ಭಾರತೀಯ ನೌಕಸೇನೆಗೆ ನಾಲ್ಕು ಸ್ವದೇಶಿ ಸೋನಾರ್ ಗಳ ಸೇರ್ಪಡೆ
ಭಾರತೀಯ ನೌಕಸೇನೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಸ್ವದೇಶಿ ನಿರ್ಮಿತ ಸೋನಾರ್ ಗಳನ್ನು ಸೇರ್ಪಡೆಗೊಳಿಸಲಾಯಿತು. ಈ ಸೋನಾರ್ ಗಳು ನೌಕಪಡೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿವೆ. ಈ ಸೋನಾರ್ ಗಳನ್ನು ಕೊಚ್ಚಿ ಮೂಲದ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಅಂಗಸಂಸ್ಥೆಯಾದ ನವಲ್ ಫಿಸಿಕಲ್ ಅಂಡ್ ಓಷನೋಗ್ರಾಫಿಕ್ ಲ್ಯಾಬೋರೆಟರಿ ಅಭಿವೃದ್ದಿಪಡಿಸಿದೆ.
ನಾಲ್ಕು ಬಗೆಯ ಸೋನಾರ್ ಗಳು:
ಅಭಯ್: ಅಳವಲ್ಲದ ನೀರಿನಲ್ಲಿ ವಸ್ತುಗಳನ್ನು ಪತ್ತೆಹಚ್ಚಬಲ್ಲ ಪುಟ್ಟ ಶೋಧಕ.
ಹಂಸ ಯುಜಿ: ಈಗಾಗಲೇ ಬಳಕೆಯಲ್ಲಿರುವ ಹಂಸ ಸೋನಾರ್ ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಲಾದ ತಂತ್ರಜ್ಞಾನದಿಂದ ಕೂಡಿದೆ. ಏಳು ನೌಕೆಗಳನ್ನು ಇದನ್ನು ಅಳವಡಿಸಲಾಗುವುದು. ಸಮೀಪದ ವಸ್ತುಗಳು, ಜಲಂತರ್ಗಾಮಿ ವೈರಿ ನೌಕೆಗಳನ್ನು ಇದು ಪತ್ತೆಹಚ್ಚಲಿದೆ.
ಎಐಡಿಎಸ್ಎಸ್: ಎಐಡಿಎಸ್ಎಸ್ ಎಂದರೆ ಅಡ್ವಾನ್ಸಡ್ ಇಂಡಿಜಿನಸ್ ಡಿಸ್ಟ್ರೆಸ್ ಸೋನಾರ್ ಸಿಸ್ಟಂ ಫಾರ್ ಸಬ್ ಮರೀನ್ ಎಂದರ್ಥ. ಎಷ್ಟೇ ಆಳದಲ್ಲಿ ಬಹುದೂರದಲ್ಲಿ ಅಡಗಿದ್ದರೂ ವೈರಿ ಜಲಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಇದು ಹೊಂದಿದೆ.
ಎನ್ಎಸಿಎಸ್: ನಿಯರ್ ಫೀಲ್ಡ್ ಅಕೌಸ್ಟಿಕ್ ಕ್ಯಾರಕ್ಟರೈಸೇಷನ್ ಸಿಸ್ಟಂ ಎಂದರ್ಥ. ಇದು ಸೋನಾರ್ ಆವರ್ತನ ಅವಲಂಬಿತ 3 ಡಿ ಪ್ರಸರಣ ಮತ್ತು ಸ್ವೀಕೃತಿ ವೈಷಿಷ್ಟ್ಯ ಹುಡುಕಲು ಸಹಕಾರಿಯಾಗಲಿದೆ.
ಉಪಯೋಗಗಳು:
- ನೀರಿನ ಆಳದಲ್ಲಿ ಕಣ್ಗಾವಲು ಸಾಮರ್ಥ್ಯವನ್ನು ಈ ಸೋನಾರ್ ಗಳು ಹೆಚ್ಚಿಸಲಿವೆ.
- ಅತಿ ಅಗತ್ಯವೆನಿಸಿರುವ ಈ ಕ್ಷೇತ್ರದಲ್ಲಿ ಭಾರತೀಯ ನೌಕಪಡೆ ತಂತ್ರಜ್ಞಾನದ ಅಭಿವೃದ್ದಿಯಲ್ಲಿ ಸ್ವಾವಲಂಬನೆ ಸಾಧಿಸಲು ಅನುಕೂಲವಾಗಲಿದೆ.
2016 ಬ್ರೂಸೆಲ್ಲೊಸಿಸ್ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ನವದೆಹಲಿಯಲ್ಲಿ ಚಾಲನೆ
2016 ಬ್ರೂಸೆಲ್ಲೊಸಿಸ್ (ಕಂದುರೋಗ) ಮೇಲಿನ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಇಂಟರ್ನ್ಯಾಷನ್ ಸೊಸೈಟಿ ಆನ್ ಬ್ರೂಸೆಲ್ಲೊಸಿಸ್ 69ನೇ ಸಭೆಗೆ ನವದೆಹಲಿಯಲ್ಲಿ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ಜೈವಿಕ ತಂತ್ರಜ್ಞಾನ ಇಲಾಖೆಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಹಯೋಗದೊಂದಿಗೆ ಆಯೋಜಿಸಿದೆ.
ಸಮ್ಮೇಳನದ ಮುಖ್ಯಾಂಶಗಳು:
- 26 ದೇಶಗಳಿಂದ ಆಗಮಿಸಿದ್ದ ವಿಜ್ಞಾನಿಗಳು ಮತ್ತು ತಜ್ಞನರಿಗೆ ತಾಂತ್ರಿಕ ವೇದಿಕೆಯನ್ನು ರೂಪಿಸುವುದು.
- ರೋಗಪೀಡಿತ ರಾಷ್ಟ್ರಗಳಿಗೆ ಜಾನುವಾರು ಉತ್ಪಾದನೆ ವ್ಯವಸ್ಥೆ ನಿರ್ವಹಿಸುವ ಕಾನೂನಿನ ಮೂಲಕ ಪರಿಣಾಮಕಾರಿ ಯೋಜನೆ ಹಾಗೂ ರೋಗ ನಿಯಂತ್ರಣ ವಿಧಾನದಿಂದ ಸಹಾಯ ಮಾಡುವುದು.
ಬ್ರೂಸೆಲ್ಲೊಸಿಸ್ ಮುಕ್ತ ಗ್ರಾಮ ಕಾರ್ಯಕ್ರಮ:
- ಸಮ್ಮೇಳನದ ಅಂಗವಾಗಿ ಬ್ರೂಸೆಲ್ಲೊಸಿಸ್ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು 10 ರಾಜ್ಯಗಳ 50 ಗ್ರಾಮಗಳಲ್ಲಿ ಆರಂಭಿಸಲಾಗುವುದು.
ಬ್ರೂಸೆಲ್ಲೊಸಿಸ್ ಎಂದರೇನು?
ಬ್ರೂಸೆಲ್ಲೊಸಿಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಬ್ರೂಸೆಲ್ಲಾ ಎಂಬ ಬ್ಯಾಕ್ಟೀರಿಯಾದ ಹರಡುತ್ತದೆ. ಹಸು, ಎಮ್ಮೆ, ಮೇಕೆ, ಕುರಿ, ಹಂದಿ, ನಾಯಿ, ಇತರೆ ಪ್ರಾಣಿಗಳು ಹಾಗೂ ಮಾನವರಲ್ಲೂ ಈ ಕಾಯಿಲೆ ಹರಡುತ್ತದೆ.
ಸೋಂಕು ಹರಡುವಿಕೆ ಹೇಗೆ?
ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗಿರುವ ಪ್ರಾಣಿ ಅಥವಾ ಪ್ರಾಣಿ ಉತ್ಪನ್ನದ ಸಂಪರ್ಕಕ್ಕೆ ಬಂದಾಗ ಮಾನವರಲ್ಲಿ ಈ ಕಾಯಿಲೆ ಕಂಡುಬರುತ್ತದೆ. ಡೈರಿ ಕಾರ್ಮಿಕರು, ಪಶುವೈದ್ಯರು ಹಾಗೂ ಮಾಂಸದ ವ್ಯಾಪಾರಿಗಳು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು.
ರೋಗದ ಲಕ್ಷಣ:
ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳೆಂದರೆ ಜ್ವರ, ತಲೆನೋವು, ಬೆವರುವುದು, ಬೆನ್ನು ನೋವು ಮತ್ತು ಸುಸ್ತು.