ಸಾಹಿತಿ ದೇವನೂರ ಮಹಾದೇವಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ
ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುವೆಂಪು ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಕನ್ನಡನಾಡಿನ ಖ್ಯಾತ ಕವಿ ಕುವೆಂಪು ಅವರ ಜನ್ಮದಿನವಾದ ಅಂಗವಾಗಿ ಡಿ.1ರಂದು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಹಂಪ ನಾಗರಾಜಯ್ಯ ತಿಳಿಸಿದ್ದಾರೆ. 2015ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ಮರಾಠಿ ಸಾಹಿತಿ ಶ್ಯಾಮ ಮನೋಹರ್ ಅವರಿಗೆ ನೀಡಲಾಗಿತ್ತು.
ದೇವನೂರ ಮಹಾದೇವರ ಬಗ್ಗೆ:
- ಮಹಾದೇವ ರವರು 1948 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡಿನ ದೇವನೂರಿನಲ್ಲಿ ಜನಿಸಿದರು.
- ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಕಾಲ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ದೇವನೂರು ಮಹಾದೇವ ಅವರ ಕಿರು ಕಾದಂಬರಿ ‘ಒಡಲಾಳ’ ಕೃತಿಯನ್ನು ಕೋಲ್ಕತದ ಭಾರತೀಯ ಪರಿಷತ್ 1984ರಲ್ಲಿ ಉತ್ತಮ ಶೃಜನಶೀಲ ಕೃತಿ ಎಂದು ಗೌರವಿಸಿದೆ.
- 1991ರಲ್ಲಿ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
- ದ್ಯಾವನೂರು’, ‘ಒಡಲಾಳ’ ಮತ್ತು ‘ಕುಸುಮಬಾಲೆ’ ಇವರ ಪ್ರಮುಖ ಕೃತಿಗಳು.
ಭಾರತ-ಸಿಂಗಾಪುರ ನಡುವೆ ಮೂರು ಒಪ್ಪಂದಕ್ಕೆ ಸಹಿ
ಭಾರತ ಮತ್ತು ಸಿಂಗಾಪುರ ನಡುವೆ ಮೂರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೌಶಲ್ಯ ಅಭಿವೃದ್ದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಒಪ್ಪಂದಗಳು ಸೇರಿದಂತೆ ಒಟ್ಟು ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ದಿಲ್ಲಿಗೆ ಭೇಟಿ ನೀಡಿರುವ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ನೇತೃತ್ವದ ನಿಯೋಗಗಳ ಮಟ್ಟದ ಮಾತುಕತೆಯ ಬಳಿಕ, ಉಭಯ ದೇಶಗಳು ನವದೆಹಲಿಯಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ.
ಒಪ್ಪಂದಗಳು:
- ಕೈಗಾರಿಕಾ ಆಸ್ತಿ ಸಹಕಾರ ಒಪ್ಪಂದ: ಕೈಗಾರಿಕ ನೀತಿ ಮತ್ತು ಪ್ರಚಾರ ಇಲಾಖೆ ಹಾಗೂ ಭೌದ್ದಿಕ ಆಸ್ತಿ ಕಚೇರಿ, ಸಿಂಗಾಪುರ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ತಾಂತ್ರಿಕ, ವೃತ್ತಿ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಒಪ್ಪಂದ: ಸಿಂಗಾಪುರದ ತಾಂತ್ರಿಕ ಶಿಕ್ಷಣ ಸಂಸ್ಥೆ(ಐಟಿಇ) ಶಿಕ್ಷಣ ಸೇವೆಗಳು(ಐಟಿಇಇಎಸ್) ಹಾಗೂ ಭಾರತದ ಕೌಶಲಾಭಿವೃದ್ಧಿ ನಿಗಮಗಳು ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣ ಮತ್ತು ತರಬೇತಿಯ ಸಂಬಂಧ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕಿವೆ.
- ತಾಂತ್ರಿಕ, ವೃತ್ತಿ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಒಪ್ಪಂದ: ಅಸ್ಸಾಂ ಸರ್ಕಾರ ಮತ್ತು ಐಟಿಇಇಎಸ್, ಸಿಂಗಾಪುರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಖ್ಯಾತ ವಿಜ್ಞಾನಿ ಯು ಆರ್ ರಾವ್ ಗೆ “ಹಾಲ್ ಆಫ್ ಫೇಮ್” ಗೌರವ
ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರು ಪ್ರತಿಷ್ಠಿತ ‘ಐಎಎಫ್ ಹಾಲ್ ಆಫ್ ಫೇಮ್’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದಾರೆ. ಆ ಮೂಲಕ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೆ. 30 ರಂದು ಮೆಕ್ಸಿಕೊದಲ್ಲಿ ನಡೆದ 67ನೇ ಇಂಟರ್ ನ್ಯಾಷನಲ್ ಏರೋನಾಟಿಕಲ್ ಕಾಂಗ್ರೆಸ್ ಸಮಾವೇಶದಲ್ಲಿ ರಾವ್ ಅವರ ಹೆಸರನ್ನು ಹಾಲ್ ಆಫ್ ಫೇಮ್ ಗೆ ಸೇರ್ಪಡೆ ಮಾಡಲಾಯಿತು. ಇಂಟರ್‌ನ್ಯಾಷನಲ್ ಏರೋನಾಟಿಕಲ್ ಫೆಡರೇಷನ್ (ಐಎಎಫ್) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು.
ಯು ಆರ್ ರಾವ್:
- ಯು ಆರ್ ರಾವ್ ರವರು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ 1984 ರಿಂದ 1994 ರವರೆಗೆ ಸೇವೆ ಸಲ್ಲಿಸಿದ್ದಾರೆ.
- ಭಾರತದ ಮೊದಲ ಉಪಗ್ರಹ ಆರ್ಯಭಟ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಉಪಗ್ರಹಗಳನ್ನು ಇವರ ಮಾರ್ಗದರ್ಶನದಲ್ಲಿ ಅಭಿವೃದ್ದಿಪಡಿಸಲಾಗಿದೆ.
- ಇವರ ನಾಯಕತ್ವದಡಿ ಜಿಎಸ್ಎಲ್ವಿ ಉಡಾವಣಾ ವಾಹಕ ಹಾಗೂ ಕ್ರಯೋಜನೆಕ್ ಎಂಜಿನ್ ಅಭಿವೃದ್ದಿ ಕಾರ್ಯಕ್ರಮ ಆರಂಭಗೊಂಡಿತು.
- ಇಸ್ರೋದ ವಾಣಿಜ್ಯ ಅಂಗವಾದ ಅಂಟ್ರಿಕ್ಸ್ ಕಾರ್ಪೋರೇಷನ್ ನ ಮೊದಲ ಅಧ್ಯಕ್ಷರು ಸಹ ಆಗಿದ್ದರು.
ಪ್ರಶಸ್ತಿಗಳು:
- ಪದ್ಮಭೂಷಣ (1976), ಉಪಗ್ರಹ ಹಾಲ್ ಆಫ್ ಫೇಮ್, ವಾಷಿಂಗಟನ್ 2013 ರಲ್ಲಿ ಸೇರ್ಪಡೆಗೊಂಡ ಗೌರವಕ್ಕೆ ಪಾತ್ರರಾಗಿದ್ದಾರೆ. ಇವಲ್ಲದೇ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ.
ಹಾಲ್ ಆಫ್ ಫೇಮ್ ಎಂದರೇನು?ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಸಾಧನೆ ಬಣ್ಣಿಸುವ ಕಾಯಂ ಗ್ಯಾಲರಿಯನ್ನು ಸ್ಥಾಪಿಸಿದೆ. ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗುವ ವ್ಯಕ್ತಿಗಳ ಕುರಿತ ಬಿನ್ನವತ್ತಳೆ, ಜೀವನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರವನ್ನು ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ.
ಹೈದ್ರಾಬಾದ್-ಕರ್ನಾಟಕ ಉನ್ನತ ಶಿಕ್ಷಣ ಪ್ರಮಾಣ ಹೆಚ್ಚಿಸಲು ಸಮಿತಿ ರಚಿಸಿದ ರಾಜ್ಯ ಸರ್ಕಾರ
ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ. ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್. ಸುಭಾಷ್ ಅವರು ಸಮಿತಿಯ ನೇತೃತ್ವವವನ್ನು ವಹಿಸಿದ್ದಾರೆ.
ಸಮಿತಿ ಏಕೆ:
ಪಿಯು ನಂತರ ಪದವಿ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳ ಪ್ರಮಾಣ ದೇಶದಲ್ಲಿ ಶೇ 19ರಷ್ಟು ಇದ್ದರೆ, ರಾಜ್ಯದಲ್ಲಿ ಶೇ 26 ಇದೆ. ಆದರೆ, ಹೈದರಾಬಾದ್–ಕರ್ನಾಟಕದಲ್ಲಿ ರಾಷ್ಟ್ರದ ಸರಾಸರಿಗಿಂತಲೂ ಕಡಿಮೆ ಇದೆ. ಅಂದರೆ, ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರ ಪ್ರಮಾಣ ಒಟ್ಟಾರೆ ಶೇ 10ರಷ್ಟು ಮಾತ್ರ ಇದೆ. ಈ ಪ್ರಮಾಣ ಹೆಚ್ಚಿಸಲು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ, ಉಪನ್ಯಾಸಕರಿಗೆ ತರಬೇತಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಒದಗಿಸಲು ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಲಿದೆ. ಹಿಂದೆಯೇ ಗುಲ್ಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ. ಮೂಲಿಮನಿ ಅವರ ಸಮಿತಿ ಈಗಾಗಲೇ ಕೆಲವು ಶಿಫಾರಸುಗಳನ್ನು ಸಲ್ಲಿಸಿದೆ. ಈ ಶಿಫಾರಸುಗಳನ್ನು ಪರಿಶೀಲಿಸಿ ಪೂರ್ಣ ಪ್ರಮಾಣದ ವರದಿ ಸಲ್ಲಿಸಲು ಈಗ ಸುಭಾಷ್ ನೇತೃತ್ವದ ಸಮಿತಿ ರಚಿಸಲಾಗಿದೆ.
ಸಮಿತಿಯ ಸದಸ್ಯರು:
ಹೈದ್ರಾಬಾದ್–ಕರ್ನಾಟಕದ ಗುಲ್ಬರ್ಗಾ ವಿವಿ, ಕನ್ನಡ ವಿವಿ, ರಾಯಚೂರು ಕೃಷಿ, ತೋಟಗಾರಿಕೆ ವಿವಿ, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿ. ಕುಲಪತಿಗಳು ಮತ್ತು ವಿಶೇಷಾಧಿಕಾರಿಗಳು ಸಮಿತಿಯ ಇತರೆ ಸದಸ್ಯರು.
ಪ್ರೊ.ಬಿ.ಜಿ. ಮೂಲಿಮನಿ ಸಮಿತಿ ಶಿಫಾರಸಿನ ಕೆಲ ಅಂಶಗಳು
- ಸರ್ಕಾರಿ ಶಾಲಾ–ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು.
- ಉತ್ತಮ ಶಿಕ್ಷಣ ನೀಡುವ ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು 371 (ಜೆ) ಮೀಸಲಾತಿ ಅನ್ವಯ ಪ್ರವೇಶಾವಕಾಶ ಕಲ್ಪಿಸುವುದು.
- ಉನ್ನತ ಶಿಕ್ಷಣಕ್ಕೆ ಬರುವ ಬಡತನ ರೇಖೆಗಿಂತ ಕೆಳಗೆ ಇರುವ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದು
- ಪಿಯು, ಪದವಿ, ವಿಶ್ವವಿದ್ಯಾಲಯಗಳಲ್ಲಿ ಕೌನ್ಸೆಲಿಂಗ್ ಕೇಂದ್ರಗಳನ್ನು ಆರಂಭಿಸಿ ಉದ್ಯೋಗಾಧಾರಿತ ಕೋರ್ಸ್‌ಗಳ ಬಗ್ಗೆ ಮಾಹಿತಿ ಕೊಡುವುದು.
- ಆತಿಥ್ಯ, ಈವೆಂಟ್ ಮ್ಯಾನೇಜ್‌ಮೆಂಟ್, ಅನಿಮೇಷನ್ ಸೇರಿದಂತೆ ಉದ್ಯೋಗ ಸೃಷ್ಟಿಸಿರುವ ಹೊಸ ಕೋರ್ಸ್‌ಗಳನ್ನು ಹೆಚ್ಚೆಚ್ಚು ಆರಂಭಿಸುವುದು.
- ಕೈಗಾರಿಕೆಗಳು ಮತ್ತು ಕಾಲೇಜುಗಳ ಮಧ್ಯೆ ಸಹಭಾಗಿತ್ವ ಸಾಧಿಸುವುದು.
ಎಸ್ಸೆಸ್ಸೆಲ್ಸಿ/ಪಿಯುಸಿ ಉತ್ತೀರ್ಣ ಮತ್ತು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವುದು.