2014 ಮತ್ತು 2015ನೇ ಸಾಲಿನ ಸಿನಿಮಾ ಸಾಹಿತ್ಯ ಪ್ರಶಸ್ತಿ ಪ್ರಕಟ
ರಾಜ್ಯ ಸರ್ಕಾರ ನೀಡುವ 2014 ಮತ್ತು 2015ನೇ ಸಿನಿಮಾ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಗೊಂಡಿದೆ. ಪತ್ರಕರ್ತ, ಚಲನಚಿತ್ರ ಸಂಭಾಷಣಕಾರ ಉದಯ ಮರಕಿಣಿ ಅವರ ‘ಟಚ್ ಸ್ಕ್ರೀನ್’ ಅಂಕಣ ಬರಹಗಳ ಸಂಕಲನವನ್ನು ಮತ್ತು ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
2014ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿ: ಪತ್ರಕರ್ತ, ಚಲನಚಿತ್ರ ಸಂಭಾಷಣಕಾರ ಉದಯ ಮರಕಿಣಿ ಅವರ ‘ಟಚ್ ಸ್ಕ್ರೀನ್’ ಅಂಕಣ ಬರಹಗಳ ಸಂಕಲನವನ್ನು 2014ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಟಚ್ ಸ್ಕ್ರೀನ್’ ಪುಸ್ತಕ ಪ್ರಕಟಿಸಿದ ಕೆ.ಎಂ. ವೀರೇಶ್ 2014ನೇ ಸಾಲಿನ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.
2015ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿ: ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಪುಸ್ತಕವನ್ನು 2015ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ 50 ಗ್ರಾಂ ಬೆಳ್ಳಿ ಪದಕ, ರೂ 20 ಸಾವಿರ ನಗದು ನೀಡಿ ಗೌರವಿಸಲಾಗುವುದು.
‘ಚೌಕಾಬಾರ’ಅತ್ಯುತ್ತಮ ಕಿರುಚಿತ್ರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ 2015ನೇ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ರಘು ಶಿವಮೊಗ್ಗ ನಿರ್ದೇಶಿಸಿರುವ ‘ಚೌಕಾಬಾರ’ ಕಿರುಚಿತ್ರವು ಆಯ್ಕೆಯಾಗಿದೆ. ಪ್ರಶಸ್ತಿ ರೂ 50 ಸಾವಿರ ನಗದು ಬಹುಮಾನ ಒಳಗೊಂಡಿದೆ.
ಭಾರತ-ಮ್ಯಾನ್ಮಾರ್ ನಡುವೆ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿ
ಭಾರತ ಮತ್ತು ಮ್ಯಾನ್ಮಾರ್ ನಡುವೆ ಮೂರು ಪ್ರಮುಖ ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಈ ಒಪ್ಪಂದದಿಂದಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಬಲಗೊಳ್ಳಲು ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಭೇಟಿ ನೀಡಿರುವ ಮ್ಯಾನ್ಮಾರ್ ನಾಯಕಿ ಆಂಗ್ ಸನ್ ಸೂಕಿ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಈ ಮೂರು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಸಹಿಹಾಕಲಾದ ಒಪ್ಪಂದಗಳು:
- ಮ್ಯಾನ್ಮಾರ್ ನಲ್ಲಿ ವಿಮಾ ಉದ್ಯಮ ಅಭಿವೃದ್ದಿಪಡಿಸಲು ಅಕಾಡೆಮಿ ಮತ್ತು ವೃತ್ತಿಪರ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುವುದು.
- ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದ. ಇದರಡಿ ಮಣಿಪುರದ ಮೊರೆಹ್ ನಿಂದ ಮ್ಯಾನ್ಮಾರ್ನ ಟಮು ಪ್ರದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಹೆಚ್ಚಿಸುವುದು.
- ಬ್ಯಾಂಕಿಂಗ್ ಮೇಲ್ವಿಚಾರಣೆ ಸಂಬಂಧಿಸಿದ ಒಪ್ಪಂದ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಮ್ಯಾನ್ಮಾರ್ ಸೆಂಟ್ರಲ್ ಬ್ಯಾಂಕ್ ನಡುವೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.
ಕಾಶ್ಮೀರದ ಜಿಂಕೆಗಳನ್ನು ಅಪಾಯದ ಅಂಚಿನಲ್ಲಿರುವ ಪ್ರಭೇದವೆಂದು ಘೋಷಿಸಲು ಐಯುಸಿಎನ್ ತೀರ್ಮಾನ
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ(ಐಯುಸಿಎನ್)ವು ಕಾಶ್ಮೀರದ ಜಿಂಕೆಗಳನ್ನು ಅಪಾಯದ ಅಂಚಿನಲ್ಲಿರುವ ಪ್ರಭೇದವೆಂದು ಘೋಷಿಸಲು ನಿರ್ಧರಿಸಿದೆ. ಕಾಶ್ಮೀರದ ಜಿಂಕೆಯನ್ನು ಹಂಗುಲ್ ಎಂತಲೂ ಕರೆಯಲಾಗುತ್ತದೆ. ಐಯುಸಿಎನ್ ಈ ನಿರ್ಧಾರದಿಂದ ತೀವ್ರವಾಗಿ ಕಣ್ಮರೆಯಾಗುತ್ತಿರುವ ಕಾಶ್ಮೀರದ ಜಿಂಕೆಗಳ ರಕ್ಷಣೆಗೆ ಅನುಕೂಲವಾಗಲಿದೆ.
ಕಾಶ್ಮೀರದ ಜಿಂಕೆ/ಹಂಗುಲ್:
- ಕಾಶ್ಮೀರದ ಸಾರಂಗಗಳು ಭಾರತದ ಸ್ಥಳೀಯ ಪ್ರಭೇದವಾದ ಇಲ್ಕ್ (Elk)ನ ಉಪಪ್ರಭೇದವಾಗಿವೆ.
- ಮುಂಚೆ ಇವುಗಳನ್ನು ಕೆಂಪು ಸಾರಂಗದ ಉಪಪ್ರಭೇದಗಳೆಂದು ನಂಬಲಾಗಿತ್ತು. ಆದರೆ ಇವುಗಳ ಮಿಟೋಕಾಂಡಿಯಾ ಡಿಎನ್ಎ ಅಧ್ಯಯನ ನಡೆಸಿದ ನಂತರ ಕಾಶ್ಮೀರದ ಸಾರಂಗಗಳನ್ನು ಇಲ್ಕ್ ಪ್ರಭೇದಗಳ ಉಪಪ್ರಭೇದವೆಂದು ಖಚಿತಪಡಿಸಲಾಗಿದೆ.
- ಕಾಶ್ಮೀರದ ಜಿಂಕೆಗಳು ಹೆಚ್ಚಾಗಿ ಕಾಶ್ಮೀರದ ದಟ್ಟ ನದಿ ಕಾಡು ಕಣಿವೆಗಳು ಹಾಗೂ ಕಾಶ್ಮೀರ ಕಣಿವೆಯ ಪರ್ವತ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಕಂಡುಬರುತ್ತವೆ.
- 1940ರ ಅಸುಪಾಸಿನಲ್ಲಿ 3000 ರಿಂದ 5000 ಇದ್ದ ಇವುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಪ್ರಸ್ತುತ 150 ಜಿಂಕೆಗಳನ್ನು ಮಾತ್ರ ಕಾಣಬಹುದಾಗಿದೆ. ಕಾಶ್ಮೀರದ ದಚಿಗಾಮ್ ರಾಷ್ಟ್ರೀಯ ಉದ್ಯಾನವನ ಇವುಗಳ ಸಂರಕ್ಷಣೆಗೆ ಮೀಸಲಾಗಿದೆ.
ಅಳಿವಿಗೆ ಕಾರಣ:
- ಆವಾಸಸ್ಥಾನದ ನಾಶ, ಕಳ್ಳಭೇಟೆ ಮತ್ತು ದೇಶಿಯ ಜಾನುವಾರುಗಳ ಅತಿಯಾದ ಮೇಯುವಿಕೆ ಇವುಗಳ ಅವನತಿಗೆ ಕಾರಣವಾಗಿವೆ.