ತಮಿಳುನಾಡಿನಲ್ಲಿ ವಿಶ್ವದ ಮೊದಲ ಉಪ್ಪು ಸಹಿಷ್ಣು ಸಸ್ಯ ತೋಟ

ವಿಶ್ವದ ಮೊದಲ ಉಪ್ಪು ಸಹಿಷ್ಣುತೆ ಸಸ್ಯ (Hypophytes) ತೋಟವನ್ನು ತಮಿಳುನಾಡಿನ ಕರಾವಳಿ ತೀರದ ವೇದಾರಣ್ಯಂ ಬಳಿ ಉದ್ಘಾಟಿಸಲಾಯಿತು. ವಿಶ್ವದಲ್ಲೆ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ತೋಟ ನಿರ್ಮಿಸಲಾಗಿದ್ದು, ಮಾರಿಷಸ್ ಅಧ್ಯಕ್ಷ ಅಮಿನ ಗರಿಭ್ ಫಕಿಂ ಈ ತೋಟವನ್ನು ವಿಡಿಯೋ ಸಂವಾದ ಮೂಲಕ ಉದ್ಘಾಟಿಸಿದರು.

ಪ್ರಮುಖಾಂಶಗಳು:

  • ಹಸಿರು ಕ್ರಾಂತಿ ಹರಿಕಾರ ಎಂ ಎಸ್ ಸ್ವಾಮಿನಾಥನ್ ರವರ ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಈ ತೋಟವನ್ನು ನಿರ್ಮಿಸಿದೆ.
  • ಉಪ್ಪು ಸಹಿಷ್ಣುತೆ ಕುಟುಂಬಕ್ಕೆ ಸೇರಿದ 550 ಪ್ರಬೇಧ ಹಾಗೂ 1600 ಸಸ್ಯ ತಳಿಗಳನ್ನು ಒಳಗೊಂಡಿದೆ.
  • ಪ್ರಾರಂಭಿಕವಾಗಿ ಭಾರತದ ಕರಾವಳಿ ತೀರಾ ಪ್ರದೇಶ ಹಾಗೂ ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶದಲ್ಲಿ ಸಿಗುವ ಉಪ್ಪು ಸಹಿಷ್ಣುತೆ ಸಸ್ಯಗಳನ್ನು ಒಳಗೊಂಡಿದೆ.

ಹ್ಯಾಲೋಫೈಟ್ಸ್ ಅಥವಾ ಉಪ್ಪು ಸಹಿಷ್ಣುತೆ ಸಸ್ಯವೆಂದರೆ?

ಉಪ್ಪು ಸಹಿಷ್ಣುತೆ ಸಸ್ಯವೆಂದರೆ ಹೆಚ್ಚು ಲವಣಾಂಶವಿರುವ ನೀರಿನಲ್ಲಿ ಬೆಳೆಯುವ ಗಿಡಗಳು ಅಥವಾ ಉಪ್ಪು ನಿರೋಧಕ ಗಿಡಗಳಾಗಿವೆ. ಭೂಮಿಯ ಮೇಲಿರುವ ಸಸ್ಯಗಳ ಪೈಕಿ ಶೇ 2% ಪ್ರಮಾಣದಲ್ಲಿ ಈ ಸಸ್ಯಗಳು ಕಂಡುಬರುತ್ತವೆ.

ಈ ಸಸ್ಯಗಳ ಉಪಯೋಗ:

  • ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳದಿಂದ ಸಮುದ್ರ ಮಟ್ಟದ ಏರಿಕೆಯಾಗುತ್ತಿದ್ದು, ಭೂಮಿಯಲ್ಲಿ ಲವಣಾಂಶ ಹೆಚ್ಚಿತ್ತಿರುವ ಕಾರಣ ಈ ಸಸ್ಯಗಳು ಭವಿಷ್ಯದಲ್ಲಿ ಮುಖ್ಯಪಾತ್ರವಹಿಸಲಿವೆ. ಅತ್ಯಧಿಕ ಪ್ರಮಾಣದಲ್ಲಿ ಲಭ್ಯವಿರುವ ಈ ಸಸ್ಯಗಳನ್ನು ಭವಿಷ್ಯದಲ್ಲಿ ಮನುಷ್ಯ ಮತ್ತು ಜಾನುವಾರುಗಳಿಗೆ ಆಹಾರ ರೂಪದಲ್ಲಿ, ಇಂಧನ ಅಥವಾ ಅಲಂಕಾರಿಕ ಸಸ್ಯಗಳ ರೂಪದಲ್ಲಿ ಬಳಸಿಕೊಳ್ಳಬಹುದಾದ ಸಾಧ್ಯತೆಗಳನ್ನು ಅಧ್ಯಯನ ಮಾಡಲು ಹ್ಯಾಲೋಫೈಟ್ಸ್ – ತಳಿ ತೋಟವನ್ನು ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಜೆ ಎಸ್ ಖೇಹರ್ ನೇಮಕ

ಸುಪ್ರೀಂಕೋರ್ಟ್ ನ್ಯಾಯಾಧೀಶ ಜಗದೀಶ್ ಸಿಂಗ್ ಖೇಹರ್ ರವರನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ  ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅನಿಲ್ ಆರ್ ದಾವೆ ರವರು ತಮ್ಮ ಅವಧಿ ಮುಗಿದ ಕಾರಣ ನಿವೃತ್ತರಾದ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಖೇಹರ್ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ:

  • ಬಡವರು ಮತ್ತು ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡುವುದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪ್ರಮುಖ ಕರ್ತವ್ಯವಾಗಿದೆ. ಕಾನೂನು ಸೇವಾ ಪ್ರಾಧಿಕಾರ ಕಾಯಿದೆ, 1987 ರಡಿ ಇದನ್ನು ಸ್ಥಾಪಿಸಲಾಗಿದೆ.
  • ಆರ್ಥಿಕವಾಗಿ ಅಥವಾ ಇನ್ನಾವುದೇ ಉದ್ದೇಶಗಳಿಂದ ನ್ಯಾಯವನ್ನು ನಿರಾಕರಿಸಿದಂತೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದು ಇದರ ಧ್ಯೇಯ.
  • ಯಾವುದೇ ನ್ಯಾಯಾಲಯ ಅಥವಾ ಟ್ರಿಬ್ಯೂನಲ್ ನಲ್ಲಿ ಕಾನೂನು ಸೇವೆ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಟ್ಟದ ಜನರಿಗೆ ಸಿವಿಲ್ ಅಥವಾ ಅಪರಾಧ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ನೀಡುವುದು.
  • ಅಲ್ಲದೇ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯಾರ್ಥ ಪಡಿಸಲು ಲೋಕಾದಲತ್ ಆಯೋಜಿಸುವುದು. ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಮಲೋಚನೆ ನಡೆಸಿ ಸಹಕಾರ ನೀಡುವುದು ಪ್ರಾಧಿಕಾರದ ಕರ್ತವ್ಯವಾಗಿದೆ.

Leave a Comment

This site uses Akismet to reduce spam. Learn how your comment data is processed.