ಭಾರತ-ನೇಪಾಳ ನಡುವೆ ಮೂರು ಮಹತ್ವದ ಒಪ್ಪಂದಕ್ಕೆ ಸಹಿ
ಭಾರತ ಮತ್ತು ನೇಪಾಳ ಮಹತ್ವದ ಮೂರು ಒಪ್ಪಂದಗಳಿಗೆ ಸಹಿಹಾಕಿವೆ. ಭೂಕಂಪ ಸಂತ್ರಸ್ಥ ನೇಪಾಳ ಪುನರ್ ನಿರ್ಮಾಣ, ರಸ್ತೆ ಮೂಲಸೌಕರ್ಯ ಅಭಿವೃದ್ದಿ ಮತ್ತು ಆರ್ಥಿಕ ನೆರವು ಒಪ್ಪಂದಗಳಿಗೆ ಸಹಿಹಾಕಲಾಗಿದೆ. ನೇಪಾಳ ಪ್ರಧಾನಿ ಪುಷ್ಪ ಕುಮಾರ್ ಧಮಾಲ್ ಅವರು ನಾಲ್ಕು ದಿನಗಳ ಕಾಲ ಭಾರತಕ್ಕೆ ಪ್ರಯಾಣ ಕೈಗೊಂಡಿದ್ದ ವೇಳೆಯಲ್ಲಿ ಈ ಒಪ್ಪಂದಗಳಿಗೆ ಸಹಿಹಾಕಲಾಯಿತು.
ಪ್ರಮುಖಾಂಶಗಳು:
- 750 ಯುಎಸ್ ಡಾಲರ್ ಆರ್ಥಿಕ ನೆರವು: ಕಳೆದ ವರ್ಷ ಸಂಭವಿಸಿದ ಭೂಕಂಪದಿಂದ ತತ್ತರಿಸಿರುವ ನೇಪಾಳದ ಪುನರ್ ನಿರ್ಮಾಣಕ್ಕೆ ಭಾರತ 750 ಯುಎಸ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ.
- ತೆರೈ ಪ್ರದೇಶದಲ್ಲಿ ರಸ್ತೆ ಅಭಿವೃದ್ದಿ: ನೇಪಾಳದ ತೆರೈ ಪ್ರದೇಶದಲ್ಲಿ ರಸ್ತೆ ಉನ್ನತೀಕರಣ ಮತ್ತು ಅಭಿವೃದ್ದಿ ಸಲುವಾಗಿ ಸಹಿ ಹಾಕಲಾಗಿದೆ. ಈ ಸಂಬಂಧ ನೇಪಾಳದ ರಸ್ತೆ ಮತ್ತು ಪೊಸ್ಟಲ್ ಹೈವೇ ಪ್ರಾಜೆಕ್ಟ್ ಆಫ್ ನೇಪಾಳ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮ ನಿಯಮಿತಿ (NHIDCL) ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅಜಿಯಾಂಕೆ ರಹಾನೆ ಮತ್ತು ರೋಹಿತ್ ಶರ್ಮಾಗೆ ಅರ್ಜುನ ಪ್ರಶಸ್ತಿ ಪ್ರದಾನ
ಖ್ಯಾತ ಕ್ರಿಕೆಟಿಗರಾದ ಅಜಿಯಾಂಕೆ ರಹಾನೆ ಮತ್ತು ರೋಹಿತ್ ಶರ್ಮಾ ಅವರಿಗೆ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕ್ರಿಕೆಟ್ ಆಟಕ್ಕೆ ಇವರು ನೀಡಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು. ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಪ್ರಶಸ್ತಿಯನ್ನು ನೀಡಿದರು. ರೋಹಿತ್ ಶರ್ಮಾ ಅವರನ್ನು 2015ನೇ ಸಾಲಿಗೆ ಹಾಗೂ ರಹಾನೆ ಅವರನ್ನು 2016ನೇ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು. ಆದರೆ ರಾಷ್ಟ್ರಪತಿಯವರು ಪ್ರಶಸ್ತಿ ಪ್ರದಾನ ಮಾಡಿದ ಸಮಯದಲ್ಲಿ ಇವರಿಬ್ಬರು ಅಂತಾರಾಷ್ಟ್ರೀಯ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದ ಕಾರಣ ಪ್ರಶಸ್ತಿಯನ್ನು ಸ್ವೀಕರಿಸಿರಲಿಲ್ಲ.
ಅರ್ಜುನ ಪ್ರಶಸ್ತಿ:
- ಅರ್ಜುನ ಪ್ರಶಸ್ತಿಯನ್ನು 1961 ರಿಂದ ಕೊಡಲಾಗುತ್ತಿದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ಪ್ರಶಸ್ತಿಯನ್ನು ನೀಡುತ್ತಿದೆ.
- ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡೆಗಳಿಗೆ ಕೊಡುಗೆ ನೀಡಿದ ಆಟಗಾರರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
- ಪ್ರಶಸ್ತಿಯು ಐದು ಲಕ್ಷ ನಗದು, ಕಂಚಿನಿಂದ ಮಾಡಿದೆ ಅರ್ಜುನ ಪ್ರತಿಮೆ ಮತ್ತು ಫಲಕವನ್ನು ಒಳಗೊಂಡಿದೆ.
ಲೇಖಕಿ “ಮೇಘ್ನ ಪಂತ್” ಗೆ FON ದಕ್ಷಿಣ ಏಷ್ಯಾ ಸಣ್ಣ ಕಥೆ ಪ್ರಶಸ್ತಿ
ಲೇಖಕಿ ಮೇಘ್ನ ಪಂತ್ ಅವರನ್ನು ಪ್ರತಿಷ್ಠಿತ ಎಫ್ಒಎನ್ ದಕ್ಷಿಣ ಏಷ್ಯಾ ಸಣ್ಣ ಕಥೆ ಪ್ರಶಸ್ತಿಗೆ(ಫೆಲೋಸ್ ಆಫ್ ನೇಚರ್ ಸೌಥ್ ಏಷಿಯಾ ಶಾರ್ಟ್ ಸ್ಟೋರಿ ಅವಾರ್ಡ್) ಆಯ್ಕೆಮಾಡಲಾಗಿದೆ. ಅಕ್ಟೋಬರ್ 2016ರಲ್ಲಿ ನಡೆಯಲಿರುವ ಕುಮೋನ್ ಸಾಹಿತ್ಯ ಉತ್ಸವದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಮೇಘ್ನ ಅವರ “ಪೀಪಲ್ ಆಫ್ ದಿ ಸನ್ (People of the Sun)” ಪರಿಸರ ಆಧಾರಿತ ಸಣ್ಣಕಥೆಯನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ದಕ್ಷಿಣ ಏಷ್ಯಾದ ಸುಮಾರು 165 ಕಥೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಆದರೆ ಮೇಘ್ನ ಅವರ “ಪೀಪಲ್ ಆಫ್ ದಿ ಸನ್” ಪ್ರಶಸ್ತಿಗೆ ಭಾಜನವಾಗಿದೆ.
ಪ್ರಶಸ್ತಿಯ ಬಗ್ಗೆ:
- ಪ್ರಶಸ್ತಿಯನ್ನು ಫ್ರೆಂಚ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಹಾಗೂ ಕುಮೋನ್ ಸಾಹಿತ್ಯ ಉತ್ಸವ ಪಾಲುದಾರಿಕೆಯಲ್ಲಿ ನೀಡಲಾಗುತ್ತಿದೆ.
- ಸಾಹಿತ್ಯ ರೂಪದ ಮೂಲಕ ಹವಾಮಾನ ಬದಲಾವಣೆಗಳಂತಹ ಪರಿಸರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಥೆಗಳಿಗೆ ಕೊಡಲಾಗುವುದು.
ನಾಸಾದ “ಕ್ಯಾಸಿನಿ” ನೌಕೆಯಿಂದ ಶನಿ ಗ್ರಹದ ಅಂತಿಮ ವೀಕ್ಷಣೆ
ನಾಸಾದ ಕ್ಯಾಸಿನಿ ನೌಕೆ ತನ್ನ ಅಂತಿಮ ಹಂತಕ್ಕೆ ತಲುಪಿದೆ. 1997 ರಲ್ಲಿ ಹಾರಿಸಿ ಬಿಟ್ಟ ಕ್ಯಾಸಿನಿ ನೌಕೆ ಹನ್ನೆರಡು ವರ್ಷಗಳಿಂದ ಶನಿಗ್ರಹ, ಅದರ ಸುತ್ತಲಿನ ಉಂಗುರಗಳು ಮತ್ತು ಉಪಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. 2017ರ ಸೆಪ್ಟೆಂಬರ್ ತಿಂಗಳಲ್ಲಿ ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ಮಂಗಳಹಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲಿನ ಒಂದು ವರ್ಷದ ಅವಧಿಯಲ್ಲಿ ನೌಕೆಯು ಶನಿಗ್ರಹದ ಇನ್ನಷ್ಟು ಸನಿಹಕ್ಕೆ ತೆರಳಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಿದೆ. ಈ ಅವಧಿಯಲ್ಲಿ ಅದು ಮಹತ್ವದ ಎರಡು ಕಾರ್ಯಗಳನ್ನು ನಿಭಾಯಿಸಲಿದೆ. ಈ ವರ್ಷದ ನವೆಂಬರ್ 30ರಂದು ನೌಕೆಯು ಈಗಿನ ಕಕ್ಷೆಯಿಂದ ಶನಿಗ್ರಹದ ಪ್ರಮುಖ ಉಂಗುರಗಳ ಹೊರಭಾಗದ ಕಕ್ಷೆಗೆ ವರ್ಗಾವಣೆ ಹೊಂದಲಿದೆ.
ಅಂತಿಮ ಅವಧಿಯಲ್ಲಿ ನೌಕೆ ಏನು ಮಾಡಲಿದೆ?
- ಈ ಸಮಯದಲ್ಲಿ ನೌಕೆಯು ಅತ್ಯಂತ ಸನಿಹದಿಂದ ಶನಿಗ್ರಹದ ಅಧ್ಯಯನ ನಡೆಸಲಿದೆ. ಗ್ರಹದ ಕಾಂತ ಮತ್ತು ಗುರುತ್ವಾಕರ್ಷಣೆ ಕ್ಷೇತ್ರವನ್ನು ಅಳೆಯಲಿದೆ. ಅಲ್ಲದೇ ಗ್ರಹದ ವಾತಾವರಣಕ್ಕೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಲಿದೆ.
- ಶನಿಗ್ರಹದ ಒಳ ರಚನೆ, ಉಂಗುರಗಳ ಒಟ್ಟು ದ್ರವ್ಯರಾಶಿಯ ಬಗ್ಗೆ ಹೆಚ್ಚಿನ ಒಳನೋಟ ನೀಡಲಿದೆ ಎಂಬುದು ವಿಜ್ಞಾನಿಗಳ ನಿರೀಕ್ಷೆ. ಅಂತಿಮವಾಗಿ ಇದರಿಂದ ಉಂಗುರಗಳ ವಯಸ್ಸನ್ನು ಲೆಕ್ಕಹಾಕಬಹುದು ಎಂಬುದು ಅವರ ಲೆಕ್ಕಾಚಾರ. ಇದರ ಜೊತೆಗೆ, ಪ್ರಮುಖ ಉಂಗುರಗಳಲ್ಲಿರುವ ದೂಳಿನ ಗಾತ್ರದ ಕಣಗಳು, ಶನಿಗ್ರಹದ ಹೊರ ವಾತಾವರಣದ ಮಾದರಿಗಳ ವಿಶ್ಲೇಷಣೆಯನ್ನೂ ಮಾಡಲಿದೆ.
- 20 ಸರಣಿಗಳ ಈ ಕಕ್ಷೆಯನ್ನು ಎಫ್ –ಉಂಗುರ ಕಕ್ಷೆ ಎಂದು ಕರೆಯಲಾಗಿದೆ.ಈ ಕಕ್ಷೆಯಲ್ಲಿ ಸುತ್ತು ಹಾಕುವ ಸಂದರ್ಭದಲ್ಲಿ ನೌಕೆಯು ಶನಿಗ್ರಹದ ವಿಲಕ್ಷಣ ಸರಪಣಿ ಮತ್ತು ಹೆಣಿಕೆ ರಚನೆ ಹೊಂದಿರುವ ಎಫ್–ಉಂಗುರದ ಕೇಂದ್ರದಿಂದ 7,800 ಕಿ.ಮೀ ದೂರದಲ್ಲಿ ಹಾದುಹೋಗಲಿದೆ ಎಂದು ನಾಸಾ ಹೇಳಿದೆ.
ಕ್ಯಾಸಿನಿ ನೌಕೆ ಬಗ್ಗೆ:
- ಕ್ಯಾಸಿನಿ-ಹ್ಯೂಜೆನ್ ನೌಕೆಯನ್ನು ನಾಸಾ ಶನಿ ಗ್ರಹ ಮತ್ತು ಅದರ ಉಂಗುರದ ರಚನೆಯನ್ನು ತಿಳಿಯಲು ಕಳುಹಿಸಿಕೊಟ್ಟಿತ್ತು.
- ಇದು ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಇಟಲಿಯ ಸ್ಪೇಸ್ ಏಜೆನ್ಸಿ (Agenzia Spaziale Italiana (ASI)) ಜಂಟಿಯಾಗಿ ಕೈಗೊಂಡಿರುವ ಯೋಜನೆ.
- ಕ್ಯಾಸಿನಿ ನೌಕೆ ಶನಿ ಗ್ರಹ ಅಧ್ಯಯನ ನಡೆಸಲು ಕಳುಹಿಸಿಕೊಟ್ಟ ನಾಲ್ಕನೇ ನೌಕೆ ಹಾಗೂ ಶನಿ ಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ಸೇರ್ಪಡೆಗೊಂಡ ಮೊದಲ ನೌಕೆ.
- ಇದು ಕ್ಯಾಸಿನಿ ಮತ್ತು ಹ್ಯೂಜೆನ್ ಲ್ಯಾಂಡರ್ ಅನ್ನು ಒಳಗೊಂಡಿದೆ. ಕ್ಯಾಸಿನಿ ಶನಿ ಗ್ರಹವನ್ನು ಅಧ್ಯಯನ ನಡೆಸಿದರೆ, ಹ್ಯೂಜೆನ್ ಲ್ಯಾಂಡರ್ ಶನಿಯ ಉಪಗ್ರಹ ಟೈಟಾನ್ ಅಧ್ಯಯಿಸಲು ಕಳುಹಿಸಲಾಗಿತ್ತು.
- ಈ ನೌಕೆಯನ್ನು ಅಕ್ಟೋಬರ್ 15, 1997 ರಂದು ಹಾರಿಬಿಡಲಾಗಿತ್ತು. 1 ಜುಲೈ 2004 ರಲ್ಲಿ ನೌಕೆ ಶನಿಯ ಕಕ್ಷೆಯನ್ನು ಸೇರ್ಪಡೆಗೊಂಡಿತ್ತು.
- ಡಿಸೆಂಬರ್ 25, 2004 ರಲ್ಲಿ ಹ್ಯೂಜೆನ್ ಲ್ಯಾಂಡರ್ ಕ್ಯಾಸಿನಿಯಿಂದ ಬೇರ್ಪಟ್ಟು, ಶನಿಯ ಉಪಗ್ರಹವಾದ ಟೈಟಾನ್ ಮೇಲೆ ಇಳಿದಿತ್ತು. ಹೊರ ಸೌರವ್ಯೂಹದಲ್ಲಿ ಯಶಸ್ವಿಯಾಗಿ ಇಳಿದ ಬಾಹ್ಯಕಾಶ ಯೋಜನೆ ಇದಾಗಿದೆ.
ಚೀನಾದ “ಟಿಯಾಂಗಾಂಗ್-2” ಬಾಹ್ಯಕಾಶ ಪ್ರಯೋಗಾಲಯ ಕೇಂದ್ರ ಕಕ್ಷೆಗೆ ಸೇರ್ಪಡೆ
ಚೀನಾ ತನ್ನ ಪ್ರಾಯೋಗಿಕ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–2’ ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಮುಂದಿನ ದಿನಗಳಲ್ಲಿ ಬಾಹ್ಯಕಾಶದಲ್ಲಿ ಸಂಶೋಧನೆ ಕೈಗೊಳ್ಳಲು ಹಾಗೂ ಸುಸಜ್ಜಿತ ಬಾಹ್ಯಕಾಶ ಕೇಂದ್ರವನ್ನು ಸ್ಥಾಪಿಸಲು ಇದು ಸಹಕಾರಿಯಾಗಲಿದೆ. ಚೀನಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್-2F T2 ರಾಕೆಟ್ ಬಳಸಿ ಇದನ್ನು ಕಕ್ಷೆಗೆ ಸೇರಿಸಲಾಯಿತು.
ಪ್ರಮುಖಾಂಶಗಳು:
- ಟಿಯಾಂಗಾಂಗ್-2 ಚೀನಾದ ಮಹತ್ವದ ಪ್ರಾಜೆಕ್ಟ್ 921-2 ಬಾಹ್ಯಕಾಶ ಕೇಂದ್ರ ಕಾರ್ಯಕ್ರಮದ ಭಾಗವಾಗಿದೆ. ಈ ಯೋಜನೆ ಮೂಲಕ ಮೂರನೇ ಪೀಳಿಗೆಯ ಬಾಹ್ಯಕಾಶ ಕೇಂದ್ರವನ್ನು ನಿರ್ಮಿಸುವ ಗುರಿಯನ್ನು ಚೀನಾ ಹೊಂದಿದೆ.
- 8 ಟನ್ ತೂಕದ ಟಿಯಾಂಗಾಂಗ್-2 ಕೇಂದ್ರ ಚೀನಾ ಈ ಹಿಂದೆ ಕಳುಹಿಸಿದ ಟಿಯಾಂಗಾಂಗ್-1 ಕೇಂದ್ರದ ಬದಲಿಗೆ ಕಾರ್ಯನಿರ್ವಹಿಸಲಿದೆ. ಟಿಯಾಂಗಾಂಗ್-1 ಕಳೆದ ಮಾರ್ಚ್ 2016 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.
- 6 ಟನ್ ತೂಕದ ಈ ಪ್ರಯೋಗಾಲಯ ಸದ್ಯ ಭೂಮಿಯಿಂದ 380 ಕಿ.ಮೀ ಎತ್ತರದಲ್ಲಿರುವ ಕಕ್ಷೆಯಲ್ಲಿದೆ. ಮುಂದಿನ ತಿಂಗಳು ಇದು 393 ಕಿ.ಮೀ ಎತ್ತರದ ಕಕ್ಷೆಗೆ ವರ್ಗಾವಣೆಗೊಳ್ಳಲಿದೆ. ಆ ಬಳಿಕ, ಚೀನಾವು ಇಬ್ಬರು ಗಗನಯಾತ್ರಿಗಳನ್ನು ‘ಶೆಂಜೌ–11’ ನೌಕೆಯ ಮೂಲಕ ಅಂತರಿಕ್ಷಕ್ಕೆ ಕಳುಹಿಸಲಿದೆ. ಇವರಿಬ್ಬರೂ ಪ್ರಯೋಗಾಲಯದಲ್ಲಿ 30 ದಿನ ವಿವಿಧ ಪ್ರಯೋಗಗಳನ್ನು ನಡೆಸಲಿದ್ದಾರೆ.
- ‘ಟಿಯಾಂಗೊಂಗ್–2’ ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸಲಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
Sir January to August current affairs upload madi sir
hi, karunadu team please upload current affairs from january to august it would be helpful for us to compete for many competitive exams.