ಸುಗಮವಾಗಿ ವ್ಯವಹಾರ ನಡೆಸುವ ರಾಜ್ಯಗಳಲ್ಲಿ ಆಂಧ್ರ ಮತ್ತು ತೆಲಂಗಣ ನಂ.1
ಅತ್ಯಂತ ಸುಗಮವಾಗಿ ವ್ಯವಹಾರ ನಡೆಸಲು ಅವಕಾಶ ಇರುವ ರಾಜ್ಯಗಳ ಸಮೀಕ್ಷೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಣ ರಾಜ್ಯಗಳು ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿವೆ. ಈ ಸಮೀಕ್ಷೆಯಲ್ಲಿ ಕರ್ನಾಟಕ 13ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ರಾಜ್ಯ 9ನೇ ಸ್ಥಾನ ಪಡೆದಿತ್ತು. ವ್ಯಾಪಾರೋದ್ಯಮ ಅತ್ಯಂತ ಸುಲಭವಾಗಿರುವ ರಾಜ್ಯ ಎಂಬ ಹಿರಿಮೆಯನ್ನು ಗುಜರಾತ್ನಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಕಿತ್ತುಕೊಂಡಿವೆ.
- ಸಮೀಕ್ಷೆಯಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಜಂಟಿಯಾಗಿ ಮೊದಲ ಸ್ಥಾನ ಪಡೆದಿವೆ. ನಂತರದ ಸ್ಥಾನದಲ್ಲಿ ಗುಜರಾತ್ ಇದೆ.
- ಚತ್ತೀಸಘರ್, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕ್ರಮವಾಗಿ 4, 5 ಮತ್ತು 6ನೇ ಸ್ಥಾನ ಪಡೆದಿವೆ.
- ವಿಶ್ವ ಬ್ಯಾಂಕ್ ಹಾಗೂ ಭಾರತದ ಕೈಗಾರಿಕಾ ನೀತಿ ಇಲಾಖೆಯು ವ್ಯಾಪಾರ ಸುಧಾರಣೆ ಕ್ರಿಯಾ ಯೋಜನೆಗೆ ಸಂಬಂಧಿಸಿದ 340 ಅಂಶಗಳ ಅನುಷ್ಠಾನದ ಆಧಾರದಲ್ಲಿ ಸಮೀಕ್ಷೆ ನಡೆಸಿವೆ.
- ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಲು ಮತ್ತಷ್ಟು ಕೆಲಸ ಮಾಡಬೇಕಿದೆ ಎಂದು ವರದಿ ತಿಳಿಸಲಾಗಿದೆ.
- ರಾಜ್ಯಗಳಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲು ರಾಜ್ಯಗಳ ನಡುವೆ ಸ್ಪರ್ಧೆ ಉಂಟಾಗುವಂತೆ ಮಾಡುವುದು ಈ ಸಮೀಕ್ಷೆಯ ಉದ್ದೇಶ.
ಕರ್ನಾಟಕ್ಕೆ ಸಂಬಂಧಿಸಿದಂತೆ
ಕೆಲವು ಅಂಶಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ವೃತ್ತಿ ತೆರಿಗೆ, ಪ್ರವೇಶ ತೆರಿಗೆ ಮುಂತಾದವುಗಳನ್ನು ಆನ್ಲೈನ್ ಮೂಲಕ ಪಾವತಿಸಲು ಸಾಧ್ಯವಾಗುವಂತೆ ತೆರಿಗೆ ಸುಧಾರಣೆ ತಂದ ರಾಜ್ಯಗಳಲ್ಲಿ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಮುಂಚೂಣಿಯಲ್ಲಿವೆ.
ಪರಿಸರ ಮತ್ತು ಕಾರ್ಮಿಕ ಕಾನೂನು ಸುಧಾರಣೆ ವಿಚಾರಗಳಲ್ಲಿಯೂ ಕರ್ನಾಟಕ ಮುಂದೆ ಇದೆ ಎಂದು ವರದಿ ಹೇಳಿದೆ.
ಭಾರತೀಯ ಮೂಲದ ಸರ್ಜಿತ್ ಸಿಂಗ್ ಮರ್ವಹ್ ಕೆನಡಾದ ಮೊದಲ ಸಿಖ್ ಸೆನೆಟರ್
ಭಾರತೀಯ ಮೂಲದ ಸರ್ಜಿತ್ ಸಿಂಗ್ ಮರ್ವಹ್ ಅವರು ಕೆನಡಾದ ಮೊದಲ ಸಿಖ್ ಸೆನೆಟರ್ ಆಗಿ ನೇಮಕಗೊಂಡಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೆ ಅವರು ಆರು ಜನರನ್ನು ಸೆನೆಟ್ ಗೆ ನೇಮಕ ಮಾಡಿದ್ದು, ಅದರಲ್ಲಿ ಸಿಂಗ್ ಸಹ ಒಬ್ಬರಾಗಿದ್ದಾರೆ. ಆ ಮೂಲಕ ಕೆನಡಾದ ಸಂಸತ್ತಿಗೆ ನೇಮಕಗೊಂಡ ಭಾರತ ಮೂಲದ ಮೊದಲಿಗರಾಗಿದ್ದಾರೆ. ಸಿಂಗ್ ಅವರು ಕೆನಡಾ ಸಂಸತ್ತಿಗೆ ನೇಮಕಗೊಂಡ ಮೂರನೇ ಸಿಖ್ ವ್ಯಕ್ತಿ. ಈಗಾಗಲೇ ಹರ್ಜೀತ್ ಸಜ್ಜನ್ ಅವರು ರಕ್ಷಣಾ ಸಚಿವರಾಗಿ ಮತ್ತು ನವದೀಪ್ ಬೇನ್ ರವರು ವಿಜ್ಞಾನ ಸಚಿವರಾಗಿ ನೇಮಕಗೊಂಡಿದ್ದಾರೆ.
ಸರ್ಜಿತ್ ಸಿಂಗ್ ಮರ್ವಹ್ ಬಗ್ಗೆ:
- ವರ್ವಹ್ ರವರು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 1952 ರಲ್ಲಿ ಜನಿಸಿದ್ದಾರೆ.
- ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜು ಮತ್ತು ದೆಹಲಿಯ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಅಭ್ಯಾಸ ಮಾಡಿದ್ದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ.
- 1978 ರಲ್ಲಿ ಟೊರೊಂಟೊದ ಸ್ಕಾಟಿಯಾಬ್ಯಾಂಕ್ ನಲ್ಲಿ ಆರ್ಥಿಕ ವಿಶ್ಲೇಷಕರಾಗಿ ಸೇರ್ಪಡೆಗೊಂಡು ನಂತರ 1998 ರಲ್ಲಿ ರಲ್ಲಿ ಇದೇ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು.
- 2008ರಲ್ಲಿ ಸ್ಕಾಟಿಯಾಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಸಿಒಒ ಆಗಿ ನೇಮಕಗೊಂಡು, 2014ರಲ್ಲಿ ನಿವೃತ್ತಿ ಹೊಂದುವ ತನಕ ಕಾರ್ಯನಿರ್ವಹಿಸಿದ್ದರು.
- ಸಿಖ್ ಸಂಸ್ಕೃತಿ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಕೆನಡಾ ಸಿಖ್ ಫೌಂಡೇಷನ್ ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
ಬ್ರೆಜಿಲ್ ಮಾಜಿ ಪುಟ್ಬಾಲ್ ಆಟಗಾರ ಕಾರ್ಲೊಸ್ ಆಲ್ಬರ್ಟೋ ನಿಧನ
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರ ಪೈಕಿ ಓರ್ವರಾಗಿರುವ ಬ್ರೆಝಿಲ್ನ ಮಾಜಿ ನಾಯಕ ಕಾರ್ಲೊಸ್ ಆಲ್ಬರ್ಟೊ ಹೃದಯಾಘಾತದಿಂದ ನಿಧನರಾಗಿದ್ದಾರೆ. 1970ರ ವಿಶ್ವಕಪ್ ಟ್ರೋಫಿ ವಿಜೇತ ಬ್ರೆಝಿಲ್ ತಂಡದ ನಾಯಕರಾಗಿದ್ದ ಆಲ್ಬರ್ಟೊ 1970ರ ವಿಶ್ವಕಪ್ ಫೈನಲ್ನಲ್ಲಿ ಇಟಲಿ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸುವಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಆಲ್ಬರ್ಟೊಗೆ ಪೀಲೆ, ಟಾಸ್ತಾವೊ, ಜೈರ್ಝಿನೊಹೊ ಸಾಥ್ ನೀಡಿದ್ದರು.
- 1944ರಲ್ಲಿ ಕ್ಯಾಪಿಟಾವೊದಲ್ಲಿ ಜನಿಸಿರುವ ಆಲ್ಬರ್ಟೊ 1996 ರಿಂದ 1974ರ ತನಕ ಪೀಲೆ ಅವರೊಂದಿಗೆ ಸ್ಯಾಂಟೊಸ್ ತಂಡದಲ್ಲಿ ಆಡಿದ್ದರು.
- 1977 ರಿಂದ 1980ರ ತನಕ ನ್ಯೂಯಾರ್ಕ್ ಕಾಸ್ಮೊಸ್ ತಂಡವನ್ನು ಪ್ರತಿನಿಧಿಸಿದ್ದರು. ಬ್ರೆಝಿಲ್ನ ಪರ 50ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಆಲ್ಬರ್ಟೊ ಗಾಯದ ಸಮಸ್ಯೆಯಿಂದಾಗಿ 1974ರ ವಿಶ್ವಕಪ್ನಿಂದ ವಂಚಿತರಾಗಿದ್ದರು.
- 2004ರಲ್ಲಿ ಫಿಫಾ ಬಿಡುಗಡೆ ಮಾಡಿರುವ ಶ್ರೇಷ್ಠ 100 ಆಟಗಾರರ ಪಟ್ಟಿಯಲ್ಲಿ ಆಲ್ಬರ್ಟೊ ಸ್ಥಾನ ಪಡೆದಿದ್ದರು.
- 1982ರಲ್ಲಿ ಫುಟ್ಬಾಲ್ನಿಂದ ನಿವೃತ್ತಿಯಾಗಿದ್ದ ಆಲ್ಬರ್ಟೊ ರಿಯೋದ ಫ್ಲೆಮೆಂಗೊ, ಅಮೆರಿಕ, ಕೊಲಂಬಿಯಾ, ಮೆಕ್ಸಿಕೊ, ಒಮನ್ ಹಾಗೂ ಅಝರ್ಬೈಜಾನ್ ತಂಡದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಸ್ಪೋರ್ಟ್ ಟಿವಿಯಲ್ಲಿ ಟೆಲಿವಿಜನ್ ಪಂಡಿತ್ ಆಗಿದ್ದರು.
good …but this website nt cover the all the information abot national and inter national….i want more…