ಎಐಬಿಎ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಸಚಿನ್ ಸಿಂಗ್ ಗೆ ಚಿನ್ನ
ಭಾರತದ ಯುವ ಬಾಕ್ಸರ್ ಸಚಿನ್ ಸಿಂಗ್, ಎಐಬಿಎ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್’ಶಿಪ್ನ ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಸಚಿನ್ 5-0 ಅಂಕಗಳಿಂದ ಕ್ಯೂಬಾದ ಜಾರ್ಜ್ ಗ್ರಿನಾನ್ ರವರನ್ನು ಮಣಸಿ ಪದಕಕ್ಕೆ ಕೊರಳೊಡ್ಡಿದರು.
- ಎಐಬಿಯ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಸಚಿನ್ ಸಿಂಗ್. 2008 ರಲ್ಲಿ ಟಿ ನಾನೊ ಸಿಂಗ್ ಮತ್ತು 2010 ರಲ್ಲಿ ವಿಕಾಸ್ ಕೃಷ್ಣ ಪ್ರಶಸ್ತಿಯನ್ನು ಗೆದ್ದಿದ್ದರು.
- ಈ ಬಾರಿಯ ಚಾಂಪಿಯನ್ ಷಿಪ್ ನಲ್ಲಿ ಭಾರತ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆಲ್ಲಲು ಶಕ್ತವಾಯಿತು.
- 91 ಕೆ.ಜಿ ವಿಭಾಗದಲ್ಲಿ ಭಾರತದ ನಮನ್ ತನ್ವರ್ ರವರು ಬೆಳ್ಳಿ ಪದಕವನ್ನು ಗೆದ್ದುಕೊಂಡರು.
ಹೈದ್ರಾಬಾದಿನಲ್ಲಿ 51ನೇ ವಾರ್ಷಿಕ ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನ
ದೇಶದ ರಾಜ್ಯಗಳ 51ನೇ ವಾರ್ಷಿಕ ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನ ತೆಲಂಗಣದ ಹೈದ್ರಾಬಾದಿನ ವಲ್ಲಭ್ ಬಾಯಿ ಪಟೇಲ್ ಪೊಲೀಸ್ ಅಕಾಡೆಮಿಯಲ್ಲಿ ಜರುಗಿತು. ಮೂರು ದಿನಗಳ ಈ ಸಮ್ಮೇಳನವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. 100 ಕ್ಕೂ ಹೆಚ್ಚು ಪೊಲೀಸ್ ಮಹಾನಿರ್ದೇಶಕರು, ಕೇಂದ್ರ ಪ್ಯಾರಮಿಲಿಟರಿ ಪಡೆಯ ಮಹಾ ನಿರ್ದೇಶಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
- ಗಡಿಯಾಚೆಗಿನ ಭಯೋತ್ಪಾದನೆ, ಒಳನಸುಳುವಿಕೆ, ಮಧ್ಯಪ್ರಾಚ್ಯ ಭಯೋತ್ಪಾದಕ ಗುಂಪಾದ ಐಎಸ್ಐಎಸ್ ನತ್ತ ಯುವಕರನ್ನು ಸೆಳೆಯುವುದರಲ್ಲಿ ಮೇಲೆ ಸಮ್ಮೇಳನದಲ್ಲಿ ಒತ್ತು ನೀಡಲಾಯಿತು.
- ಇದಲ್ಲದೇ, ಪೊಲೀಸ್ ಪಡೆಯಲ್ಲಿ ಸುಧಾರಣೆ, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ, ಕಳ್ಳಸಾಗಣಿಕೆ ಹಾಗೂ ಮಾನವ ಕಳ್ಳಸಾಗಣಿಕೆ ಬಗ್ಗೆಯು ಚರ್ಚಿಸಲಾಯಿತು.
- ಸಮ್ಮೇಳನದ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ರವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೇ ಯೋಗ ಅಧಿವೇಶನದಲ್ಲೂ ಭಾಗವಹಿಸಿದರು. “ಇಂಡಿಯನ್ ಪೊಲೀಸ್ ಅಟ್ ಯುರ್ ಕಾಲ್” ಎಂಬ ಆ್ಯಪ್ ಗೆ ಮೋದಿ ಇದೇ ವೇಳೆ ಚಾಲನೆ ನೀಡಿದರು.
ಸ್ವಾತಂತ್ರ ಭಾರತದ ನಂತರ ವಾರ್ಷಿಕ ಪೊಲೀಸ್ ಮಹಾನಿರ್ದೇಶಕ ಸಮ್ಮೇಳನ ಮೂರನೇ ಬಾರಿಗೆ ನವದೆಹಲಿಯ ಹೊರಗೆ ನಡೆಯುತ್ತಿದೆ. ಗುವಾಹಟಿಯಲ್ಲಿ 2014 ರಲ್ಲಿ, ಕಚ್, ಗುಜರಾತ್ ನಲ್ಲಿ 2015 ರಲ್ಲಿ ನಡೆದಿತ್ತು.
ಇ-ಪಶುಹಾತ್ (E-Pashuhaat) ಪೋರ್ಟಲ್ ಗೆ ಕೇಂದ್ರ ಸರ್ಕಾರ ಚಾಲನೆ
ರೈತರು ಮತ್ತು ಸಾಕು ಪ್ರಾಣಿ ತಳಿಗಾರರ ನಡುವೆ ಸಂಪರ್ಕ ಸಾಧಿಸಲು ಕೇಂದ್ರ ಕೃಷಿ ಮತ್ತು ರೈರ ಕಲ್ಯಾಣ ಸಚಿವಾಲಯ ಇ-ಪಶುಹಾತ್ ಪೋರ್ಟಲ್ ಅನ್ನು ಜಾರಿಗೊಳಿಸಿದೆ. ಈ ಪೋರ್ಟಲ್ ಒಂದು ಇ-ಮಾರುಕಟ್ಟೆ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ರೈತರು ಇದರ ಮೂಲಕ ಗೋ ತಳಿಗಳು, ಘನೀಕೃತ ವೀರ್ಯ ಹಾಗೂ ಭ್ರೂಣವನ್ನು ಖರೀದಿಸಬಹುದಾಗಿದೆ.
ಪ್ರಮುಖಾಂಶಗಳು:
- ಇ-ಪಶುಹಾತ್ ಪೋರ್ಟನ್ ರೈತರನ್ನು ವಿವಿಧ ತಳಿಗಾರರು, ಕೇಂದ್ರ ಮತ್ತು ರಾಜ್ಯ, ಸಹಕಾರಿ ಸಂಘಗಳು, ಹಾಲು ಉತ್ಪಾದಕ ಸಂಘಗಳು ಹಾಗೂ ಖಾಸಗಿ ಏಜೆನ್ಸಿಗಳ ಜೊತೆ ಸಂಪರ್ಕ ಕಲ್ಪಿಸಲಿದೆ.
- ಯಾವುದೇ ತಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಭಾವಚಿತ್ರದೊಂದಿಗೆ ಪೋರ್ಟಲ್ ನಲ್ಲಿ ಲಭ್ಯವಿರಲಿದೆ. ಹಸುವಿನ ತಳಿ, ಎಷ್ಟು ಹಾಲು ನೀಡುತ್ತದೆ ಎಂಬ ಮಾಹಿತಿಯು ಸಿಗಲಿದೆ.
- ಆ ಮೂಲಕ ರೈತರು ತಮಗೆ ಅಗತ್ಯವಿರುವ ತಳಿಯನ್ನು ಸಮಂಜಸವಾದ ಬೆಲೆಯಲ್ಲಿ ಖರೀದಿಸಲು ಸಹಾಯವಾಗಲಿದೆ.
ಪೋರ್ಟಲ್ ಮಹತ್ವ:
- ಈ ಹಿಂದೆ ಈ ರೀತಿ ಪ್ರಾಣಿಗಳಿಗಾಗಿಯೇ ಯಾವುದೇ ಅಧಿಕೃತ ಸಂಘಟಿತ ಮಾರುಕಟ್ಟೆ ಇರಲಿಲ್ಲ. ಆದರೆ ನೂತನ ವ್ಯವಸ್ಥೆ ದೇಶದ ರೈತರಿಗೆ ತುಂಬಾ ಅನುಕೂಲವಾಗಲಿದೆ.
- ಪಶುಸಂಗೋಪನೆ ಗ್ರಾಮೀಣ ಭಾಗದ ಜನರ ಆದಾಯದ ಪ್ರಮುಖ ಮೂಲವಾಗಿದ್ದು, ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಈ ಪೋರ್ಟಲ್ ಪ್ರಮುಖ ಪಾತ್ರವಹಿಸಲಿದೆ.
- ರೈತ ಮತ್ತು ರೈತರ ನಡುವೆ ಹಾಗೂ ರೈತ ಮತ್ತು ವಿವಿಧ ಸಂಸ್ಥೆಗಳ ನಡುವೆ ಸಂಪರ್ಕ ಕಲ್ಪಿಸಲು ಇದರಿಂದ ಸಾಧ್ಯವಾಗಲಿದೆ.
ನಗದು ರಹಿತ ವ್ಯವಸ್ಥೆ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸಮಿತಿ
ನೋಟು ಅಮಾನ್ಯದ ಬಳಿಕ ದೇಶವನ್ನು ಡಿಜಿಟಲ್ ಅರ್ಥವ್ಯವಸ್ಥೆಯಾಗಿ ರೂಪಿಸುವ ನೀಲ ನಕ್ಷೆ ರೂಪಿಸಲು ಕೇಂದ್ರ ಸರ್ಕಾರ ಐದು ಮುಖ್ಯಮಂತ್ರಿಗಳಿರುವ ಸಮಿತಿಯೊಂದನ್ನು ರಚಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮಿತಿಯಲ್ಲಿ ಇರುತ್ತಾರೆ. ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನೂ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.
- ಭಾರತವನ್ನು ನಗದುರಹಿತ ಅರ್ಥ ವ್ಯವಸ್ಥೆಯಾಗಿಸುವುದಕ್ಕೆ ಜಾಗತಿಕ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಗುರುತಿಸಿ ಅದನ್ನು ಇಲ್ಲಿ ಜಾರಿಗೆ ತರುವುದು ಈ ಸಮಿತಿಯ ಉದ್ದೇಶವಾಗಿದೆ.
- ಸಮಿತಿಯಲ್ಲಿರುವ ಇತರ ಮುಖ್ಯಮಂತ್ರಿಗಳೆಂದರೆ ಒಡಿಶಾದ ನವೀನ್ ಪಟ್ನಾಯಕ್, ಸಿಕ್ಕಿಂನ ಪವನ್ ಕುಮಾರ್ ಚಾಮ್ಲಿಂಗ್, ಪುದುಚೇರಿಯ ವಿ. ನಾರಾಯಣ ಸ್ವಾಮಿ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್.
- ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ ಅಧ್ಯಕ್ಷ ಜನಮೇಜಯ ಸಿನ್ಹಾ, ನೆಟ್ಕೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜೈನ್, ಐಸ್ಪಿರಿಟ್ ಸಂಸ್ಥೆಯ ಸಹ ಸಂಸ್ಥಾಪಕ ಶರದ್ ಶರ್ಮಾ ಮತ್ತು ಅಹಮದಾಬಾದ್ ಐಐಎಂನ ಪ್ರಾಧ್ಯಾಪಕ ಜಯಂತ್ ವರ್ಮಾ ವಿಶೇಷ ಆಹ್ವಾನಿತರು.
- ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಅಭಿಯಾನ ನಡೆಸುವ ಹೊಣೆಯನ್ನು ನೀತಿ ಆಯೋಗಕ್ಕೆ ವಹಿಸಲಾಗಿದೆ. ವಿವಿಧ ರೀತಿಯ ನಗದುರಹಿತ ಪಾವತಿ ವ್ಯವಸ್ಥೆಗಳ ಬಗ್ಗೆ ಇದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿದೆ.