14ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ
ಭಾರತೀಯ ಮೂಲದ ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ ರವರು ಬೆಂಗಳೂರಿನಲ್ಲಿ ಜನವರಿ 7 ರಿಂದ 9 ರವರೆಗೆ ನಡೆಯಲಿರುವ 14ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೋಸ್ಟಾ ರವರು ಜನವರಿ 8 ರಂದು ಪ್ರವಾಸಿ ಭಾರತೀಯ ದಿವಸ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಸುರಿನಾಮ್ ಉಪಾಧ್ಯಕ್ಷರಾದ ಮೈಕೆಲ್ ಅಶ್ವಿನ್ ಸತ್ಯಂದ್ರೆ ಅಧಿನ್ ರವರು ಜನವರಿ 7 ರಂದು ನಡೆಯಲಿರುವ ಯುವ ಪ್ರವಾಸಿ ಭಾರತೀಯ ದಿವಸ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಂಟೊನಿಯೋ ಕೋಸ್ಟಾ:
- ಅಂಟೊನಿಯೋ ಕೋಸ್ಟಾ ರವರು 17ನೇ ಜುಲೈ 1961 ರಂದು ಪೋರ್ಚುಗಲ್ ರಾಜಧಾನಿ ಲಿಸ್ಬನ್ ನಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿರುವ ಇವರ ತಂದೆ ತಾಯಿಯ ಮೂಲ ಸ್ಥಳ ಗೋವಾ.
- ಇವರ ತಂದೆ ಒರ್ಲಾಂಡೊ ಕೋಸ್ಟಾ ಒಬ್ಬ ಪ್ರಸಿದ್ದ ಕವಿ ಹಾಗೂ ಲೇಖಕ. ಗೋವಾದಲ್ಲಿ ಅನೇಕ ಸಂಬಂಧಿಕರನ್ನು ಹೊಂದಿದ್ದಾರೆ.
- 2015ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ನಂತರ ಇವರು ಪ್ರಧಾನಿಯಾಗಿ ನೇಮಕಗೊಂಡರು.
- 2004ರಲ್ಲಿ ಐರೋಪ್ಯ ಸಂಸತ್ತಿಗೆ ನೇಮಕಗೊಂಡ 14 ಉಪಾಧ್ಯಕ್ಷರ ಪೈಕಿ ಕೋಸ್ಟಾ ಕೂಡ ಒಬ್ಬರು.
- 2007 ರಿಂದ 2015ರವರೆಗೆ ಲಿಸ್ಬನ್ ನಗರದ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು.
ಪ್ರವಾಸಿ ಭಾರತೀಯ ದಿವಸ್:
- ಪ್ರವಾಸಿ ಭಾರತೀಯ ದಿವಸ್ ಅನ್ನು ಪ್ರತಿ ವರ್ಷ ಜನವರಿ 9 ರಂದು ಆಚರಿಸಲಾಗುತ್ತದೆ. ಸಾಗರೋತ್ತರ ಭಾರತೀಯರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು 2003ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ.
- ಜನವರಿ 9, 1915 ರಲ್ಲಿ ಮಹಾತ್ಮ ಗಾಂಧಿರವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿಬಂದ ಸ್ಮರಣಾರ್ಥ ಈ ದಿನವನ್ನು ಪ್ರವಾಸಿ ಭಾರತೀಯ ದಿವಸ್ ಎಂದು ಆಚರಿಸಲಾಗುತ್ತಿದೆ.
“ಭಾರತೀಯ ವಾಣಿಜೋದ್ಯಮ ಮತ್ತು ಕೈಗಾರಿಕ ಮಂಡಳಿ (FICCI)” ಅಧ್ಯಕ್ಷರಾಗಿ ಪಂಕಜ್ ಪಟೇಲ್ ಆಯ್ಕೆ
ಭಾರತ ವಾಣಿಜ್ಯೋದ್ಯಮ ಮತ್ತು ಕೈಗಾರಿಕ ಒಕ್ಕೂಟ (ಫಿಕ್ಕಿ)ಯ 2017ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಪಂಕಜ್ ಪಟೇಲ್ ರವರು ನೇಮಕಗೊಂಡಿದ್ದಾರೆ. ಪ್ರಸ್ತುತ ಫಿಕ್ಕಿ ಅಧ್ಯಕ್ಷರಾಗಿರುವ ಅಂಬುಜ ನಿಯೊಟಿಯ ಗ್ರೂಫ್ ಅಧ್ಯಕ್ಷರಾದ ಹರ್ಷವರ್ಧನ್ ನಿಯೊಟಿಯ ರವರ ಅವಧಿ ಡಿಸೆಂಬರ್ 2016ಕ್ಕೆ ಪೂರ್ಣಗೊಳ್ಳಲಿದ್ದು, ಆ ನಂತರ ಪಟೇಲ್ ರವರು ಅಧಿಕಾರವಹಿಸಿಕೊಳ್ಳಲಿದ್ದಾರೆ. ಪಟೇಲ್ ಪ್ರಸ್ತುತ ಝೈಡಸ್ ಕ್ಯಾಡಿಲ (Zydus Cadila)ದ ಚೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅಲ್ಲದೇ ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಲಹಾ ಸಮಿತಿ ಮಂಡಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಗುಜರಾತ್ ಕ್ಯಾನ್ಸರ್ ಸೊಸೈಟಿ ಹಾಗೂ ಗುಜರಾತ್ ಕ್ಯಾನರ್ ಹಾಗೂ ಸಂಶೋಧನಾ ಸಂಸ್ಥೆಯ ಉಪಾಧ್ಯಕ್ಷ, ಕಾರ್ಯನಿರ್ವಾಹಕ ಅಧ್ಯಕ್ಷ ಸಹ ಆಗಿದ್ದಾರೆ.
ಫಿಕ್ಕಿ:
- ಫಿಕ್ಕಿ (ಫೆಡರೇಷನ್ ಆಫ್ ಇಂಡಿಯನ್ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ) ಭಾರತದ ಅತಿ ದೊಡ್ಡ ಮತ್ತು ಹಳೆಯ ವ್ಯವಹಾರ ಸಂಸ್ಥೆ. ಫಿಕ್ಕಿ ಸರ್ಕಾರೇತರ ಮತ್ತು ಲಾಭದಾಯಕವಲ್ಲದ ಸಂಸ್ಥೆಯಾಗಿದೆ.
- 1927 ರಲ್ಲಿ ಇದನ್ನು ಸ್ಥಾಪಿಸಲಾಗಿದೆ. ಫಿಕ್ಕಿ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.
- ಭಾರತೀಯ ಉದ್ಯಮದ ದಕ್ಷತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶ.
2016 ಐಸಿಟಿ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತಕ್ಕೆ 138ನೇ ಸ್ಥಾನ
2016 ಐಸಿಟಿ (ICT) ಅಭಿವೃದ್ದಿ ಸೂಚ್ಯಂಕದಲ್ಲಿ 175 ರಾಷ್ಟ್ರಗಳ ಪೈಕಿ ಭಾರತ 138ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU)ದ ಇನ್ಪರ್ಮೆಶನ್ ಸೊಸೈಟಿ ರಿಪೋರ್ಟ್ ಅಂಗವಾಗಿ ಸೂಚ್ಯಂಕವನ್ನು ಬಿಡುಗಡೆಗೊಳಿಸಲಾಗಿದೆ.
ಐಸಿಟಿ ಅಭಿವೃದ್ದಿ ಸೂಚ್ಯಂಕ ಎಂದರೇನು?
- ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಈ ಸೂಚ್ಯಂಕವನ್ನು ವಾರ್ಷಿಕವಾಗಿ ಹೊರತರುತ್ತಿದೆ. ವಿವಿಧ ದೇಶಗಳಲ್ಲಿ ಐಸಿಟಿ ಅಭಿವೃದ್ದಿಯ ಸ್ಥಾನಮಾನವನ್ನು ಈ ಸೂಚ್ಯಂಕ ತೋರಿಸುತ್ತದೆ.
- ಐಸಿಟಿ ಅಭಿವೃದ್ದಿ ಸೂಚ್ಯಂಕವನ್ನು 11 ಐಸಿಟಿ ಮಾನದಂಡಗಳನ್ನು ಆಧಾರವಾಗಿಟ್ಟು ತಯಾರಿಸಲಾಗುತ್ತದೆ.
ಪ್ರಮುಖಾಂಶಗಳು:
- ಮೊದಲ ಐದು ರಾಷ್ಟ್ರಗಳು: ದಕ್ಷಿಣ ಕೊರಿಯಾ, ಐಸ್ ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್ ಮತ್ತು ಯುಕೆ.
- ಕೊನೆಯ ಐದು ಸ್ಥಾನದಲ್ಲಿರುವ ರಾಷ್ಟ್ರಗಳು: ನೈಜರ್, ಚಾಡ್, ಗಿನಿಯಾ-ಬಿಸ್ಸೌ, ದಕ್ಷಿಣ ಸೂಡಾನ್ ಮತ್ತು ಬುರುಂಡಿ.
- ಐರೋಪ್ ಮತ್ತು ಅಮೆರಿಕಾ ಖಂಡದ ರಾಷ್ಟ್ರಗಳು ಐಸಿಟಿ ಅಭಿವೃದ್ದಿಯಲ್ಲಿ ಉತ್ತಮ ಸಾಧನೆ ಮಾಡಿವೆ.
- ಏಷ್ಯಾ-ಫೆಸಿಫಿಕ್ ವಲಯದಲ್ಲಿ 34 ರಾಷ್ಟ್ರಗಳ ಪೈಕಿ ಭಾರತ 26ನೇ ಸ್ಥಾನವನ್ನು ಪಡೆದುಕೊಂಡಿದೆ. ಆಫ್ರಿಕಾ ಖಂಡ ಅತ್ಯಂತ ಕಳಪೆ ಸಾಧನೆ ಮಾಡಿದೆ.
- 2015ರ ಸೂಚ್ಯಂಕಕ್ಕೆ ಹೋಲಿಸಿದಾಗ ಭಾರತದ ಸಾಧನೆ ಉತ್ತಮವಾಗಿದೆ. ಕಳೆದ ಸೂಚ್ಯಂಕದಲ್ಲಿ ಭಾರತ 2.50 ಅಂಕಗಳಿಸಿದ್ದರೆ, 2016 ರಲ್ಲಿ 2.69 ಅಂಕಗಳಿಸಿದೆ. 2015ರಲ್ಲಿ ಭಾರತ 140ನೇ ಸ್ಥಾನದಲ್ಲಿತ್ತು.
Thanks to k e. Com