ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (DRS) ಅಳವಡಿಸಿಕೊಳ್ಳಲು ಬಿಸಿಸಿಐ ಒಪ್ಪಿಗೆ
ನವೆಂಬರ್ ತಿಂಗಳಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಅಳವಡಿಸಿಕೊಳ್ಳಲು ಬಿಸಿಸಿಐ ಸಮ್ಮತಿಸಿದೆ. ಇದು ಪ್ರಾಯೋಗಿಕವಾಗಿ ಜಾರಿಯಾಗುತ್ತಿದ್ದು ಸಾಧಕ–ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಡಿಆರ್ಎಸ್ ವ್ಯವಸ್ಥೆ ಅಳವಡಿಸಿಕೊಳ್ಳಲು ಬಿಸಿಸಿಐ, ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಇತರೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.
ತಂತ್ರಜ್ಞಾನದಲ್ಲಿ ಬದಲಾವಣೆ:
- ಮೆಸ್ಸಾಚುಸೆಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅನುಮೋದಿತ ಸುಧಾರಿತ ತಂತ್ರಜ್ಞಾನ ಆಧರಿತ ಯುಡಿಆರ್‌ಎಸ್ ವ್ಯವಸ್ಥೆಯನ್ನು ಮುಂಬರಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಜಾರಿಗೊಳಿಸಲಾಗುವುದು. ಈ ತಂತ್ರಜ್ಞಾನದಲ್ಲಿ ಬಾಲನ್ನು ನಿಖರವಾಗಿ ಗ್ರಹಿಸಲು ಅಲ್ಟ್ರಾಮೋಷನ್ ಕ್ಯಾಮೆರ ಹಾಗೂ ಅಲ್ಟ್ರಾಎಡ್ಜ್ ಧ್ವನಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ.
ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ:
- ಡಿಆರ್ಎಸ್ ಒಂದು ತಂತ್ರಜ್ಞಾನ ಆಧರಿತ ವ್ಯವಸ್ಥೆಯಾಗಿದ್ದು, ಕ್ರಿಕೆಟ್ ಆಟದಲ್ಲಿ ಅಂಪೈರ್ ಗಳ ವಿವಾದತ್ಮಕ ತೀರ್ಪನ್ನು ಮರುಪರಿಶೀಲಿಸಲು ಬಳಸಲಾಗುತ್ತದೆ. 2008ರಲ್ಲಿ ಭಾರತ-ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಬಳಸಲಾಗಿತ್ತು.
- ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2009ರಲ್ಲಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಈ ವ್ಯವಸ್ಥೆಯನ್ನು ಬಳಸಲು ಅಧಿಕೃತವಾಗಿ ಚಾಲನೆ ನೀಡಿತು.
- ಆರಂಭದ ದಿನಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿತ್ತು. ಆದರೆ ವ್ಯವಸ್ಥೆಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ತನ್ನ ನಿಲುವನ್ನು ಸಡಿಲಗೊಳಿಸಿದ ಐಸಿಸಿ, ಎರಡು ತಂಡಗಳು ಒಪ್ಪಿದರೆ ಮಾತ್ರ ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿತು.
ಡಿಆರ್ಎಸ್ ಕಾರ್ಯ ನಿರ್ವಹಣೆ ಹೇಗೆ:
- ಈ ವ್ಯವಸ್ಥೆಯು ಹಲವಾರು ಆಫ್-ಫೀಲ್ಡ್ ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನಗಳನ್ನು ಬಳಸಿ ಮೂರನೇ ಅಂಪೈರ್ ಫೀಲ್ಡ್ ನಲ್ಲಿರುವ ಅಂಪೈರ್ ಗಳಿಗೆ ತಾವು ನೀಡಿದ ತೀರ್ಪನ್ನು ಹಿಂಪಡೆಯಲು ಅಥವಾ ಎತ್ತಿಹಿಡಿಯಲು ಸೂಚಿಸುತ್ತಾರೆ.
ಬಳಸಲಾಗುವ ಆಫ್-ಫೀಲ್ಡ್ ತಂತ್ರಜ್ಞಾನಗಳು:
- ಟಿವಿ ಕ್ಯಾಮೆರಾ, ಹಾಟ್ ಸ್ಪಾಟ್, ಹಾಕ್-ಕಿ, ರಿಯಲ್ ಟೈಮ್ ಸ್ನಿಕೋಮೀಟರ್.
ಮುಂಬೈನಲ್ಲಿ ಪಶ್ಚಿಮ ವಲಯ ಮಂಡಳಿ (Western Zonal Council) ಸಭೆ
ಪಶ್ಚಿಮ ವಲಯ ಮಂಡಳಿಯ 22ನೇ ಸಭೆಯನ್ನು ಇತ್ತೀಚೆಗೆ ಮುಂಬೈ, ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿತ್ತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪಶ್ಚಿಮ ವಲಯ ಮಂಡಳಿಯು ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ, ಡಮನ್ ಮತ್ತು ಡಿಯುಗಳನ್ನು ಒಳಗೊಂಡಿದೆ.
ಪ್ರಮುಖಾಂಶಗಳು:
- ಈ ಸಭೆಯಲ್ಲಿ ಪಶ್ಚಿಮ ವಲಯ ಮಂಡಳಿಯ ರಾಜ್ಯಗಳ ಮುಖ್ಯಮಂತ್ರಿ ಮತ್ತು ಸಚಿವರುಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಡ್ಮಿನಿಸ್ಟ್ರೇಟರ್ ಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
- ಆಂತರಿಕ ಭದ್ರತೆ, ಕರಾವಳಿ ಭದ್ರತೆ, ಮೀನುಗಾರರಿಗೆ ಬಯೋ-ಮೆಟ್ರಿಕ್ ಕಾರ್ಡ್ ವಿತರಣೆ, ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವುದು ಮತ್ತು ಭಯೋತ್ಪಾದನೆ ವಿರುದ್ದ ಹೋರಾಡಲು ಯೋಜನೆ ರೂಪಿಸುವ ಕುರಿತಾಗಿ ಚರ್ಚಿಸಲಾಯಿತು.
- ಸಭೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ಯೋಜನೆಯಾದ “ಪ್ರಧಾನ ಮಂತ್ರಿ ಆವಾಸ್ ಯೋಜನೆ”ಯಡಿ ನಗರವಾಸಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವದರ ಬಗ್ಗೆಯು ಚರ್ಚಿಸಲಾಯಿತು.
- ವಾಪಿ ಕೈಗಾರಿಕೆ ಪ್ರದೇಶದಿಂದ ಕೈಗಾರಿಕ ತ್ಯಾಜ್ಯವನ್ನು ಡಮನ್ ಗಂಗಾ ನದಿ ಮತ್ತು ಕೊಲಕ್ ನದಿಗೆ ಬಿಡುವ ಕಾರಣ ಉಂಟಾಗಿರುವ ಜಲ ಮಾಲಿನ್ಯದ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.
ವಲಯ ಮಂಡಳಿಗಳು:
- ವಲಯ ಮಂಡಳಿಗಳನ್ನು ಸಂಸತ್ತಿನಿಂದ ರೂಪಿಸಲಾದ ರಾಜ್ಯ ಪುನರ್ವಿಂಗಡಣಾ ಕಾಯ್ದೆ 1956ರ ಮೂಲಕ ಸ್ಥಾಪಿಸಲಾಗಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ಹಾಗೂ ಅಂತರರಾಜ್ಯ ಸಂಬಂಧಗಳನ್ನು ಸುಧಾರಿಸಲು ಈ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
- ಪ್ರಸ್ತುತ ಭಾರತವನ್ನು ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ ಉತ್ತರ ವಲಯ ಮಂಡಳಿ, ದಕ್ಷಿಣ ವಲಯ ಮಂಡಳಿ, ಪಶ್ಚಿಮ ವಲಯ ಮಂಡಳಿ, ಪೂರ್ವ ವಲಯ ಮಂಡಳಿ ಮತ್ತು ಕೇಂದ್ರ ವಲಯ ಮಂಡಳಿ.
- ರಾಷ್ಟ್ರದ ನೈಸರ್ಗಿಕ ವಿಭಾಗಗಳು, ನದಿ ವ್ಯವಸ್ಥೆಗಳು, ಸಂಪರ್ಕ ವ್ಯವಸ್ಥೆ, ಸಾಂಸ್ಕೃತಿಕ ಮತ್ತು ಭಾಷಾ ಒಲವು, ಆರ್ಥಿಕ ಅಭಿವೃದ್ದಿಯ ಅಗತ್ಯಗತೆಗಳು, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ವಲಯ ಮಂಡಳಿಗಳ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ.
ವಿಶೇಷ ಸೂಚನೆ:
- ಈ ಮೇಲಿನ ವಲಯ ಮಂಡಳಿಗಳಲ್ಲಿ ಈಶಾನ್ಯ ರಾಜ್ಯಗಳನ್ನು ಸೇರಿಸಲಾಗಿಲ್ಲ. ಬದಲಿಗೆ 1971ರ ಕಾಯ್ದೆಯ ಮೂಲಕ ಈಶಾನ್ಯವಲಯ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ವಲಯ ಆಗಸ್ಟ್ 8, 1972 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇತರೆ ಮಂಡಳಿಗಳಂತೆ ಕೇಂದ್ರ ಗೃಹ ಸಚಿವರು ಈ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
- ಈಶಾನ್ಯ ವಲಯ ಮಂಡಳಿಯು ಅಸ್ಸಾಂ, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮೇಘಾಲಯ, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳನ್ನು ಒಳಗೊಂಡಿದೆ.
ಎವರೆಸ್ಟ್ ಹತ್ತಿದ ಮೊದಲ ಮಹಿಳೆ ಜಪಾನಿನ “ಜುನ್ಕೊ ಟಬೈ” ನಿಧನ
ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ, ಜಪಾನಿನ ಪರ್ವತಾರೋಹಿ ಜುನ್ಕೊ ಟಬೈ (77) ನಿಧನ ಹೊಂದಿದರು. ಮೂಲತಃ ಫುಕುಶಿಮಾದವರಾಗಿದ್ದ ಅವರು ಕಳೆದ 4 ವರ್ಷಗಳಿಂದ ಅವರು ಉದರ ಕ್ಯಾನ್ಸರ್ನಿಂದ ಬಳಲುತ್ತಿದ್ದರು.
- ಟಬೈ ಅವರು ಎವರೆಸ್ಟ್ನು 1975ರಲ್ಲಿ ಹತ್ತಿದ್ದರು. ಆಗ ಅವರಿಗೆ 35 ವರ್ಷ ವಯಸ್ಸಾಗಿತ್ತು. ಎವರೆಸ್ಟ್ ಏರಲು 12 ದಿನ ತೆಗೆದುಕೊಂಡಿದ್ದರು. ಆ ವೇಳೆ ಹಿಮಪಾತದಲ್ಲಿ ಸಿಲುಕಿಕೊಂಡಿದ್ದರು. ಅದರಿಂದ ಹೊರಬಂದು ಪರ್ವತಾರೋಹಣವನ್ನು ಮುಂದುವರಿಸಿದ್ದರು.
- 1992ರ ವೇಳೆಗೆ ವಿಶ್ವದ ಎಲ್ಲಾ 7 ಎತ್ತರದ ಶಿಖರಗಳನ್ನು ಏರಿದ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
- ಟಬೈ ಎವರೆಸ್ಟ್ ಏರಿದ ವಿಶ್ವದ ಮೊದಲ ಮಹಿಳೆಯಾಗಿದ್ದರೆ.
- ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿಪಾಲ್. 1984ರಲ್ಲಿ ಪಾಲ್ ಪರ್ವತಾರೋಹಣ ಮಾಡಿದ್ದರು.
ಐವರು ಶಿಲ್ಪಿಗಳಿಗೆ 2016ನೇ ಸಾಲಿನ ಶಿಲ್ಪಕಲಾ ಅಕಾಡಮಿ ಗೌರವ ಪ್ರಶಸ್ತಿ
ಕರ್ನಾಟಕ ಶಿಲ್ಪಕಲಾ ಅಕಾಡಮಿ ವತಿಯಿಂದ ಐದು ಮಂದಿ ಶಿಲ್ಪಿಗಳಿಗೆ 2016 ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ತಲಾ 50 ಸಾವಿರ ರೂ.ಗಳು ನಗದು ಮತ್ತು ನೆನಪಿನ ಕಾಣಿಕೆಯನ್ನು ಹೊಂದಿದೆ. ಸೆಪ್ಟೆಂಬರ್ನಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.
ಪ್ರಶಸ್ತಿ ವಿಜೇತರು:
- ಶಿವಮೊಗ್ಗ ಜಿಲ್ಲೆಯ ಕೆ.ನಾರಾಯಣ ರಾವ್ (ಸಂಪ್ರದಾಯ ಶಿಲ್ಪ)
- ರಾಯಚೂರು ಜಿಲ್ಲೆಯ ಮಾನಯ್ಯ ಬಡಿಗೇರ (ರಥ ಶಿಲ್ಪ)
- ಕೋಲಾರ ಜಿಲ್ಲೆಯ ಎಸ್. ಮಂಜುನಾಥ ಆಚಾರ್ಯ (ಸಂಪ್ರದಾಯ ಶಿಲ್ಪ)
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ.ವೆಂಕಟೇಶ್ (ಸಮಕಾಲೀನ ಶಿಲ್ಪ)
- ಕಲಬುರಗಿ ಜಿಲ್ಲೆಯ ಶೋಭಾ ಕಂಬಾರ (ಸಂಪ್ರದಾಯ ಶಿಲ್ಪ)
ಇವರುಗಳಿಗೆ ಕಲಾ ಪ್ರಶಸ್ತಿ ನೀಡಲಾಗುತ್ತಿದೆ.