ಗಳಗನಾಥ ಮತ್ತು ರಾಜಪುರೋಹಿತ ಪ್ರಶಸ್ತಿ ಪ್ರಕಟ

ಶ್ರೀ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಈ ಸಾಲಿನ ‘ಶ್ರೀ ಗಳಗನಾಥ’ ಪ್ರಶಸ್ತಿಗೆ ಕಾರ್ಕಳ ತಾಲ್ಲೂಕಿನ ಕಾಂತಾವರದ ಡಾ. ನಾ. ಮೊಗಸಾಲೆ ಹಾಗೂ ‘ನಾ. ಶ್ರೀ. ರಾಜಪುರೋಹಿತ’ ಪ್ರಶಸ್ತಿಗೆ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿ. ಪಾಡಿಗಾರ ಆಯ್ಕೆಯಾಗಿದ್ದಾರೆ. ಪ್ರತಿಷ್ಠಾನವು ಇದೇ ಮೊದಲ ಬಾರಿ ಪ್ರಶಸ್ತಿ ನೀಡುತ್ತಿದೆ.

  • ಈ ಪ್ರಶಸ್ತಿಗಳು ತಲಾ ₹ 50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ.
  • ಕನ್ನಡ ಸಾಹಿತ್ಯ, ಇತಿಹಾಸ ಮತ್ತು ಸಂಶೋಧನೆಯಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
  • ನವೆಂಬರ್ 27 ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಹಕ್ಕಿ ಜ್ವರ ನಿಯಂತ್ರಣಕ್ಕೆ ಮುನಿಯಲ್ಲಪ್ಪ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ದೇಶದ ಹಲವೆಡೆ ಹಕ್ಕಿ ಜ್ವರ ಪತ್ತೆಯಾಗಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಕೃಷಿ ಸಚಿವಾಲಯ ಉನ್ನತಮಟ್ಟದ ಸಮಿತಿ ರಚಿಸಿದೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಮುನಿಯಲ್ಲಪ್ಪರವರು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ.

  • ಕೇಂದ್ರ ಆರೋಗ್ಯ ಸಚಿವಾಲಯ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೃಷಿ ಸಂಶೋಧನೆ ಮತ್ತು ವಿಸ್ತರಣೆ ಇಲಾಖೆ ಹಾಗೂ ದೆಹಲಿ ಸರ್ಕಾರದ ಪ್ರತಿನಿಧಿಗಳು ಸಮಿತಿಯ ಇತರೆ ಸದಸ್ಯರಾಗಿದ್ದಾರೆ.
  • ಹಕ್ಕಿ ಜ್ವರ ನಿಯಂತ್ರಿಸುವುದಲ್ಲದೇ, ರಾಜ್ಯ ಸರ್ಕಾರಗಳಿಗೆ ಹಕ್ಕಿ ಜ್ವರ ಹರಡದಂತೆ ನೋಡಿಕೊಳ್ಳಲು ಸಮಿತಿ ನೆರವಾಗಲಿದೆ.

ಹಿನ್ನಲೆ:

ದೆಹಲಿಯ ನ್ಯಾಷನಲ್ ಜಿಯೋಲಾಜಿಕಲ್ ಪಾರ್ಕ್, ಕೇರಳ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹಕ್ಕಿ ಜ್ವರ (H5N1) ವರದಿಯಾದ ಹಿನ್ನಲೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ .

ಹಕ್ಕಿ ಜ್ವರ: ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್1ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು.

  • ಅನೇಕ ಹಕ್ಕಿ ಜ್ವರ ವೈರಸ್ ವಿಧಗಳು ಮಾನವನಲ್ಲಿ ಸೋಂಕು ಉಂಟುಮಾಡುವುದಿಲ್ಲ. ಸರಿಯಾಗಿ ಬೇಯಿಸಿದ ಆಹಾರ ಸೇವಿಸುವ ಮೂಲಕ ಈ ರೋಗ ಹರಡುತ್ತದೆ ಎನ್ನುವುದಕ್ಕೆ ಸರಿಯಾದ ಪುರಾವೆಗಳು ಲಭ್ಯವಾಗಿಲ್ಲ.  ಆದರೆ H5N1 ಮತ್ತು H7N9 ವೈರಣುಗಳು ಮಾನವರಲ್ಲಿ ತೀವ್ರ ಸೋಂಕನ್ನು ಹರಡಲು ಕಾರಣವಾಗಿವೆ. ಸೋಂಕಿತ ಹಕ್ಕಿ/ಕೋಳಿಗಳ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬಂದಾಗ ಈ ಕಾಯಿಲೆ ಮಾನವನಲ್ಲಿ ಕಾಣಿಸಿಕೊಳ್ಳುತ್ತದೆ.

ಹಕ್ಕಿ ಜ್ವರದ ಲಕ್ಷಣಗಳು:

  • ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಕಾಯಿಲೆಯ ಲಕ್ಷಣಗಳು. ಎಕ್ಸ್‌ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವುಂಟಾಗುವುದು ಉಸಿರಾಟ ನಿಲ್ಲುವುದರಿಂದ. ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಬಹುದು.

ಬ್ರಹ್ಮೋಸ್ ಕ್ಷಿಪಣಿ ವ್ಯಾಪ್ತಿ ಹೆಚ್ಚಳಕ್ಕೆ ಭಾರತ-ರಷ್ಯಾ ಒಪ್ಪಿಗೆ

ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯನ್ನು 290 ಕಿ.ಮೀ ಯಿಂದ 600 ಕಿ.ಮೀಗೆ ಹೆಚ್ಚಿಸಲು ಭಾರತ ಮತ್ತು ರಷ್ಯಾ ಒಪ್ಪಿಗೆ ಸೂಚಿಸಿವೆ. ಬ್ರಿಕ್ಸ್ ಸಮ್ಮೇಳನದ ಶೃಂಗಸಭೆಯ ನೇಪಥ್ಯದಲ್ಲಿ ಮೋದಿ ಮತ್ತು ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಮಾತುಕತೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.

ನಿರ್ಣಯದ ಹಿನ್ನಲೆ:

  • ಭಾರತ ಈ ಮುಂಚೆ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪದ್ದತಿ (MCTR) ಸದಸ್ಯ ರಾಷ್ಟ್ರವಲ್ಲದ ಕಾರಣ 300 ಕಿ.ಮೀ ವ್ಯಾಪ್ತಿಗಿಂತಲೂ ಮಿಗಿಲಾದ ತಂತ್ರಜ್ಞಾನವನ್ನು ಬಳಕೆ ಮಾಡುವಂತಿರಲಿಲ್ಲ. ಆದರೆ ಇತ್ತೀಚೆಗೆ ಭಾರತ MCTR ಒಪ್ಪಂದಕ್ಕೆ ಸಹಿ ಹಾಕಿ ಸದಸ್ಯತ್ವವನ್ನು ಪಡೆದುಕೊಂಡ ಕಾರಣ ರಷ್ಯಾದಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ.

ಉಪಯೋಗ:

  • ಭಾರತದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ನಿರ್ಣಯ ಅತ್ಯಂತ ಮಹತ್ವದಾಗಿದೆ. ಕ್ಷಿಪಣಿಯ ಕಾರ್ಯಚರಣೆ ವ್ಯಾಪ್ತಿ ಹೆಚ್ಚುವುದರಿಂದ ರಕ್ಷಣಾ ಕ್ಷೇತ್ರದ ಸಾಮರ್ಥ್ಯ ಹೆಚ್ಚಲಿದೆ.

ಬ್ರಹ್ಮೋಸ್ ಕ್ಷಿಪಣಿ:

  • ರಷ್ಯಾ-ಭಾರತ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ದಿಪಡಿಸಿವೆ. ರಷ್ಯಾದ ಯಾಖೋಂಟ್ ಕ್ಷಿಪಣಿ ಆಧರಿಸಿ ವಿನ್ಯಾಸಗೊಳಿಸಲಾಗಿದೆ. ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ 290 ಕಿ.ಮೀ.
  • ಬ್ರಹ್ಮೋಸ್ ಸೂಪರ್‌­­ಸಾನಿಕ್ (ಶಬ್ದಕ್ಕಿಂತಲೂ ವೇಗವಾಗಿ ಚಲಿ­ಸುವ) ಕ್ಷಿಪಣಿಯಾಗಿದೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕವ್ ನದಿಯ ಹೆಸರನ್ನು ಇದಕ್ಕೆ ಇಡಲಾಗಿದೆ.
  • 300 ಕೆ.ಜಿ ಸಿಡಿಲ ತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಅಂಟಾರ್ಟಿಕದ ರಾಸ್ ಸಮುದ್ರ ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶ

ಅಂಟಾರ್ಟಿಕದ ರಾಸ್ ಸಮುದ್ರವನ್ನು ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶ (Marine Protect Area)ವೆಂದು ಘೋಷಿಸಲಾಗಿದೆ. ಆಸ್ಟ್ರೇಲಿಯಾದ ಹೊಬರ್ಟ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಟಾರ್ಟಿಕ ಸಾಗರ ಜೀವ ಸಂಪನ್ಮೂಲ (CCAMLR) ಸಂರಕ್ಷಣೆ ಆಯೋಗದ ಸಭೆಯಲ್ಲಿ 24 ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಒಪ್ಪಂದ ಮೂಡುವ ಮೂಲಕ ರಾಸ್ ಸಮುದ್ರವನ್ನು ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.

  • ರಾಸ್ ಸಮುದ್ರ ವಿಶ್ವದ ಕಡೆಯ ಸಮುದ್ರ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದರ ಒಟ್ಟಯ ವಿಸ್ತೀರ್ಣ 1.6 ಮಿಲಿಯನ್ ಚದರ ಕಿ.ಮೀರಷ್ಟಿದೆ.
  • ರಾಸ್ ಸಮುದ್ರವನ್ನು ಕಡಲ ಸಂರಕ್ಷಿತ ಪ್ರದೇಶವೆಂದು ಘೋಷಿಸಿರುವ ಹಿನ್ನಲೆಯಲ್ಲಿಈ ಪ್ರದೇಶದ ಸರಿಸುಮಾರು ಮುಕ್ಕಾಲಷ್ಟು ಭಾಗದಲ್ಲಿ ಮೀನುಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರಲಾಗುವುದು.
  • ರಾಸ್ ಸಮುದ್ರ ವಿಶ್ವದ ಅಪರೂಪದ ಜಲಚರಗಳ ಆವಾಸ ತಾಣವಾಗಿದೆ. ವಿಶ್ವದ ಶೇ 38% ಅಡೆಲೀ ಪೆಂಗ್ವಿನ್ಗಳು, ಶೇ 30 ರಷ್ಟು ಅಂಟಾರ್ಟಿಕ್ ಪೆಟ್ರಲ್ ಮತ್ತು ಶೇ 6% ರಷ್ಟು ಸಣ್ಣ ತಿಮಿಂಗಲಗಳನ್ನು ಹೊಂದಿದೆ.

ಅಂತಾರಾಷ್ಟ್ರೀಯ ಅಂಟಾರ್ಟಿಕ ಸಾಗರ ಜೀವ ಸಂಪನ್ಮೂಲ ಸಂರಕ್ಷಣೆ ಆಯೋಗ:

  • ಅಂತಾರಾಷ್ಟ್ರೀಯ ಅಂಟಾರ್ಟಿಕ ಸಾಗರ ಜೀವ ಸಂಪನ್ಮೂಲಗಳ ಸಂರಕ್ಷಣೆ ಆಯೋಗವನ್ನು ((Commission for the Conservation of Antarctic Marine Living Resources (CCAMLR)) ಅಂಟಾರ್ಟಿಕ ಸಮುದ್ರ ಜೀವ ವೈವಿದ್ಯತೆ ಸಂರಕ್ಷಿಸುವ ಸಲುವಾಗಿ 1982 ರಲ್ಲಿ ರಚಿಸಲಾಗಿದೆ. ಇದು ಅಂಟಾರ್ಟಿಕ ಒಪ್ಪಂದ ವ್ಯವಸ್ಥೆಯ ಒಂದು ಭಾಗ.
  • 14 ರಾಷ್ಟ್ರಗಳು ಇದಕ್ಕೆ ಸಹಿ ಮಾಡಲಾಗಿದ್ದು, ಭಾರತ, ಐರೋಪ್ಯ ಒಕ್ಕೂಟ ಸೇರಿದಂತೆ 35 ರಾಷ್ಟ್ರಗಳು ಅನುಮೋದಿಸಿವೆ.
  • ಇದರ ಕೇಂದ್ರ ಕಚೇರಿ ಆಸ್ಟ್ರೇಲಿಯಾದ ತಸ್ಮನಿಯಾದಲ್ಲಿದೆ.

ಕೇಂದ್ರ ಸರ್ಕಾರದಿಂದ ಬಯೋಟೆಕ್ ಕಿಸಾನ್ ಮತ್ತು ಜಾನುವಾರು ಜಿನೋಮಿಕ್ಸ್ ಯೋಜನೆ

ವಿಜ್ಞಾನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗ್ರಾಮೀಣ ಭಾಗದ ಆರ್ಥಿಕ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರ ಬಯೋಟೆಕ್ ಕಿಸಾನ್ (Biotec-KISAN) ಮತ್ತು ಜಾನುವಾರು ಜಿನೋಮಿಕ್ಸ್ (Cattle Genomics) ಎಂಬ ಎರಡು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ವಿಜ್ಞಾನಿಗಳು ಮತ್ತು ತಜ್ಞನರೊಂದಿಗೆ ರೈತರ ಜಾಲ ರೂಪಿಸುವುದು ಕಾರ್ಯಕ್ರಮದ ಪ್ರಮುಖ ಗುರಿ. ಆ ಮೂಲಕ ರೈತರಿಗೆ ಅದರಲ್ಲೂ ರೈತ ಮಹಿಳೆಯರಿಗೆ ಬಲ ತುಂಬುವ ಉದ್ದೇಶವನ್ನು ಹೊಂದಲಾಗಿದೆ.

ಬಯೋಟೆಕ್ ಕಿಸಾನ್ (Krishi Innovation Science Application Network):

  • ದೇಶದಾದ್ಯಂತ ರೈತರು, ವಿಜ್ಞಾನಿಗಳು ಮತ್ತು ವಿಜ್ಞಾನ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿರುವಂತೆ ಮಾಡಲು ಬಯೋಟೆಕ್ ಕಿಸಾನ್ ಜಾರಿಗೆ ತರಲಾಗಿದೆ. ಇದರಡಿ ಕೃಷಿ ಅಭ್ಯಾಸ ಮತ್ತು ತರಭೇತಿ ಪಡೆಯುವ ಪಡೆಯುವ ರೈತ ಮಹಿಳೆಯರಿಗೆ ಫೆಲೋಶಿಪ್ ನೀಡಲಾಗುವುದು.
  • ಇದರಡಿ ವಿಜ್ಞಾನಿಗಳು ರೈತರೊಂದಿಗೆ ಹೆಚ್ಚು ಕಾಲ ಸಂಪರ್ಕದಲ್ಲಿ ಇರಲಿದ್ದು, ಮಣ್ಣು, ಬೀಜ, ನೀರು ಮತ್ತು ಮಾರುಕಟ್ಟೆ ಅಗತ್ಯ ಮಾಹಿತಿಯನ್ನು ನೀಡಲಿದ್ದಾರೆ.
  • ಸಣ್ಣ ರೈತರ ಸಮಸ್ಯೆಗಳನ್ನು ಅರಿತುಕೊಂಡು ತ್ವರಿತವಾಗಿ ಸಲಹೆಗಳನ್ನು ನೀಡುವುದು ಈ ಯೋಜನೆಯ ಗುರಿಯಲ್ಲಿ ಒಂದಾಗಿದೆ.
  • ಸ್ಥಳೀಯ ರೈತರ ಸಮಸ್ಯೆಗಳನ್ನು ಅರಿತುಕೊಂಡು ತಂತ್ರಜ್ಞಾನ ಬಳಸಿ ಸಲಹೆ ನೀಡುವ ಸಲುವಾಗಿ ಈ ಯೋಜನೆಯನ್ನು ದೇಶದ 15 ಕೃಷಿ ಹವಾಮಾನ ವಲಯಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು.

ಜಾನುವಾರು ಜಿನೋಮಿಕ್ಸ್ (Cattle Genomics) ಯೋಜನೆ:

  • ಹೆಚ್ಚು ಹಾಲು ನೀಡುವ, ರೋಗ ನಿರೋಧಕ ಹಾಗೂ ಉತ್ತಮವಾದ ಸ್ಥಳೀಯ ಜಾನುವಾರುಗಳ ಆಯ್ದ ತಳಿಗಳನ್ನು ಗುರುತಿಸಿ ಉತ್ತೇಜಿಸುವುದು ಈ ಯೋಜನೆಯ ಗುರಿ.
  • ಈ ಯೋಜನೆಯಡಿ ಕೇಂದ್ರ ಸರ್ಕಾರ 40 ನೋಂದಾಯಿತ ಸ್ಥಳೀಯ ಜಾನುವಾರು ತಳಿಗಳ ವಂಶವಾಹಿ ಅನುಕ್ರಮವನ್ನು ಕ್ರೋಢಿಕರಿಸಲಿದೆ.

ಭಾರತ-ನ್ಯೂಜಿಲ್ಯಾಂಡ್ ನಡುವೆ ಮೂರು ಪ್ರಮುಖ ಒಪ್ಪಂದಕ್ಕೆ ಸಹಿ

ದುಪ್ಟಟ ತೆರಿಗೆ ತಪ್ಪಿಸುವುದು, ಕ್ರೀಡೆ ಮತ್ತು ಆಹಾರ ಭದ್ರತೆ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಒಪ್ಪಂದಗಳಿಗೆ ಭಾರತ-ನ್ಯೂಜಿಲ್ಯಾಂಡ್ ಸಹಿ ಹಾಕಿವೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲು ಈ ಒಪ್ಪಂದಗಳು ಸಹಕಾರಿಯಾಗಲಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್ ನ ಪ್ರಧಾನಿ ಜಾನ್ ಕೀ ರವರ ನಡುವಿನ ನಿಯೋಗ ಮಟ್ಟದ ಮಾತುಕತೆ ನಂತರ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇವಲ್ಲದೇ, ಭಯೋತ್ಪಾದನೆ ವಿರುದ್ದ ಹೋರಾಟ, ಸೈಬರ್ ಭದ್ರತೆ, ಶಿಕ್ಷಣ ಮತ್ತು ಆಹಾರ ಸುರಕ್ಷತೆ ಬಗ್ಗೆಯು ಚರ್ಚಿಸಲಾಯಿತು.

ಸಹಿ ಮಾಡಲಾದ ಒಪ್ಪಂದಗಳು:

  • ಯುವ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಸಹಿ.
  • ದುಪ್ಟಟ ತೆರಿಗೆ ತಪ್ಪಿಸುವುದು ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ಹಣಕಾಸಿನ ವಂಚನೆ ತಡೆಗಟ್ಟಲು ಒಪ್ಪಂದಕ್ಕೆ ಸಹಿ.
  • ಆಹಾರ ಸುರಕ್ಷತೆಗಾಗಿ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ನ್ಯೂಜಿಲ್ಯಾಂಡ್ನ ಪ್ರೈಮರಿ ಇಂಡಸ್ಟ್ರೀಸ್ ನಡುವೆ ಒಪ್ಪಂದಕ್ಕೆ ಸಹಿ.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-29, 2016”

  1. siddu

    how can we downoad plz inform

Leave a Comment

This site uses Akismet to reduce spam. Learn how your comment data is processed.