಾಸು ಸಚಿವರು
ಮಂಡಳಿಯ ಕರ್ತವ್ಯಗಳು:
- ಜಿಎಸ್ಟಿ ವ್ಯಾಪ್ತಿಗೆ ತರಬೇಕಾದ ಅಥವಾ ವಿನಾಯಿತಿ ನೀಡಬೇಕಾದ ಸರಕು ಮತ್ತು ಸೇವೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳಿಗೆ ಶಿಫಾರಸು
- ಜಿಎಸ್ಟಿ ಮಾದರಿ ಕಾನೂನು ರಚನೆ
- ರಾಜ್ಯಗಳಿಗೆ ತೆರಿಗೆ ವರಮಾನ ಹಂಚಿಕೆ ತತ್ವ ರೂಪಿಸುವಿಕೆ
- ಕನಿಷ್ಠ ಮಿತಿ ನಿಗದಿ
- ಸಾಮಾನ್ಯ ದರ ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಕ್ಕೆ ವಿಶೇಷ ದರ ನಿಗದಿ
ಮತದ ಹಕ್ಕು
- ಮೂರನೇ ಒಂದು ಮತದ ಹಕ್ಕು ಕೇಂದ್ರ ಸರ್ಕಾರಕ್ಕೆ ಇರುತ್ತದೆ
- ಮೂರನೇ ಎರಡು ಮತದ ಹಕ್ಕು ರಾಜ್ಯಗಳದ್ದಾಗಿರುತ್ತದೆ
- ನಿರ್ಣಯ ಅಂಗೀಕಾರಕ್ಕೆ ನಾಲ್ಕನೇ ಮೂರರಷ್ಟು ಅಂಗೀಕಾರ ಅಗತ್ಯ
ಕೇಂದ್ರ ಪ್ರಾಯೋಜಿತ ಯೋಜನೆಗಳ ನಿಧಿ ವೆಚ್ಚಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ
ಕೇಂದ್ರ ಪ್ರಾಯೋಜಿತ ಯೋಜನೆಗಳ (Centrally Sponsored Schemes) ನಿಧಿ ವೆಚ್ಚಕ್ಕೆ ಕೇಂದ್ರ ಸರಕಾರವು ಹೊಸ ನಮನೀಯ-ನಿಧಿ (Flexi-Fund)ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗ ಸೂಚಿ ಅನ್ವಯ ಸ್ಥಳೀಯ ಅಭಿವೃದ್ಧಿ ಅಗತ್ಯಗಳಿಗೆ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ವಯ(ಸಿಎಸ್ಎಸ್) ಹಣ ಖರ್ಚು ಮಾಡಲು ರಾಜ್ಯಗಳಿಗೆ ಹೆಚ್ಚು ಸ್ವಾತಂತ್ರ ದೊರೆಯಲಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ತರ್ಕಬದ್ದವಾಗಿಸುವಿಕೆ ಸಲುವಾಗಿ ನೀತಿ ಆಯೋಗ ನೀಡಿದ್ದ ಸೂಚನೆಗಳ ಮೇರೆಗೆ ಹೊಸ ಮಾರ್ಗದರ್ಶನವನ್ನು ಹೊರಡಿಸಲಾಗಿದೆ.
ಪ್ರಮುಖಾಂಶಗಳು:
- ಹೊಸ ನಿಯಮಗಳ ಪ್ರಕಾರ, ಪ್ರತಿ ಸಿಎಸ್ಎಸ್ನ ನಮನೀಯ ನಿಧಿಯನ್ನು ರಾಜ್ಯಗಳಿಗೆ ಈಗಿನ ಶೇ.10ರಿಂದ ಶೇ.25ಕ್ಕೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.30ಕ್ಕೆ ಏರಿಸಲಾಗಿದೆ.
- ಅಂದರೆ ಅಂಗೀಕೃತ ಯೋಜನೆ ಒಟ್ಟಾರೆ ಗುರಿ ಹಾಗೂ ಉದ್ದೇಶಕ್ಕೆ ಅನುಗುಣವಾಗಿರುವ ಯಾವುದೇ ಉಪಯೋಜನೆ, ಭಾಗ ಅಥವಾ ಸಂಶೋಧನೆಗೆ ಖರ್ಚು ಮಾಡಬೇಕಾದ ನಮನೀಯ ನಿಧಿಗಾಗಿ, ರಾಜ್ಯಗಳು ಬಯಸಿದರೆ ಯಾವುದೇ ಸಿಎಸ್ಎಸ್ ಶೇ.25ರಷ್ಟನ್ನು ತೆಗೆದಿಡಬಹುದು.
- ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಉಪಶಮನ ಅಥವಾ ಪುನಸ್ಥಾಪನಾ ಚಟುವಟಿಕೆ ಕೈಗೊಳ್ಳಲು ಅಥವಾ ಆಂತರಿಕ ಭದ್ರತಾ ತೊಂದರೆಗಳಿಂದ ಸಂತ್ರಸ್ತವಾದ ಪ್ರದೇಶಗಳ ಸ್ಥಳೀಯ ಅಗತ್ಯವನ್ನು ತೃಪ್ತಿಪಡಿಸಲು ರಾಜ್ಯಗಳು ಈ ನಿಧಿಯನ್ನು ಬಳಸಬಹುದು.
- ಈ ನಮನೀಯ ನಿಧಿ ಸೌಲಭ್ಯ ಪಡೆಯಲು ರಾಜ್ಯ ಸರಕಾರಗಳು ರಾಜ್ಯಮಟ್ಟದ ಮಂಜೂರಾತಿ ಸಮಿತಿಯೊಂದನ್ನು (State Level Sanctioning Committee) ರಚಿಸಬೇಕಾಗುತ್ತದೆ. ಆದರೆ ಈ ಸೌಲಭ್ಯ ಕಾಯಿದೆ ಮೂಲಕ ಜಾರಿಗೊಳಿಸಲಾದ ಯೋಜನೆಗಳು ಉದಾ MGNREGA ಯೋಜನೆಗೆ ಅನ್ವಯವಾಗುವುದಿಲ್ಲ.
ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ ದೀಪಾ ಮಲಿಕ್
ಭಾರತದ ದೀಪಾ ಮಲಿಕ್ ಅವರು ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಷಾಟ್ಪುಟ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಮಲಿಕ್ ಅವರು ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಆರು ಪ್ರಯತ್ನಗಳಲ್ಲಿ 4.61 ಮೀಟರ್ ದೂರದ ಎಸೆತ ದೀಪಾ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಬಹರೈನ್ ನ ಫಾತಿಮಾ ನಿಧಾಮ್ ಚಿನ್ನ ಗೆದ್ದರೆ, ಗ್ರೀಸ್ ನ ದಿಮಿಟ್ರಾ ಕಂಚು ಪಡೆದರು.
ದೀಪಾ ಮಲಿಕ್ ಬಗ್ಗೆ:
- ದೀಪಾ ಮಲಿಕ್ ಅವರು ಹರಿಯಾಣದ ಸೊನಿಪತ್ ನವರು.
- ಮಲಿಕ್ ಅವರು ಭಾರತದ ಮೋಟಾರು ಕ್ರೀಡಾ ಕ್ಲಬ್ ಫೆಡರೇಷನ್ (FMSCI) ಮತ್ತು ಹಿಮಾಲಯದ ಮೋಟಾರ್ ಅಸೋಸಿಯೇಷನ್ (HMA) ಒಡನಾಟ ಹೊಂದಿದ್ದಾರೆ.
- ಕ್ರೀಡೆ ಮತ್ತು ದೈಹಿಕ ಶಿಕ್ಷಣ ಸಂಬಂಧಿಸಿದ 12ನೇ ಪಂಚವಾರ್ಷಿಕ ಯೋಜನೆ (2012-17)ಯ ಸದಸ್ಯರಾಗಿದ್ದಾರೆ.
“Into the Hidden Valley” ಕಾದಂಬರಿಗೆ ಪ್ರತಿಷ್ಠಿತ ಎಂಎಂ ಬೆನ್ನೆಟ್ಸ್ ಪ್ರಶಸ್ತಿ
ಅರುಣಾಚಲ ಪ್ರದೇಶದ ಅಪತಣಿ (Apatani) ಬುಡಕಟ್ಟು ಜನಾಂಗ ಆಧಾರಿತ ಕಾದಂಬರಿ “Into the Hidden Valley”ಗೆ ಪ್ರತಿಷ್ಠಿತ ಎಂಎಂ ಬೆನ್ನೆಟ್ಸ್ ಐತಿಹಾಸಿಕ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ. “ಸ್ಟುವರ್ಟ್ ಬ್ಲಾಕ್ ಬರ್ನ್” ಈ ಕಾದಂಬರಿಯ ಲೇಖಕರು. ಆಕ್ಸಫರ್ಡ್ HNS ಸಮ್ಮೇಳನದಲ್ಲಿ ಇವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
“Into the Hidden Valley” ಕಾದಂಬರಿ:
- ಬ್ರಿಟಿಷ್ ಭಾರತದ ವಸಹತುಶಾಹಿ ಇತಿಹಾಸದ ಬಗ್ಗೆ ಕೆಲವು ತಿಳಿದಿರದ ಸಂಗತಿಗಳ ಬಗ್ಗೆ ಈ ಕಾದಂಬರಿ ಬೆಳಕು ಚೆಲ್ಲಿದೆ. ಅರುಣಾಚಲ ಪ್ರದೇಶದ ಅಪತಣಿ ಬುಡಕಟ್ಟು ಜನಾಂಗ ಮತ್ತು ಬ್ರಿಟಿಷ್ ವಸಾಹತು ನೀತಿ ಈ ಜನಾಂಗದ ಮೇಲೆ ಬೀರಿದ ಪರಿಣಾಮವನ್ನು ವಿವರಿಸಲಾಗಿದೆ.
ಸ್ಟುವರ್ಟ್ ಬ್ಲಾಕ್ ಬರ್ನ್:
- ಸ್ಟುವರ್ಟ್ ಬ್ಲಾಕ್ ಬರ್ನ್ “ರೊಧೆ ಐಲ್ಯಾಂಡ್” ಮೂಲದ ಪ್ರಸಿದ್ದ ಲೇಖಕ
- ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕಲೆ ಮುಖ್ಯವಾಗಿ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತಕ್ಕೆ ಸಂಬಂಧಿಸಿದಂತೆ 12 ಪುಸ್ತಕಗಳನ್ನು ರಚಿಸಿದ್ದಾರೆ. “ಮರ್ಡರ್ ಇನ್ ಮೇಲೂರ್” ಇವರ ಮೊದಲ ಕಾದಂಬರಿ.
- ಕೇರಳದ ನೆರಳು ಕೈಗೊಂಬೆ ರಂಗಭೂಮಿ ಅಧ್ಯಯನ ಆಧರಿಸಿ ಇವರು ರಚಿಸಿದ ಪುಸ್ತಕವೊಂದಕ್ಕೆ ಯುಕೆ ಜಾನಪದ ವರ್ಷದ ಪುಸ್ತಕ ರನ್ನರ್ ಆಫ್ ಪ್ರಶಸ್ತಿ ಗೆದ್ದಿದ್ದರು.
- ಇವರು ತಮಿಳಿನಲ್ಲಿ ಫಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಪ್ರಶಸ್ತಿಯ ಬಗ್ಗೆ:
- ಲೇಖಕ ಮತ್ತು ಇತಿಹಾಸಕಾರ ಎಂಎಂ ಬೆನ್ನೆಟ್ಸ್ ರವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
- ಬೆನ್ನೆಟ್ಸ್ ಅವರು 19ನೇ ಶತಮಾನದ ಬ್ರಿಟಿಷ್ ಇತಿಹಾಸ ಮತ್ತು ನೆಪೊಲಿಯನ್ ಯುದ್ದಗಳ ಬಗ್ಗೆ ಆಳವಾಗಿ ತಿಳಿದವರು. ಲೇಖಕರಾಗುವ ಮುನ್ನ ಫ್ರೆಂಚ್ ನ ತರ್ಜುಮೆದಾರರಾಗಿದ್ದರು.
Sir good information
Super
Sir download option ella alva ?
sir
Download option illa
End of the month full download sigutte
Good information sir
Nice…