“ಕೆನ್-ಬೆತ್ವಾ” ಅಂತರ ರಾಜ್ಯ ನದಿ ಜೋಡಣೆಯ ಮೊದಲ ಹಂತಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮ್ಮತಿ
ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಅನಿಲ್ ಮಾಧವ್ ದಾವೆ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ರೂ 10000 ಕೋಟಿಯ ಕೆನ್-ಬೆತ್ವಾ ಯೋಜನೆ ದೇಶದ ಮೊದಲ ಅಂತರರಾಜ್ಯ ನದಿ ಜೋಡಣೆ ಯೋಜನೆಯಾಗಿದೆ.
ಪ್ರಮುಖಾಂಶಗಳು:
- ಕೆನ್-ಬೆತ್ವಾ ನದಿ ಜೋಡಣೆ ಯೋಜನೆಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಸದ್ಯ ಮೊದಲ ಹಂತಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿದೆ.
- ಅನುಮೋದನೆಯಿಂದ ಯೋಜನೆ ಕೈಗೆತ್ತಿಕೊಳ್ಳಲು ಅಗತ್ಯವಿರುವ ಅರಣ್ಯ ಮತ್ತು ಪರಿಸರ ತೆರವುಗೊಳಿಸುವ ಹಾದಿ ಸುಗಮವಾಗಲಿದೆ.
- ಯೋಜನೆಯ ಮುಖ್ಯ ಲಕ್ಷಣವೆಂದರೆ 230 ಕಿ,ಮೀ ಉದ್ದದ ಕಾಲುವೆ ಮತ್ತು ಕೆನ್ ಬೆತ್ವಾ ನದಿಗಳನ್ನು ಸಂಪರ್ಕಿಸಲು ಹಲವಾರು ಬ್ಯಾರೆಜ್ ಮತ್ತು ಅಣೆಕಟ್ಟುಗಳನ್ನು ಹೊಂದಿರಲಿದೆ. ಅದರಲ್ಲಿ ಮಕೊಡಿಯ ಮತ್ತು ದೌದನ್ ಅಣೆಕಟ್ಟಗಳು ಪ್ರಮುಖವಾಗಿವೆ.
ಯೋಜನೆ ಪ್ರಾಮುಖ್ಯತೆ:
- ಕೆನ್-ಬೆತ್ವಾ ನದಿ ಜೋಡಣೆ ಯೋಜನೆಯು ದೇಶದ ಅತ್ಯಂತ ಬರಪೀಡಿತ ಪ್ರದೇಶವೆನಿಸಿರುವ ಬುಂದೇಲಖಂಡ್ ಪ್ರಾಂತ್ಯಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವದ ಗುರಿ ಹೊಂದಿದೆ.
- ಈ ಯೋಜನೆಯು ಮಧ್ಯಪ್ರದೇಶದ 3.5 ಲಕ್ಷ ಹೆಕ್ಟೇರ್ ಮತ್ತು ಉತ್ತರ ಪ್ರದೇಶದ 14,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ.
- ಮಧ್ಯಪ್ರದೇಶದ 5 ಜಿಲ್ಲೆಗಳಾದ ಛತ್ತರಪುರ್, ರೈಸೆನ್, ಪನ್ನಾ, ಟಿಕಂಗರ್ ಮತ್ತು ವಿದಿಶ ಹಾಗೂ ಉತ್ತರ ಪ್ರದೇಶದ ಮೂರು ಜಿಲ್ಲೆಗಳಾದ ಮಹೊಬ, ಜಾನ್ಸಿ ಮತ್ತು ಬಂದ ಜಿಲ್ಲೆಗಳು ಇದರಿಂದ ಉಪಯೋಗಪಡೆಯಲಿವೆ. ಈ ಜಿಲ್ಲೆಗಳಿಗೆ ಯೋಜನೆಯಡಿ ನೀರಾವರಿ ಸೌಲಭ್ಯ ಸೇರಿದಂತೆ, ಸಾರ್ವಜನಿಕರಿಗೆ ಮತ್ತು ಕಾರ್ಖಾನೆಗಳಿಗೆ ನೀರು ಪೂರೈಕೆ ಸಹ ಮಾಡಲಾಗುವುದು.
ಪರಿಸರ ಕಾಳಜಿ:
- ಕೆನ್-ಬೆತ್ವಾ ನದಿ ಜೋಡಣೆ ಯೋಜನೆ ಸಂಪೂರ್ಣವಾಗಿ ಹುಲಿ ಸಂರಕ್ಷಣಾ ಧಾಮದಲ್ಲಿ ಕೈಗೊಳ್ಳಲಿರುವ ಮೊದಲ ನದಿ ಜೋಡಣೆ ಯೋಜನೆಯಾಗಿದೆ.
- ಈ ಯೋಜನೆಯಿಂದ ರಾಷ್ಟ್ರದ ಆದರ್ಶ ಹುಲಿ ಸಂರಕ್ಷಣಾ ಧಾಮ ಎನಿಸಿರುವ ಮಧ್ಯಪ್ರದೇಶದ ಪನ್ನ ಹುಲಿ ಸಂರಕ್ಷಣಾ ಧಾಮ ಶೇ.10% ಪ್ರದೇಶ ಮುಳುಗಡೆಗೊಳ್ಳಲಿದೆ.
- ಅಲ್ಲದೇ, ಈ ಯೋಜನೆಯ ಅನುಷ್ಟಾನಕ್ಕಾಗಿ ಸುಮಾರು 38 ಹಳ್ಳಿಗಳು ಮುಳಗಡೆಗೊಳಲ್ಲಿದ್ದು, 20,000 ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.
ವಿಶಾಖಪಟ್ಟಣ-ಚೆನ್ನೈ ಕೈಗಾರಿಕಾ ಕಾರಿಡಾರ್ ಗೆ ಏಷ್ಯಾ ಅಭಿವೃದ್ದಿ ಬ್ಯಾಂಕ್ ನೆರವು
ವಿಶಾಖಪಟ್ಟಣ ಮತ್ತು ಚೆನ್ನೈ ನಡುವೆ ಸ್ಥಾಪನೆಯಾಗಲಿರುವ ದೇಶದ ಮೊದಲ ಕರಾವಳಿ ಕೈಗಾರಿಕಾ ಕಾರಿಡಾರ್ಗೆ $631 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಲು ಏಷ್ಯಾ ಅಭಿವೃದ್ದಿ ಬ್ಯಾಂಕ್ ಒಪ್ಪಿಗೆ ನೀಡಿದೆ. ಈ ಉದ್ದೇಶಿತ ಕಾರಿಡಾರ್ ನ ಉದ್ದ 2,500 ಕಿ.ಮೀ ಇದ್ದು, ಈ ಪೈಕಿ 800 ಕಿ.ಮೀ ಅಭಿವೃದ್ದಿಪಡಿಸಲು ಈ ಆರ್ಥಿಕ ನೆರವನ್ನು ಉಪಯೋಗಿಸಲಾಗುವುದು.
ಪ್ರಮುಖಾಂಶಗಳು:
- ಈ ಕರಾವಳಿ ಕೈಗಾರಿಕಾ ಕಾರಿಡಾರ್ ನಿಂದ ದೇಶದ ಪೂರ್ವ ಕರಾವಳಿಯ ಅಭಿವೃದ್ದಿಗೆ ಉತ್ತೇಜನ ದೊರೆಯಲಿದೆ. ಇದರೊಂದಿಗೆ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ವಾಣಿಜ್ಯ ಸಂಪರ್ಕ ಬೆಸೆಯುವಲ್ಲಿ ಮಹತ್ವದ ಪಾತ್ರವಹಿಸಲಿದೆ.
- ಈ ಯೋಜನೆಯ ಅಂದಾಜು ಮೊತ್ತ $ 846 ಮಿಲಿಯನ್ ಡಾಲರ್ ಆಗಿದ್ದು, 2031ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಉಳಿದ $ 215 ಮಿಲಿಯನ್ ಡಾಲರ್ ಮೊತ್ತವನ್ನ ಆಂಧ್ರಪ್ರದೇಶ ಭರಿಸಲಿದೆ.
- ಏಷ್ಯಾ ಅಭಿವೃದ್ದಿ ಬ್ಯಾಂಕ್ ನೀಡಿರುವ ಆರ್ಥಿಕ ನೆರವಿನಿಂದ ಅತ್ಯಾಧುನಿಕ ಕೈಗಾರಿಕ ಕ್ಲಸ್ಟರ್ಗಳು, ರಸ್ತೆಗಳು, ಸುಗಮ ಸಾರಿಗೆ ವ್ಯವಸ್ಥೆ ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗುವುದು.
- ಹೊಸದಾಗಿ ನಾಲ್ಕು ಪ್ರದೇಶಗಳಲ್ಲಿ ಅಂದರೆ ವಿಶಾಖಪಟ್ಟಣ, ಅಮರಾವತಿ, ಕಾಕಿನಾಡ ಮತ್ತು ಯೆರ್ಪೆಡು-ಶ್ರಿಕಾಳಹಸ್ತಿ ಗಳಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ದಿಪಡಿಸಲಾಗುತ್ತದೆ.
ಕಾರಿಡಾರ್ ಬಗ್ಗೆ:
- ಈ ಕೈಗಾರಿಕಾ ಕಾರಿಡಾರ್ ಪೂರ್ವ ಕರಾವಳಿ ತೀರಾದಲ್ಲಿರುವ ನಾಲ್ಕು ಆರ್ಥಿಕ ಕೇಂದ್ರ ಮತ್ತು ಒಂಬತ್ತು ಕೈಗಾರಿಕಾ ಸಮೂಹಗಳನ್ನ ಸಂಪರ್ಕಿಸಲಿದೆ.
- ಉದ್ದೇಶಿತ ಯೋಜನೆ ಪೂರ್ಣಗೊಂಡ ನಂತರ ಈ ಕಾರಿಡಾರ್ ಅನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ತಮಿಳುನಾಡಿನ ಟ್ಯುಟಿಕೂರಿನ್ ವರೆಗೆ ವಿಸ್ತರಿಸಲಾಗುವುದು.
ಮೂರನೇ ಹಂತದ ಸ್ಮಾರ್ಟ್ ಸಿಟಿ ಪಟ್ಟಿ ಬಿಡುಗಡೆ: ಕರ್ನಾಟಕ ನಾಲ್ಕು ನಗರಗಳು ಸೇರಿ ಒಟ್ಟು 27 ನಗರಗಳಿಗೆ ಸ್ಥಾನ
ಮೂರನೇ ಹಂತದ ಸ್ಮಾರ್ಟ್ ನಗರ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಬಿಡುಗಡೆಗೊಳಿಸಿದ್ದು. 12 ರಾಜ್ಯಗಳ 27 ನಗರಗಳು ಮೂರನೇ ಹಂತದ ಸ್ಮಾರ್ಟ್ ನಗರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿವೆ. ಇತ್ತೀಚೆಗೆ ನಡೆಸಲಾಗಿದ್ದ ಸ್ಮಾರ್ಟ್ ನಗರ ಚಾಲೆಂಜ್ ಸ್ಪರ್ಧೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ನಗರಗಳನ್ನು ಆಯ್ಕೆಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಒಟ್ಟು 67 ನಗರಗಳು ಭಾಗವಹಿಸಿದ್ದವು, ಆ ಪೈಕಿ 27 ನಗರಗಳನ್ನು ಆಯ್ಕೆಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಪಂಜಾಬ್ ನ ಅಮೃತಸರ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಮಹಾರಾಷ್ಟ್ರದ ಐದು ನಗರಗಳು ಈ ಬಾರಿ ಆಯ್ಕೆಯಾಗಿವೆ.
- ಕರ್ನಾಟಕ ಮತ್ತು ತಮಿಳುನಾಡಿನ ನಾಲ್ಕು ನಗರಗಳು ಆಯ್ಕೆಯಾಗಿವೆ.
- ಉತ್ತರಪ್ರದೇಶ, ಪಂಜಾಬ್ ಮತ್ತು ರಾಜಸ್ತಾನದ ತಲಾ ಮೂರು ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
- ಸಿಕ್ಕಿಂ ಮತ್ತು ನಾಗಲ್ಯಾಂಡ್ ರಾಜ್ಯಗಳಿಂದ ತಲಾ ಒಂದು ನಗರಗಳನ್ನು ಆಯ್ಕೆಮಾಡಲಾಗಿದೆ.
- ಮೊದಲ ಹಂತದಲ್ಲಿ 20 ನಗರಗಳು ಮತ್ತು ಎರಡನೇ ಬಾರಿ 13 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದವು.
ಕರ್ನಾಟಕದ ನಗರಗಳು:
- ಮೂರನೇ ಹಂತದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಕರ್ನಾಟಕದ ಮಂಗಳೂರು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ ಮತ್ತು ತುಮಕೂರು ಸ್ಥಾನ ಪಡೆದಿವೆ.