ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲಿಕ್ ನೇಮಕ
ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲ್ಲಿಕ್ ರವರು ನೇಮಕಗೊಂಡಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಾಘವ್ ಚಂದ್ರ ರವರು ರಾಷ್ಟ್ರೀಯ ಪರಿಶಿಷ್ಠ ಪಂಗಡ ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡ ಕಾರಣ ಅಧ್ಯಕ್ಷ ಹುದ್ದೆ ತೆರವಾಗಿತ್ತು. ಮಲಿಕ್ ರವರು 1983 ಬ್ಯಾಚ್ ನ ಐಎಎಸ್ ಅಧಿಕಾರಿ. ನೇಮಕಾತಿ ಮುಂಚೆ ಮಲಿಕ್ ರವರು ನೀತಿ ಆಯೋಗದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ:
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ ಆಗಿದೆ. ಸುಮಾರು 70,000 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಮಾಡುವುದು ಪ್ರಾಧಿಕಾರದ ಕರ್ತವ್ಯ.
- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯಿದೆ-1988 ರಡಿ ಪ್ರಾಧಿಕಾರವನ್ನು ರಲ್ಲಿ ಸ್ಥಾಪಿಸಲಾಗಿದೆ. 1995 ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಅಂಗೀಕರಿಸಲಾಯಿತು.
- ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅಭಿವೃದ್ದಿ ಮತ್ತು ನಿರ್ವಹಣೆ ಮಾಡುವುದು ಇದರ ಹೊಣೆಗಾರಿಕೆ ಆಗಿದೆ.
ಪತ್ರಕರ್ತೆ ಮಾಲಿನಿ ಸುಬ್ರಮಣ್ಯಂ ರವರಿಗೆ ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ ಪ್ರಶಸ್ತಿ
ಭಾರತೀಯ ಪತ್ರಕರ್ತೆ ಮಾಲಿನಿ ಸುಬ್ರಮಣ್ಯಂ ರವರಿಗೆ ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ ಪ್ರಶಸ್ತಿ ಲಭಿಸಿದೆ. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಿಂದ ನಿರ್ಭೀತರಾಗಿ ವರದಿ ನೀಡಿದಕ್ಕಾಗಿ ಮಾಲಿನಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪತ್ರಕರ್ತರ ರಕ್ಷಣಾ ಸಮಿತಿ ನೀಡುತ್ತಿರುವ ಪ್ರಶಸ್ತಿಯನ್ನು ಮಾಲಿನಿ ಅಲ್ಲದೇ ಅಮೆರಿಕದ ಎಲ್ ಸಾಲ್ವಡರ್ ಪತ್ರಕರ್ತ ಆಸ್ಕರ್ ಮಾರ್ಟಿನೆಜ್, ಟರ್ಕಿಯ ಕ್ಯಾನ್ ದುಂಡರ್ ಹಾಗೂ ಈಜಿಪ್ಟ್ ನ ಛಾಯಾಗ್ರಾಹಕ ಅಬು ಜೈದ್ ರವರಿಗೂ ನೀಡಲಾಗಿದೆ.
ಮಾಲಿನಿ ಸುಬ್ರಮಣ್ಯಂ ರವರು ಸುದ್ದಿ ವೆಬ್ ಸೈಟ್ ಸ್ಕ್ರಾಲ್.ಇನ್ (Scroll.in) ಸುದ್ದಿಗಾರ್ತಿ ಆಗಿದ್ದಾರೆ. ಚತ್ತೀಸ್ ಘರ್ ಬಸ್ತಾರ್ ಜಿಲ್ಲೆಯಲ್ಲಿ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸ್ ರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ, ಮಹಿಳೆಯ ಮೇಲೆ ಶೋಷಣೆ, ಅಪ್ರಾಪ್ತರನ್ನು ಜೈಲಿಗೆ ಹಾಕುತ್ತಿರುವುದು ಮತ್ತು ಪತ್ರಕರ್ತರ ಮೇಲಿನ ಹಲ್ಲೆ ಸೇರಿದಂತೆ ಸಾಮಾಜಿಕ ಕಳಕಳಿ ವಿಷಯಗಳನ್ನು ವರದಿ ಮಾಡಿದ್ದರು.
ಪ್ರಶಸ್ತಿ ಬಗ್ಗೆ:
- ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ ಪ್ರಶಸ್ತಿಯನ್ನು ಪತ್ರಕರ್ತರು ಅಥವಾ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗುತ್ತದೆ. ಪತ್ರಿಕಾ ಸ್ವಾತಂತ್ರವನ್ನು ಎತ್ತಿಹಿಡಿಯಲು ಜೀವದ ಹಂಗು ತೊರೆದು ವರದಿ ನೀಡುವುದನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
- ಪ್ರಶಸ್ತಿಯನ್ನು 1991 ರಲ್ಲಿ ಸ್ಥಾಪಿಸಲಾಗಿದ್ದು, ಪತ್ರಿಕಾ ರಕ್ಷಣಾ ಸಮಿತಿ ಪ್ರಶಸ್ತಿಯನ್ನು ನೀಡುತ್ತಿದೆ.
ಪ್ರಖ್ಯಾತ ಭೌತ ವಿಜ್ಞಾನಿ ಎಂ.ಜಿ.ಕೆ ಮೆನನ್ ನಿಧನ
ಪ್ರಸಿದ್ದ ಭೌತಶಾಸ್ತ್ರಜ್ಞ ಮತ್ತು ಕಳೆದ ಐದು ದಶಕಗಳಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊ. ಎಂ ಜಿ ಕೆ ಮೆನನ್ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು ಮತ್ತು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ನರಳುತ್ತಿದ್ದರು. ವಿ ಪಿ ಸಿಂಗ್ ಸರ್ಕಾರದಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ಶಿಕ್ಷಣ ರಾಜ್ಯ ಸಚಿವರಾಗಿ ಕೂಡ ಮೆನನ್ ಸೇವೆ ಸಲ್ಲಿಸಿದ್ದರು. ಇವರು ಅದಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ಪರಿಸರ ಖಾತೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
- ಮಂಬಿಲ್ಲಿಕಲತಿಲ್ ಗೋವಿಂದ್ ಕುಮಾರ್ ಮೆನನ್ ರವರು ಆಗಸ್ಟ್ 28, 1928 ರಂದು ಮಂಗಳೂರು, ಕರ್ನಾಟಕದಲ್ಲಿ ಜನಿಸಿದರು. ಎಂಜಿಕೆ ಅಥವಾ ಗೊಕು ಎಂತಲೇ ಇವರು ಪ್ರಸಿದ್ದರಾಗಿದ್ದರು.
- ತಮ್ಮ 25ನೇ ವಯಸ್ಸಿನಲ್ಲಿಯೇ ಯೂನಿರ್ವಸಿಟಿ ಆಫ್ ಬ್ರಿಸ್ಟಲ್, ಯುಕೆ ಯಿಂದ ಪಿಎಚ್.ಡಿ ಪದವಿಯನ್ನು ಪಡೆದುಕೊಂಡರು.
- 1955 ರಲ್ಲಿ ಹೋಮಿ ಬಾಬಾ ರವರ ಪ್ರೇರಣೆ ಮೇರೆಗೆ ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರ್ಪಡೆಗೊಂಡರು. 1966 ರಲ್ಲಿ ಹೋಮಿ ಬಾಬಾ ರವರ ಸಾವಿನ ನಂತರ ಟಿಐಎಫ್ಆರ್ ನಿರ್ದೇಶಕರಾಗಿ ನೇಮಕಗೊಂಡರು.
- 1971 ರಲ್ಲಿ ಎಲೆಕ್ಟ್ರಾನಿಕ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಆ ನಂತರ ಸರಿ ಸುಮಾರು ಎರಡು ದಶಕಗಳ ಕಾಲಕ್ಕಿಂತ ಹೆಚ್ಚಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿಸಿದ ನೀತಿ ರೂಪಿಸುವಲ್ಲಿ ಸಾಕಷ್ಟು ಪರಿಶ್ರಮಿಸಿದ್ದರು.
- 1971 ರಲ್ಲಿ ವಿಕ್ರಮ ಸಾರಾಭಾಯಿ ನಿಧನ ನಂತರ ಮೆನನ್ ಅವರಿಗೆ ಇಸ್ರೋ ಅಧ್ಯಕ್ಷರಾಗಿ ಹೆಚ್ಚುವರಿ ಹುದ್ದೆಯನ್ನು ವಹಿಸಲಾಯಿತು.
- ತದ ನಂತರ 1974 ರಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ಡಿ ಆರ್ ಡಿ ಓ ದ ಮುಖ್ಯಸ್ಥರಾಗಿ ನೇಮಕಮಾಡಲಾಯಿತು.
- ಮೆನನ್ ಅವರು ಯೋಜನಾ ಆಯೋಗದ ಸದಸ್ಯ (1982-89), ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹೆಗಾರ (1986-1989), ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ ಎಸ್ ಐ ಆರ್) ನ ಉಪಾಧ್ಯಕ್ಷ (1989-90) ಮತ್ತು ರಾಜ್ಯಸಭಾ ಸದಸ್ಯರಾಗಿ (1990-96) ಕೂಡ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು:
- ಪದ್ಮಭೂಷಣ -1968, ಪದ್ಮ ವಿಭೂಷಣ-1985 ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.