ಎಂಟು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಇದೇ ಮೊದಲ ಬಾರಿಕೆ ಒಂದೇ ರಾಕೆಟ್ ನಲ್ಲಿ ಎಂಟು ಉಪಗ್ರಹಗಳನ್ನು ಎರಡು ಕಕ್ಷೆಗೆ ಸೇರಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ PSLV-C35 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಪಿಎಸ್ಎಲ್ವಿ ಇತಿಹಾಸದಲ್ಲೇ ಉಡಾವಣೆ ಮತ್ತು ಸೇರ್ಪಡೆಗೊಳಿಸುವ ಕಾರ್ಯವು ಅತ್ಯಂತ ಸುದೀರ್ಘ ಅವಧಿಯದ್ದಾಗಿದೆ.
ಪ್ರಮುಖಾಂಶಗಳು:
- ಎಂಟು ಉಪಗ್ರಹಗಳ ಪೈಕಿ ಭಾರತದ ಮೂರು ಉಪಗ್ರಹಗಳು, ಅಲ್ಜೇರಿಯಾದ ಮೂರು, ಕೆನಡಾ ಮತ್ತು ಅಮೆರಿಕಾದ ಒಂದು ಉಪಗ್ರಹಗಳು ಸೇರಿವೆ.
- ಸ್ಕಾಟ್ ಸ್ಯಾಟ್ (SCATSAT-1): 371 ಕೆ.ಜಿ ತೂಕದ ಸ್ಕಾಟ್ ಸ್ಯಾಟ್ ಹವಾಮಾನ ಅಧ್ಯಯನ ನಡೆಸುವ ಉಪಗ್ರಹವಾಗಿದೆ. ಭೂಮಿಯಿಂದ 730 ಕಿ.ಮೀ ಎತ್ತರದ ಕಕ್ಷೆಯಲ್ಲಿ ಈ ಉಪಗ್ರಹ ಕಾರ್ಯನಿರ್ವಹಿಸಲಿದೆ. ಹವಾಮಾನ, ಚಂಡಮಾರುತ ಕುರಿತಾದ ಮಾಹಿತಿಯನ್ನು ಈ ಉಪಗ್ರಹ ರವಾನಿಸಲಿದ್ದು, ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ.
- ಪ್ರಥಮ್: ಹತ್ತು ಕೆ.ಜಿ ತೂಕವಿರುವ ಈ ಉಪಗ್ರಹವನ್ನು ಐಐಟಿ ಬಾಂಬೆ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿದ್ದಾರೆ. ಈ ಉಪಗ್ರಹವು ಬಾಹ್ಯಕಾಶದಲ್ಲಿ ಒಟ್ಟು ಎಲೆಕ್ಟ್ರಾನ್ ಗಣನೆಯನ್ನು ಅಧ್ಯಯನ ನಡೆಸಲಿದೆ.
- PISAT: ಬೆಂಗಳೂರಿನ PES ಕಾಲೇಜಿನ ವಿದ್ಯಾರ್ಥಿಗಳು ಈ ಉಪಗ್ರಹವನ್ನ ವಿನ್ಯಾಸಿಗೊಳಿಸಿದ್ದಾರೆ. ಇದರ ತೂಕ 5.25 ಕೆ.ಜಿ. ಭೂಮಿಯ ಚಿತ್ರವನ್ನು ತೆಗೆದು ಕಳುಹಿಸುವ ಕಾರ್ಯವನ್ನು ಈ ಉಪಗ್ರಹಮಾಡಲಿದೆ.
- ಅಲ್ಜೇರಿಯಾದ ಮೂರು ಉಪಗ್ರಹಗಳು: Alsat 1B (103 ಕೆ. ಜಿ), Alsat 2B (110 ಕೆ. ಜಿ), Alsat Nano (7 ಕೆ.ಜಿ) ಉಪಗ್ರಹಗಳನ್ನು ರಿಮೋಟ್ ಸೆನ್ಸಿಂಗ್, ಭೂ ವೀಕ್ಷಣೆ ಅಧ್ಯಯನಕ್ಕೆ ಬಳಸಲಾಗುವುದು.
- ಫಾಥ್ ಫೈಂಡರ್ (Pathfinder): ಇದು ಅಮೆರಿಕಾದ ಉಪಗ್ರಹವಾಗಿದೆ. ಇದರ ತೂಕ 44 ಕೆ.ಜಿ. ಹೆಚ್ಚು ರೆಸಲ್ಯೂಶನ್ ಹೊಂದಿರುವ ಮೈಕ್ರೊಸ್ಯಾಟಲೈಟ್ ಇದಾಗಿದೆ.
- NLS-19: ಟೊರೊಂಟೊ ವಿಶ್ವವಿದ್ಯಾಲಯ ಅಭಿವೃದ್ದಿಪಡಿಸಿರುವ ಕೆನಡಾದ ಉಪಗ್ರಹ. ಬಾಹ್ಯಕಾಶದಲ್ಲಿರುವ ಭಗ್ನವಶೇಷಗಳನ್ನು ಕಡಿಮೆ ಮಾಡುವ ಸಲುವಾಗಿ ಅಧ್ಯಯನ ನಡೆಸಲು ಬಳಸಲಾಗುವುದು.
ಕರ್ನಾಟಕ ಸಾಹಿತ್ಯ ಅಕಾಡೆಮಿ 2015ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2015ನೇ ಸಾಲಿನ ಪ್ರಶಸ್ತಿಗೆ ಐವರು ಸಾಹಿತಿಗಳನ್ನು ಆಯ್ಕೆಮಾಡಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೋಮವಾರ ಪತ್ರಿಕಾಗಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಳಿಸಿದರು.
ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಿತಿಗಳು:
- ಡಾ. ಕೃಷ್ಣಮೂರ್ತಿ ಹನೂರು
- ಡಾ. ಎಚ್.ಎಸ್. ಶಿವಪ್ರಕಾಶ್
- ಡಾ. ಎಲ್. ಹನುಮಂತಯ್ಯ,
- ನೇಮಿಚಂದ್ರ ಮತ್ತು ಡಾ.ಎಚ್. ನಾಗವೇಣಿ
- ಪ್ರಶಸ್ತಿಯು ರೂ 50 ಸಾವಿರ ನಗದು ಮತ್ತು ಫಲಕ ಒಳಗೊಂಡಿದ್ದು, ಅಕ್ಟೋಬರ್ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಾಲ್ವರು ಮಹನೀಯರಿಗೆ 2016 ನೇ ಸಾಲಿನ ‘ಚುಂಚಶ್ರೀ’ ಪ್ರಶಸ್ತಿ ವಿತರಣೆ
ಆದಿಚುಂಚನಗಿರಿ ಮಠದ ವತಿಯಿಂದ ನೀಡಲಾಗುವ ಚುಂಚಶ್ರೀ ಪ್ರಶಸ್ತಿಯನ್ನು ಈ ಬಾರಿ ನಾಲ್ಕು ಗಣ್ಯರಿಗೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಾಲ್ವರು ಮಹನೀಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಪಡೆದವರು:
- ಸಂಗೀತ ನಿರ್ದೇಶಕ ಹಂಸಲೇಖ
- ಸಾಹಿತಿ ಡಾ.ಸಿದ್ಧಲಿಂಗಯ್ಯ
- ಸಾಲು ಮರದ ತಿಮ್ಮಕ್ಕ
- ಆಂಧ್ರಪ್ರದೇಶದ ಉದ್ಯಮಿ ಕೆ.ಸುಧಾಕರರೆಡ್ಡಿ (ಸಮಾಜ ಸೇವೆಗಾಗಿ).
ಪ್ರಶಸ್ತಿಯ ಬಗ್ಗೆ:
- 1999ರಿಂದ ಚುಂಚಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆದಿಚುಂಚನಗಿರಿ ಮಠದ ಅಂದಿನ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮೀಜಿ ಅವರು ‘ಚುಂಚಶ್ರೀ’ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದ್ದರು.
- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗೌರವಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
- ಪ್ರಶಸ್ತಿಯು ರೂ 50 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ
- ಪ್ರತಿ ವರ್ಷ ಈ ಪ್ರಶಸ್ತಿಯನ್ನು ಐದು ಜನರಿಗೆ ನೀಡಲಾಗುತ್ತಿದೆ.
ಅರಮನೆ ನಗರ ಮೈಸೂರಿಗೆ “ಬಯಲು ಶೌಚ ಮುಕ್ತ ನಗರ” ಹಿರಿಮೆ
ಅರಮನೆ ನಗರ ಮೈಸೂರಿ ಈಗ ಬಯಲು ಶೌಚ ಮುಕ್ತ ನಗರವೆಂಬ ಗೌರವಕ್ಕೆ ಪಾತ್ರವಾಗಿದೆ. ಸ್ವಚ್ಚ ಭಾರತ ಸಮೀಕ್ಷೆಯಲ್ಲಿ ಈಗಾಗಲೇ ಮೈಸೂರು ಸತತವಾಗಿ ಎರಡು ಬಾರಿ ದೇಶದ ಅತ್ಯಂತ ಸ್ವಚ್ಚ ನಗರವೆಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದು, ಈಗ ಬಯಲು ಶೌಚ ಮುಕ್ತ ನಗರವೆಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.
- 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ದಾಟಿದ ದೇಶದ ನಗರಗಳ ಪೈಕಿ ಬುಯಲು ಶೌಚ ಮುಕ್ತ ಮೊದಲ ನಗರ ಮೈಸೂರು.
- ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಭಾರತೀಯ ಗುಣಮಟ್ಟ ಮಂಡಳಿಯು (ಕ್ಯೂಸಿಐ) 75 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೈಸೂರು ಈ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಮೈಸೂರು ಜೊತೆ ವಿಜಯವಾಡ ಕೂಡ ಈ ಖ್ಯಾತಿ ಪಡೆಯಲು ಸ್ಪರ್ಧೆಯಲ್ಲಿತ್ತು. ಆದರೆ ವಿಜಯವಾಡವನ್ನು ಹಿಂದಿಕ್ಕಿ ಮೈಸೂರು ಗೌರವಕ್ಕೆ ಪಾತ್ರವಾಗಿದೆ.
- ಮೈಸೂರು ನಗರದಲ್ಲಿ ಶೇ 99ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ. ನಗರದಲ್ಲಿರುವ 28 ಸ್ಲಂಗಳಲ್ಲಿ ವಾಸವಿರುವ ಕುಟುಂಬಗಳು ಶೇ 100% ಶೌಚಾಲಯವನ್ನು ಹೊಂದಿವೆ.