2015ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ
ಕರ್ನಾಟಕ ರಾಜ್ಯ ಸರ್ಕಾರ 2015ನೇ ಸಾಲಿನ ‘ಕ್ರೀಡಾ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಕ್ರಿಡಾಪಟುಗಳ ಪ್ರಕಟಿಸಿದೆ. ಈ ಬಾರಿ ರಾಜ್ಯದ 16 ಕ್ರೀಡಾ ಪಟುಗಳಿಗೆ 2015ನೇ ಸಾಲಿನ ‘ಏಕಲವ್ಯ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಏಕಲವ್ಯ ಪುರಸ್ಕೃತರು
ದಾಮಿನಿ ಕೆ.ಗೌಡ (ಈಜು) – ಬೆಂಗಳೂರು, ವಿದ್ಯಾ ಪಿಳ್ಳೈ(ಬಿಲಿಯರ್ಡ್ಸ್) – ಬೆಂಗಳೂರು, ಪವನ್ ಶೆಟ್ಟಿ (ಬಾಡಿಬಿಲ್ಡಿಂಗ್)– ಬೆಂಗಳೂರು, ನಿತಿನ್ ತಿಮ್ಮಯ್ಯ (ಹಾಕಿ)- ಬೆಂಗಳೂರು, ರಾಜಗುರು ಎಸ್.(ಕಬಡ್ಡಿ- ಬೆಂಗಳೂರು, ಕೃಷ್ಣ ಎ.ನಾಯ್ಕೋಡಿ( ಸೈಕ್ಲಿಂಗ್)- ವಿಜಯಪುರ, ಅರವಿಂದ ಎ.(ಬಾಸ್ಕೆಟ್ಬಾಲ್)- ಬೆಂಗಳೂರು, ಅರ್ಪಿತಾ ಎಂ.(ಅಥ್ಲೆಟಿಕ್ಸ್- ಶಿವಮೊಗ್ಗ, ಮಹಮದ್ ರಫಿಕ್ ಹೋಳಿ (ಕುಸ್ತಿ)- ಧಾರವಾಡ, ಮೇಘನಾ ಎಂ. ಸಜ್ಜನರ್(ಶೂಟಿಂಗ್)- ಬೆಂಗಳೂರು, ಧೃತಿ ತಾತಾಚಾರ್ ವೇಣುಗೋಪಾಲ್ (ಟೆನಿಸ್) – ಮೈಸೂರು, ಅನುಪ್ ಡಿಕೋಸ್ಟಾ (ವಾಲಿಬಾಲ್)- ಉಡುಪಿ, ಜಿ.ಎಂ. ನಿಶ್ಚಿತ(ಬ್ಯಾಡ್ಮಿಂಟನ್)- ಬೆಂಗಳೂರು, ಶಾವದ್ ಜೆ.ಎಂ.(ಪ್ಯಾರಾಥ್ಲೆಟಿಕ್ಸ್)- ಬೆಂಗಳೂರು, ಉಮೇಶ್ ಆರ್.ಕಾಡೆ (ಪ್ಯಾರಾ ಈಜು)- ಬೆಳಗಾವಿ, ಕಂಚನ್ ಮುನ್ನೂರಕರ್(ವೇಟ್ಲಿಫ್ಟಿಂಗ್)- ಬೆಳಗಾವಿ
ಕ್ರೀಡಾರತ್ನ ಪುರಸ್ಕೃತರು
ಡಿ.ಎನ್. ರುದ್ರಸ್ವಾಮಿ(ಯೋಗ)- ಬೆಂಗಳೂರು, ಪೂರ್ಣಿಮಾ ಪಿ.(ಥ್ರೋಬಾಲ್)- ದ.ಕ, ಅಮೋಘ್ ಯು. ಚಚಡಿ(ಆಟ್ಯಾ-ಪಾಟ್ಯಾ)- ಬೆಳಗಾವಿ, ರಂಜಿತ ಎಂ.ಪಿ.(ಬಾಲ್ಬಾಡ್ಮಿಂಟನ್)- ಹಾಸನ, ಪ್ರದೀಪ್ ಕೆ.ಸಿ. (ಖೋ ಖೋ), ಸುಮಿತ ಯು.ಎಂ. (ಕಬಡ್ಡಿ), ಡಾ. ಜೀವಂಧರ್ ಬಲ್ಲಾಳ್ (ಕಂಬಳ), ಆನಂದ್ ಇರ್ವತ್ತೂರು (ಕಂಬಳ), ಆನಂದ್ ಎಲ್. (ಕುಸ್ತಿ), ಬೋಶಪ್ಪ ವಿಠ್ಠಪ್ಪ ಗುಳಬಾಳ (ಗುಂಡು ಎತ್ತುವುದು).
ಏಕಲವ್ಯ ಪ್ರಶಸ್ತಿ:
ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು 1992ರಿಂದ ರಾಜ್ಯದ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ 2 ಲಕ್ಷ ರು. ನಗದು ಹಾಗೂ ಏಕಲವ್ಯನ ಕಂಚಿನ ಮೂರ್ತಿಯನ್ನು ಒಳಗೊಂಡಿದೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ:
ಗ್ರಾಮೀಣ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ರಲ್ಲಿ ಹೊಸ ಯೋಜನೆಯಾಗಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರಶಸ್ತಿಯು ರೂ 1 ಲಕ್ಷ ನಗದು ಒಳಗೊಂಡಿದೆ.
ಜೀವಮಾನ ಸಾಧನೆ ಪ್ರಶಸ್ತಿ:
ಬೆಂಗಳೂರಿನ ಈಜು ತರಬೇತುದಾರ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಮತ್ತು ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಆರ್ ಅವರು ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು 1.50 ಲಕ್ಷ ರು. ನಗದು ಹೊಂದಿದೆ.
ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರಿಗೆ ಸುಸ್ಥಿರ ಅಭಿವೃದ್ದಿ ನಾಯಕತ್ವ ಪ್ರಶಸ್ತಿ ಪ್ರದಾನ
ಪ್ರತಿಷ್ಠಿತ ಸುಸ್ಥಿರ ಅಭಿವೃದ್ದಿ ನಾಯಕತ್ವ ಪ್ರಶಸ್ತಿಯನ್ನು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರಿಗೆ ನೀಡಿ ಗೌರವಿಸಲಾಗಿದೆ. ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಯಲ್ಲಿ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ಚಾಮ್ಲಿಂಗ್ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಪರಿಸರ ಮತ್ತು ಸುಸ್ಥಿರ ಅಭಿವೃದ್ದಿಗೆ ಚಾಮ್ಲಿಂಗ್ ಅವರು ನೀಡಿರುವ ಕೊಡುಗೆ ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಚಾಮ್ಲಿಂಗ್ ಅವರ ದೂರದೃಷ್ಟಿಯಿಂದ ಸಿಕ್ಕಿಂ ದೇಶದ ಮೊದಲ ಸಾವಯವ ರಾಜ್ಯ ಎನಿಸಿದೆ.
- ಸಿಕ್ಕಿಂ ಸಂಪೂರ್ಣ ಸಾವಯವ ರಾಜ್ಯವೆನಿಸಿರುವ ದೇಶದ ಮೊದಲ ಹಾಗೂ ಏಕೈಕ ರಾಜ್ಯ. ಜನವರಿ 2016 ರಲ್ಲಿ ಸಿಕ್ಕಿಂ ಅನ್ನು ಸಾವಯವ ರಾಜ್ಯವೆಂದು ಪ್ರಧಾನಿ ನರೇಂದ್ರ ಮೋದಿ ರವರು ಅಧಿಕೃತವಾಗಿ ಘೋಷಣೆ ಮಾಡಿದರು.
- ಸಿಕ್ಕಿಂನ ಸುಮಾರು 75,000 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಗೆ ಒಳಪಡಿಸಲಾಗಿದೆ.
- ದೇಶದ ಸಾವಯವ ಕೃಷಿಯಿಂದ ಉತ್ಪಾದಿಸಲಾಗುವ 1.24 ಮಿಲಿಯನ್ ಟನ್ ನಲ್ಲಿ ಸಿಕ್ಕಿಂ ಪಾಲು ಸುಮಾರು 80,000 ಟನ್ ಇದೆ.
ಬ್ಯಾಂಕ್ ಶಾಖೆ ನಿಯಮ ಸರಳೀಕರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಮಿತಿ ಶಿಫಾರಸ್ಸು
ಬ್ಯಾಂಕ್ ಶಾಖೆ ಸ್ಥಾಪಿಸಲು ಈಗಿರುವ ನಿಯಮವನ್ನು ಸರಳೀಕರಣಗೊಳಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಆಂತರಿಕ ಕಾರ್ಯಪಡೆ ಶಿಫಾರಸ್ಸು ಮಾಡಿದೆ. ಲಿಲಿ ವದೆರ (Lily Vadera) ಈ ಕಾರ್ಯಪಡೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಆರ್ಥಿಕ ಸೇರ್ಪಡೆಗೆ ಅನುಕೂಲವಾಗುವಂತೆ ಕಟ್ಟಡ, ನೌಕರರು ಸಂಖ್ಯೆ ಸೇರಿದಂತೆ ಬ್ಯಾಂಕ್ ಶಾಖೆ ಸ್ಥಾಪನೆಗೆ ಅನುಸರಿಸುತ್ತಿರುವ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಕಾರ್ಯಪಡೆ ಶಿಫಾರಸ್ಸು ಮಾಡಿದೆ.
ಪ್ರಮುಖ ಶಿಫಾರಸ್ಸುಗಳು:
- ಬ್ಯಾಂಕ್ ಶಾಖೆಗಳು, ವ್ಯಾಪಾರ ಪ್ರವರ್ತಕರನ್ನು ಒಳಗೊಂಡ ಶಾಖೆಗಳು ಸೇರಿದಂತೆ ವಾರದ ಐದು ದಿನಗಳಲ್ಲಿ ಕನಿಷ್ಠ 4 ಗಂಟೆ ಸೇವೆ ನೀಡುವ ಶಾಖೆಗಳನ್ನು ಪೂರ್ಣ ಶಾಖೆಗಳನ್ನಾಗಿ ಪರಿಗಣಿಸಲು ಶಿಫಾರಸ್ಸು ಮಾಡಲಾಗಿದೆ.
- ಕನಿಷ್ಠ ಕೆಲಸ ಅವಧಿ ಅನುಸರಿಸದೆ ಕಾರ್ಯನಿರ್ವಹಿಸುವ ಯಾವುದೇ ಬ್ಯಾಂಕಿನ ಘಟಕವನ್ನು “ಅರೆಕಾಲಿಕ ಬ್ಯಾಂಕಿಂಗ್ ಘಟಕ”ವೆಂದು ಪರಿಗಣಿಸಲು ಶಿಫಾರಸ್ಸು ಮಾಡಿದೆ.
- ಅರೆಕಾಲಿಕ ಬ್ಯಾಂಕಿಂಗ್ ಘಟಕವನ್ನು ಎಲ್ಲಿ ಬೇಕಾದರು ತೆರೆಯಬಹುದಾಗಿದೆ. ಆದರೆ ಶೇ 25% ರಷ್ಟನ್ನು ಗ್ರಾಮೀಣ ಭಾಗದಲ್ಲಿ ತೆರೆಯುವುದು ಕಡ್ಡಾಯ.
ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸಿರುವ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಪಾಲಿಥಿನ್ ಮುಕ್ತ
ಭಾರತೀಯ ಪುರಾತತ್ವ ಇಲಾಖೆಯಡಿ ಸಂರಕ್ಷಿಸಲಾಗಿರುವ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಪಾಲಿಥಿನ್ ಮುಕ್ತವೆಂದು ಘೋಷಿಸಲಾಗಿದೆ. ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವಾಲಯ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದು, ಐತಿಹಾಸಿಕ ಸ್ಮಾರಕಗಳ ಸುತ್ತ 300 ಮೀಟರ್ ವ್ಯಾಪ್ತಿಯನ್ನು ಪಾಲಿಥಿನ್ ಯಿಂದ ಮುಕ್ತವಾಗಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
- 900 ವರ್ಷ ಇತಿಹಾಸ ಹೊಂದಿರುವ ವಿಶ್ವ ಪರಂಪರಿಕ ತಾಣವಾದ ಗುಜರಾತಿನ “ರಾಣಿ-ಕಿ-ವಾವ್” ಅನ್ನು ದೇಶದ 25 ಆದರ್ಶ ಸ್ಮಾರಕಗಳ ಪೈಕಿ ಅತಿ ಸ್ವಚ್ಚ ಸಾಂಪ್ರದಾಯಿಕ ಸ್ಥಳ (Cleanest Iconic Place)ವೆಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಿಸಿದೆ. ಭಾರತ ನೈಮರ್ಲ್ಯ ಸಮ್ಮೇಳನ (ಇಂಡೋಸಾನ್)ದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
- ಭಾರತೀಯ ಪುರಾತತ್ವ ಇಲಾಖೆಯು ಆದರ್ಶ ಸ್ಮಾರಕಗಳ ಪಟ್ಟಿಯನ್ನು ಅನೇಕ ಮಾನದಂಡಗಳನ್ನು ಅಳವಡಿಸಿಕೊಂಡು ತಯಾರಿಸಿದೆ. ಶೌಚಾಲಯ ವ್ಯವಸ್ಥೆ, ಪಾಲಿಥಿನ್ ಮುಕ್ತ ಪ್ರದೇಶ, ಹಸಿರು ಲಾನ್, ವಿಕಲಾಂಗ ಸ್ನೇಹಿ, ಕುಡಿಯುವ ನೀರು ಮತ್ತು ಕಸದ ಬುಟ್ಟಿ ವ್ಯವಸ್ಥೆ ಪರಿಗಣಿಸಿ ಅಗ್ರ 25 ಆದರ್ಶ ಸ್ಮಾರಕಗಳ ಪಟ್ಟಿಯನ್ನು ತಯಾರಿಸಲಾಗಿದೆ.