ಪ್ರಾದೇಶಿಕ ಸಂಪರ್ಕ ಯೋಜನೆ “ಉಡಾನ್”ಗೆ ಕೇಂದ್ರ ಸರ್ಕಾರ ಚಾಲನೆ
ಸಣ್ಣಪುಟ್ಟ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರು ನವದೆಹಲಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಜನವರಿ 2017ರಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದ್ದು, 10 ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ.
ಉಡಾನ್ ಯೋಜನೆಯ ಪ್ರಮುಖಾಂಶಗಳು:
- ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್- ಜನಸಾಮಾನ್ಯರ ವಿಮಾನ ಹಾರಾಟಕ್ಕೆ ನೆರವು) ಯೋಜನೆಯಡಿ ಕೇಂದ್ರ ಸರ್ಕಾರ, ಬಳಕೆಯಾಗದ ಅಥವಾ ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳನ್ನು ಗುರುತಿಸಲಿದೆ.
- ವಿಶ್ವದಲ್ಲೇ ಮೊದಲು ಎನ್ನಲಾದ ಈ ಯೋಜನೆಯಡಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಅಭಿವೃದ್ದಿಪಡಿಸುವುದು ಹಾಗೂ ಬೆಳವಣಿಗೆ ಖಚಿತಪಡಿಸಿಕೊಳ್ಳಲಾಗುವುದು. 2022ರ ವೇಳೆಗೆ ಟಿಕೆಟ್ ಪರಿಮಾಣವನ್ನು ಪ್ರಸ್ತುತ ಇರುವ 80 ಮಿಲಿಯನ್ ನಿಂದ 300 ಮಿಲಿಯನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
- ಈ ಯೋಜನೆಯಲ್ಲಿ ಸಣ್ಣ ನಗರಗಳ ಮಧ್ಯೆ 9 ರಿಂದ 40 ಸೀಟುಗಳಿರುವ ಪುಟ್ಟ ವಿಮಾನಗಳು ಹಾರಾಟ ನಡೆಸಲಿವೆ. ಈ ಸೀಟುಗಳಲ್ಲಿ ಅರ್ಧದಷ್ಟು ಸೀಟುಗಳಿಗೆ ಮಾತ್ರ ಪ್ರಯಾಣ ದರ ಗರಿಷ್ಠ ರು. 2.500 ಆಗಲಿದೆ. ಇನ್ನುಳಿದ ಸೀಟುಗಳಿಗೆ ನಿಗದಿತ ಪ್ರಯಾಣ ದರ ನೀಡಬೇಕಾಗುತ್ತದೆ.
- ಗರಿಷ್ಠ 2500 ರೂ. ದರ ನಿಗದಿಯಿಂದ ವಿಮಾನ ಕಂಪನಿಗಳ ಆದಾಯ ಖೋತಾ ಆದರೆ ವ್ಯತ್ಯಾಸದ ಮೊತ್ತವನ್ನು ಸರ್ಕಾರ ಭರಿಸಲಿದೆ.
- ಇದಕ್ಕಾಗಿ ವಿಮಾನ ಪ್ರಯಾಣಿಕರ ಮೇಲೆ ಶೇ.2ರಷ್ಟು ಸೆಸ್ ವಿಧಿಸುವ ಅಥವಾ ಪ್ರಮುಖ ನಿಲ್ದಾಣಗಳಲ್ಲಿ ಇಳಿಯುವ ವಿಮಾನಗಳಿಂದ ಪ್ರತಿ ಬಾರಿಗೆ 8 ಸಾವಿರ ರೂ. ಸಂಗ್ರಹಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದು ಅಂತಿಮವಾಗಿಲ್ಲ.
- ಇದೇ ವೇಳೆ, ಹೆಲಿಕಾಪ್ಟರ್‌ಗಳಿಗೂ ಯೋಜನೆ ಆರಂಭಿಸಲಾಗಿದ್ದು, ಮೊದಲ ಅರ್ಧ ತಾಸಿನ ಯಾನಕ್ಕೆ 2500 ರೂ. ಹಾಗೂ 1 ತಾಸಿನ ನಂತರದ ಯಾನಕ್ಕೆ ಗರಿಷ್ಠ 5000 ರೂ. ನಿಗದಿಪಡಿಸಲಾಗಿದೆ.
ಯೋಜನೆ ಗುರಿ ಸಾಧನೆ ಹೇಗೆ?
- ಈ ಯೋಜನೆ ಜಾರಿ ಸಲುವಾಗಿ ದೇಶದ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಸುವ ವಿಮಾನ ಪ್ರಯಾಣಿಕರಿಗೆ ಅಲ್ಪ ಪ್ರಮಾಣದ ಲೆವಿ ಹೇರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಸುವವರು ವಿಮಾನ ಪ್ರಯಾಣಕ್ಕೆ ಒಂದಿಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಎಷ್ಟು ಲೆವಿ ಹೇರಬೇಕು ಎಂಬುದು ತೀರ್ಮಾನವಾಗಿಲ್ಲ. ಆದರೆ ಲೆವಿ ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 24: ವಿಶ್ವಸಂಸ್ಥೆ ದಿನ (United Nations Day)
ವಿಶ್ವಸಂಸ್ಥೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 24ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ಚಾರ್ಟರ್ ಅಕ್ಟೋಬರ್ 24ರಂದು ಜಾರಿಗೆ ಬಂದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುವುದು. ಅಕ್ಟೋಬರ್ 24, 1945 ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ಸೋವಿಯಟ್ ರಷ್ಯಾ ಒಕ್ಕೂಟ, ಯುಕೆ ಮತ್ತು ಅಮೆರಿಕ ರಾಷ್ಟ್ರಗಳು ಅನುಮೋದಿಸುವ ಮೂಲಕ ವಿಶ್ವಸಂಸ್ಥೆ ಚಾರ್ಟರ್ ಜಾರಿಗೆ ಬಂದಿತು.
ವಿಶ್ವಸಂಸ್ಥೆ ಚಾರ್ಟರ್ ಮಹತ್ವ:
- ವಿಶ್ವಸಂಸ್ಥೆ ಚಾರ್ಟರ್ ಅನುಮೋದಿಸಿದ ನಂತರ ವಿಶ್ವಸಂಸ್ಥೆ ಅಧಿಕೃತವಾಗಿ ಜಾರಿಗೆ ಬಂದಿದೆ. ಇದೊಂದು ಸಂವಿಧಾನಿಕ ಒಪ್ಪಂದವಾಗಿದ್ದು, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಇದರ ವಿಧಿಗಳಿಗೆ ಬದ್ದವಾಗಿರಬೇಕು. ವಿಶ್ವಸಂಸ್ಥೆ ಚಾರ್ಟರ್ ನ 103ನೇ ವಿಧಿ ಪ್ರಕಾರ ವಿಶ್ವಸಂಸ್ಥೆ ಒಪ್ಪಂದ ಇತರೆ ಒಪ್ಪಂದಗಳಿಗಿಂತ ಉನ್ನತವಾದದ್ದು.
2016 ಆಚರಣೆ:
- ಸ್ವಾತಂತ್ರ ಮೊದಲು (Freedom First) ಇದು ಈ ವರ್ಷದ ಆಚರಣೆಯ ಧ್ಯೇಯವಾಕ್ಯ. ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಜಗತ್ತಿನ ಜನತೆಗೆ ತಿಳಿಸುವುದು ಈ ವರ್ಷದ ಆಚರಣೆಯ ಮುಖ್ಯ ವಿಷಯವಾಗಿತ್ತು.
ಹಿನ್ನಲೆ:
- ಅಕ್ಟೋಬರ್ 24ರಂದು ವಿಶ್ವಸಂಸ್ಥೆ ದಿನವನ್ನು ಆಚರಿಸಲುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1971ರಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಿಶ್ವಸಂಸ್ಥೆ ಸ್ಥಾಪನೆಯ ಉದ್ದೇಶ, ಗುರಿ ಮತ್ತು ಸಾಧನೆಯನ್ನು ವಿಶ್ವದ ಜನತೆಗೆ ತಿಳಿಸುವುದು ಈ ದಿನದ ಮಹತ್ವ.
ಸಿಂಧು ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಗಳ ತ್ವರಿತಕ್ಕೆ ಸರಕಾರದ ನಿರ್ಧಾರ
ಜಮ್ಮು-ಕಾಶ್ಮೀರದಲ್ಲಿ ನೀರಾವರಿ ಪ್ರದೇಶವನ್ನು ಸುಮಾರು 2.05 ಲಕ್ಷ ಎಕರೆಗಳಷ್ಟು ಹೆಚ್ಚಿಸಲು ಸಿಂಧೂ ನದಿಕೊಳ್ಳದಲ್ಲಿ ನಾಲ್ಕು ನೀರಾವರಿ ಯೋಜನೆಗಳ ಕಾಮಗಾರಿಯನ್ನು ತ್ವರಿತಗೊಳಿಸಲು ಕೇಂದ್ರ ಸರಕಾರವು ಯೋಜನೆಯನ್ನು ಸಿದ್ದಪಡಿಸುತ್ತಿದೆ. ಸಿಂಧು ನದಿ ನೀರು ಒಪ್ಪಂದದಡಿ ಸಿಂಧು, ಝೇಲಂ, ಚೀನಾಬ್ ಸೇರಿದಂತೆ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನದಿಗಳಲ್ಲಿಯ ತನ್ನ ಪಾಲಿನ ಗರಿಷ್ಠ ನೀರನ್ನು ಬಳಸಿಕೊಳ್ಳಲು ಇತ್ತೀಚಿಗೆ ನಿರ್ಧರಿಸಿದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಪ್ರಮುಖಾಂಶಗಳು:
- ಈ ಯೋಜನೆಗಳ ಪೈಕಿ ಕಾರ್ಗಿಲ್ನ ಪ್ರಾಕಚಿಕ್ ಖೌಸ್ ಕಾಲುವೆ, ಪುಲ್ವಾಮಾದಲ್ಲಿನ ಟ್ರಾಲ್ ನೀರಾವರಿ ಯೋಜನೆ ಹಾಗೂ ಜಮ್ಮುವಿನ ಸಾಂಬಾ ಮತ್ತು ಕಥುವಾದ ಮುಖ್ಯ ರಾವಿ ಕಾಲುವೆಯ ಪುನರುಜ್ಜೀವನ ಮತ್ತು ಆಧುನೀಕರಣ ಇವು ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಾಲ್ಕನೇ ಯೋಜನೆಯಾದ ರಾಜಪೋರಾ ಏತ ನೀರಾವರಿ ಯೋಜನೆ 2019, ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ.
- ಮೊದಲ ಮೂರು ಯೋಜನೆಗಳು 1.45 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲಿವೆ. ರಾಜಪೋರಾ ಏತ ನೀರಾವರಿ ಯೋಜನೆ 59.035 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಿದೆ. ಈ ಎಲ್ಲ ಯೋಜನೆಗಳಿಗೆ 117 ಕೋ.ರೂ.ವೆಚ್ಚವಾಗುವ ನಿರೀಕ್ಷೆಯಿದ್ದು, ಈ ಹಣವನ್ನು ನಬಾರ್ಡ್ ಒದಗಿಸಲಿದೆ.
ಹಿನ್ನಲೆ:
ಜಮ್ಮು-ಕಾಶ್ಮೀರದಲ್ಲಿ ಈವರೆಗೆ ಏಳು ಲಕ್ಷ ಎಕರೆ ಭೂಮಿ ನೀರಾವರಿ ಸೌಲಭ್ಯ ಕ್ಕೊಳಪಟ್ಟಿದೆ. ಇದು ಅತ್ಯಲ್ಪ ಪ್ರಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿಯ ಒಟ್ಟು ನೀರಾವರಿ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸಲು ಈ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿದವು. ಭಾರತವು ತಾಂತ್ರಿಕವಾಗಿ ರಾಜ್ಯದ 13 ಲಕ್ಷ ಎಕರೆ ಭೂಮಿಗೆ ನೀರುಣ್ಣಿಸ ಬಹುದಾಗಿದೆ. ರಾಜ್ಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಸೌಲಭ್ಯವಿದ್ದರೆ ಈ ಗುರಿಯನ್ನು ಸಾಧಿಸಬಹುದಾಗಿದೆ ಎಂದ ಮೂಲಗಳು, ಯೋಜನೆ ಕಾಮಗಾರಿಗಳನ್ನು ಭಾರತದ ಹಕ್ಕಿನ ವ್ಯಾಪ್ತಿಯಲ್ಲಿಯೇ ನಡೆಸಲಾಗುತ್ತಿದೆ ಮತ್ತು ಇದು ಪಾಕಿಸ್ತಾನಕ್ಕೆ ನೀರಿನ ಹರಿವಿನ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದವು.
ಅಕ್ಟೋಬರ್ 24: ಇಂಡೋ-ಟಿಬೆಟ್ ಗಡಿ ಪೊಲೀಸ್ ಸಂಸ್ಥಾಪನ ದಿನ
ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ತನ್ನ 55ನೇ ಸಂಸ್ಥಾಪನ ದಿನವನ್ನು ಅಕ್ಟೋಬರ್ 24, 2016 ರಂದು ಆಚರಿಸಿಕೊಂಡಿತು. ಲಡಾಕ್ನ ಕಾರಕೋರಂ ಪಾಸ್ ನಿಂದ ಅರುಣಾಚಲ ಪ್ರದೇಶದ ಜಚೆಪ್ ಲಾ ವರೆಗಿನ ಚೀನಾ-ಭಾರತ ನಡುವಿನ 3488 ಕಿ.ಮೀ ಗಡಿ ಭಾಗವನ್ನು ಕಾಯಲು ಐಟಿಬಿಪಿಯನ್ನು ನಿಯೋಜಿಸಲಾಗಿದೆ.
ಇಂಡೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಬಗ್ಗೆ:
- ಇಂಡೋ-ಟಿಬೆಟ್ ಗಡಿ ಪೊಲೀಸ್ ಭಾರತ ಸರ್ಕಾರದ ಶಾಸನಬದ್ದ ಎಂಟು ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದಾಗಿದೆ. ಚೀನಾ-ಭಾರತ ಯುದ್ದ ನಂತರ ಐಟಿಬಿಪಿಯನ್ನು 24 ಅಕ್ಟೋಬರ್ 1962 ರಲ್ಲಿ ಸಿಆರ್ಪಿಎಫ್ ಕಾಯಿದೆಯಡಿ ಸ್ಥಾಪಿಸಲಾಗಿದೆ.
- 1992 ರಲ್ಲಿ ಇಂಡೋ-ಟಿಬೆಟ್ ಗಡಿ ಪೊಲೀಸ್ ಕಾಯಿದೆಯನ್ನು ಜಾರಿಗೆ ತಂದು ಐಟಿಬಿಪಿ ಸಂಪೂರ್ಣ ಸ್ವಾಯುತ್ತತೆಯನ್ನು ನೀಡಲಾಗಿದೆ. ಪ್ರಸ್ತುತ ಐಟಿಬಿಪಿ ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.
- ಸದ್ಯ 50,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಪ್ರಬಲ ಪಡೆ ಇದಾಗಿದೆ.
- ಐಟಿಬಿಪಿ ಪಡೆಯನ್ನು ವಿವಿಧ ಆಂತರಿಕ ಕಾರ್ಯಾಚರಣೆಗಳಾದ ನಾಗರಿಕ ವೈದ್ಯಕೀಯ ಕ್ಯಾಂಪ್, ವಿಪತ್ತು ನಿರ್ವಹಣೆ, ಪರಮಾಣು, ಜೈವಿಕ ಮತ್ತು ರಾಸಾಯನಿಕ ವಿಪತ್ತು ಹಾಗೂ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಯಲ್ಲು ಬಳಸಿಕೊಳ್ಳಲಾಗುತ್ತಿದೆ.
2016 ಕಬಡ್ಡಿ ವಿಶ್ವ ಕಪ್: ಭಾರತಕ್ಕೆ ಒಲಿದ ಪ್ರಶಸ್ತಿ
ಭಾರತ 2016 ವಿಶ್ವಕಪ್ ಕಬಡ್ಡಿ ಅನ್ನು ಮುಡಿಗೇರಿಸಿಕೊಂಡಿತು. ಅಹಮದಬಾದ್ ಅರೆನಾ ಬೈ ಟ್ರಾನ್ಸ್ಟಿಂಡಿಯಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 38-29 ಅಂಕಗಳಿಂದ ಸೋಲಿಸಿ ಭಾರತ ಮತ್ತೊಮ್ಮೆ ತನ್ನ ಪಾರತಮ್ಯ ಮೆರೆಯಿತು. ಭಾರತಕ್ಕೆ ಇದು ಸತತ ಮೂರನೇ ವಿಶ್ವಕಪ್ ಆಗಿದೆ. ಈ ಹಿಂದೆ 2004 ಮತ್ತು 2007 ರಲ್ಲಿ ವಿಶ್ವಕಪ್ ಗೆದ್ದುಕೊಂಡಿತ್ತು.
ಕಬಡ್ಡಿ ವಿಶ್ವಕಪ್:
- ಕಬಡ್ಡಿ ವಿಶ್ವಕಪ್ ಅನ್ನು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಆಯೋಜಿಸುತ್ತಿದೆ.
- 2004, 2007 ಮತ್ತು 2016 ರಲ್ಲಿ ಕಬಡ್ಡಿ ವಿಶ್ವಕಪ್ ನಡೆಸಲಾಗಿದೆ.
- ಮೂರು ವಿಶ್ವಕಪ್ ನಲ್ಲಿ ಭಾರತ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅಮೋಘ ಸಾಧನೆಯನ್ನು ಮಾಡಿದೆ.
ಅರೆನಾ ಬೈ ಟ್ರಾನ್ಸ್ಟಿಂಡಿಯಾ:
- ಅರೆನಾ ಬೈ ಟ್ರಾನ್ಸ್ಟಿಂಡಿಯಾ ಭಾರತದ ಮೊದಲ ಪರಿವರ್ತನಾ ಕ್ರೀಡಾಂಗಣ. ಜಾಗತಿಕ ಪೇಟೆಂಟ್ ತಂತ್ರಜ್ಞಾನವನ್ನು ಈ ಕ್ರೀಡಾಂಗಣದಲ್ಲಿ ಬಳಸಿಕೊಳ್ಳಲಾಗಿದ್ದು, ಒಂದು ಬಟನ್ ಒತ್ತುವ ಮೂಲಕ ಆರು ನಿಮಿಷಗಳಲ್ಲಿ ಹೊರಾಂಗಣ ಕ್ರೀಡಾಂಗಣ ಒಳಾಂಗಣ ಕ್ರೀಡಾಂಗಣವಾಗಿ ಪರಿವರ್ತನೆಗೊಳ್ಳಲಿದೆ.
- ಕ್ರಿಕೆಟ್ ಹೊರತುಪಡಿಸಿ 14 ಕ್ರೀಡೆಗಳನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಬಹುದು. ಈ ಕ್ರೀಡಾಂಗಣ 20,000 ಆಸನಗಳನ್ನು ಹೊಂದಿದೆ.
ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಅಕ್ಷರ ಪ್ರತಿಷ್ಠಾನ ಹಾಗೂ ಅಕ್ಷಯ ಪಾತ್ರ ಸಂಸ್ಥೆಗಳ ಜೊತೆ ರಾಜ್ಯ ಸರ್ಕಾರ ಒಪ್ಪಂದ
ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಳ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಸಲುವಾಗಿ ಅಕ್ಷರ ಪ್ರತಿಷ್ಠಾನ ಹಾಗೂ ಅಕ್ಷಯ ಪಾತ್ರ ಸಂಸ್ಥೆಗಳ ಜೊತೆ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿಹಾಕಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಈ ವಿಷಯವನ್ನು ತಿಳಿಸಿದ್ದಾರೆ.
ಪ್ರಮುಖಾಂಶಗಳು:
- ಗಣಿತ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಸುವ ಸಲುವಾಗಿ ಅಕ್ಷರ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರತಿ ಶಾಲೆಗೆ ಗಣಿತ ಕಿಟ್ ಪೂರೈಕೆ ಹಾಗೂ ಕಿಟ್ ಬಳಕೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.
- ಮೊದಲ ಹಂತವಾಗಿ ಹೈದರಾಬಾದ್ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಯಾದಗಿರಿಯಲ್ಲಿರುವ 7515 ಶಾಲೆಗಳಲ್ಲಿ 3ಲಕ್ಷ ಮಕ್ಕಳಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
- ಎರಡನೆ ಹಂತವಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಗದಗ ಹಾಗೂ ಧಾರವಾಡದ 4149 ಶಾಲೆಗಳ 1.29ಲಕ್ಷ ಮಕ್ಕಳಿಗೆ ಮೂರು ವರ್ಷದ ಅವಧಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
- ಅಕ್ಷಯ ಪಾತ್ರ ಪ್ರತಿಷ್ಠಾನದೊಂದಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಲ್ಲಿ ಸಾರವರ್ಧಿತ ಅಕ್ಕಿ ಬಳಕೆ ಮಾಡುವ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪ್ರಾರಂಭಿಕ ಹಂತವಾಗಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ 4.5ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗ ಲಭಿಸಲಿದೆ.