ಅಕ್ರಮ ಗಣಿಗಾರಿಕೆ ತಡೆಯಲು ಉಪಗ್ರಹ ಆಧಾರಿತ “ಮೈನಿಂಗ್‌ ಸರ್ವೇಲನ್ಸ್‌ ಸಿಸ್ಟಮ್‌” ಜಾರಿ

ಉಪಗ್ರಹ ತಂತ್ರಜ್ಞಾನ ಬಳಸಿಕೊಂಡು ಅಕ್ರಮ ಗಣಿಗಾರಿಕೆ ತಡೆಯು ಸಲುವಾಗಿ ಮೈನಿಂಗ್‌ ಸರ್ವೇಲನ್ಸ್‌ ಸಿಸ್ಟಮ್‌  (Mining Surveillance System) ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.  ಮೈನಿಂಗ್‌ ಸರ್ವೇಲನ್ಸ್‌ ಸಿಸ್ಟಮ್‌  ಒಂದು ಉಪಗ್ರಹ ಕಣ್ಗಾವಲು ವ್ಯವಸ್ಥೆಯಾಗಿದ್ದು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇಡುವ ಮೂಲಕ ತಮೂಲಕ ಅಕ್ರಮ ಗಣಿಗಾರಿಕೆ ತಡೆಗೆ ಸಹಕಾರಿಯಾಗಲಿದೆ.

ಮೈನಿಂಗ್‌ ಸರ್ವೇಲನ್ಸ್‌ ಸಿಸ್ಟಮ್‌:

  • ಮೈನಿಂಗ್‌ ಸರ್ವೇಲನ್ಸ್‌ ಸಿಸ್ಟಮ್‌ ಅನ್ನು ಭಾರತೀಯ ಗಣಿಗಾರಿಕೆ ದಳವು (ಇಂಡಿಯನ್ ಬ್ಯೂರೋ ಆಫ್ ಮೈನ್ಸ್) ಭಾಸ್ಕರಚಾರ್ಯ ಇನ್ಸ್ಟಿಟೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ ಅಂಡ್ ಜಿಯೋ-ಇನ್ ಫಾರಮೆಟಿಕ್ಸ್ ಜೊತೆಗೂಡಿ ಅಭಿವೃದ್ದಿಪಡಿಸಿದೆ.
  • ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದ್ದು, ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗಿದೆ.

ಈ ವ್ಯವಸ್ಥೆ ಅವಶ್ಯಕತೆ ಯಾಕೆ?

  • ದೇಶದಲ್ಲಿ ಸುಮಾರು 3843 ಖನಿಜ ಪ್ರದೇಶಗಳನ್ನು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಇವುಗಳ ಪೈಕಿ 1710 ಪ್ರದೇಶಗಳಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದ್ದು, ಉಳಿದವುಗಳು ಸ್ಥಗಿತಗೊಂಡಿವೆ. ಪ್ರಸ್ತುತ ಈ ಗಣಿಗಾರಿಕೆಗಳ ಮೇಲೆ ನಿಗಾ ಇಡಲು ಯಾವುದೇ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಯಲಿಲ್ಲ. ಸ್ಥಳೀಯವಾಗಿ ನೀಡಲಾಗುವ ದೂರುಗಳ ಅನ್ವಯ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇಡಲಾಗುತ್ತಿದೆ. ಆದ್ದರಿಂದ ಉಪಗ್ರಹ ಆಧಾರಿತ ಈ ವ್ಯವಸ್ಥೆ ಬಹು ಮುಖ್ಯವಾಗಿದೆ.

ಕಾರ್ಯನಿರ್ವಹಣೆ ಹೇಗೆ?

  • ಸ್ವಯಂಚಾಲಿತ ದೂರ ಸಂವೇದಿ ಜಾಲದ ನೆರವಿನೊಂದಿಗೆ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚುವ ಈ ವ್ಯವಸ್ಥೆಯು, ಗಣಿಗಾರಿಕೆಗೆ ಅನುಮತಿ ನೀಡಿರುವ ಪ್ರದೇಶದಲ್ಲಿ ಹಾಗೂ ಆ ಪ್ರದೇಶ ಹೊರತುಪಡಿಸಿಯೂ ಒತ್ತುವರಿ ಮೂಲಕ ನಡೆಸಲಾಗುವ ಅಕ್ರಮ ಗಣಿ ಚಟುವಟಿಕೆ ಮೇಲೂ ನಿಗಾ ಇರಿಸಲಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವ್ಯಾಪಕ ಅಕ್ರಮ ಗಣಿಗಾರಿಕೆಯಂತಹ ಚಟುವಟಿಕೆ ಮರುಕಳಿಸದಂತೆ ಈ ವ್ಯವಸ್ಥೆ ತಡೆಯಲಿದೆ.
  • ಈ ವಿನೂತನ ತಂತ್ರಜ್ಞಾನದಿಂದ ಗಣಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಸಂಪೂರ್ಣ ವಿವರವನ್ನೂ ಆನ್‌ಲೈನ್‌ ಮೂಲಕವೇ ಪಡೆಯಲು,  ಕಾರ್ಮಿಕರ ಸುರಕ್ಷತೆಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಗಣಿ ಗುತ್ತಿಗೆದಾರರಿಗೆ ಸೂಚಿಸಲು ಸಹಕಾರಿಯಾಗಲಿದೆ.
  • ಗುತ್ತಿಗೆ ನೀಡಲಾದ ಪ್ರದೇಶ ಹಾಗೂ ಸುತ್ತಮುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಐಬಿಎಂ ಅಧಿಕಾರಿಗಳು ಕ್ರಮಕ್ಕಾಗಿ ತಕ್ಷಣವೇ ಕಾರ್ಯ ಪ್ರವೃತ್ತರಾಗಲಿದ್ದಾರೆ.
  • ಆಯಾ ರಾಜ್ಯಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಈ ಅಕ್ರಮದ ಮಾಹಿತಿ ಕೂಡಲೇ ರವಾನೆಯಾಗಲಿದೆ.
  • ಗಣಿಗಾರಿಕೆ ಇರುವ ಪ್ರದೇಶಗಳ ಡಿಜಿಟಲ್‌ ನಕ್ಷೆಯನ್ನು ಈಗಾಗಲೇ ಉಪಗ್ರಹ ಕಣ್ಗಾವಲು ವ್ಯವಸ್ಥೆ ಅಡಿ ಅಳವಡಿಸಲಾಗಿದ್ದು, ಸ್ಥಗಿತಗೊಂಡಿರುವ ಗಣಿ ಪ್ರದೇಶಗಳ ನಕ್ಷೆಯನ್ನೂ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಹಂತಹಂತವಾಗಿ ಅಳವಡಿಸಲಾಗುವುದು.

17 ವರ್ಷದೊಳಗಿನವರ ಚೊಚ್ಚಲ ಬ್ರಿಕ್ಸ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬ್ರೆಜಿಲ್ ಗೆ ಪ್ರಶಸ್ತಿ

ಮೊದಲ ಆವೃತಿಯ 17 ವರ್ಷದೊಳಗಿನವರ ಚೊಚ್ಚಲ ಬ್ರಿಕ್ಸ್ ಪುಟ್ಬಾಲ್ ಟೂರ್ನಿಯಲ್ಲಿ ಬ್ರೆಜಿಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.  ವಿಕ್ಟರ್‌ ಗೇಬ್ರಿಯಲ್‌ ಮೌರಾ ಡಿ ಒಲಿವಿರಾ ತಂದಿತ್ತ ಎರಡು ಗೋಲುಗಳ ಬಲದಿಂದ ಬ್ರೆಜಿಲ್‌ ತಂಡ  5–1 ಗೋಲುಗಳಿಂದ ದಕ್ಷಿಣ ಆಫ್ರಿಕಾ  ತಂಡವನ್ನು ಪರಾಭವಗೊಳಿಸಿತು.

ಬ್ರಿಕ್ಸ್ ಪುಟ್ಬಾಲ್ ಟೂರ್ನಿ:

  • ಬ್ರಿಕ್ಸ್ ಅಂಡರ್ 17 ಅಥವಾ 17 ವರ್ಷದೊಳಗಿನವರ ಪುಟ್ಬಾಲ್ ಟೂರ್ನಿಯನ್ನು ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಡುವೆ ಆಯೋಜಿಸಲಾಗಿತ್ತು.
  • ಅಕ್ಟೋಬರ್ 2016ರಂದು ಈ ಟೂರ್ನಿಮೆಂಟ್ಗೆ ಚಾಲನೆ ನೀಡಲಾಗಿತ್ತು.
  • ಪ್ರತಿವರ್ಷ ಈ ಟೂರ್ನಿ ನಡೆಯಲಿದ್ದು, ಬ್ರಿಕ್ಸ್ ರಾಷ್ಟ್ರಗಳಲ್ಲಿ ಮಾತ್ರ ಆಯೋಜಿಸಲಾಗುವುದು.
  • ಟೂರ್ನಿಯಲ್ಲಿ ಎಲ್ಲಾ ಐದು ತಂಡಗಳು ಪ್ರತಿ ತಂಡಗಳ ವಿರುದ್ದ ಆಡಬೇಕು. ಅಗ್ರ ಅಂಕ ಪಡೆದ ಮೊದಲ ಎರಡು ದೇಶಗಳು ಫೈನಲ್ ನಲ್ಲಿ ಆಡಲಿವೆ.

ಎರಡನೇ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ದೆಹಲಿಯಲ್ಲಿ ಚಾಲನೆ   

ಎರಡನೇ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರು ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಉದ್ಘಾಟಿಸಿದರು. ಹತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುವುದು.

ಪ್ರಮುಖಾಂಶಗಳು:

  • ಕರಕುಶಲ, ಚಿತ್ರಕಲೆ, ತಿನಿಸು, ಜಾನಪದ ಕಲೆ, ಶಿಲ್ಪಕಲೆ ಮತ್ತು ಬುಡಕಟ್ಟು ಕಲೆಗಳನ್ನು ಪ್ರದರ್ಶಿಲಾಗುವುದು.
  • ದೇಶದ ವಿವಿಧ ಭಾಗಗಳಿಂದ 2000 ಕ್ಕೂ ಹೆಚ್ಚು ಕಲಾವಿದರು ಈ ಮಹೋತ್ಸವದಲ್ಲಿ ಭಾಗವಹಿಸಲಿದ್ದು, ವಿವಿಧ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.
  • ಪ್ರಸ್ತಕ ಸಾಲಿನಲ್ಲಿ ಒಟ್ಟು ಇಂತಹ ಐದು ಮಹೋತ್ಸವಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ವಾರಣಾಸಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ತರಹದ ಕಾರ್ಯಕ್ರಮಗಳು ನಡೆಯಲಿವೆ.
  • “ಏಕ್ ಭಾರತ್ ಶ್ರೇಷ್ಠ ಭಾರತ್”, “ಹಮಾರಿ ಸಂಸ್ಕೃತಿ ಹಮಾರಿ ಪಹ್ಚನ್” ಮತ್ತು “ಸ್ವಚ್ಚ ಭಾರತ” ಪರಿಕಲ್ಪನೆಯನ್ನು ಈ ಮಹೋತ್ಸವದಲ್ಲಿ ತಿಳಿಸಲಾಗುವುದು.

ಅಕ್ಟೋಬರ್ 15: ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ

ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುವುದು. ಗ್ರಾಮೀಣ ಮಹಿಳೆಯರ ಕೊಡುಗೆ ಮತ್ತು ಪಾತ್ರವನ್ನು ಗೌರವಿಸುವ ಸಲುವಾಗಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಗುವುದು.

ದಿನದ ಮಹತ್ವ:

ಗ್ರಾಮೀಣ ಮತ್ತು ಕೃಷಿ ಅಭಿವೃದ್ದಿ, ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಆಹಾರ ಭದ್ರತೆ ಉತ್ತಮಪಡಿಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಮತ್ತು ಕೊಡುಗೆಯನ್ನು ಎತ್ತಿಹಿಡಿಯುವುದು.

2016 ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನದ ಥೀಮ್: Climate is changing. Food and agriculture must too”.
ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ ಏಕೆ:

  • ಗ್ರಾಮೀಣ ಮಹಿಳೆಯರು ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟಿದ್ದು, ಇವರಲ್ಲಿ ಬಹುತೇಕ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಭಿತರಾಗಿದ್ದಾರೆ.
  • ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಗ್ರಾಮೀಣ ಮಹಿಳೆಯರು ಶೇ 43 ರಷ್ಟು ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ಆ ಮೂಲಕ ಆಹಾರ ಉತ್ಪಾದನೆಯಿಂದ ಆಹಾರ ಬೇಯಿಸುವ ತನಕ ಅಮೂಲ್ಯ ಕೊಡುಗೆಯನ್ನು ನೀಡುವ ಮೂಲಕ ಆಹಾರ ಭದ್ರತೆಗೆ ಗಣನೀಯ ಸೇವೆ ನೀಡುತ್ತಿದ್ದಾರೆ.
  • ಆದ್ದರಿಂದ ಆಹಾರ ಭದ್ರತೆ ಮತ್ತು ಬಡತನ ನಿರ್ಮೂಲನೆಗೆ ಇವರು ನೀಡುತ್ತಿರುವ ಸೇವೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಹಿನ್ನಲೆ:

ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸುವ ಸಲುವಾಗಿ ಡಿಸೆಂಬರ್ 2007 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ 2008 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಗಿದ್ದು, ಅಂದಿನಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಮಾಜಿ ಸಚಿವ ಸಿ ವೀರಣ್ಣರವರಿಗೆ 2016-17ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿ

2016–17ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಸಚಿವ ಸಿ. ವೀರಣ್ಣ ಅವರಿಗೆ ನೀಡಲಾಯಿತು.
ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಬಡವರ ವಕೀಲ ಎಂದೇ ಖ್ಯಾತರಾಗಿರುವ ವೀರಣ್ಣ ಅವರು ಪರಿಶಿಷ್ಟ ಸಮುದಾಯಗಳ  ಏಳಿಗೆಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು.

  • ಮಹರ್ಷಿ ವಾಲ್ಮೀಕಿ ಪ್ರಶಸ್ತಿಯು ರೂ 5 ಲಕ್ಷ ನಗದು, ಚಿನ್ನದ ಪದಕ ಮತ್ತು ಸ್ಮರಣಿಕೆ ಒಳಗೊಂಡಿದೆ.
  • ಗುಲ್ಬರ್ಗ ವಿವಿ ಕುಲಪತಿ ಡಾ. ನಿರಂಜನ್‌ ಅಧ್ಯಕ್ಷತೆಯ ಸಮಿತಿಯ ವೀರಣ್ಣ ಅವರ ಹೆಸರನ್ನು ಆಯ್ಮೆ ಮಾಡಿದೆ.

ಸಿ ವೀರಣ್ಣ ಬಗ್ಗೆ:

ತುಮಕೂರು ಜಿಲ್ಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ವೀರಣ್ಣ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು. ಹೋರಾಟದ ಹಿನ್ನೆಲೆಯುಳ್ಳ ವೀರಣ್ಣ ಸಣ್ಣ ಉಳಿತಾಯ, ಬಂದೀಖಾನೆ ಹಾಗೂ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂದರು.

2 Thoughts to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-15, 2016”

Leave a Comment

This site uses Akismet to reduce spam. Learn how your comment data is processed.