ದೇಶದಾದ್ಯಂತ ಆಹಾರ ಭದ್ರತಾ ಕಾಯಿದೆ ಜಾರಿ
ಸಬ್ಸಿಡಿ ದರದಲ್ಲಿ ಆಹಾರಧಾನ್ಯ ವಿತರಿಸುವ ಆಹಾರ ಭದ್ರತಾ ಕಾಯಿದೆ-2013 ದೇಶದಾದ್ಯಂತ ಜಾರಿಗೆ ಬಂದಿದೆ. ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಗೊಂಡಿರಲಿಲ್ಲ, ಆದರೆ ಈ ಎರಡು ರಾಜ್ಯಗಳಲ್ಲಿ ಈಗ ಜಾರಿಗೆ ಬಂದಿರುವುದರಿಂದ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಟಾನಗೊಂಡಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಪ್ರಮುಖಾಂಶಗಳು:
- ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾಯಿದೆ ಅನುಷ್ಟಾನಗೊಂಡಿರುವುದರಿಂದ 34 ಕೋಟಿ ಜನರು ಪ್ರಸ್ತುತ ಕಾಯ್ದೆಯ ಪ್ರಯೋಜನ ಪಡೆಯಲಿದ್ದಾರೆ.
- ಕಾಯ್ದೆ ಅಡಿ ಪ್ರತಿ ತಿಂಗಳು ಒಬ್ಬರಿಗೆ ಪ್ರತಿ ಕೆ.ಜಿ.ಗೆ ₹1–3 ದರದಲ್ಲಿ 5 ಕೆ.ಜಿಆಹಾರ ಧಾನ್ಯ ಪೂರೈಕೆಯಾಗಲಿದೆ.
- ಕಾಯಿದೆಯ ಅನುಷ್ಟಾನದಿಂದ ಪ್ರತಿ ತಿಂಗಳು 45.5 ಲಕ್ಷ ಟನ್ ಆಹಾರ ಧಾನ್ಯ ವಿತರಿಸಬೇಕಿದೆ.
- ಸಬ್ಸಿಡಿ ಮೊತ್ತ ಪ್ರತಿ ತಿಂಗಳಿಗೆ ರೂ 11,726 ಕೋಟಿ ಆಗಲಿದೆ ಅಂದರೆ ವಾರ್ಷಿಕ 1,40,700 ಕೋಟಿ ಸರ್ಕಾರಕ್ಕೆ ತಗುಲಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ-2013
- ಈ ಕಾಯಿದೆಯು ದೇಶದ ಎರಡನೇ ಮೂರರಷ್ಟು ಜನಸಂಖ್ಯೆಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಗುರಿ ಹೊಂದಿದೆ.
- ಗೋಧಿ, ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಕೆ,ಜಿಗೆ ರೂ 3, 2 ಮತ್ತು 1 ಬೆಲೆಯಲ್ಲಿ ಒದಗಿಸಲಾಗುವುದು.
- ಕಾಯಿದೆಯಡಿ 6 ರಿಂದ 14 ವರ್ಷ ಮಕ್ಕಳಿಗೆ ಅಧಿಕ ಪೋಷಕಾಂಶಯುಕ್ತ ಆಹಾರವನ್ನು ನೀಡಲಾಗುವುದು. ಅಲ್ಲದೇ ಗರ್ಭಿಣಿ ಸ್ತ್ರೀ ಮತ್ತು ಬಾಣಂತಿಯರು ಮಾಸಿಕ ರೂ 6000 ಕ್ಕಿಂತ ಕಡಿಮೆ ಇಲ್ಲದಂತೆ ಮಾತೃತ್ವ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
ಲೋಕ್ತಕ್ ಲೇಕ್ ಸಂರಕ್ಷಣೆಗೆ ನಾಲ್ಕು ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ಮಣಿಪುರ ಪ್ರಸಿದ್ದ ಲೋಕ್ತಕ್ ಲೇಕ್ ಸಂರಕ್ಷಣೆಗಾಗಿ ನಾಲ್ಕು ಸದಸ್ಯರ ತಂಡವನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ರಚಿಸಿದೆ. ಈ ತಂಡ ಲೋಕ್ತಕ್ ಲೇಕ್ ಗೆ ಭೇಟಿ ನೀಡಿ ರಾಜ್ಯ ಸರ್ಕಾರದೊಂದಿಗೆ ಚರ್ಚೆಯನ್ನು ನಡೆಸಲಿದೆ. ಇದರ ಜೊತೆಗೆ ಲೋಕ್ತಕ್ ಲೇಕ್ ಸಮೀಪ ವಾಸವಿರುವ ಜನರೊಂದಿಗೂ ತಂಡ ಚರ್ಚೆ ನಡೆಸಲಿದೆ.
ತಂಡಕ್ಕೆ ನೀಡಿರುವ ಹೊಣೆಗಾರಿಕೆ:
- ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಅನುದಾನದಡಿ ಲೋಕ್ತಕ್ ಲೇಕ್ ಸಂರಕ್ಷಣೆ ಮತ್ತು ನಿರ್ವಹಣಗೆ ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದೆ.
- ಸಮಗ್ರ ರೀತಿಯಲ್ಲಿ ಸರೋವರವನ್ನು ಸಂರಕ್ಷಿಸಲು ಅಗತ್ಯವಿರುವ ಶಿಫಾರಸ್ಸನ್ನು ತಂಡ ನೀಡಲಿದೆ.
- ಲೋಕ್ತಕ್ ಸರೋವರವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡುವುದು.
- ಲೋಕ್ತಕ್ ಸರೋವರದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ತಂಡ ಅಧ್ಯಯನ ನಡೆಸಲಿದೆ.
ಲೋಕ್ತಕ್ ಸರೋವರ:
- ಭಾರತ ಈಶಾನ್ಯ ಭಾಗದ ಅತಿ ದೊಡ್ಡ ಸಿಹಿ ನೀರಿನ ಸರೋವರ. ತೇಲುವ ಕೆರೆ ಎಂದೇ ಪ್ರಸಿದ್ದ ಪಡೆದಿರುವ ಈ ಸರೋವರವು ತೇಲುವ ಚಿಕ್ಕ ಚಿಕ್ಕ ಗುಡ್ಡೆ (Phumids)ಯಿಂದ ಹೆಸರುವಾಸಿಯಾಗಿದೆ.
- ಈ ಗುಡ್ಡೆಗಳು ವಿಘಟಿಸುತ್ತಿರುವ ಸಸ್ಯದ್ರವ್ಯ, ಮಣ್ಣು ಹಾಗೂ ಇತರೆ ಜೈವಿಕ ಉತ್ಪನ್ನಗಳಿಂದ ಉಂಟಾಗಿದೆ.
- ಕೀಬುಲ್ ಲಮ್ಜೊ ರಾಷ್ಟ್ರೀಯ ಉದ್ಯಾನವನ ಈ ತೇಲುವ ಗುಡ್ಡೆಯೊಂದರ ಮೇಲಿದೆ. ಇದು ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಹಾಗೂ ಅಳಿವಿನಂಚಿನಲ್ಲಿರುವ ಸಾಂಗಯ್ ಜಿಂಕೆಯ ಆವಾಸ ತಾಣ.
- ಲೋಕ್ತಕ್ ಸರೋವರ ಮಣಿಪುರ ಜನರ ಆರ್ಥಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ. ಕುಡಿಯುವ ನೀರು, ನೀರಾವರಿ ಹಾಗೂ ಜಲವಿದ್ಯುತ್ ಉತ್ಪಾದನೆಗೆ ಈ ಸರೋವರ ಪ್ರಮುಖ ಮೂಲ.
ಭಾರತ ಮಹಿಳೆಯರ ಹಾಕಿ ತಂಡಕ್ಕೆ 2016 ಏಷ್ಯಾ ಚಾಂಪಿಯನ್ ಪ್ರಶಸ್ತಿ
ಭಾರತ ವನಿತೆಯರ ಹಾಕಿ ತಂಡ 2016 ಏಷ್ಯಾ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು. ಸಿಂಗಾಪುರದಲ್ಲಿ ನಡೆದ ಏಷ್ಯಾ ಚಾಂಪಿಯನ್ ಪ್ರಶಸ್ತಿ ಫೈನಲ್ ಪಂದ್ಯದಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
- ಭಾರತ ಮಹಿಳಾ ಹಾಕಿ ತಂಡಕ್ಕೆ ಇದು ಮೊಟ್ಟ ಮೊದಲ ಏಷ್ಯಾ ಪ್ರಶಸ್ತಿ
- ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ ತಂಡ ಚೀನಾ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತು.
- ಟೂರ್ನಿಯಲ್ಲಿ ಭಾರತ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಏಷ್ಯಾ ಚಾಂಪಿಯನ್ ಪ್ರಶಸ್ತಿ:
- ಏಷ್ಯಾ ಚಾಂಪಿಯನ್ ಟ್ರೋಪಿಯನ್ನು ಏಷ್ಯಾ ಹಾಕಿ ಫೆಡರೇಷನ್ ಪ್ರತಿ ವರ್ಷ ಆಯೋಜಿಸುತ್ತಿದೆ. 2011 ರಿಂದ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.
- ಪ್ರತಿಷ್ಠಿತ ಟೂರ್ನಿಯಲ್ಲಿ ಏಷ್ಯಾದ ಆರು ರಾಷ್ಟ್ರಗಳು ಭಾಗವಹಿಸುತ್ತಿವೆ.
- ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕೊರಿಯಾ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನಕ್ಕೆ ಕೇಂದ್ರ ಸರ್ಕಾರ ಚಾಲನೆ
ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಗರ್ಭೀಣಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನಕ್ಕೆ ಚಾಲನೆ ನೀಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ ಪಿ ನಡ್ಡ ರವರು ಈ ಯೋಜನೆಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಜೂನ್ 2016 ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿರವರು ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು.
ಪ್ರಮುಖಾಂಶಗಳು:
- ಈ ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರತಿ ತಿಂಗಳ 9ನೇ ತಾರೀಖಿನಂದು ಗರ್ಭೀಣಿ ಸ್ತ್ರೀಯರಿಗೆ ಪ್ರಸವ ಮುಂಚಿನ ಚಿಕಿತ್ಷೆಯನ್ನು ಉಚಿತವಾಗಿ ನೀಡಲಾಗುವುದು.
- ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವುದು, ಗರ್ಭೀಣಿ ಸ್ರೀಯರಿಗೆ ಸುರಕ್ಷಿತ ಆರೋಗ್ಯ ಸೇವೆ ನೀಡುವುದು, ಗರ್ಭೀಣಿ ಸ್ತ್ರೀಯರಿಗೆ ತಮ್ಮ ಆರೋಗ್ಯ ಹಾಗೂ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸುರಕ್ಷಿತ ಹೆರಿಗೆ ಹಾಗೂ ಆರೋಗ್ಯವಂತ ಮಗು ಜನಿಸುವಂತೆ ನೋಡಿಕೊಳ್ಳುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
- ಈ ಯೋಜನೆಯು 3-6 ತಿಂಗಳ ಗರ್ಭಾವಸ್ಥೆಯಲ್ಲಿರುವ ಗರ್ಭೀಣಿ ಸ್ತ್ರೀಯರಿಗೆ ಮಾತ್ರ ಅನ್ವಯವಾಗಲಿದೆ.
- ರಕ್ತದೊತ್ತಡ, ಸಕ್ಕರೆ ಪ್ರಮಾಣ, ತೂಕ, ಹಿಮೋಗ್ಲೊಬಿನ್ ಪರೀಕ್ಷೆ, ರಕ್ತ ಪರೀಕ್ಷೆ ಮತ್ತು ಸ್ರೀನಿಂಗ್ ಅನ್ನು ಉಚಿತವಾಗಿ ಮಾಡಲಾಗುವುದು.
ನವೆಂಬರ್ 5: ವಿಶ್ವ ಸುನಾಮಿ ಜಾಗೃತಿ ದಿನ
ಮೊದಲ ವಿಶ್ವ ಸುನಾಮಿ ಜಾಗೃತಿ ದಿನವನ್ನು ನವೆಂಬರ್ 5 ರಂದು ವಿಶ್ವದಾದ್ಯಂತ ಆಚರಿಸಲಾಯಿತು. ಜಗತ್ತಿನಾದ್ಯಂತ ಸುನಾಮಿ ಪ್ರಕೃತಿ ವಿಕೋಪದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಮೊದಲ ಬಾರಿಗೆ ಈ ವರ್ಷ ಆಚರಿಸಲಾಗಿದೆ. ನವೆಂಬರ್ 5 ರಂದು ವಿಶ್ವ ಸುನಾಮಿ ಜಾಗೃತಿ ದಿನವೆಂದು ಆಚರಿಸಲು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 2015 ರಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಜಪಾನ್ ವಿಶ್ವಸಂಸ್ಥೆಯಲ್ಲಿ ಸಲ್ಲಿಸಿತ್ತು.
2016 ಧ್ಯೇಯವಾಕ್ಯ: ಎಫೆಕ್ಟಿವ್ ಎಜುಕೇಷನ್ ಅಂಡ್ ಇವಕ್ಯುಷೇನ್ ಡ್ರಿಲ್ಸ್ (Effective Education and Evacuation Drills).
ಈ ದಿನದ ಮಹತ್ವ:
- ಸುನಾಮಿ ವಿಕೋಪದ ಅಪಾಯದ ಬಗ್ಗೆ ಜಗತ್ತಿನಾದ್ಯಂತ ಜನರಲ್ಲಿ ಅರಿವು ಮೂಡಿಸುವುದು
- ಸುನಾಮಿಯಿಂದಾಗುವ ಅಪಾರ ಹಾನಿಯನ್ನು ತಗ್ಗಿಸುವ ಸಲುವಾಗಿ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಗೆ ಮಹತ್ವವನ್ನು ನೀಡುವುದು.