62 ಜಿಲ್ಲೆಗಳಲ್ಲಿ ನೂತನ ಜವಹರ್ ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ಪ್ರತಿ ಜಿಲ್ಲೆಗೆ ಒಂದರಂತೆ 62 ಜಿಲ್ಲೆಗಳಲ್ಲಿ ನೂತನ ಜವಹರ್ ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಈ ವಿದ್ಯಾಲಯಗಳು ನೀಡಲಿವೆ. ಸರಿಸುಮಾರು 35,000 ವಿದ್ಯಾರ್ಥಿಗಳಿಗೆ ಇದರಿಂದ ಉಪಯೋಗವಾಗಲಿದೆ.

ಪ್ರಮುಖಾಂಶಗಳು:

  • ಎಲ್ಲಾ ಜವಹರ್ ನವೋದಯ ವಿದ್ಯಾಲಯಗಳು ವಸತಿ ಆಧರಿತ ಹಾಗೂ ಸಹ ಶಿಕ್ಷಣ ಮಾದರಿಯಲ್ಲಿ ಇರಲಿವೆ. ವಿದ್ಯಾಲಯದ ನೌಕರ ವೃಂದ ಹಾಗೂ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ನೆಲೆಸುವುದು ಕಡ್ಡಾಯ.
  • ಈ 62 ವಿದ್ಯಾಲಯಗಳಿಂದ ನೇರವಾಗಿ ಸುಮಾರು 2914 ಜನರಿಗೆ ಖಾಯಂ ಉದ್ಯೋಗ ದೊರೆಯಲಿದೆ. ಅಲ್ಲದೇ ಸ್ಥಳೀಯ ಮಾರಾಟಗಾರರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅವಕಾಶ ದೊರೆಯಲಿದೆ.

ಹಿನ್ನಲೆ:

  • ದೇಶದ 35 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 598 ಜವಹರ್ ನವೋದಯ ವಿದ್ಯಾಲಯಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳಲ್ಲಿ 591 ವಿದ್ಯಾಲಯಗಳು ಕ್ರಿಯಾತ್ಮಕವಾಗಿವೆ.
  • ಪ್ರತಿಯೊಂದು ಜವಹರ್ ನವೋದಯ ವಿದ್ಯಾಲಯಗಳು 6 ರಿಂದ 12ನೇ ವರೆಗಿನ ತರಗತಿಗಳನ್ನು ನಡೆಸಲಿವೆ. ಪ್ರತಿ ತರಗತಿಗೆ 80 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 560 ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಂದನೇ ಮೂರು ಸ್ಥಾನಗಳನ್ನು ಬಾಲಕಿಯರಿಗೆ ಮೀಸಲಿಡಲಾಗಿದೆ.
  • ಜವಹರ್ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುವುದು. ಕನಿಷ್ಠ 75% ಸ್ಥಾನಗಳನ್ನು ಆಯಾ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಲಾಗಿದೆ.

ಪ್ರವಾಹ ಭೀತಿ ಎದುರಿಸುತ್ತಿವೆ ಹಿಮಾಲಯದ ಜಲವಿದ್ಯುತ್ ಯೋಜನೆಗಳು

ಹಿಮಾಲಯ ಪ್ರದೇಶದ ಪ್ರಮುಖ ಜಲ ವಿದ್ಯುತ್ ಯೋಜನೆಗಳು ಹೊಸ ಸರೋವರಗಳ ರಚನೆ ಮತ್ತು ಮಂಜುಗಡ್ಡೆಗಳ ಕರಗುವಿಕೆ ಕಾರಣದಿಂದಾಗಿ ಪ್ರವಾಹ ಭೀತಿ ಎದುರಿಸುತ್ತಿವೆ ಎಂಬ ಅಪಾಯಕಾರಿ ಅಂಶ ಬೆಳಕಿಗೆ ಬಂದಿದೆ.  ಹವಾಮಾನ ಬದಲಾವಣೆಯಿಂದ ಹಿಮಾಲಯದ ಮೇಲಾಗುತ್ತಿರುವ ಪರಿಣಾಮ ಕುರಿತು ಸ್ವಿಸ್ ಮೂಲದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ವಿಷಯ ತಿಳಿದುಬಂದಿದೆ. ಹಿಮಾಲಯದ ಮಂಜುಗಡ್ಡೆ ಮತ್ತು ಅದರ ಕರಗುವಿಕೆಯಿಂದ ನೆರೆಹೊರೆಯ ಜನರ ಜೀವನದ ಮೇಲಾಗುವ ಪರಿಣಾಮವನ್ನು ಮುಖ್ಯವಾಗಿ ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಲಾಗಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಹಿಮಾಲಯದ ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದು ಹೇಳಲಾಗಿದೆ.

  • ಭಾರತ, ಚೀನಾ, ಪಾಕಿಸ್ತಾನ ಮತ್ತು ನೇಪಾಳಕ್ಕೆ ಸಂಬಂಧಿಸಿದ 441 ಜಲವಿದ್ಯುತ್ ಯೋಜನೆಗಳು ಮಂಜುಗಡ್ಡೆ ಕರಗುವಿಕೆಯಿಂದ ಉಂಟಾಗುವ ಪ್ರವಾಹಕ್ಕೆ ತುತ್ತಾಗಲಿವೆ.
  • ಈ ಜಲ ವಿದ್ಯುತ್ ಯೋಜನೆಗಳು ನಿರ್ಗಲ್ಲು ಅಥವಾ ಮಂಜುಗಡ್ಡೆಗೆ ಸಮೀಪದಲ್ಲಿವೆ.
  • ಈ ಜಲವಿದ್ಯುತ್ ಯೋಜನೆಗಳು ವಿಶೇಷ ವಿನ್ಯಾಸ ಮತ್ತು ಸುರಕ್ಷತೆ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಪ್ರವಾಹದ ಪರಿಣಾಮವನ್ನು ತಗ್ಗಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸ್ಥಿತಿ ಏನು?

  • ಭಾರತದ 129 ಜಲ ವಿದ್ಯುತ್ ಯೋಜನೆಗಳನ್ನು ಅಧ್ಯಾಯನದಲ್ಲಿ ಪರಿಗಣಿಸಲಾಗಿದೆ. ಪಾರ್ವತಿ ಕಣಿವೆ ಪ್ರದೇಶದಲ್ಲಿ 1989 ರಲ್ಲಿ ಇದ್ದ 12 ಮಂಜುಗಡ್ಡೆ ಸರೋವರಗಳ ಸಂಖ್ಯೆ 2014 ರಲ್ಲಿ 77ಕ್ಕೇ ಏರಿಕೆಯಾಗಿದೆ. ಅದೇ ರೀತಿ ಬಿಯಾಸ್ ಪ್ರದೇಶದಲ್ಲಿ 1989 ರಲ್ಲಿ 6 ಸರೋವರಗಳಿದ್ದರೆ, 2011ರಲ್ಲಿ 33ಕ್ಕೆ ಏರಿಕೆಯಾಗಿದೆ.

ಏರ್ಟೆಲ್ ನಿಂದ ದೇಶದ ಮೊದಲ ಪೇಮೆಂಟ್ ಬ್ಯಾಂಕ್

ಏರ್ಟೆಲ್ ಬ್ಯಾಂಕ್ ಅಥವಾ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ದೇಶದಲ್ಲಿ ಪ್ರಪ್ರಥಮ ಪೇಮೆಂಟ್‌ ಬ್ಯಾಂಕ್‌ ಆರಂಭಿಸಿದೆ. ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಮೊದಲ ಪೇಮೆಂಟ್ ಬ್ಯಾಂಕ್ ಅನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲೆಡೆ ಸ್ಥಾಪಿಸಲಾಗುವುದು.  ಆಧಾರ್‌ ಕಾರ್ಡ್‌ ಬಳಸಿ ಪೇಮೆಂಟ್‌ ಬ್ಯಾಂಕ್‌ ಖಾತೆ ತೆರೆಯಬಹುದಾಗಿದ್ದು, ಗ್ರಾಹಕರ ಏರ್‌ಟೆಲ್‌ ಮೊಬೈಲ್‌ ಸಂಖ್ಯೆಯೇ ಖಾತೆ ಸಂಖ್ಯೆಯೂ ಆಗಿರಲಿದೆ.

  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ಭಾರ್ತಿ ಏರ್ಟೆಲ್ ನ ಒಂದು ಅಂಗಸಂಸ್ಥೆ. ಮಹೀಂದ್ರಾ ಬ್ಯಾಂಕ್ ಇದರಲ್ಲಿ ಶೇ 19.9% ಪಾಲನ್ನು ಹೊಂದಿದೆ.
  • ರಾಜಸ್ತಾನ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿರುವ ಏರ್ಟೆಲ್ ಮಳಿಗೆಗಳು ಬ್ಯಾಂಕ್ ನಂತೆ ಕಾರ್ಯನಿರ್ವಹಿಸಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಇವು ಬ್ಯಾಂಕಿಂಗ್ ಕಾರ್ಯನಿರ್ವಹಿಸಲಿವೆ.
  • ಒಂದು ಲಕ್ಷಕ್ಕೆ ಮೀರದಂತೆ ಉಳಿತಾಯ ಖಾತೆಯಲ್ಲಿ ಠೇವಣಿ ಇಡಬಹುದಾಗಿದ್ದು, ವಾರ್ಷಿಕವಾಗಿ ಶೇ. 7.25ರಷ್ಟು ಬಡ್ಡಿ ನೀಡಲಿದೆ.
  • ನಗದು ರಹಿತ ವಹಿವಾಟು, ಹಣ ವರ್ಗಾವಣೆ ಸೇರಿದಂತೆ ಇತರೆ ಸೌಲಭ್ಯ ಸಹ ಇಲ್ಲಿ ಲಭ್ಯವಾಗಲಿದೆ. ಏರ್‌ಟೆಲ್‌ ಬ್ಯಾಂಕ್‌ ವ್ಯವಸ್ಥೆ ಹಣ ಪಾವತಿ ಸೇವೆಗೆ ಸಂಬಂಧಿಸಿ ಸೀಮಿತ ಪ್ರಮಾಣದ ವ್ಯವಹಾರ ನಡೆಸಲಿದ್ದು, ಗ್ರಾಹಕರು ಉಳಿತಾಯ ಹಾಗೂ ಚಾಲ್ತಿ ಖಾತೆ ತೆರೆಯಬಹುದಾಗಿದೆ.
  • ಉಳಿತಾಯ ಖಾತೆದಾರರಿಗೆ ಅಪಘಾತ ವಿಮೆ ರೂಪದಲ್ಲಿ ಒಂದು ಲಕ್ಷದವರೆಗೆ ಇನ್ಸೂರೆನ್ಸ್‌ ಸಹ ಲಭ್ಯವಿರುತ್ತದೆ. ಆದರೆ ಇಲ್ಲಿ ಯಾವುದೇ ರೀತಿಯ ಸಾಲ ಸೌಲಭ್ಯವಿರುವುದಿಲ್ಲ.

ಹಿನ್ನಲೆ:

  • ಆಗಸ್ಟ್ 2015 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 11 ಅರ್ಜಿದಾರರಿಗೆ ಫೆಬ್ರವರಿ 2017ರ ಒಳಗೆ ಪೇಮೆಂಟ್ ಬ್ಯಾಂಕ್ ಸ್ಥಾಪಿಸಲು ಅನುಮತಿ ನೀಡಿತ್ತು. ಆದರೆ 11 ಅರ್ಜಿದಾರರ ಪೈಕಿ ಟೆಕ್ ಮಹೀಂದ್ರಾ, ಚೋಳಮಂಡಲಂ ಫೈನಾನ್ಸ್ ಮತ್ತು ಇನ್ವಸ್ಟಮೆಂಟ್ ಹಾಗೂ ಬಿಲಿನಿಯೇರ್ ದಿಲೀಪ್ ಶಾಂಘ್ವಿ ಪೇಮೆಂಟ್ ಬ್ಯಾಂಕ್ ಸ್ಥಾಪನೆಯಿಂದ ಹಿಂದೆ ಸರಿದಿದ್ದಾರೆ.

ಅಮೆರಿಕದ ವಿಶ್ವಸಂಸ್ಥೆ ರಾಯಭಾರಿಯಾಗಿ ನಿಕ್ಕಿ ಹ್ಯಾಲೆ ನೇಮಕ

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಹುದ್ದೆಗೆ ದಕ್ಷಿಣ ಕೆರೊಲಿನಾದ ಗವರ್ನರ್, ಭಾರತ ಮೂಲದ ನಿಕ್ಕಿ ಹ್ಯಾಲೆ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ. 44 ವರ್ಷದ ನಿಕ್ಕಿ ಹ್ಯಾಲೆ, ಟ್ರಂಪ್ ಅವರ ಸಂಪುಟದಲ್ಲಿ ಉನ್ನತ ಸ್ಥಾನ ಪಡೆಯುತ್ತಿರುವ ಮೊದಲ ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಿಕ್ಕಿ ಹ್ಯಾಲೆ ಅಮೋಘ ಸಾಧನೆ ಮಾಡಿದ್ದು, ಪಕ್ಷಭೇದವಿಲ್ಲದೇ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ನಿಕ್ಕಿ ಹ್ಯಾಲೆ ರವರು ಭಾರತದಿಂದ ಅಮೆರಿಕಗೆ ವಲಸೆ ಹೋದ ದಂಪತಿಯ ಮಗಳು. ಪ್ರಸ್ತುತ ಇವರು ದಕ್ಷಿಣ ಕೆರೊಲಿನಾದಲ್ಲಿ ಎರಡನೇ ಅವಧಿಗೆ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
  • 2011 ರಲ್ಲಿ ಇವರು ದಕ್ಷಿಣ ಕೆರೊಲಿನಾದ ಮೊದಲ ಮಹಿಳಾ ಗವರ್ನರ್ ಆಗಿ ಆಯ್ಕೆಯಾಗಿದ್ದರು. ಪ್ರಸ್ತುತ ಹ್ಯಾಲೆ ಅವರು ಅಮೆರಿಕಾದ ಕಿರಿಯ ವಯಸ್ಸಿನ ಗವರ್ನರ್ ಎನಿಸಿದ್ದಾರೆ.
  • ಬಾಬಿ ಜಿಂದಾಲ್ ನಂತರ ಗವರ್ನರ್ ಆಗಿ ನೇಮಕಗೊಂಡ ಭಾರತದ ಎರಡನೇಯವರು ಸಹ ಆಗಿದ್ದಾರೆ.
  • ಗವರ್ನರ್ ಆಗುವ ಮುಂಚೆ ದಕ್ಷಿಣ ಕೆರೊಲಿನಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ಪ್ರತಿನಿಧಿಯಾಗಿ 2005 ರಿಂದ 2011 ರವರೆಗೆ ಸೇವೆ ಸಲ್ಲಿಸಿದ್ದರು.

Leave a Comment

This site uses Akismet to reduce spam. Learn how your comment data is processed.