2018ರ ಡಿಸೆಂಬರ್ ವೇಳೆಗೆ ಭಾರತ-ಪಾಕಿಸ್ತಾನ ಗಡಿ ಸಂಪೂರ್ಣ ಬಂದ್
2018ರ ಡಿಸೆಂಬರ್ ವೇಳೆಗೆ ಭಾರತ- ಪಾಕ್ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಸಿದ್ದಾರೆ. ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ನಾಲ್ಕು ರಾಜ್ಯಗಳ ಪ್ರತಿನಿಧಿಗಳೊಂದಿಗೆ ರಾಜಸ್ತಾನದ ಜೈಸಲ್ಮೇರ್ ನಲ್ಲಿ ನಡೆದ ಸಭೆಯ ವೇಳೆ ಈ ವಿಷಯವನ್ನು ಬಹಿರಂಗಪಡಿಸಿದರು.
ಪ್ರಮುಖಾಂಶಗಳು:
- ಭಾರತ ಮತ್ತು ಪಾಕಿಸ್ತಾನ ನಡುವಿನ 3,323 ಕಿ.ಮೀ ಉದ್ದದ ಗಡಿಯನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಮುಚ್ಚಲು ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ತಯಾರಿಸಿದೆ.
- ಗಡಿಯನ್ನು ಮುಚ್ಚುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವಾಲಯ, ಗಡಿ ಭದ್ರತಾ ಪಡೆ ಮತ್ತು ನಾಲ್ಕು ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳ ಮಟ್ಟದಲ್ಲಿ ನಿರ್ವಹಿಸಲಾಗುವುದು.
- ಇದರ ಜೊತೆಗೆ “ಗಡಿ ಭದ್ರತಾ ಗ್ರಿಡ್” ಎಂಬ ಹೊಸ ಪರಿಕಲ್ಪನೆಯನ್ನು ರೂಪಿಸಲಾಗಿದ್ದು, ಗಡಿ ಭದ್ರತೆಗೆ ಸಂಬಂಧಿಸಿದ ಪ್ರತಿಯೊಬ್ಬರು ಇರಲಿದ್ದಾರೆ. ಇವರ ಸಲಹೆಗಳನ್ನು ಆಧರಿಸಿ “ಗಡಿ ಭದ್ರತಾ ಗ್ರಿಡ್”ಗೆ ಅಂತಿಮ ರೂಪುರೇಶೆಗಳನ್ನು ನೀಡಲಾಗುವುದು.
ಹಿನ್ನಲೆ:
- ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಎನಿಸಿಕೊಂಡಿರುವ 3,323 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ. ಉಭಯ ದೇಶಗಳ ನಡುವಿನ ಗಡಿಯನ್ನು 1947ರ ರಾಡ್ಕ್ಲಿಪ್ ಲೈನ್ ಆಧಾರದ ಮೇಲೆ ರಚಿಸಲಾಗಿದೆ.
- ಜಮ್ಮು & ಕಾಶ್ಮೀರ (1225 ಕಿ.ಮೀ), ರಾಜಸ್ತಾನ (1037 ಕಿ.ಮೀ), ಪಂಜಾಬ್ (553 ಕಿ.ಮೀ) ಮತ್ತು ಗುಜರಾತ್ (508 ಕಿ.ಮೀ) ಗಡಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ರಾಜ್ಯಗಳು.
- 3,323 ಕಿ.ಮೀ ಗಡಿ ಉದ್ದದ ಪೈಕಿ ಗಡಿ ಭದ್ರತಾ ಪಡೆ (Border Security Force) 2308 ಕಿ.ಮೀ ಗಡಿಯನ್ನು ಕಾಯುವ ಜವಾಬ್ದಾರಿ ಹೊತ್ತಿದೆ. ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬೇರ್ಪಡಿಸುವ 740 ಕಿ.ಮೀ ಗಡಿ ನಿಯಂತ್ರಣ ರೇಖೆಗೆ ಭಾರತೀಯ ಸೇನೆಯಿಂದ ಭದ್ರತೆ ಒದಗಿಸಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಹೊಸ ಸಮಿತಿ ರಚನೆ
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಮಾಡಲು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳಿಂದ 13 ಸದಸ್ಯರ ಹೊಸ ಸಮಿತಯನ್ನು ರಚಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಪ್ರಶಸ್ತಿಗೆ ಆಯ್ಕೆಮಾಡುವ ಜವಬ್ದಾರಿಯನ್ನು ಹೊತ್ತಿತ್ತು.
ಸಮಿತಿಯ ಸದಸ್ಯರು:
ಜಾನಪದ ಕ್ಷೇತ್ರದಿಂದ ಡಾ.ಅಂಬಳಿಕೆ ಹಿರಿಯಣ್ಣ, ಕೃಷಿ ಕ್ಷೇತ್ರದಿಂದ ಡಾ.ನಾರಾಯಣಗೌಡ, ಸಾಹಿತ್ಯದಲ್ಲಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಮೀನಾಕ್ಷಿ ಬಾಳಿ, ಕೆ.ಬಿ.ಸಿದ್ದಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್, ರಹಮತ್ ತರೀಕೆರೆ, ನೃತ್ಯದಿಂದ ವಸುಂಧರಾ ದೊರೆಸ್ವಾಮಿ, ಮಾಧ್ಯಮದಿಂದ ನಾಗೇಶ ಹೆಗಡೆ, ಚಿತ್ರಕಲೆಯಿಂದ ಪಿ.ಎಸ್.ಕಡೇಮನಿ, ರಂಗಭೂಮಿಯಿಂದ ನಾ.ದಾಮೋದರ ಶೆಟ್ಟಿ, ಸಂಗೀತದಿಂದ ಡಾ.ಜಯದೇವಿ ಜಂಗಮಶೆಟ್ಟಿ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸಮಿತಿಯ ಕಾರ್ಯ:
ಹೊಸ ಸಮಿತಿಯು ರಾಜ್ಯೋತ್ಸವ ಪ್ರಶಸ್ತಿಗೆ ಬಂದಿರುವ ಅರ್ಜಿಗಳಲ್ಲಿ ಹಾಗೂ ಸ್ವಯಂಪ್ರೇರಿತರಾಗಿ ಅರ್ಹರನ್ನು ಆಯ್ಕೆ ಮಾಡಲಿದೆ. ಕರ್ನಾಟಕ ಏಕೀಕರಣವಾಗಿ 61 ವರ್ಷವಾದ ಹಿನ್ನೆಲೆಯಲ್ಲಿ 61 ಪ್ರಶಸ್ತಿ ನೀಡಲಾಗುವುದು. ಹೊಸ ಸಮಿತಿಯು 1:2 ಅನುಪಾತದಲ್ಲಿ ಅಂದರೆ 122 ಹೆಸರುಗಳನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿಗೆ ರವಾನಿಸಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಮಿತಿಯಲ್ಲಿ 6 ಸಚಿವರು, 3 ಪ್ರಾಧಿಕಾರ, 7 ಅಕಾಡೆಮಿಗಳು, ಕಸಾಪ ಅಧ್ಯಕ್ಷರು ಸೇರಿ 20 ಸದಸ್ಯರಿದ್ದು, ಈ ಸಮಿತಿ ಅಂತಿಮ 61 ಸಾಧಕರನ್ನು ಆಯ್ಕೆ ಮಾಡಲಿದೆ. ನ.1ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸಿಎಂ ಪ್ರದಾನ ಮಾಡಲಿದ್ದಾರೆ.
ಹಿನ್ನಲೆ:
- ಕಳೆದ ಮೂರು ವರ್ಷಗಳಿಂದ ವಿಮರ್ಶಕ ಡಾ.ಕೆ. ಮರುಳಸಿದ್ದಪ್ಪ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಸಮಿತಿಗೆ ಆಯ್ಕೆಮಾಡಲಾಗುತ್ತಿತ್ತು. ಆದರೆ ಪ್ರತಿವರ್ಷಕ್ಕೊಮ್ಮೆ ಆಯ್ಕೆ ಸಮಿತಿಯನ್ನು ಬದಲಾಯಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದ್ದರಿಂದ ಹೊಸ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದ್ದು, ಸಚಿವರನ್ನು ಹೊರತುಪಡಿಸಿ 13 ಸದಸ್ಯರ ಪೈಕಿ 6 ಸದಸ್ಯರು ಸಾಹಿತ್ಯ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ.
ಕುಲಾಂತರಿ ಸಾಸಿವೆ ವಾಣಿಜ್ಯ ಉದ್ದೇಶಕ್ಕೆ ಬಿಡುಗಡೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ತಡೆ
ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಉದ್ದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಲಿಕ ತಡೆ ನೀಡಿದ್ದು, ಅಕ್ಟೋಬರ್ 17, 2016ರವರೆಗೆ ಬಿಡುಗಡೆ ಮಾಡದಂತೆ ತಾಕೀತು ಮಾಡಿದೆ. ಕುಲಾಂತರಿ ಸಾಸಿವೆಯನ್ನು ಬಿತ್ತನೆ ಉದ್ದೇಶಕ್ಕೆ ಬಿಡುಗಡೆ ಮಾಡುವ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವಂತೆ ಕೋರ್ಟ್ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ಒಳಗೊಂಡ ಪೀಠ ಈ ಆದೇಶ ನೀಡಿದೆ.
ಹಿನ್ನಲೆ:
- ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಿಡುಗಡೆ ಮಾಡದಂತೆ ತಡೆ ನೀಡಲು ಅರುಣ ರೋಡ್ರಿಗಸ್ ಎಂಬುವವರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು.
- ಸಾಕಷ್ಟು ಪರೀಕ್ಷೆಗೆ ಒಳಪಡಿಸಿದೆ ಹಾಗೂ ಜೈವಿಕ ಸುರಕ್ಷತೆ ಮನಗಾಣದೆ ಕುಲಾಂತರಿ ಸಾಸಿವೆ ತಳಿಯನ್ನು ಬಿತ್ತನೆಗೆ ಬಳುಸುವುದು ಆತಂತಕಾರಿ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಅಲ್ಲದೇ, ತೆರದ ಪ್ರದೇಶದಲ್ಲಿ ಕುಲಾಂತರಿ ಸಾಸಿವೆಯನ್ನು ಪರೀಕ್ಷಿಸುವುದು ಮತ್ತು ವಾಣಿಜ್ಯ ಬಳಕೆಗೆ ಬಿಡುಗಡೆಗೊಳಿಸಬಾರದೆಂದು ಒತ್ತಾಯಿಸಲಾಗಿತ್ತು.
ಕುಲಾಂತರಿ ಸಾಸಿವೆ:
- ಸಾಸಿವೆಯು ಭಾರತದ ಪ್ರಮುಖ ಚಳಿಗಾಲದ ಬೆಳೆಗಳಲ್ಲಿ ಒಂದಾಗಿದ್ದು, ಅಕ್ಟೋಬರ್ ಮಧ್ಯದಲ್ಲಿ ಮತ್ತು ನವೆಂಬರ್ ಅಂತ್ಯದಲ್ಲಿ ಬಿತ್ತನೆ ಮಾಡಲಾಗುತ್ತದೆ. ಸಾಸಿವೆ ಭಾರತದ ಅತಿ ಹೆಚ್ಚು ಖಾದ್ಯ ತೈಲ ನೀಡುವ ಬೆಳೆಯಾಗಿದೆ.
- “ಡಿಎಂಎಚ್ (ದಾರ ಮಸ್ಟರ್ಡ್ ಹೈಬ್ರಿಡ್)-11 (Dhara Mustard Hybrid)” ಕುಲಾಂತರಿ ಸಾಸಿವೆ ತಳಿಯನ್ನು ದೆಹಲಿ ವಿಶ್ವವಿದ್ಯಾಲಯದ “ಸೆಂಟರ್ ಫಾರ್ ಜೆನಿಟಿಕ್ ಮನಿಪುಲೇಷನ್ ಆಫ್ ಕ್ರಾಪ್ ಪ್ಲಾಂಟ್ಸ್” ಅಭಿವೃದ್ದಿಪಡಿಸಿದೆ. ಇದು ಸರ್ಕಾರ ಪ್ರಾಯೋಜಿತ ಯೋಜನೆಯಾಗಿದೆ. ತಳಿ ಬದಲಾವಣೆಗಾಗಿ ಬರ್ನೆಸ್/ಬರ್ಸ್ತರ್ ತಂತ್ರಜ್ಞಾನ ಬಳಸಿ ಈ ತಳಿಯನ್ನು ಅಭಿವೃದ್ದಿಪಡಿಸಲಾಗಿದೆ. ಇದು ಕಳೆನಾಶಕ ಸಹಿಷ್ಣು ತಳಿ (It is Herbicide Tolerant (HT) crop)ಆಗಿದೆ.
ಡಿಎಂಎಚ್-11 ಅನುಕೂಲ:
- ಸಾಂಪ್ರದಾಯಿಕ ಸಾಸಿವೆ ತಳಿಗೆ ಹೋಲಿಸಿದರೆ ಡಿಎಂಎಚ್-11 ಕುಲಾಂತರಿ ತಳಿ ಶೇ 30% ಹೆಚ್ಚು ಇಳುವರಿ ನೀಡಲಿದೆ.
- ಆ ಮೂಲಕ ಹೆಚ್ಚು ಖಾದ್ಯ ತೈಲವನ್ನು ಉತ್ಪಾದಿಸಲು ಸಹಕಾರಿಯಾಗಲಿದೆ. ಪ್ರಸ್ತುತ ಭಾರತ ವಿದೇಶಗಳಿಂದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ವಿರೋಧ ಏಕೆ:
- ಡಿಎಂಎಚ್-11 ದೇಶದ ಮೊದಲ ಕುಲಾಂತರಿ ಆಹಾರ ಬೆಳೆ ತಳಿ ಎನಿಸಿದೆ. ಒಂದು ವೇಳೆ ಈ ತಳಿಯನ್ನು ಬಿತ್ತನೆ ಮಾಡಲು ಅನುಮತಿ ನೀಡಿದರೆ ಇತರೆ ಆಹಾರ ಬೆಳೆಗಳ ಕುಲಾಂತರಿ ತಳಿಗಳ ಬಿಡುಗಡೆಗೆ ಹಾದಿ ಸುಗಮವಾಗಲಿದೆ ಎಂಬುದು ಆಂತಕಕ್ಕೆ ಕಾರಣವಾಗಿದೆ.
- ಕುಲಾಂತರಿ ತಳಿಯಿಂದ ಪರಿಸರ, ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಪರಿಸರವಾದಿಗಳ ಕಳವಳ.
- ಕಳೆನಾಶಕ ಸಹಿಷ್ಣುತೆ ತಳಿಗಳಿಂದ ಕೂಲಿಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ ಎನ್ನುವುದು ಮತ್ತೊಂದು ಕಾರಣ. ಬೆಳೆಗಳಲ್ಲಿ ಕಳೆ ತೆಗೆಯುವುದು ಹೆಚ್ಚು ಜನರಿಗೆ ಕೆಲಸ ನೀಡುತ್ತಿದೆ.
ಮತದಾರರ ನೋಂದಣಿಗೆ ಫೇಸ್ ಬುಕ್ ಜೊತೆ ಕೈಜೋಡಿಸಿದ ಚುನಾವಣಾ ಆಯೋಗ
ಯುವ ಮತದಾರರನ್ನು ಮತದಾನಕ್ಕೆ ನೋಂದಾಯಿಸುವ ಸಲುವಾಗಿ ಭಾರತ ಚುನಾವಣಾ ಆಯೋಗವು ಸಾಮಾಜಿಕ ತಾಣ ಫೇಸ್ ಬುಕ್ ನೊಂದಿಗೆ ಕೈಜೋಡಿಸಿದೆ. 2017 ರಲ್ಲಿ ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು, ಈ ಐದು ರಾಜ್ಯಗಳ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಫೇಸ್ ಬುಕ್ ಮೊರೆ ಹೋಗಿದೆ.
- ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಖಂಡ್ ನಲ್ಲಿ ವಿಧಾನ ಸಭಾ ಚುನಾವಣೆ 2017 ರಲ್ಲಿ ನಡೆಯಲಿದೆ. ಈ ವಿನೂತನ ಕಾರ್ಯಕ್ರಮದ ಮೂಲಕ ಯುವಕರಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೆಪಿಸಲಾಗುವುದು.
- 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಎಲ್ಲಾ ವಯಸ್ಕರನ್ನು ನ್ಯಾಷನಲ್ ವೋಟರ್ಸ್ ಸರ್ವೀಸ್ಸ್ ಪೋರ್ಟಲ್ ಗೆ ಫೇಸ್ ಬುಕ್ ಬಳಸಿ ಲಿಂಕ್ ಮಾಡಲಾಗುವುದು.
- ಈ ಐದು ರಾಜ್ಯಗಳಲ್ಲಿ ಫೇಸ್ ಬುಕ್ ಬಳಸುವವರಿಗೆ ಮತದಾನ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸಂದೇಶವನ್ನು ರವಾನಿಸಲಾಗುವುದು.
- ಈ ಸಂದೇಶದಲ್ಲಿ “ರಿಜಿಸ್ಟರ್ ನೌ” ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಬಳಕೆದಾರರು ನೇರವಾಗಿ ನ್ಯಾಷನಲ್ ವೋಟರ್ಸ್ ಸರ್ವೀಸ್ಸ್ ಪೋರ್ಟಲ್ ಗೆ ತೆರೆದುಕೊಳ್ಳಲಿದೆ. ಅಲ್ಲಿ ಮತದಾರರು ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪಕ್ಷಗಳ ಚಿಹ್ನೆ ಪ್ರಚಾರಕ್ಕೆ ಸಾರ್ವಜನಿಕ ಹಣ ಬಳಕೆ ಮಾಡುವಂತಿಲ್ಲ: ಚುನಾವಣಾ ಆಯೋಗ
ರಾಜಕೀಯ ಪಕ್ಷಗಳ ಮತ್ತು ಚುನಾವಣಾ ಆಯೋಗ ಪಕ್ಷಕ್ಕೆ ಮಂಜೂರು ಮಾಡಿದ ಪಕ್ಷದ ಚಿಹ್ನೆಯ ಪ್ರಚಾರಕ್ಕಾಗಿ ಸಾರ್ವಜನಿಕ ಹಣ, ಸ್ಥಳ ಅಥವಾ ಸರ್ಕಾರದ ಕಾರ್ಯತಂತ್ರಗಳನ್ನು ಯಾವುದೇ ರಾಜಕೀಯ ಪಕ್ಷಗಳು ಬಳಸಿಕೊಳ್ಳಬಾರದು ಎಂದು ಆಯೋಗ ನಿರ್ದೇಶನ ನೀಡಿದೆ. ಜುಲೈ 2016 ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಚುನಾವಣಾ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ.
ಪ್ರಮುಖಾಂಶಗಳು:
- ಯಾವುದೇ ರಾಜಕೀಯ ಪಕ್ಷಗಳ ಮ್ತತು ಅವುಗಳ ಚುನಾವಣಾ ಚಿಹ್ನೆಗಳ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳ, ಹಣವನ್ನು ಬಳಸುವುದು ಉಚಿತ ಮತ್ತು ನ್ಯಾಯಯುತ ಚುನಾವಣೆ ಪರಿಕಲ್ಪನೆಗೆ ವಿರುದ್ಧವಾಗಿರುತ್ತದೆ.
- ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಚುನಾವಣೆ ಗುರುತು(ಮೀಸಲಾತಿ ಮತ್ತು ಹಂಚುವಿಕೆ) ಆದೇಶ 1968ರ 16ಎಯಡಿ ಕಾನೂನು ಉಲ್ಲಂಘನೆಯಾಗುತ್ತದೆ.
- 1968ರ 16ಎ ರಡಿ ಯಾವುದೇ ರಾಜಕೀಯ ಪಕ್ಷ ಚುನಾವಣಾ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತಿಯನ್ನು ಪಾಲಿಸಲು ವಿಫಲವಾದರೆ ಅಂತಹ ಪಕ್ಷವನ್ನು ಅಮಾನತು ಮಾಡಬಹುದು ಅಥವಾ ಪಕ್ಷಕ್ಕೆ ನೀಡಿರುವ ಸ್ಥಾನಮಾನವನ್ನು ಹಿಂಪಡೆಯಬಹುದು.
ಹಿನ್ನಲೆ:
ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರದ ಅವಧಿಯಲ್ಲಿ ಬಹುಜನ ಸಮಾಜ ಪಕ್ಷದ ಚಿಹ್ನೆಯಾದ ಆನೆಯ ಮೂರ್ತಿಯನ್ನು ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದ್ದನ್ನು ಪ್ರಶ್ನಿಸಿ ಚುನಾವಣಾ ತಂಡವೊಂದು ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರ ನಡೆಸಿದ ದೆಹಲಿ ಹೈಕೋರ್ಟ್ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಚಿಹ್ನೆಗಳ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳ ಮತ್ತು ಹಣವನ್ನು ಬಳಸಿಕೊಳ್ಳುವುದು ಉಚಿತ ಮತ್ತು ನ್ಯಾಯಯುತ ಚುನಾವಣೆ ಪರಿಕಲ್ಪನೆಗೆ ವಿರುದ್ಧವಾಗಿರುತ್ತದೆ ಎಂದು ತೀರ್ಪು ನೀಡಿ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.