ಆಂಧ್ರಪ್ರದೇಶದ ನೀರು ಹಂಚಿಕೊಳ್ಳಿ: ಕೃಷ್ಣಾ ನ್ಯಾಯಾಧಿಕರಣ ಮಹತ್ವದ ತೀರ್ಪು
ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಹೊರಬಿದಿದ್ದು, ಆಂಧ್ರಪ್ರದೇಶದ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಣಕ್ಕೆ ನ್ಯಾಯಮಂಡಳಿ ತೀರ್ಪು ನೀಡಿದೆ. ಈ ತೀರ್ಪಿನಿಂದ ತೆಲಂಗಣಕ್ಕೆ ಹಿನ್ನಡೆ ಉಂಟಾಗಿದೆ.
ತೀರ್ಪಿನ ಪ್ರಮುಖಾಂಶಗಳು:
- ತೆಲಂಗಾಣ ರಾಜ್ಯ ಆಂಧ್ರ ಪ್ರದೇಶದೊಂದಿಗೆ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ. 2013ರಲ್ಲಿ ನೀಡಿದ್ದ ಕೃಷ್ಣಾ ನದಿ ಐ ತೀರ್ಪನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಂಧ್ರ ಪ್ರದೇಶ ರಾಜ್ಯಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣ ರಾಜ್ಯ ಕೂಡ ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ.
- ನ್ಯಾಯಾಧಿಕರಣದ ತೀರ್ಪಿನಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀರಾಳವಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ಪಾಲಿನ ನೀರಿನ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಧಿಕರಣ ಹೇಳಿದೆ.
ಹಿನ್ನಲೆ:
2010ರಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ಅಂತಿಮ ತೀರ್ಪು ಬಂದ ಬಳಿಕ ಆಂಧ್ರಪ್ರದೇಶ ಇನ್ನಷ್ಟು ನೀರು ಬೇಕು ಎಂದು ನ್ಯಾಯಾಧಿಕರಣದಲ್ಲಿ ಮರು ಅರ್ಜಿಯನ್ನು ಸಲ್ಲಿಸಿತ್ತು. 2013ರಲ್ಲಿ ಕರ್ನಾಟಕದ ಪಾಲಿನ 911 ಟಿಎಂಸಿ ನೀರಿನಲ್ಲಿ 4 ಟಿಎಂಸಿ ನೀರನ್ನು ಆಂಧ್ರಪ್ರದೇಶಕ್ಕೆ ಬಿಡುವಂತೆ ನ್ಯಾಯಾಧಿಕರಣ ಆದೇಶ ನೀಡಿತ್ತು. ಅದರಂತೆ ಮಹಾರಾಷ್ಟಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರು ಹಂಚಿಕೆಯಾಗಬೇಕೆಂದು ಆದೇಶಿಸಲಾಗಿತ್ತು.ಈ ನಡುವೆ ಪ್ರತ್ಯೇಕ ತೆಲಂಗಾಣ ರಾಜ್ಯರಚನೆಯಾದ ಬಳಿಕ ತೆಲಂಗಾಣ ಸರ್ಕಾರ ಮತ್ತೆ ನದಿ ನೀರು ಹಂಚಿಕೆ ಮಾಡಬೇಕು ಎಂದು ವಾದಿಸುತ್ತಿತ್ತು. ಈ ಹಿಂದೆ ಘೋಷಣೆಯಾಗಿದ್ದ ಮೂರು ರಾಜ್ಯಗಳ ಬದಲಿಗೆ ನೂತನ ತೆಲಂಗಾಣ ರಾಜ್ಯ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳ ನಡುವೆ ಕೃಷ್ಣಾ ನದಿ ನೀರು ಮರುಹಂಚಿಕೆ ಮಾಡಬೇಕು ಎಂದು ತೆಲಂಗಾಣ ಅರ್ಜಿ ಸಲ್ಲಿಸಿತ್ತು.ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಯೋಜನಾವಾರು ನೀರು ಹಂಚಿಕೆ ಮಾಡುವಂತೆ ತೆಲಂಗಾಣ ರಾಜ್ಯ ಸಲ್ಲಿಸಿದ್ದ ಅರ್ಜಿಯ ಇತ್ಯರ್ಥ ಪಡಿಸಿದ ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ.ಬ್ರಿಜೇಶ್ ಕುಮಾರ್ ಅವರು, ತೆಲಂಗಾಣಕ್ಕಾಗಿ ಐ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ. ಹೀಗಾಗಿ ಈ ಹಿಂದೆ ಆಂಧ್ರ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣಕ್ಕೂ ನೀರು ಬಿಡುಗಡೆ ಮಾಡಬೇಕು ಎಂದು ಹೇಳಿದೆ. ಅಂತೆಯೇ ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.
ಸರಕು ಮತ್ತು ಸೇವಾ ತೆರಿಗೆ ನಾಲ್ಕು ಸ್ಲ್ಯಾಬ್ ತೆರಿಗೆಗೆ ಕೇಂದ್ರ ಸರ್ಕಾರ ಒಲವು
ಹೊಸದಾಗಿ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಲ್ಲಿ ನಾಲ್ಕು ಸ್ಲ್ಯಾಬ್ಗಳನ್ನು ರೂಪಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಅಂದರೆ ತೆರಿಗೆಯು ಶೇ 0% ರಿಂದ ಶೇ 26% ವರೆಗೆ ಇರಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ಜಿಎಸ್ಟಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:
- ಮುಂದಿನ ಹಣಕಾಸು ವರ್ಷದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬರುವುದರಿಂದ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟ ಭರ್ತಿ ಮಾಡಿಕೊಡುವ ಬಗ್ಗೆ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ.
- ರಾಜ್ಯಗಳ ವರಮಾನ ಲೆಕ್ಕಾಚಾರ ಹಾಕುವಾಗ 5 ವರ್ಷಗಳ ಅವಧಿಯಲ್ಲಿ ವರಮಾನ ಶೇ 14ರ ದರದಲ್ಲಿ ಏರಲಿದೆ ಎನ್ನುವ ಅಂದಾಜು ಮಾಡಲಾಗಿದೆ.
- ರಾಜ್ಯವೊಂದರ ನಷ್ಟದ ಪ್ರಮಾಣ ನಿಗದಿಪಡಿಸಲು 2015–16ನೆ ವರ್ಷವನ್ನು ಮೂಲ ವರ್ಷವನ್ನಾಗಿ ಪರಿಗಣಿಸಲು ನಿರ್ಧರಿಸಲಾಗಿದೆ.
- ಕಡಿಮೆ ಆದಾಯಗಳಿಸುವ ರಾಜ್ಯಗಳಿಗೆ ಆಗುವ ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ವಿಲಾಸಿ ಸರಕುಗಳ ಮೇಲೆ ವಿಧಿಸಲಾಗುವ ಅಧಿಕ ಸೆಸ್ ಗಳಿಂದ ಬರುವ ಮೊತ್ತದಿಂದ ನಿಧಿಯೊಂದನ್ನು ಸ್ಥಾಪಿಸಿ ಅದರಿಂದ ಭರಿಸಲಾಗುವುದು.
- ಆಹಾರ ಪದಾರ್ಥಗಳಿಗೆ ವಿನಾಯ್ತಿ ನೀಡುವ ಮತ್ತು ಹಣದುಬ್ಬರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಾಮಾನ್ಯ ಬಳಕೆಯ ಶೇ 50ರಷ್ಟು ಸರಕುಗಳಿಗೆ ತೆರಿಗೆ ವಿನಾಯ್ತಿ ನೀಡುವ ತೀರ್ಮಾನಕ್ಕೂ ಬರಲಾಗಿದೆ.
ಉದ್ದೇಶಿತ ನಾಲ್ಕು ಸ್ಲ್ಯಾಬ್ ಗಳು:
- ಸರಕು ಮತ್ತು ಸೇವಾ ತೆರಿಗೆಯನ್ನು ಶೇಕಡ 6, 12, 18 ಹಾಗೂ 26ರ ನಾಲ್ಕು ಸ್ತರಗಳನ್ನು ರೂಪಿಸಲು ಹಾಗೂ ಚಿನ್ನದ ಮೇಲೆ ಶೇಕಡ 4ರ ಲೆವಿ ವಿಧಿಸಲು ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಪ್ರಸ್ತಾಪ ಮುಂದಿಟ್ಟಿದೆ.
- ಆಹಾರ, ಆರೋಗ್ಯ, ಶಿಕ್ಷಣ ಮತ್ತಿತ್ತರ ಸಾಮಾನ್ಯ ಬಳಕೆ ಕ್ಷೇತ್ರದಲ್ಲಿ ಜಿಎಸ್ಟಿ ಶೇ 0% ಇರಲಿದೆ. ವಿಲಾಸಿ ಸರಕು ಮತ್ತು ತಂಬಾಕು ಉತ್ಪನ್ನಗಳಿಗೆ ಶೇ 26% ದರ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್‌ಗಳ ಆಯೋಗದ ಸದಸ್ಯೆಯಾಗಿ ಸೈನಾ ನೆಹ್ವಲ್ ನೇಮಕ
ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಲ್ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್‌ಗಳ ಆಯೋಗದ ಸದಸ್ಯೆಯಾಗಿ ನೇಮಕವಾಗಿದ್ದಾರೆ. ಭಾರತೀಯ ಕ್ರೀಡಾಪಟು ಒಬ್ಬರಿಗೆ ಸಿಕ್ಕಿರುವ ವಿಶೇಷ ಗೌರವ ಇದಾಗಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರು ಸೈನಾಗೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದ್ದಾರೆ. ಏಂಜೆಲಾ ರುಗೆಯಿರೊ ಅವರು ಆಯೋಗದ ಅಧ್ಯಕ್ಷರಾಗಿದ್ದು, ಒಂಬತ್ತು ಮಂದಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯೋಗದಲ್ಲಿ ಒಟ್ಟು ಹತ್ತು ಮಂದಿ ಸದಸ್ಯರಿದ್ದಾರೆ.
ಸೈನಾ ನೆಹ್ವಲ್ ಬಗ್ಗೆ:
- ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. ಸೈನಾ ಅವರು ಈ ಸಾಧನೆಯನ್ನು 2012 ಲಂಡನ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮಾಡಿದರು.
- ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಮತ್ತು ಇಂಡೋನೇಷಿಯಾ ಒಪನ್ ಗೆದ್ದ ಭಾರತದ ಮೊದಲ ಕ್ರೀಡಾಪಟು.
- ಕ್ರೀಡಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಇವರಿಗೆ 2009 ರಲ್ಲಿ ಅರ್ಜುನ ಪ್ರಶಸ್ತಿ, 2009-10 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 2010 ರಲ್ಲಿ ಪದ್ಮ ಶ್ರೀ ಮತ್ತು 2016 ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
ಅಂತಾರಾಷ್ಟ್ರೀಯ ಒಲಂಪಿಕ್ ಅಥ್ಲೆಟಿಕ್ ಗಳ ಆಯೋಗ ಸಮಿತಿ:
- ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್‌ಗಳ ಆಯೋಗವನ್ನು 1981ರಲ್ಲಿ ಸ್ಥಾಪಿಸಲಾಗಿದ್ದು, ಒಲಂಪಿಕ್ ಚಾರ್ಟರ್ 21ರ ನಿಯಮದ ಪ್ರಕಾರ ಸ್ಥಾಪಿಸಲಾಗಿದೆ.
- ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ಮತ್ತು ಕ್ರೀಡಾಪಟುಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.
- ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಸಭೆ ಸೇರುವ ಮೂಲಕ ಐಒಸಿಗೆ ಸಲಹೆ ನೀಡುವ ಕೆಲಸವನ್ನು ಈ ಆಯೋಗ ಮಾಡುತ್ತಿದೆ.
ರಾಷ್ಟ್ರೀಯ ಎಸ್.ಸಿ/ಎಸ್.ಟಿ ಹಬ್ ಮತ್ತು ಝೀರೊ ಡಿಫೆಕ್ಟ್, ಝೀರೊ ಎಫೆಕ್ಟ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ಸೂಕ್ಷ, ಸಣ್ಣ ಮತ್ತು ಮಧ್ಯಮ ಉದ್ಯಮವನ್ನು ಬೆಂಬಲಿಸಲು ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿ ಉದ್ಯಮಿಗಳಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ರಾಷ್ಟ್ರೀಯ ಎಸ್ ಸಿ/ ಎಸ್ ಟಿ ಹಬ್ ಮತ್ತು ಝೀರೊ ಡಿಫೆಕ್ಟ್, ಝೀರೊ ಎಫೆಕ್ಟ್‌ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಲೂಧಿಯಾನ, ಪಂಜಾಬ್ ನಲ್ಲಿ ಚಾಲನೆ ನೀಡಿದರು. ಅಲ್ಲದೇ 500 ಮಹಿಳೆಯರಿಗೆ ಚರಕವನ್ನು ವಿತರಿಸಲಾಯಿತು.
ರಾಷ್ಟ್ರೀಯ ಎಸ್ ಸಿ/ ಎಸ್ ಟಿ ಹಬ್:
- ಎಸ್.ಸಿ/ಎಸ್.ಟಿ ಉದ್ಯಮಿಗಳಿಗೆ ವೃತ್ತಿಪರ ಬೆಂಬಲವನ್ನು ನೀಡುವುದು ಈ ಯೋಜನೆಯ ಮುಖ್ಯ ಗುರಿ.
- ರಾಷ್ಟ್ರೀಯ ಎಸ್ ಸಿ/ ಎಸ್ ಟಿ ಹಬ್, ಎಸ್ ಸಿ/ ಎಸ್ ಟಿ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಮಾರುಕಟ್ಟೆ ಪ್ರವೇಶ ಬಲಪಡಿಸುವ, ಆರ್ಥಿಕ ನೆರವಿನ ಯೋಜನೆಗಳು, ಸಮುದಾಯದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಉಪಯೋಗವಾಗಲಿದೆ.
2012ರ ಖರೀದಿ ನೀತಿ: 2012ರ ಖರೀದಿ ನೀತಿಯ ಪ್ರಕಾರ, ಕೇಂದ್ರದ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರ ಸರ್ಕಾರದ ಸ್ವಾಮ್ಯದ ಉದ್ಯಮಗಳು ಒಟ್ಟು ಖರೀದಿಯಲ್ಲಿ ಶೇ 4ರಷ್ಟನ್ನು ಎಸ್‌ಸಿ/ಎಸ್‌ಟಿ ಉದ್ಯಮಿಗಳ ಮಾಲೀಕತ್ವದ ಉದ್ಯಮಗಳಿಂದ ಖರೀದಿಸಬೇಕು.
ಝೀರೊ ಡಿಫೆಕ್ಟ್, ಝೀರೊ ಎಫೆಕ್ಟ್: ಸಣ್ಣ ಉದ್ಯಮಗಳು ಅವಕಾಶವನ್ನು ಬಳಸಿಕೊಂಡು ಯಾವುದೇ ಲೋಪಗಳಿಲ್ಲದ (ಝೀರೊ ಡಿಫೆಕ್ಟ್) ವಸ್ತುಗಳನ್ನು ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗದ ರೀತಿಯಲ್ಲಿ(ಝೀರೊ ಎಫೆಕ್ಟ್) ತಯಾರಿಸುವುದು ಈ ಯೋಜನೆಯ ಗುರಿ. ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳು ಅಪಾರ ಕೊಡುಗೆ ನೀಡುತ್ತಿದ್ದು, ಜಾಗತಿಕ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಈ ಯೋಜನೆ ಸಹಾಯವಾಗಲಿದೆ. ಝೀರೊ ಡಿಫೆಕ್ಟ್, ಝೀರೊ ಎಫೆಕ್ಟ್ ಘೋಷಣೆಯನ್ನು ಪ್ರಧಾನಿ ಮೋದಿ ಅವರು ಆಗಸ್ಟ್ 2014 ರಂದು ಸ್ವತಂತ್ರ ದಿನಾಚರಣೆ ಭಾಷಣದಲ್ಲಿ ಮೊದಲ ಬಾರಿಗೆ ಹೇಳಿದ್ದರು.
ಅಶೋಕ್ ಲೇಲ್ಯಾಂಡ್ ನಿಂದ ದೇಶದ ಮೊದಲ ವಿದ್ಯುತ್‌ಚಾಲಿತ ಬಸ್
ಹಿಂದುಜಾ ಸಮೂಹದ ಅಶೋಕ್ ಲೇಲ್ಯಾಂಡ್, ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಿಸಲಾಗಿರುವ ದೇಶದ ಮೊದಲ ವಿದ್ಯುತ್ ಚಾಲಿತ ಬಸ್ ನಿರ್ಮಿಸಿದೆ. ಈ ವಿದ್ಯುತ್ ಬಸ್ ಪರಿಸರ ಸ್ನೇಹಿಯಾಗಿದ್ದು, 0% ಹೊಗೆ ಹೂಗುಳುತ್ತದೆ. ಕೇಂದ್ರ ಸರ್ಕಾರ 2013 ರಲ್ಲಿ ಜಾರಿಗೆ ತಂದ ‘ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ ಎಂಬ ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗಿದೆ. 2020ರ ವೇಳೆಗೆ ದೇಶದಲ್ಲಿರುವ ಒಟ್ಟು ವಾಹನಗಳಲ್ಲಿ ಕನಿಷ್ಠ ಶೇ 20ರಷ್ಟು ವಾಹನಗಳು ಹೈಬ್ರಿಡ್ ಇಲ್ಲವೇ ಎಲೆಕ್ಟ್ರಿಕ್ ವಾಹನಗಳಾಗಿರಬೇಕು ಎಂಬ ಉದ್ದೇಶ ಈ ಯೋಜನೆಯದು.
ಪ್ರಮುಖಾಂಶಗಳು:
- 35 ರಿಂದ 65 ಆಸನಗಳನ್ನು ಹೊಂದಿರುವ ವಿವಿಧ ಸಾಮರ್ಥ್ಯ ಬಸ್ ಗಳನ್ನು ಕಂಪನಿ ಪರಿಚಯಿಸಲಿದೆ. ಒಮ್ಮೆ ಚಾರ್ಚ್ ಮಾಡಿದರೆ 150 ಕಿ.ಮೀ ಚಲಿಸಬಲ್ಲದು.
- ವಿದ್ಯುತ್‌ಚಾಲಿತ ಬಸ್‌ನಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಬ್ಯಾಟರಿ ಚಾಲಿತ ಆಗಿರುವುದರಿಂದ ಸಂಭವನೀಯ ಅಗ್ನಿ ಅವಗಢ ತಡೆಯಲು ಹೆಚ್ಚು ಮುತುವರ್ಜಿ ತೋರಲಾಗಿದೆ. ಸಿಸಿಟಿವಿ ಕ್ಯಾಮೆರಾ, ವೈ ಫೈ ಸೌಲಭ್ಯ ಇದೆ.
- ಸರ್ಕಾರಿ ಸಾರಿಗೆ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ಗಳನ್ನು ಹೆಚ್ಚಾಗಿ ಬಳಸುವ ಸಾಫ್ಟ್‌ವೇರ್ ಹಾಗೂ ಇತರೆ ಕಂಪೆನಿಗಳು ಈ ಬಸ್ ಅನ್ನು ಬಳಸಬಹುದಾಗಿದೆ.
- ಇದರ ಜೊತೆಗೆ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗಳು ಈ ಬಸ್ ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದರಿಂದ ಇಂಗಾಲ ಅಥವಾ ಹಸಿರು ಮನೆ ಅನಿಲ ಹೊರಸೂಸುವಿಕೆ ಗಣನೀಯವಾಗಿ ತಗ್ಗಲಿದೆ.
‘ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ 2020:
- ‘ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾಗಿದ್ದು, ಹೈಬ್ರಿಡ್ ಇಲ್ಲವೇ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.
- 2020ರ ವೇಳೆಗೆ ಕನಿಷ್ಠ 6-7 ಮಿಲಿಯನ್ ಹೈಬ್ರಿಡ್ ಇಲ್ಲವೇ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಈ ಕಾರ್ಯಕ್ರಮದಡಿ ಹೊಂದಲಾಗಿದೆ.
ಅಣ್ವಸ್ತ್ರ ಜಲಾಂತರ್ಗಾಮಿ “ಐಎನ್ಎಸ್ ಅರಿಹಂತ್” ನೌಕಪಡೆಗೆ ಸೇರ್ಪಡೆ
ದೇಶೀಯವಾಗಿ ನಿರ್ಮಿಸಲಾದ ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್ಎಸ್ ಅರಿಹಂತ್’ ಅನ್ನು ನೌಕಪಡೆಗೆ ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ ಎನಿಸಿದೆ. ರಷ್ಯಾ, ಅಮೆರಿಕ ಮತ್ತು ಚೀನಾ ಈ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಇತರೆ ರಾಷ್ಟ್ರಗಳಾಗಿವೆ. ಆಗಸ್ಟ್ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿರಲಿಲ್ಲ.
“ಐಎನ್ಎಸ್ ಅರಿಹಂತ್” ಬಗ್ಗೆ:
- ರಷ್ಯಾದ ಅಕುಲ-1 ಕ್ಲಾಸ್ ಜಲಾಂತರ್ಗಾಮಿ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ರಷ್ಯಾದ ಸಹಾಯದೊಂದಿಗೆ ಸುಧಾರಿತ ತಂತ್ರಜ್ಞಾನ ನೌಕೆ ಯೋಜನೆಯಡಿ ಅಭಿವೃದ್ದಿಪಡಿಸಲಾಗಿದೆ.
- ಇದರ ತೂಕ 6000 ಟನ್ ಗಳಿದ್ದು, 112 ಮೀಟರ್ ಉದ್ದವಿದೆ. 83 ಮೆಗಾ ವ್ಯಾಟ್ ಸಾಮರ್ಥ್ಯ ಲಘು ನೀರಿನ ಪರಮಾಣು ರಿಯಾಕ್ಟರ್ ಮೂಲಕ ಕಾರ್ಯನಿರ್ವಹಿಸುತ್ತದೆ.
- ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ.‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್ ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ.
- ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್ ಅರಿಧಾನ್’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.
Comment