ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಹವಳ ದಿಬ್ಬಗಳ ವಿನಾಶ
ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಇದೆಂದಿಗಿಂತಲೂ ಹೆಚ್ಚು
“ಕೋರಲ್ ಬ್ಲೀಚಿಂಗ್“ ಆರಂಭವಾಗಿದ್ದು, ಹವಳದ ದಿಬ್ಬಗಳ ಸಾಮೂಹಿಕ ನಾಶಕ್ಕೆ ಕಾರಣವಾಗಿದೆ. ಅಂದಾಜಿನ ಪ್ರಕಾರ 2300 ಕಿ.ಮೀ ಉದ್ದದ ಕೋರಲ್ ರೀಫ್ ಪೈಕಿ ಉತ್ತರಭಾಗದಲ್ಲಿ ಸುಮಾರು ಎರಡನೇ ಮೂರರಷ್ಟು ಅಥವಾ 700 ಕಿ.ಮೀ ಉದ್ದದ ಹವಳ ದಿಬ್ಬ ಕಳೆದ ಒಂಬತ್ತು ತಿಂಗಳಲ್ಲಿ ನಾಶವಾಗಿದೆ ಎಂದು ಹೇಳಲಾಗಿದೆ. ಗ್ರೇಟ್ ಬ್ಯಾರಿಯತ್ ರೀಫ್ ನಲ್ಲಿ ಈ ಮಟ್ಟದ ಹವಳದ ವಿನಾಶ ದಾಖಲಾಗಿರುವುದು ಇದೇ ಮೊದಲು ಅಲ್ಲದೇ ವಿಶ್ವದಲ್ಲೇ ಅತಿ ಹೆಚ್ಚು.
ಹವಳದ ದಿಬ್ಬ ಎಂದರೇನು?
- ಸಮುದ್ರದಲ್ಲಿನ ಬಂಡೆಗಳು, ಬೆಟ್ಟಗಳನ್ನು ಆಶ್ರಯಿಸುವ ಸೂಕ್ಷ್ಮಾಣು ಜೀವಿಗಳ (Polyps) ಮೊಟ್ಟೆಗಳಿಂದ ಮತ್ತು ಪಾಚಿಗಳು ಕವಲೊಡೆಯುವ ಮೂಲಕ ಹವಳಗಳು ಉತ್ಪತ್ತಿಯಾಗುತ್ತವೆ. ಈ ಹವಳದ ದಿಬ್ಬಗಳ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕು. ಕೋಟಿಗಟ್ಟಲೆ ವರ್ಷಗಳ ಹಿಂದೆ ಬೆಟ್ಟಗುಡ್ಡಗಳು ಸ್ಥಿತ್ಯಂತರ ಹೊಂದುವಾಗ ಈ ಸಾಲು ದಿಬ್ಬಗಳು ಸೃಷ್ಟಿಯಾದವು.
- ಈಗಿರುವ ದಿಬ್ಬದ ರಚನೆಯು 20 ಸಾವಿರ ವರ್ಷದ ಹಿಂದೆ ರೂಪುಗೊಂಡಿರುವಂಥವು. ಆ ವೇಳೆ ಸಮುದ್ರ ನೀರಿನ ಮಟ್ಟ ಕೇವಲ 60 ಮೀಟರ್ ಇತ್ತು. ಹವಳಗಳು ಆಗ ಕರಾವಳಿಯುದ್ದಕ್ಕೂ ಇರುವ ಬೆಟ್ಟಗಳನ್ನು ಆವರಿಸಿಕೊಳ್ಳತೊಡಗಿದವು. ಸಮುದ್ರ ಮಟ್ಟ ಏರಿದಂತೆ ಹವಳದ ವ್ಯಾಪ್ತಿಯೂ ಹಿಗ್ಗತೊಡಗಿತು. ಹವಳಗಳು ಕೆಂಪು, ಹಳದಿ, ಕಂದು, ಹಸಿರು ಮುಂತಾದ ಬಣ್ಣಗಳಲ್ಲಿ ಕಂಡುಬರುತ್ತವೆ. ಒಂದು ಹವಳ 3 ರಿಂದ 56 ಮಿಲಿ ಮೀಟರ್ ಬೆಳೆಯಬಲ್ಲದು. ಹವಳಗಳ ದಿಬ್ಬಗಳು 75 ರಿಂದ 1,500 ಮೀಟರ್ ಉದ್ದದವರೆಗೆ ಹರಡುತ್ತವೆ.
ಹವಳಗಳ ಬೆಳವಣಿಗೆಗೆ ಅಗತ್ಯವಾಗಿರಬೇಕಾದ ಅಂಶಗಳು:
- ಕನಿಷ್ಠ 20 ಡಿಗ್ರಿ ಉಷ್ಣಾಂಶವನ್ನು ಹೊಂದಿರುವ ಉಷ್ಣವಲಯದ ಬೆಚ್ಚಗಿನ ಸಾಗರಗಳು. ಸಾಗರದ ನೀರು ಶುದ್ದವಾಗಿರಬೇಕು ಮತ್ತು ಲವಣಾಂಶ ಕಡಿವೆ ಇರಬೇಕು.
ಕೋರಲ್ ಅಥವಾ ಹವಳದ ಬ್ಲೀಚಿಂಗ್ ಎಂದರೇನು?
- ಹವಳಗಳ ರಾಶಿಯ ನಾಶಕ್ಕೆ ಕಾರಣವಾಗಿರುವ ಪ್ರಕ್ರಿಯೆಗೆ ‘ಕೋರಲ್ ಬ್ಲೀಚಿಂಗ್’ ಎನ್ನುತ್ತಾರೆ. ಪರಿಸರದ ಮೇಲಿನ ಒತ್ತಡ ಪರಿಣಾಮಗಳಿಂದ ಈ ಹವಳದ ದಂಡೆಗಳು ತಮ್ಮ ಮೆರುಗು ಕಳೆದುಕೊಳ್ಳತೊಡಗುತ್ತವೆ. ಮುಖ್ಯವಾಗಿ, ತಾಪಮಾನ ಬದಲಾವಣೆಯಿಂದ ಸಮುದ್ರದ ನೀರು ಬಿಸಿಯಾದಂತೆ ಹವಳಗಳು ತಮ್ಮ ಸುತ್ತಲಿನ ಪಾಚಿಗಳನ್ನು ಹೊರಹಾಕುತ್ತವೆ. ಪಾಚಿಗಳಿಲ್ಲದೆ ಅವು ಉಳಿದುಕೊಳ್ಳಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವುದು ಇದೇ ಅಪಾಯಕಾರಿ ಪ್ರಕ್ರಿಯೆ. ಕಡಲ ನೀರು ಬಿಸಿಯಾಗುತ್ತಿರುವುದರಿಂದ ಹವಳಗಳು ತಮ್ಮ ರಕ್ಷಣೆಗೆ ಇರುವ ಪಾಚಿಗಳನ್ನು ಕಳೆದುಕೊಳ್ಳುತ್ತಿವೆ. ಕ್ರಮೇಣ ಹೊಳಪು ಕಳೆದುಕೊಂಡು ಬಿಳಿಬಣ್ಣಕ್ಕೆ ತಿರುಗುತ್ತಿವೆ.
- ಮಾನವ ಚಟುವಟಿಕೆಯಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಹಾಗೂ ಎಲ್ನಿನೋ ನಂತರದಲ್ಲಿ ತಾಪಮಾನ ಹೆಚ್ಚಿ ಈ ರೀತಿ ಬ್ಲೀಚಿಂಗ್ ನಡೆಯುತ್ತದೆ.
ಹವಳಗಳ ಉಪಯೋಗ:
- ಹವಳವೆಂಬ ಆಸರೆ ಮರುಭೂಮಿಯಲ್ಲಿ ಓಯಸಿಸ್ ಹೇಗೋ ಹಾಗೆಯೇ ಸಾಗರದಲ್ಲಿ ಈ ಹವಳಗಳ ರಾಶಿ ಅಸಂಖ್ಯಾತ ಜೀವಿಗಳ ಬದುಕಿಗೆ ಆಸರೆ ಹಾಗೂ ಆಹಾರ ಎರಡನ್ನೂ ಒದಗಿಸುತ್ತವೆ. ಹವಳಗಳ ರಾಶಿಯ ವಿಸ್ತೀರ್ಣ ಒಟ್ಟು ಸಾಗರದ ವ್ಯಾಪ್ತಿಯ ಕೇವಲ ಶೇಕಡ 0.1ರಷ್ಟಿದ್ದರೂ, ಶೇಕಡ 25ರಷ್ಟು ಸಮುದ್ರ ಜೀವಿಗಳ ಬದುಕು ಇವುಗಳನ್ನಾಶ್ರಯಿಸಿಯೇ ನಡೆಯುವುದು.
- ಮೀನು ಮೊಟ್ಟೆ ಇಟ್ಟು, ಅವು ಮರಿಗಳಾಗಿ ಬೆಳೆಯುವುದು ಇದೇ ಹವಳಗಳ ರಾಶಿಯ ಮರೆಯಲ್ಲಿ.
- ಹವಳಗಳ ರಾಶಿಯ ನಾಶ ಸಂಭವಿಸಿದರೆ ಅದರ ಪರಿಣಾಮ ಸಹಜವಾಗಿಯೇ ಮನುಕುಲದ ಮೇಲೂ ಆಗುತ್ತದೆ.
- ಜಾಗತಿಕವಾಗಿ ಅಂದಾಜು 50 ಕೋಟಿ ಜನ ಮೀನುಗಾರಿಕೆಯನ್ನು ಆಶ್ರಯಿಸಿ ಬದುಕುತ್ತಿದ್ದಾರೆ.
ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್:
- ಗ್ರೇಟ್ ಬ್ಯಾರಿಯರ್ ರೀಫ್ ವಿಶ್ವದ ದೊಡ್ಡ ಹವಳದ ಬಂಡೆಯ ವ್ಯವಸ್ಥೆಯಲ್ಲಿ 2,900 ಪ್ರತ್ಯೇಕ ದಿಬ್ಬಗಳು ಮತ್ತು ಸುಮಾರು 344.400 ಚದರ ಕಿಲೋಮೀಟರ್ನಷ್ಟು ವಿಸ್ತೀರ್ಣವಿದ್ದು (133,000 ಚದರ ಮೈಲಿ ಮೇಲೆ 2,300 ಕಿಲೋಮೀಟರ್ (1,400 ಮೈಲಿ) ವಿಸ್ತಾರವಾಗಿ ಹಬ್ಬಿದೆ. ಇದು 900 ದ್ವೀಪಗಳ ಸಂಯೋಜನೆ ಹೊಂದಿದೆ. ಈ ಹವಳದ ದಿಬ್ಬಗಳು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಸಮುದ್ರದ ಕರಾವಳಿಯಲ್ಲಿದೆ ಇದೆ.
- ಗ್ರೇಟ್ ಬ್ಯಾರಿಯರ್ ರೀಫ್ನ್ನು ಬಾಹ್ಯಾಕಾಶದಿಂದ ಕಾಣಬಹುದು ಮತ್ತು ಇದು ಸೂಕ್ಷ್ಮ ಜೀವಿಗಳು ನಿರ್ಮಿಸಿದ ವಿಶ್ವದ ದೊಡ್ಡ ಏಕೈಕ ರಚನೆಯಾಗಿದೆ. ಈ ದಿಬ್ಬಗಳ ಸಾಲಿನ ರಚನೆ ಸಂಯೋಜನೆಯು ಶತಕೋಟಿ ಹವಳದ ಹುಳುಗಳೆಂಬ ಎಂಬ ಪುಟ್ಟ ಜೀವಿಗಳಿಂದ ನಿರ್ಮಿತಗೊಂಡಿದೆ. ಇದು ಒಂದು ವ್ಯಾಪಕ ವೈವಿಧ್ಯತೆಯ ಜೀವಜಾಲದ ಬದುಕನ್ನು ತೋರಿಸುತ್ತದೆ. ಇದನ್ನು 1981 ರಲ್ಲಿ ವಿಶ್ವ ಪರಂಪರೆಯ ತಾಣ ವೆಂದು ಘೋಷಿಸಲಾಗಿದೆ. ಸಿಎನ್ಎನ್ ವಿಶ್ವದ ಏಳು ನೈಸರ್ಗಿಕ ಅದ್ಭುತಗಳಲ್ಲಿ ಒಂದು ಎಂದು ಗುರತು (ಲೇಬಲ್) ಮಾಡಲ್ಪಟ್ಟಿದೆ. ಕ್ವೀನ್ಸ್ಲ್ಯಾಂಡ್ ನ ರಾಷ್ಟ್ರೀಯ ಟ್ರಸ್ಟ್, ಇದನ್ನು ಕ್ವೀನ್ಸ್ಲ್ಯಾಂಡ್ ರಾಜ್ಯದ ವಿಶಿಷ್ಟ ಸ್ಥಳ ಎಂದು ಹೆಸರಿಸಿದೆ.
ಕೈಗಾರಿಕೆಗಳು ಮರುಬಳಕೆ ಅಂತರ್ಜಲವನ್ನು ಬಳಸಬೇಕು; ಜಲ ಸಚಿವಾಲಯ
ಕೈಗಾರಿಕೆಗಳು, ರೈತರು ಹಾಗೂ ಇತರೆ ಸಂಸ್ಥೆಗಳು ನೀರು ಬಳಕೆ ಮಾಡುವುದರ ಮೇಲೆ ಕೆಲವು ನಿರ್ಬಂಧವನ್ನು ಹೇರಲು ಕೇಂದ್ರ ಜಲ ಸಚಿವಾಲಯ ಚಿಂತನೆ ನಡೆಸಿದೆ. ಇದಕ್ಕಾಗಿ ಅಂತರ್ಜಲ ನಿರ್ವಹಣೆ ಮಸೂದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಕೇಂದ್ರ ಅಂತರ್ಜಲ ಮಂಡಳಿ ಏರ್ಪಡಿಸಿದ್ದ ಸೆಮಿನಾರ್ ವೇಳೆ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿಯವರು ಈ ವಿಷಯವನ್ನು ತಿಳಿಸಿದರು. ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಜಲ ಸಚಿವಾಲಯ ಅಂತರ್ಜಲ ನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆ ತರಲು ಕರಡು ಮಸೂದೆಯನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ತರಲಾಗಿತ್ತು.
ಮಸೂದೆಯ ಪ್ರಮುಖಾಂಶಗಳು:
- ಪ್ರತಿ ವ್ಯಕ್ತಿಗೂ ನಿರ್ದಿಷ್ಟ ಪ್ರಮಾಣದ ನೀರನ್ನು ನೀಡುವುದು ಹಾಗೂ ಅನಿಯಮಿತವಾಗಿ ಅಂತರ್ಜಲದ ಬಳಕೆ ಮತ್ತು ಮಾಲಿನ್ಯವನ್ನು ತಡೆಯುವುದು.
- ಕೈಗಾರಿಕೆಗಳ ಮರುಬಳಕೆ (Recycled) ಅಂತರ್ಜಲವನ್ನು ಮಾತ್ರ ಬಳಸಬೇಕು ಮತ್ತು ಗಾರ್ಡನ್ ಬೆಳೆಸಲು ಚರಂಡಿ ನೀರನ್ನು ಬಳಸಬೇಕು. ಅಲ್ಲದೇ ವಸತಿ ಬಡಾವಣೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು.
- ಅಂತರ್ಜಲವನ್ನು ಮಿತವಾಗಿ ಬಳಸುವ ಬಗ್ಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ವಿರುದ್ದವಾಗಿ ನಡೆದುಕೊಂಡರೆ ಕಠಿಣ ಶಿಕ್ಷೆ ಒಳಪಡಿಸುವ ಅಂಶಗಳನ್ನು ಮಸೂದೆ ಒಳಗೊಂಡಿದೆ.