ಸ್ವಚ್ಚ ಭಾರತ ಕಿರು ಚಲನಚಿತ್ರೋತ್ಸವದಲ್ಲಿ “ಮುರ್ಗ”ಗೆ ಪ್ರಥಮ ಬಹುಮಾನ

ಸ್ವಚ್ಚ ಭಾರತ ಆಂದೋಲದ ಅಂಗವಾಗಿ ನಡೆದ ಕಿರು ಚಲನ ಚಿತ್ರೋತ್ಸವದಲ್ಲಿ “ಮುರ್ಗ” ಚಿತ್ರ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ. ಮುರ್ಗ ಚಿತ್ರವನ್ನು ಮಹಾರಾಷ್ಟ್ರ ಮೂಲದ ನಿರ್ದೇಶಕ ಕಾತ್ಯಾಯನ್ ಶಿವಪುರಿ ನಿರ್ದೇಶಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಶಿವಪುರಿ ಅವರಿಗೆ ಪ್ರಮಾಣಪತ್ರ ಮತ್ತು ರೂ 10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದರು.ನಾಗರಿಕರು ಮತ್ತು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಕಾರಣ ಹೇಗೆ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಎಂಬ ವಸ್ತು ವಿಷಯ ಆಧರಿಸಿ ‘ಮುರ್ಗ’ ಚಲನಚಿತ್ರ ರೂಪುಗೊಂಡಿತ್ತು.

  • ಸ್ವಚ್ಚ ಭಾರತ ಕಿರು ಚಲನಚಿತ್ರೋತ್ಸವವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರವಾಗಿ ರಾಷ್ಟ್ರೀಯ ಸಿನಿಮಾ ಅಭಿವೃದ್ದಿ ಕಾರ್ಪೋರೇಷನ್ ಹಮ್ಮಿಕೊಂಡಿತ್ತು.
  • ಈ ಚಲನಚಿತ್ರೋತ್ಸವದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸ್ವಚ್ಚ ಭಾರತ ಅಭಿಯಾನದ ಕುರಿತು ಮೂರು ನಿಮಿಷಗಳ ಕಿರು ಚಿತ್ರಗಳನ್ನು ಪ್ರದರ್ಶಿಸಬೇಕಿತ್ತು.
  • ಚಲನ ಚಿತ್ರೋತ್ಸವದಲ್ಲಿ ಒಟ್ಟು 4,346 ಜನರು ಸ್ಪರ್ಧಿಸಿದ್ದರು. ಈ ಪೈಕಿ 20 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿತ್ತು. ನಿರ್ಮಾಪಕಿ ವಾಣಿ ತ್ರಿಪಾಠಿ, ನಿರ್ದೇಶಕಿ ಗೀತಾಂಜಲಿ ರಾವ್ ಮತ್ತು ಚಲನಚಿತ್ರ ಪ್ರಚಾರ ಪ್ರಹ್ಲಾದ್ ಕಾಕರ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
  • ಚಲನಚಿತ್ರ ನಿರ್ದೇಶಕರಾದ ಸುಧಾಂಶು ಶರ್ಮಾ , ಕೆ.ವಿ.ಕೆ. ಕುಮಾರ್ ಮತ್ತು ಅಕ್ಷಯ್ ದನವಾಲೆ ಅವರು ದ್ವಿತೀಯ ಬಹುಮಾನಗಳನ್ನು ಹಂಚಿಕೊಂಡಿದ್ದಾರೆ. ಇವರು ಕ್ರಮವಾಗಿ ‘ನಹನಾ ದೂತ್’, ‘ಚೆಂಬುಕು ಮೂಡಿಂದಿ’, ‘ಸರ್ಕರ್ಮಿ ರತಿ ವಾಧೂ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಇತರೆ ಆರು ಜನರು ತೃತೀಯ ಬಹುಮಾನವನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಜೈವಿಕ ಆರ್ಥಿಕತೆ ಮಿಷನ್ (The National Mission on Bioeconomy)ಗೆ ಶಿಲ್ಲಾಂಗ್ ನಲ್ಲಿ ಚಾಲನೆ

ಮೇಘಾಲಯದ ಶಿಲ್ಲಾಂಗ್ ನಲ್ಲಿ ರಾಷ್ಟ್ರೀಯ ಜೈವಿಕ ಆರ್ಥಿಕತೆ ಮಿಷನ್ ಗೆ ಚಾಲನೆ ನೀಡಲಾಯಿತು. ಇನ್ಸ್ಟಿಟ್ಯೂಟ್ ಆಫ್ ಬಯೋರಿಸೋರ್ಸ್ಸ್ ಅಂಡ್ ಸಸ್ಟೈನಬಲ್ ಡೆವೆಲಪ್ಮೆಂಟ್ (IBSD) ಈ ಮಿಷನ್ ಅನ್ನು ಜಾರಿಗೆ ತಂದಿದೆ. ಜೈವಿಕ ಸಂಪನ್ಮೂಲಗಳ ಸದ್ಬಳಕೆ ಮಾಡಲು ಆಗ್ನೇಯ ಏಷ್ಯಾದಲ್ಲೇ ಇದೊಂದು ವಿಶಿಷ್ಠ ರೀತಿಯ ಕಾರ್ಯಕ್ರಮವಾಗಿದೆ.

ಪ್ರಮುಖಾಂಶಗಳು:

  • ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಆರ್ಥಿಕತೆಯನ್ನು ಸಧೃಡಪಡಿಸುವುದು ಇದರ ಮುಖ್ಯ ಗುರಿ. ಜೊತೆಗೆ ಗ್ರಾಮ ಮಟ್ಟದಲ್ಲಿ ಉದ್ಯೋಗ ಸೃಜನೆ ಮಾಡುವುದು ಸಹ ಆಗಿದೆ.
  • ಜ್ಞಾನ ಆಧಾರಿತ ವಿಧಾನಗಳ ಮೂಲಕ ನವೀಕರಿಸಬಹುದಾದ ಜೈವಿಕ ಮೂಲಗಳನ್ನು ಆಹಾರ, ಜೈವಿಕ ಇಂಧನ ಮತ್ತು ಜೈವಿಕ ಆಧಾರಿತ ಉತ್ಪನ್ನಗಳನ್ನಾಗಿ ಸುಸ್ಥಿರವಾಗಿ ಬಳಕೆ ಮಾಡಲು ಉತ್ತೇಜಿಸುವುದಾಗಿದೆ.
  • ಆಹಾರ, ಆರೋಗ್ಯ, ನೀರು, ಇಂಧನ, ಹವಾಮಾನ ಬದಲಾವಣೆ ಸಂಬಂಧಿಸಿದ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಸೃಷ್ಟಿಸಲು ಮತ್ತು ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಲಾಭವನ್ನು ತಲುಪಿಸಲು ಇದು ಸಹಾಯವಾಗಲಿದೆ.
  • ಜೈವಿಕ ಆರ್ಥಿಕತೆ ಒಂದು ಹೊಸ ಪರಿಕಲ್ಪನೆಯಾಗಿದ್ದು, ಅಮೆರಿಕಾ, ಕೆನಡಾ ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಈಗಾಗಲೇ ಈ ಕ್ಷೇತ್ರದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿವೆ. ಭಾರತದಲ್ಲಿ ಜೈವಿಕ ಆರ್ಥಿಕತೆಗೆ ಸಾಕಷ್ಟು ಅವಕಾಶಗಳಿದ್ದು, ಭವಿಷ್ಯದಲ್ಲಿ ಬಹಳಷ್ಟು ಬೇಡಿಕೆ ಬರಲಿದೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸ್ವಚ್ಚ ಧಾರ್ಮಿಕ ಸ್ಥಳ ಪ್ರಶಸ್ತಿ

ಕರ್ನಾಟಕದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಈಗ ದೇಶದ ಸ್ವಚ್ಚ ಧಾರ್ಮಿಕ ಸ್ಥಳವೆಂಬ ಹಿರಿಮೆಗೆ ಪಾತ್ರವಾಗಿದೆ. ಇಂಡಿಯಾ ಟುಡೆ ಇಂಗ್ಲಿಷ್‌ ಪತ್ರಿಕಾ ಬಳಗ ರಾಷ್ಟ್ರಾದ್ಯಂತ ಸ್ವಚ್ಛತೆಯನ್ನು ಕೈಗೊಂಡ ವಿವಿಧ ನಗರಗಳನ್ನು ವರ್ಗೀಕರಿಸಿ ಮಾಡಿದ ಸರ್ವೇಕ್ಷಣೆಯಲ್ಲಿ ರಾಷ್ಟ್ರದ ಧಾರ್ಮಿಕ ನಗರಗಳ ಪೈಕಿ ಧರ್ಮಸ್ಥಳವನ್ನು ಅತ್ಯಂತ “ಸ್ವಚ್ಛ ಧಾರ್ಮಿಕ ನಗರ’ವೆಂದು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

  • ಇಂಡಿಯಾ ಟುಡೆ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ “ಸಫಾಯಿಗಿರಿ ಪ್ರಶಸ್ತಿ’ಯನ್ನು
    ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ನೀಡಲಾಗಿದೆ.
  • ಈ ಪ್ರಶಸ್ತಿಯನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರ ಪರ ಅವರ ಸಹೋದರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಅಕ್ಟೋಬರ್ 2ರಂದು ಗಾಂಧೀ ಜಯಂತಿಯಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಂದ ಪಡೆದುಕೊಂಡರು.
  • ಅನ್ನಸಂತರ್ಪಣೆಗೆ ಬಳಸುವ ತಟ್ಟೆಗಳನ್ನು ಯಂತ್ರಗಳಿಂದ ಸ್ವಚ್ಚಗೊಳಿಸುವುದು ಸೇರಿದಂತೆ ಸ್ವಚ್ಚತೆ ಕಾಪಾಡಲು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ 3.5 ಲಕ್ಷ ಲೀ. ಸಾಮರ್ಥ್ಯದ ತ್ಯಾಜ್ಯ ಜಲ ಶುದ್ಧೀಕರಣ ಘಟಕ ಆರಂಭಿಸಲಾಗಿತ್ತು.

21ನೇ ಕಾನೂನು ಆಯೋಗದ ಪೂರ್ಣಾವಧಿ ಸದಸ್ಯರಾಗಿ ಎಸ್ ಸಿವಕುಮಾರ್ ನೇಮಕ

21ನೇ ಭಾರತ ಕಾನೂನು ಆಯೋಗದ ಪೂರ್ಣಾವಧಿ ಸದಸ್ಯರಾಗಿ ಎಸ್ ಶಿವಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇರಳ ಮೂಲದವರಾದ ಎಸ್ ಸಿವಕುಮಾರ್ ಅವರು ಇಂಡಿಯನ್ ಲಾ ಇನ್ಸ್ ಟಿಟ್ಯೂಟ್, ದೆಹಲಿಯಲ್ಲಿ ಪ್ರಾಧ್ಯಪಕರಾಗಿದ್ದಾರೆ. ಕಾನೂನು ಕುರಿತಾದ ಹಲವಾರು ಪುಸ್ತಕಗಳನ್ನು ಇವರು ಬರೆದಿರುವರು. ಆಡಳಿತಾತ್ಮಕ ಕಾನೂನು ಮತ್ತು ಮಾಧ್ಯಮ ಕಾನೂನಿನಲ್ಲಿ ಪರಿಣಿತಿ ಹೊಂದಿರುವ ಇವರಿಗೆ 2008ರಲ್ಲಿ ರಾಷ್ಟ್ರೀಯ ಕಾನೂನು ಪ್ರಶಸ್ತಿ ಸಂದಿದೆ.

21ನೇ ಕಾನೂನು ಆಯೋಗದ ಬಗ್ಗೆ:

  • ಕೇಂದ್ರ ಸರ್ಕಾರ 21ನೇ ಭಾರತ ಕಾನೂನು ಆಯೋಗವನ್ನು 1ನೇ ಸೆಪ್ಟೆಂಬರ್, 2015 ರಿಂದ 31ನೇ ಆಗಸ್ಟ್ 2018ರ ತನಕ ಮೂರು ವರ್ಷ ಅವಧಿಗೆ ರಚಿಸಿದೆ.
  • ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಬಲ್ಬೀರ್ ಸಿಂಗ್ ಚೌಹಣ್ ರವರು 21ನೇ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ.
  • ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ನ್ಯಾಯ ವ್ಯವಸ್ಥೆ ಮತ್ತು ಜಾಮೀನು ಕಾನೂನು ವಿಮರ್ಶೆ ಮಾಡಿ ಏಕರೂಪ ವ್ಯವಸ್ಥೆಯನ್ನು ಜಾರಿಗೆ ತರಲು ಶಿಫಾರಸ್ಸು ಮಾಡುವುದು ಈ ಆಯೋಗದ ಪ್ರಮುಖ ಜವಾಬ್ದಾರಿಗಳಾಗಿವೆ. ಸಮಾನ ನಾಗರೀಕ ಸಂಹಿತೆ ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆ ಹಾಗೂ ಹಳೆಯ ಕಾನೂನುಗಳನ್ನು ರದ್ದುಪಡಿಸುವ ಬಗ್ಗೆಯು ಶಿಫಾರಸ್ಸುಗಳನ್ನು ಆಯೋಗ ಮಾಡಲಿದೆ.

ಭಾರತ ಕಾನೂನು ಆಯೋಗ:

  • ಭಾರತ ಕಾನೂನು ಆಯೋಗ ಶಾಸನಬದ್ದವಲ್ಲದ ಮತ್ತು ಸಂವಿಧಾನಿಕವಲ್ಲದ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ನೇಮಕ ಮಾಡುತ್ತದೆ.
  • ಪ್ರಪ್ರಥಮ ಭಾರತ ಕಾನೂನು ಆಯೋಗವನ್ನು 1955ರಲ್ಲಿ ಸ್ಥಾಪಿಸಲಾಗಿದ್ದು, ಅನಂತರ ಪ್ರತಿ ಮೂರು ವರ್ಷಕ್ಕೊಮ್ಮೆ ಆಯೋಗಗಳನ್ನು ರಚಿಸಲಾಗಿದೆ.
  • ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಅಥವಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶರು ಕಾನೂನು ಆಯೋಗದ ಅಧ್ಯಕ್ಷರಾಗಿರುತ್ತಾರೆ.
  • ದೇಶದಲ್ಲಿ ಕಾನೂನಿನ ಪ್ರಗತಿಪರ ಅಭಿವೃದ್ದಿಗಾಗಿ 262 ಪ್ರಮುಖ ಶಿಫಾರಸ್ಸುಗಳನ್ನು ವಿವಿಧ ಕಾನೂನು ಆಯೋಗಗಳು ಇದುವರೆಗೂ ಮಾಡಿವೆ.

ಹಣಕಾಸು ನೀತಿ ಸಮಿತಿ (ಎಂಪಿಸಿ) ರಚನೆ ಅಧಿಕೃತ ಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಆರು ಜನ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ-1934ರ 45ZB ಪ್ರಕರಣದಡಿ ಗೊತ್ತುಪಡಿಸಲಾದ ಅಧಿಕಾರವನ್ನು ಬಳಸಿ ಕೇಂದ್ರ ಹಣಕಾಸು ಸಚಿವರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಹಣಕಾಸು ನೀತಿ ಸಮಿತಿ:

  • ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಸಮಿತಿಯ ಅಧ್ಯಕ್ಷರು.
  • ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯೂಟಿ ಗವರ್ನರ್ ಆರ್ ಗಾಂಧಿ ಸಮಿತಿಯ ಸದಸ್ಯರು
  • ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ “ಮೈಕಲ್ ಪಟ್ರ” ಸಮಿತಿಯ ಸದಸ್ಯರು
  • ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಪ್ರಾಧ್ಯಪಕರಾದ ಚೇತನ್ ಘಾಟೆ ಸಮಿತಿಯ ಸದಸ್ಯರು
  • ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್, ನಿರ್ದೇಶಕರಾದ ಪ್ರೊ.ಪಮಿ ದುವ ಸಮಿತಿಯ ಸದಸ್ಯರು
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್, ಅಹಮದಬಾದ್ ಪ್ರಾಧ್ಯಪಕರಾದ ರವೀಂದ್ರ ಎಚ್ ದೊಲಕಿಯಾ ಸಮಿತಿಯ ಸದಸ್ಯರು.

ಹಣಕಾಸು ನೀತಿ ಸಮಿತಿಯ ಬಗ್ಗೆ:

  • ಆರು ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯು ಅಲ್ಪಾವಧಿ ಬಡ್ಡಿ ದರವನ್ನು ನಿಗದಿಪಡಿಸಿ ಹಣದುಬ್ಬರವನ್ನು ನಿಗದಿಪಡಿಸಿದ ಗುರಿ ಮಟ್ಟಕ್ಕೆ ನಿಯಂತ್ರಿಸುವ ಹೊಣೆಗಾರಿಕೆಯನ್ನು ಹೊಂದಿದೆ.
  • ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಹಣಕಾಸು ನೀತಿ ಸಮಿತಿ ಸಭೆ ನಡೆಸಲಿದ್ದು, ಸಭೆಯ ನಂತರ ತನ್ನ ನಿರ್ಧಾರಗಳನ್ನು ಪ್ರಕಟಿಸಲಿದೆ.
  • ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯನ್ನು ಹಣಕಾಸು ಕಾಯಿದೆ-2016ರಡಿ ತಿದ್ದುಪಡಿ ತರುವ ಮೂಲಕ ಹಣಕಾಸು ನೀತಿ ಸಮಿತಿಗೆ ಶಾಸನಬದ್ದ ಮತ್ತು ಸಾಂಸ್ಥಿಕ ಚೌಕಟ್ಟನ್ನು ಒದಗಿಸಲಾಗಿದೆ.

5 Thoughts to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-2, 2016”

  1. sir please complete current affairs monthly wise pdf please

  2. sir please complete current affairs monthly wise pdf please

  3. full pdf current affairs sir

  4. H R Vastrad

    sir idarallina matter useful ive. adre idannu copy maadikolluvante madi. yakendare yellarigu computernalli thumba hottu search maaduva saamarthya iruvudilla. copy maadikondu print tegedukollali anukoolavaaguvante ee websitennu punarsthaapane maadabekendu vinanti.

  5. Bharat chavan

    Sir janevary 2016 rind illiy vareg current affairs appllod madi

Leave a Comment

This site uses Akismet to reduce spam. Learn how your comment data is processed.