ತ್ರೀ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರೈಲ್ವೆ ಸಚಿವಾಲಯ ಸಜ್ಜು

ರೈಲು ಅಪಘಾತದಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೆ ತ್ರಿ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ತ್ರೀ-ನೇತ್ರ ಎಂದರೆ (terrain imaging for diesel drivers infrared, enhanced optical and radar assisted (Tri-Netra)) ರೈಲು ಅಪಘಾತವನ್ನು ತಡೆಯುವ ವ್ಯವಸ್ಥೆ. ತ್ರಿ-ನೇತ್ರ ವ್ಯವಸ್ಥೆ ಒಂದು ಸುಧಾರಿತ ವ್ಯವಸ್ಥೆಯಾಗಿದ್ದು, ಹೈ-ರೆಸಲ್ಯೂಷನ್ ಆಪ್ಟಿಕಲ್ ವಿಡಿಯೋ ಕ್ಯಾಮೆರ, ಹೈ-ಸೆನ್ಸಿಟಿವ್ ಇನ್ಪ್ರಾರೆಡ್ ವಿಡಿಯೋ ಕ್ಯಾಮೆರ ಹಾಗೂ ರಾಡಾರ್ ಆಧರಿತ ಟೆರೈನ್ ಮ್ಯಾಪಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಮೂರು ಉಪಕರಣಗಳು ರೈಲು ಚಾಲಕನಿಗೆ ಮೂರು ಕಣ್ಣುಗಳಂತೆ ಸಹಾಯ ಮಾಡಲಿವೆ. ಇತ್ತೀಚೆಗೆ ಇಂಧೋರ್-ರಾಜೇಂದ್ರ ನಗರ ಎಕ್ಸಪ್ರೆಸ್ ರೈಲು ನವೆಂಬರ್ 20, 2016 ರಂದು ಕಾನ್ಪುರದ ಬಳಿ ಹಳಿ ತಪ್ಪಿ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ಈ ಸುಧಾರಿತ ವ್ಯವಸ್ಥೆಯನ್ನು ಶ್ರೀಘ್ರವಾಗಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ತ್ರಿ-ನೇತ್ರ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ?

  • ತ್ರಿ-ನೇತ್ರ ವ್ಯವಸ್ಥೆ ಅತಿಗೆಂಪು ಮತ್ತು ರಾಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು 2-3 ಕಿ.ಮೀ ದೂರದಿಂದಲೇ ಸಂಕೇತಗಳನ್ನು ಸಂಗ್ರಹಿಸುತ್ತದೆ ಹಾಗೂ ಈ ಸಂಕೇತವನ್ನು ರೈಲು ಚಾಲಕನ ಬಳಿ ಅಳವಡಿಸಿಲಾಗಿರುವ ಸ್ಕ್ರೀನ್ ಮೇಲೆ ಭಿತ್ತರಿಸುತ್ತದೆ.
  • ರೈಲು ಹಳಿ ಮೇಲೆ ಏನಾದರೂ ಅಡೆತಡೆ ಇದ್ದರೆ ರೈಲು ಚಾಲಕನಿಗೆ ಮುಂಚಿತವಾಗಿಯೇ ಚಾಲಕನಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಆ ಮೂಲಕ ರೈಲು ಚಾಲಕನಿಗೆ ಬ್ರೇಕ್ ಹಾಕಿ ರೈಲು ನಿಲ್ಲಿಸಲು ಸಾಕಷ್ಟು ಸಮಯ ದೊರೆಯಲಿದೆ.
  • ದಟ್ಟ ಮಂಜು, ಭಾರಿ ಮಳೆ ಹಾಗೂ ರಾತ್ರಿ ಸಂದರ್ಭದಲ್ಲಿ ಚಾಲಕರು ಸಲೀಸಾಗಿ ಕಾರ್ಯನಿರ್ವಹಿಸಲು ಹಾಗೂ ರೈಲು ಅಪಘಾತ ದುರಂತವನ್ನು ತಪ್ಪಿಸಲು ಸಹಾಯವಾಗಲಿದೆ.

LBSNAAದ ಪ್ರಥಮ ಮಹಿಳಾ ನಿರ್ದೇಶಕಿಯಾಗಿ ಉಪ್ಮ ಚೌಧರಿ ನೇಮಕ

ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ಪ್ರಥಮ ಮಹಿಳಾ ನಿರ್ದೇಶಕಿಯಾಗಿ ಉಪ್ಮ ಚೌಧರಿ ನೇಮಕಗೊಂಡಿದ್ದಾರೆ. ಉಪ್ಮಅವರು LBSNAAದ 23ನೇ ಹಾಗೂ ಮೊದಲ ಮಹಿಳಾ ನಿರ್ದೇಶಕಿ. ರಾಜೀವ್ ಕಪೂರ್ ರವರಿಂದ ತೆರವಾದ ಸ್ಥಾನವನ್ನು ಇವರು ತುಂಬಲಿದ್ದಾರೆ. ಚೌಧರಿ ರವರು 1983ನೇ ಬ್ಯಾಚ್ ನ ಹಿಮಾಚಲ ಪ್ರದೇಶದ ಹಿರಿಯ ಐಎಎಸ್ ಅಧಿಕಾರಿ.

LBSNAA ಬಗ್ಗೆ:

  • ಹಿರಿಯ ನಾಗರಿಕ ಸೇವೆ ಅಧಿಕಾರಿಗಳಿಗೆ ತರಭೇತಿ ನೀಡುವ ಅತ್ಯುನ್ನತ ಸಂಸ್ಥೆಯಾಗಿದೆ.
  • ಉತ್ತರಖಂಡದ ಮಸ್ಸೂರಿಯಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಆಗಿ ಈ ಕೇಂದ್ರವನ್ನು 1959ರಲ್ಲಿ ಸ್ಥಾಪಿಸಲಾಯಿತು. ದೆಹಲಿಯ ಐಎಎಸ್ ತರಭೇತಿ ಶಾಲೆ ಮತ್ತು ಐಎಎಸ್ ಸ್ಟಾಫ್ ಕಾಲೇಜು, ಶಿಮ್ಲಾವನ್ನು ಒಗ್ಗೂಡಿಸಿ ಇದನ್ನು ಸ್ಥಾಪಿಸಲಾಯಿತು.
  • ಅತ್ಯುತ್ತಮ ತರಭೇತಿ ನೀಡುವ ಮೂಲಕ ಉತ್ತಮ, ಪಾರದರ್ಶಕ ಆಡಳಿತ ವ್ಯವಸ್ಥೆ ಚೌಕಟ್ಟನ್ನು ನಿರ್ಮಿಸುವುದು ಇದರ ಉದ್ದೇಶ.

ನವೆಂಬರ್ 26: ರಾಷ್ಟ್ರೀಯ ಕ್ಷೀರ ದಿನ

ರಾಷ್ಟ್ರೀಯ ಕ್ಷೀರ ದಿನವನ್ನು ಪತ್ರಿ ವರ್ಷ ನವೆಂಬರ್ 26 ರಂದು ದೇಶದಾದ್ಯಂತ ಆಚರಿಸಲಾಗುವುದು. ಕ್ಷೀರ ಕ್ರಾಂತಿ ಹರಿಕಾರ ಡಾ. ವರ್ಗೀಸ್ ಕುರಿಯನ್ ರವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ಷೀರ ದಿನವೆಂದು ಆಚರಿಸಲಾಗುತ್ತದೆ. 2014 ರಿಂದ ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತಿದೆ. ಈ ವರ್ಷ ಕುರಿಯನ್ ರವರ 95ನೇ ಜನ್ಮ ದಿನಾಚರಣೆ.

ಹಿನ್ನಲೆ:

  • ಭಾರತೀಯ ಡೈರಿ ಒಕ್ಕೂಟ ಕ್ಷೀರ ದಿವಸ್ ಆಚರಣೆಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ಮುಂದಿಟ್ಟಿತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವ ಕ್ಷೀರ ದಿನವನ್ನು ಜೂನ್ 1 ರಂದು ಆಚರಿಸುವ ರೀತಿಯಲ್ಲಿ ಕ್ಷೀರ ದಿವಸವನ್ನು ಆಚರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಮೊದಲ ರಾಷ್ಟ್ರೀಯ ಕ್ಷೀರ ದಿನವನ್ನು ನವೆಂಬರ್ 26, 2014 ರಲ್ಲಿ ದೇಶದಾದ್ಯಂತ ಆಚರಿಸಲಾಯಿತು.

ವರ್ಗೀಸ್ ಕುರಿಯನ್ ಬಗ್ಗೆ:

  • ವರ್ಗೀಸ್ ಕುರಿಯನ್ ರವರು ಜನಿಸಿದ್ದು ನವೆಂಬರ್ 26, 1921 ರಲ್ಲಿ ಕೇರಳದ ಕ್ಯಾಲಿಕಟ್ ನಲ್ಲಿ. ಕುರಿಯನ್ ರವರು 9 ಸೆಪ್ಟೆಂಬರ್ 2012 ರಲ್ಲಿ ನಿಧನರಾದರು.
  • ವಿಶ್ವದ ಅತಿ ದೊಡ್ಡ ಕೃಷಿ ಅಭಿವೃದ್ದಿ ಕಾರ್ಯಕ್ರಮವಾದ “ಆಪರೇಷನ್ ಪ್ಲಡ್” ಜಾರಿಗೊಳಿಸಿದೆ ಕೀರ್ತಿ ಕುರಿಯನ್ ರವರಿಗೆ ಸಲ್ಲುತ್ತದೆ. ಆಪರೇಷನ್ ಪ್ಲಡ್ ಕಾರ್ಯಕ್ರಮದಿಂದ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತ ಇಂದು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ.
  • ಡೈರಿ ವಲಯದಲ್ಲಿ ಸಹಕಾರ ಸಂಘಗಳ ಸ್ಥಾಪನೆಯಲ್ಲೂ ಕುರಿಯನ್ ರವರು ಮುಂಚೂಣಿಯಲ್ಲಿದ್ದರು. ದೇಶದಾದ್ಯಂತ 30 ಡೈರಿ ಸಹಕಾರ ಸಂಘಗಳನ್ನು ಅವರು ಸ್ಥಾಪಿಸಿದರು. AMUL. IRMA, NDDB, GCMMF ಕೆಲವು ಉದಾಹರಣೆ ಆಗಿವೆ.
  • ಕುರಿಯನ್ ರವರು ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (GCMMF) ಸಂಸ್ಥಾಪಕ ಅಧ್ಯಕ್ಷರು ಸಹ ಆಗಿದ್ದರು. ವಿಶ್ವ ಮನ್ನಣೆ ಗಳಿಸಿರುವ ಅಮೂಲ್ ಡೈರಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ಯಶಸ್ಸು ಅವರಿಗೆ ಸಲ್ಲುತ್ತದೆ.

ಪ್ರಶಸ್ತಿಗಳು:

  • ರಾಮನ್ ಮ್ಯಾಗ್ಸಸೆ ಪ್ರಶಸ್ತಿ-1963, ವಿಶ್ವ ಆಹಾರ ಪ್ರಶಸ್ತಿ-1989, ಪದ್ಮಶ್ರೀ ಪ್ರಶಸ್ತಿ-1965, ಪದ್ಮ ಭೂಷಣ ಪ್ರಶಸ್ತಿ-1966, ಪದ್ಮ ವಿಭೂಷಣ-1999 ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

Leave a Comment

This site uses Akismet to reduce spam. Learn how your comment data is processed.