ಗುಜರಾತ್ ನ ಅಕೊಡರ ದೇಶದ ಮೊದಲ ಡಿಜಿಟಲ್ ಹಳ್ಳಿ

ಗುಜರಾತಿನ ಸಬರಕಾಂತ್ ಜಿಲ್ಲೆಯ ಅಕೊಡರ ದೇಶದ ಮೊದಲ ಡಿಜಿಟಲ್ ಹಳ್ಳಿ ಎಂಬ ಗೌರವಕ್ಕೆ ಪಾತ್ರವಾಗಿದೆ. ಅಕೊಡರ ಗ್ರಾಮದ ಜನಸಂಖ್ಯೆ 1,191 ಹಾಗೂ 250 ಕುಟುಂಬಗಳನ್ನು ಒಳಗೊಂಡಿದ್ದು, ಪ್ರತಿನಿತ್ಯದ ವ್ಯವಹಾರಗಳನ್ನು ನಗದು ರಹಿತವಾಗಿ  ನಡೆಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಅಕೊಡರದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ಎಸ್ಎಂಎಸ್, ನೆಟ್ ಬ್ಯಾಂಕಿಂಗ್ ಮತ್ತು ಕಾರ್ಡ್ ಬಳಕೆ ಮೂಲಕ ಮಾಡುತ್ತಿದ್ದಾರೆ.

ಪ್ರಮುಖಾಂಶಗಳು:

  • ಅಕೊಡರ ಗ್ರಾಮವನ್ನು ಐಸಿಐಸಿಐ ಬ್ಯಾಂಕ್ ತನ್ನ ಡಿಜಿಟಲ್ ಹಳ್ಳಿ ಯೋಜನೆಯಡಿ 2015 ರಲ್ಲಿ ಆಯ್ಕೆಮಾಡಿಕೊಳ್ಳುವ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಗದು ರಹಿತ ಗ್ರಾಮವನ್ನಾಗಿ ಪರಿವರ್ತಿಸಿದೆ.
  • ಐಸಿಐಸಿಐ ಗ್ರೂಫ್ ನ 60ನೇ ಸಂಸ್ಥಾಪನ ದಿನದ ಪ್ರಯುಕ್ತ ಜನವರಿ 2016ರಲ್ಲಿ ಪ್ರಧಾನಿ ಮೋದಿ ಹಾಗೂ ಐಸಿಐಸಿಐ ಎಂ.ಡಿ ಮತ್ತು ಸಿಇಓ ಚಂದಾ ಕೊಚ್ಚರ್ ರವರು ಯೋಜನೆಗೆ ಚಾಲನೆ ನೀಡಿದರು.
  • ಅಕೊಡರ ಗ್ರಾಮದ ಪ್ರತಿ ಕುಟುಂಬ ಐಸಿಐಸಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದಿದ್ದಾರೆ. ಬ್ಯಾಂಕ್ ಸಿಬ್ಬಂದಿ ಖಾತೆದಾರರಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಭೇತಿ ನೀಡಿದ್ದು, ನಗದು ರಹಿತ ವ್ಯವಹಾರಕ್ಕೆ ನಾಂದಿ ಆಡಿದ್ದಾರೆ.
  • ಗ್ರಾಮದ ಪ್ರಮುಖ ವಹಿವಾಟಾದ ಕೃಷಿ ಉತ್ಪನಗಳನ್ನು ಸ್ಥಳೀಯ ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ನಡೆಸುವುದು, ಹಾಲು ಮಾರಾಟ ಎಲ್ಲವೂ ನಗದು ರಹಿತವಾಗಿದೆ.
  • ಅಕೊಡರ ಗ್ರಾಮದ ಪ್ರಾಥಮಿಕ, ಮಧ್ಯಮ ಮತ್ತು ಹಿರಿಯ ಪಾಠಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್ ಗಳನ್ನು ಬಳಸಲಾಗಿದೆ.

ಇರಾನಿನ ಡಾಟರ್ ಚಿತ್ರಕ್ಕೆ ಸ್ವರ್ಣ ಮಯೂರ ಪ್ರಶಸ್ತಿ

ಗೋವಾದಲ್ಲಿ ಮುಕ್ತಾಯಗೊಂಡ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇರಾನ್‌ನ ಸಿನಿಮಾ ನಿರ್ದೇಶಕ ರೆಜಾ ಮೀರ್‌ಕರೀಮಿ ಅವರ ‘ಡಾಟರ್‌’ ಚಲನಚಿತ್ರ ಪ್ರತಿಷ್ಠಿತ ಸ್ವರ್ಣ ಮಯೂರ ಪ್ರಶಸ್ತಿ ಗೆದ್ದುಕೊಂಡಿದೆ. ‘ಡಾಟರ್‌’ ದಕ್ಷಿಣ ಇರಾನ್‌ನಲ್ಲಿ ನಡೆಯುವ ಕುಟುಂಬವೊಂದರ ಕತೆ. ಆತ್ಮೀಯ ಗೆಳತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಕಿಯೊಬ್ಬಳು ತನ್ನ ಕಟ್ಟುನಿಟ್ಟಿನ ತಂದೆಯ ಅನುಮತಿ ಪಡೆಯದೆ ಟೆಹರಾನ್‌ಗೆ ಹೋಗುವುದರ ಸುತ್ತ ಸಿನಿಮಾ ಸಾಗುತ್ತದೆ.

ಇತರೆ ಪ್ರಶಸ್ತಿಗಳು:

  • ವಿಶೇಷ ತೀರ್ಪುಗಾರ ಪ್ರಶಸ್ತಿ: “ದಿ ಥ್ರೋನ್” (ದಕ್ಷಿಣ ಕೊರಿಯಾ).
  • ಅತ್ಯುತ್ತಮ ನಟಿ ಪ್ರಶಸ್ತಿ: ಎಲಿನಾ ವಸ್ಕ (ಲ್ಯಾಟಿವಿಯಾ), ಮೆಲ್ಲೊ ಮಡ್ ಚಿತ್ರಕ್ಕಾಗಿ.
  • ಅತ್ಯುತ್ತಮ ನಟ ಪ್ರಶಸ್ತಿ: ಫರ್ಹದ್ ಅಸ್ಲಾನಿ (ಇರಾನ್), ಡಾಟರ್ ಚಿತ್ರಕ್ಕಾಗಿ
  • ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ: ಟರ್ಕಿಯ ಬ್ಯಾರಿಸ್ ಕಾಯಾ ಮತ್ತು ಸೊನೆರ್ ಕನೆರ್ ಅವರಿಗೆ ಜಂಟಿಯಾಗಿ ಲಭಿಸಿದೆ. ರೌಫ್ ಸಿನಿಮಾದ ನಿರ್ದೇಶಕ್ಕೆ ಈ ಪ್ರಶಸ್ತಿ ಲಭಿಸಿದೆ.
  • ಯುನೆಸ್ಕೋ ಗಾಂಧಿ ಪದಕ: ಟರ್ಕಿಯ ನಿರ್ದೇಶಕ ಮುಸ್ತಫಾ ಕಾರಾ ಅವರ ‘ಕೋಲ್ಡ್‌ ಆಫ್‌ ಕಲಂದರ್’ ಸಿನಿಮಾಕ್ಕೆ ಈ ಬಾರಿ ಈ ಪದಕ ನೀಡಲಾಗಿದೆ.

ಮಿಲಿಟರಿ ಕಾರ್ಯಾಚರಣೆಯ ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್ ಜನರಲ್ ಎ.ಕೆ.ಭಟ್

ಮಿಲಿಟರಿ ಕಾರ್ಯಾಚರಣೆಯ ನೂತನ ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್‌ ಜನರಲ್‌ ಎ.ಕೆ.ಭಟ್‌ ಅವರನ್ನು ನೇಮಿಸಲಾಗಿದೆ. ಸಂಪುಟ ನೇಮಕಾತಿ ಸಮಿತಿ ಭಟ್ ಅವರನ್ನು ಈ ಹುದ್ದೆಗೆ ನೇಮಕ ಮಾಡಿದೆ. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ರವರ ಉತ್ತರಾಧಿಕಾರಿಯಾಗಿ ಭಟ್ ನೇಮಕಗೊಂಡಿದ್ದಾರೆ.

  • ಗೂರ್ಖಾ ರೆಜಿಮೆಂಟ್‌ ಅಧಿಕಾರಿಯಾಗಿರುವ ಭಟ್‌ ಅವರು ಪ್ರಸ್ತುತ ಸೇನಾ ಮುಖ್ಯ ಕಚೇರಿಯಲ್ಲಿ ದೂರುಗಳು ಮತ್ತು ಸಲಹಾ ಮಂಡಳಿಯಲ್ಲಿ ಮುಖ್ಯಸ್ಥರಾಗಿದ್ದಾರೆ.
  • ಲೆಫ್ಟಿನೆಂಟ್ ಜನರಲ್ ಭಟ್ ರವರು ಇನ್ನು ಮುಂದೆ ಗಡಿ ರೇಖೆ ನಿಯಂತ್ರಣ ಸೇರಿದಂತೆ ಎಲ್ಲಾ ರೀತಿಯ ಮಿಲಿಟರಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಲಿದ್ದಾರೆ.
  • ಸೆಪ್ಟೆಂಬರ್ 2016 ರಲ್ಲಿ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿರವರು ಭಾರತೀಯ ಸೇನಾಪಡೆ ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಉದುಗು ತಾಣದ ಮೇಲೆ ಸರ್ಜಿಕಲ್ ಸ್ಟೈಕ್ ನಡೆಸಿರುವುದಾಗಿ ಘೋಷಿಸಿದ್ದರು.

ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ನೇರವಾಗಿ ನೀಡಲು ಸರ್ಕಾರ ತೀರ್ಮಾನ

ರೈತರಿಗೆ ನೆರವಾಗಲು ರಸಗೊಬ್ಬರ ದರದಲ್ಲಿ ಭಾರೀ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ನೇರವಾಗಿ ನೀಡಲು ಮುಂದಾಗಿದೆ. ಎಲ್‌ಪಿಜಿ ಸಬ್ಸಿಡಿ ನೇರ ನಗದು ವರ್ಗಾವಣೆ ಯೋಜನೆಯಂತೆಯೇ ಇಲ್ಲಿಯೂ ಸಬ್ಸಿಡಿ ಹಣದ ನೇರ ವರ್ಗಾವಣೆಗೆ ಮುಂದಾಗಿದೆ.

  • ಸಬ್ಸಿಡಿ ನೇರ ಪಾವತಿ ಯೋಜನೆ ಆರಂಭದಲ್ಲಿ 16 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದ್ದು, ನಂತರ ದೇಶಾದ್ಯಂತ ವಿಸ್ತರಿಸಲಾಗುತ್ತದೆ.
  • ಈ ಯೋಜನೆಯಡಿ ಫಲಾನುಭವಿಗಳ ಬದಲಿಗೆ ರಸಗೊಬ್ಬರ ಸಂಸ್ಥೆಗಳಿಗೆ ಸಬ್ಸಿಡಿ ಹಣವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು. ರಿಟೈಲ್ ದಾರರು ರಸಗೊಬ್ಬರವನ್ನು ಫಲಾನುಭವಿಗಳಿಗೆ ಮಾರಾಟ ಮಾಡಿದ ಮೇಲೆ ಸಬ್ಸಿಡಿ ದರವನ್ನು ಬಿಡುಗಡೆ ಮಾಡಲಾಗುವುದು.
  • ವೆಬ್ ಆಧರಿತ “ಏಕೀಕೃತ ರಸಗೊಬ್ಬರ ನಿರ್ವಹಣೆ ವ್ಯವಸ್ಥೆ” ಮೂಲಕ ರಸಗೊಬ್ಬರ ಸಂಸ್ಥೆಗಳು ಬೇಡಿಕೆಯನ್ನು ಸಲ್ಲಿಸದ ಆಧಾರದ ಮೇಲೆ ಹಣವನ್ನು ಬಿಡುಗಡೆಗೊಳಿಸಲಾಗುವುದು.

ಏಷ್ಯಾದ ಮೊದಲ ಸೈಕಲ್ ಹೆದ್ದಾರಿಗೆ ಉತ್ತರ ಪ್ರದೇಶದಲ್ಲಿ ಚಾಲನೆ

ಏಷ್ಯಾದ ಮೊದಲ ಮತ್ತು ಉದ್ದನೆಯ ಸೈಕಲ್ ಹೆದ್ದಾರಿಯನ್ನು ಉತ್ತರ ಪ್ರದೇಶದಲ್ಲಿ ಉದ್ಘಾಟಿಸಲಾಗಿದೆ. ಇದು ದೇಶದ ಮೊದಲ ಸೈಕಲ್ ಹೆದ್ದಾರಿ ಸಹ ಆಗಿದೆ. 207 ಕಿ.ಮೀ ಉದ್ದದ ಈ ಹೆದ್ದಾರಿ ಇಟಾವ ಮತ್ತು ಆಗ್ರಾ ನಡುವೆ ಸಂಪರ್ಕ ಕಲ್ಪಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರವರು ಈ ಹೆದ್ದಾರಿಗೆ ಚಾಲನೆ ನೀಡಿದರು.

  • ಈ ಸೈಕಲ್ ಹೆದ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರದ ಸಾರ್ವಜನಿಕ ಕೆಲಸ ಇಲಾಖೆ ನಿರ್ವಹಿಸಿದೆ. ಪ್ರಮುಖ ಹೆದ್ದಾರಿಯ ಸಮನಾಂತರವಾಗಿ ಈ ಹೆದ್ದಾರಿ ಚಲಿಸುತ್ತದೆ.
  • ಹೆದ್ದಾರಿ 7 ಅಡಿ ಅಗಲವಿದ್ದು, ಸೈಕಲ್ ಸವಾರರ ಸುರಕ್ಷತೆ ದೃಷ್ಠಿಯಿಂದ ಮುಖ್ಯ ಹೆದ್ದಾರಿಯಿಂದ ವಿಭಜಕದಿಂದ ಬೇರ್ಪಡಿಸಲಾಗಿದೆ.
  • ಇಟಾವದ ಲಯನ್ ಸಫಾರಿಯಿಂದ ಪ್ರಾರಂಭವಾಗಿ ಎರಡು ಜಿಲ್ಲೆಯ 92 ಹಳ್ಳಿಗಳ ಮೂಲಕ ಈ ಹೆದ್ದಾರಿ ಹಾದು ಹೋಗುತ್ತದೆ.

Leave a Comment

This site uses Akismet to reduce spam. Learn how your comment data is processed.