ಸಮಾನ ಶ್ರೇಣಿ ಸಮಾನ ಪಿಂಚಣಿ ನ್ಯಾಯಾಂಗ ಸಮಿತಿ ವರದಿ ಸಲ್ಲಿಕೆ
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ರಚಿಸಿದ್ದ ಏಕ ಸದಸ್ಯ ನ್ಯಾಯಾಂಗ ಸಮಿತಿ ತನ್ನ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಅವರಿಗೆ ಸಲ್ಲಿಸಿದೆ. ಪಾಟ್ನಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ನರಸಿಂಹ ರೆಡ್ಡಿ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ಡಿಸೆಂಬರ್ 2015ರಲ್ಲಿ ನೇಮಿಸಿತ್ತು. ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಅನುಷ್ಟಾನಕ್ಕೆ ಎದುರಾಗಬಹುದಾದ ಗೊಂದಲಗಳನ್ನು ನಿವಾರಿಸುವ ಬಗ್ಗೆ ಅಧ್ಯಯನ ನಡೆಸಿ ಶಿಫಾರಸ್ಸು ನಡೆಸುವಂತೆ ಸಮಿತಿಗೆ ಸೂಚಿಸಲಾಗಿತ್ತು. ಸಮಿತಿಯು ದೇಶದ ಸುಮಾರು 20 ನಗರ ಮತ್ತು ಪಟ್ಟಣಗಳಲ್ಲಿ ಮಾಜಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ಸಲ್ಲಿಸಿದೆ.
ಸಮಾನ ಶ್ರೇಣಿ ಸಮಾನ ಪಿಂಚಣಿ ಎಂದರೇನು?
ಸಮಾನ ಶ್ರೇಣಿ- ಸಮಾನ ಪಿಂಚಣಿ ಯೋಜನೆ ಎಂದರೆ ಒಂದೇ ಶ್ರೇಣಿಯಲ್ಲಿ, ಸಮಾನ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಬೇರೆ ಬೇರೆ ದಿನಾಂಕಗಳಂದು ನಿವೃತ್ತಿಯಾದರೂ, 1973ರ ಭಾರತೀಯ ಸಶಸ್ತ್ರ ಪಡೆಗಳ ಕಾಯ್ದೆಯಲ್ಲಿ ನೀಡಲ್ಪಟ್ಟ ಪಿಂಚಣಿ ಹಾಗೂ ಇತರ ಪ್ರಯೋಜನಗಳನ್ನು ಸಮಾನವಾಗಿ ನೀಡುವ ಯೋಜನೆ ಇದಾಗಿದೆ. ಸರಳವಾಗಿ ಹೇಳುವುದಾದರೆ, ಯಾವುದೇ ವರ್ಷ ಅವರು ನಿವೃತ್ತಿಯಾಗಿದ್ದರೂ, ಆ ಶ್ರೇಣಿಯಲ್ಲಿ, ಅಷ್ಟೇ ವರ್ಷ ಸೇವೆಸಲ್ಲಿಸಿದ ಇತರರಿಗೆ ಸಮಾನವಾದ ಪಿಂಚಣಿಯನ್ನು ಪಡೆಯುತ್ತಾರೆ. ಆದರೆ ಈ ಪಿಂಚಣಿಯಲ್ಲಿ ಭಿನ್ನತೆಯ ಏಕೈಕ ಕಾರಣವೆಂದರೆ, ಆ ಶ್ರೇಣಿಯಲ್ಲಿ ಸೇವಾವಧಿಯಲ್ಲಿ ಆತ ವೇತನ ಬಡ್ತಿಯನ್ನು ಪಡೆದಿದ್ದರೆ ಮಾತ್ರ ಪಿಂಚಣಿಯಲ್ಲಿ ಬದಲಾವಣೆಯಾಗುತ್ತದೆ.
ವಿಶ್ವಬ್ಯಾಂಕ್ ಸುಲಭ ವಹಿವಾಟು ಸೂಚ್ಯಂಕ: ಭಾರತಕ್ಕೆ 130ನೇ ಸ್ಥಾನ
ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ಸುಲಭ ವಹಿವಾಟು ಸೂಚ್ಯಂಕ-2017 (Easy of Doing Business Index) ರಲ್ಲಿ 190 ರಾಷ್ಟ್ರಗಳ ಪೈಕಿ ಭಾರತ 130ನೇ ಸ್ಥಾನಗಳಿಸಿದೆ. ಕಳೆದ ವರ್ಷದ ಸೂಚ್ಯಂಕದಲ್ಲಿ ಭಾರತ 131ನೇ ಸ್ಥಾನದಲ್ಲಿತ್ತು. ಕೇವಲ ಒಂದು ಸ್ಥಾನವನ್ನು ಮಾತ್ರ ಉತ್ತಮಪಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.
2017 ವರದಿಯ ಪ್ರಮುಖಾಂಶಗಳು:
- ಟಾಪ್ ಹತ್ತು ರಾಷ್ಟ್ರಗಳು: ನ್ಯೂಜಿಲ್ಯಾಂಡ್, ಸಿಂಗಾಪುರ, ಡೆನ್ಮಾರ್ಕ್, ಹಾಂಕ್ ಕಾಂಗ್, ದಕ್ಷಿಣ ಕೊರಿಯಾ, ನಾರ್ವೆ, ಯುಕೆ, ಯುಎಸ್, ಸ್ವೀಡನ್ ಮತ್ತು ಮಸಿಡೊನಿಯ.
- ಬ್ರಿಕ್ಸ್ ರಾಷ್ಟ್ರಗಳ ಪೈಕಿ: ಬ್ರಿಕ್ಸ್ ರಾಷ್ಟ್ರಗಳ ಪೈಕಿ ಭಾರತ ಸುಲಭ ವಹಿವಾಟು ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಹಿಂದಿ ಉಳಿದಿದೆ. ಬ್ರಿಕ್ಸ್ ರಾಷ್ಟ್ರಗಳಲ್ಲಿ ರಷ್ಯಾ (40ನೇ), ದಕ್ಷಿಣ ಆಫ್ರಿಕಾ (74), ಚೀನಾ (78), ಬ್ರೆಜಿಲ್ (123) ಮತ್ತು ಭಾರತ (130) ಸ್ಥಾನ ಪಡೆದುಕೊಂಡಿವೆ.
- ಭಾರತದ ನೆರೆಹೊರೆ ರಾಷ್ಟ್ರಗಳು: ಭೂತಾನ್ (73), ಚೀನಾ (78), ನೇಪಾಳ (107), ಶ್ರೀಲಂಕಾ (110), ಪಾಕಿಸ್ತಾನ (144) ಮತ್ತು ಬಾಂಗ್ಲದೇಶ (176).
- ಭಾರತಕ್ಕೆ ಸಂಬಂಧಿಸಿದಂತೆ: ವರದಿಯ ಪ್ರಕಾರ ವಿದ್ಯುತ್ ಸಂಪರ್ಕ ನೀಡುವ ವಿಷಯಗಳಲ್ಲಿ ಭಾರತ ಉತ್ತಮ ಸಾಧನೆ ತೋರಿದೆ. ಆದರೆ ತೆರಿಗೆ ಪಾವತಿ, ಗುತ್ತಿಗೆ ನೀಡುವ ವಿಚಾರದಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಬೇಕಿದೆ.
ಸುಲಭ ವಹಿವಾಟು ಸೂಚ್ಯಂಕ:
- ಸುಲಭ ವಹಿವಾಟು ಸೂಚ್ಯಂಕವನ್ನು ವಿಶ್ವಬ್ಯಾಂಕ್ ಪ್ರತಿ ವರ್ಷ ಹೊರತರುತ್ತಿದೆ. 2004 ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಗಿತ್ತು.
- ಸೂಚ್ಯಂಕದಲ್ಲಿ 10 ಮಾನದಂಡಗಳನ್ನು ಆಧರಿಸಿ ರಾಷ್ಟ್ರಗಳಿಗೆ ಶ್ರೇಣಿಯನ್ನು ನೀಡಲಾಗುತ್ತದೆ.
- ಈ ಹತ್ತು ಮಾನದಂಡಗಳೆಂದರೆ ವಿದ್ಯುತ್ ಸಂಪರ್ಕ ಪಡೆಯುವುದು, ನಿರ್ಮಾಣ ಪರವಾನಿಗೆ, ಆಸ್ತಿ ನೋಂದಣಿ, ಹೂಡಿಕೆದಾರರ ಹಿತಾಸಕ್ತಿ ಕಾಪಾಡುವುದು, ಸಾಲ ಪಡೆಯುವುದು, ಕಾರ್ಮಿಕರಿಗೆ ಉದ್ಯೋಗ ನೀಡುವುದು, ಗಡಿಯಾಚೆ ವ್ಯಾಪಾರ ವಹಿವಾಟು, ತೆರಿಗೆ ಪಾವತಿ, ಗುತ್ತಿಗೆ ನೀಡುವುದು ಮತ್ತು ದಿವಾಳಿತನ ಸುಧಾರಿಸುವುದು.
ಕನ್ನಡ ಪತ್ರಕೋದ್ಯಮದ ಹಿರಿಯ ಪತ್ರಕರ್ತ ಎಂ. ಬಿ. ಸಿಂಗ್ ನಿಧನ
ರಾಜ್ಯ ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್ ಅವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಎಂ.ಬಿ.ಸಿಂಗ್ ಬಗ್ಗೆ:
- 1925ರ ಮೇ 24ರಂದು ಮೈಸೂರಿನಲ್ಲಿ ಜನಿಸಿದ ಎಂ.ಬಿ.ಸಿಂಗ್ ಅವರು, ಮಂಡ್ಯ ಹಾಗೂ ಮೈಸೂರಿನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ್ದರು.
- 1953ರಲ್ಲಿ ಪ್ರಜಾವಾಣಿ ಬಳಗ ಸೇರಿದ ಸಿಂಗ್, ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
- ಸಿಂಗ್ ಅವರಿಗೆ ಮಾಧ್ಯಮ ಕ್ಷೇತ್ರದ ಸೇವೆಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿಗಳು ಬಂದಿವೆ.
ವಿಶ್ವ ಆರ್ಥಿಕ ವೇದಿಕೆ ಲಿಂಗ ಸಮಾನತೆ ವರದಿಯಲ್ಲಿ ಭಾರತಕ್ಕೆ 87ನೇ ಸ್ಥಾನ
ವಿಶ್ವ ಆರ್ಥಿಕ ವೇದಿಕೆ ಲಿಂಗ ಸಮಾನತೆ ವರದಿ-2016 ರಲ್ಲಿ ಭಾರತ 144 ರಾಷ್ಟ್ರಗಳ ಪೈಕಿ 87ನೇ ಸ್ಥಾನ ಪಡೆದುಕೊಂಡಿದೆ. ಲಿಂಗ ಸಮಾನತೆಯ ವಿಚಾರದಲ್ಲಿ ಭಾರತವು ಕಳೆದ ವರ್ಷಕ್ಕಿಂತ 21 ಸ್ಥಾನ ಮೇಲೆ ಏರಿಕೆ ಕಂಡಿದೆ. ಪುರುಷ ಮತ್ತು ಸ್ತ್ರೀ ನಡುವೆ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಗಣಿಸಿ ಈ ವರದಿಯನ್ನು ಸಿದ್ದಪಡಿಸಲಾಗುತ್ತದೆ. ಈ ನಾಲ್ಕು ಕ್ಷೇತ್ರಗಳೆಂದರೆ ಶೈಕ್ಷಣಿಕ ಅರ್ಹತೆ, ಆರೋಗ್ಯ ಮತ್ತು ಬದುಕುಳಿಯುವಿಕೆ, ಆರ್ಥಿಕ ಅವಕಾಶ ಮತ್ತು ರಾಜಕೀಯ ಸಬಲೀಕರಣ.
ವರದಿಯ ಪ್ರಮುಖಾಂಶಗಳು:
- ಐಸ್ಲ್ಯಾಂಡ್, ಫಿನ್ಲ್ಯಾಂಡ್, ನಾರ್ವೆ, ಸ್ವೀಡನ್ ಮತ್ತು ರಾವಂಡ ವರದಿಯಲ್ಲಿ ಮೊದಲ ಐದು ಸ್ಥಾನಗಳಿಸಿರುವ ರಾಷ್ಟ್ರಗಳು.
- ಪ್ರಸ್ತಕ ವರ್ಷದ ವರದಿಯಲ್ಲಿ ಭಾರತ 87ನೇ ಸ್ಥಾನಗಳಿಸುವ ಮೂಲಕ ಚೀನಾ ದೇಶವನ್ನು ಹಿಂದಕ್ಕೆ ತಳ್ಳಿದೆ. ವರದಿಯಲ್ಲಿ ಚೀನಾ 99ನೇ ಸ್ಥಾನದಲ್ಲಿದೆ.
- ಶಿಕ್ಷಣ ರಂಗದಲ್ಲಾಗಿರುವ ಪ್ರಗತಿ ವರದಿಯಲ್ಲಿ ಭಾರತ ಉತ್ತಮ ಸ್ಥಾನಪಡೆಯಲು ಕಾರಣವಾಗಿದೆ. ಶೈಕ್ಷಣಿಕ ಅರ್ಹತೆಯಲ್ಲಿ ಭಾರತ ಕಳೆದ ವರ್ಷ 125ನೇ ಸ್ಥಾನದಲ್ಲಿದ್ದರೆ, ಈ ವರ್ಷ 113ನೇ ಸ್ಥಾನ ಪಡೆದುಕೊಂಡಿದೆ.
- ಆರ್ಥಿಕವಾಗಿ ಪಾಲ್ಗೊಳ್ಳುವಿಕೆ ಮತ್ತು ಅವಕಾಶದ ವಿಷಯದಲ್ಲಿ 136ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 139ನೇ ಸ್ತಾನ ಪಡೆದುಕೊಂಡಿತ್ತು.
- ಆರೋಗ್ಯ ಹಾಗೂ ಬದುಕುವಿಕೆಯಲ್ಲಿ ಅದು 142 ರಷ್ಟು ಕೆಳಗಿನ ಸ್ಥಾನದಲ್ಲಿದ್ದರೆ, ರಾಜಕೀಯ ಸಬಲೀಕರಣದಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ.
ಅಕ್ಟೋಬರ್ 28: ರಾಷ್ಟ್ರೀಯ ಆರ್ಯುವೇದ ದಿನ
ಪ್ರಪ್ರಥಮ ರಾಷ್ಟ್ರೀಯ ಆರ್ಯುವೇದ ದಿನವನ್ನು ಅಕ್ಟೋಬರ್ 28 ರಂದು ಆಚರಿಸಲಾಯಿತು. ಧನ್ವಂತರಿ ಜಯಂತಿ ಪ್ರಯುಕ್ತ ಆರ್ಯುವೇದ ದಿನವನ್ನು ಆಚರಿಸಲಾಗುತ್ತಿದೆ. ಮಧುಮೇಹ ನಿಯಂತ್ರಿಸಲು ಮತ್ತು ತಡೆಯಲು ಆರ್ಯುವೇದ ಇದು ಈ ವರ್ಷದ ಧ್ಯೇಯವಾಕ್ಯ. ಆರ್ಯುವೇದ ಭಾರತದ ಅತ್ಯಂತ ಪ್ರಾಚೀನ ಹಾಗೂ ಮೂಲ ವೈದ್ಯಪದ್ಧತಿಯಾಗಿದೆ. ವೇದಗಳ ಕೊನೆಯ ವೇದ ಅಥರ್ವ ವೇದದಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದೆ.
- ರಾಷ್ಟ್ರೀಯ ಆರ್ಯುವೇದ ದಿನದ ಆಚರಣೆ ಅಂಗವಾಗಿ ಕೇಂದ್ರ ಆಯುಷ್ ಸಚಿವಾಲಯ ಆರ್ಯುವೇದ ಮೂಲಕ ಮಧುಮೇಹ ತಡೆ ಮತ್ತು ನಿಯಂತ್ರಣದ ಬಗ್ಗೆ ಒಂದು ದಿನದ ಸೆಮಿನಾರ್ ಅನ್ನು ನವದೆಹಲಿಯಲ್ಲಿ ಆಯೋಜಿಸಿತ್ತು.
- ಅಲ್ಲದೇ ಮಿಷನ್ ಮಧುಮೇಹ ಕಾರ್ಯಕ್ರಮಕ್ಕೆ ಆಯುಷ್ ಸಚಿವಾಲಯ ಚಾಲನೆ ನೀಡಿತು. ಆರ್ಯುವೇದ ಮೂಲಕ ಮಧುಮೇಹವನ್ನು ನಿಯಂತ್ರಿಸಲು ದೇಶದಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಹಿನ್ನಲೆ:
- ರಾಷ್ಟ್ರೀಯ ಆರ್ಯುವೇದ ದಿವಸವನ್ನು ದನ್ವಂತರಿ ಜಯಂತಿ ದಿನದಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ದನ್ವಂತರಿ ಜಯಂತಿಯನ್ನು ದೀಪಾವಳಿ ಹಬ್ಬದ ಎರಡು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. ದನ್ವಂತರಿಯನ್ನು ವಿಷ್ಣುವಿನ ರೂಪವೆಂದು ನಂಬಲಾಗಿದೆ. ಆರ್ಯುವೇದದ ಉಪಯೋಗವನ್ನು ಮೊದಲ ತಿಳಿಸಿಕೊಟ್ಟವರು.