ಉಸೇನ್ ಬೋಲ್ಟ್ ಮತ್ತು ಅಲಮಜ್ ಅಯಾನಗೆ ಐಎಎಎಫ್ ವಿಶ್ವ ಅಥ್ಲೆಟಿಕ್ ಪ್ರಶಸ್ತಿ
ಜಮೈಕಾದ ಉಸೇನ್ ಬೋಲ್ಟ್ ಅವರಿಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ನೀಡುವ ವರ್ಷದ ಶ್ರೇಷ್ಠ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೋಲ್ಟ್ ಆರನೇ ಬಾರಿ ಈ ಪ್ರಶಸ್ತಿ ಪಡೆ ಅಥ್ಲೀಟ್ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2008, 2009, 2011, 2012 ಮತ್ತು 2013ರಲ್ಲಿ ಬೋಲ್ಟ್ ರವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 2016 ರಲ್ಲಿ ಬೋಲ್ಟ್ ರವರ ಶ್ರೇಷ್ಠ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಉಸೇನ್ ಬೋಲ್ಟ್ ರವರು ರಿಯೋ ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು..
ಅಲಮಜ್ ಅಯಾನ:
ಇಥಿಯೋಪಿಯಾದ ಅಲಮಜ್ ಅಯಾನ ರವರಿಗೆ ವರ್ಷದ ಶ್ರೇಷ್ಠ ಮಹಿಳಾ ಅಥ್ಲೀಟ್’ ಗೌರವ ಲಭಿಸಿದೆ. ಅಯಾನ ರವರು ಒಲಿಂಪಿಕ್ಸ್‌ನ 10,000 ಮೀಟರ್ಸ್ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅಯಾನ ಅವರು ಈ ಪ್ರಶಸ್ತಿಯನ್ನು ಗೆದ್ದುಕೊಂಡ ಇಥಿಯೋಪಿಯಾದ ಮೂರನೇಯವರು.
ಇತರೆ ಪ್ರಶಸ್ತಿಗಳು:
- ಉದಯೋನ್ಮಖ ಆಟಗಾರ: ಅಂಡ್ರೆ ಡೆ ಗ್ರಾಸೆ (ಕೆನಡಾ)
- ಉದಯೋನ್ಮಖ ಆಟಗಾರ್ತಿ: ನಫಿಸ್ಸಟೊ ಥಿಯಂ (ಬೆಲ್ಜಿಯಂ)
- ತರುಭೇತದಾರ: ಹ್ಯಾರಿ ಮರ್ರ (ಯುಎಸ್)
- ಅಧ್ಯಕ್ಷೀಯ ಪ್ರಶಸ್ತಿ: ಟೆಗ್ಲ ಲೊರೌಪೆ
ಭಾರತ-ಖತಾರ್ ನಡುವೆ ಐದು ಒಪ್ಪಂದಗಳಿಗೆ ಸಹಿ
ವೀಸಾ, ಸೈಬರ್ ಸ್ಪೇಸ್ ಮತ್ತು ಬಂಡವಾಳ ಹೂಡಿಕೆ ಸೇರಿದಂತೆ ಐದು ಒಪ್ಪಂದಗಳಿಗೆ ಭಾರತ ಮತ್ತು ಖತಾರ್ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಪ್ರವಾಸದಲ್ಲಿರುವ ಖತಾರ್ ನ ಶೇಕ್ ಅಬ್ದುಲ್ಲ ಬಿನ್ ನಸ್ಸೆರ್ ಬಿನ್ ಖಾಲಿಫ ಅಲ್ ಥಾನಿ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ರವರ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ನಂತರ ಒಪ್ಪಂದಗಳಿಗೆ ಸಹಿಹಾಕಲಾಯಿತು.
ಸಹಿಹಾಕಲಾದ ಒಪ್ಪಂದಗಳು:
- ಸೈಬರ್ ಸ್ಪೇಸ್ ಮತ್ತು ಸೈಬರ್ ಕ್ರೈಂ ತಡೆಯಲು ಪರಸ್ಪರ ಸಹಕಾರ ಒಪ್ಪಂದ
- ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ಇ-ವೀಸಾ ನೀಡುವ ಒಪ್ಪಂದ
- ರಾಷ್ಟ್ರೀಯ ಬಂದರು ನಿರ್ವಹಣೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮತ್ತು ತಂತ್ರಜ್ಞಾನ ವಿನಿಮಯ
- ರಾಜತಾಂತ್ರಿಕರು, ವಿಶೇಷ ಮತ್ತು ಅಧಿಕೃತ ಪಾಸ್ ಪೋರ್ಟ್ ಗಳಿಗೆ ವೀಸಾ ವಿನಾಯತಿ ಒಪ್ಪಂದ.
- ಖತಾರ್ ನ ಸರ್ವೋಚ್ಚ ಸಮಿತಿ ಡೆಲಿವರಿ ಮತ್ತು ಲೆಗಸಿ ಹಾಗೂ ಭಾರತದ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಡುವೆ ಒಪ್ಪಂದ.
ಇದಲ್ಲದೇ ಉಭಯ ದೇಶಗಳ ನಾಯಕರು ಇಂಧನ, ವ್ಯಾಪಾರ ಮತ್ತು ಭದ್ರತೆ ಕುರಿತಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಖತಾರ್ ನ ಹೈಡ್ರೋಕಾರ್ಬನ್ ಪ್ರಾಜೆಕ್ಟ್ ನಲ್ಲಿ ಬಂಡವಾಳ ಹೂಡಲು ಭಾರತ ತನ್ನ ಇಚ್ಚೆಯನ್ನು ವ್ಯಕ್ತಪಡಿಸಿತು. ಜೊತೆಗೆ ಭದ್ರತೆ ಅದರಲ್ಲೂ ಸೈಬರ್ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಭಾರತ-ಖತಾರ್ ಸಂಬಂಧ:
ಭಾರತ ಖತಾರ್ ನೊಂದಿಗೆ ನಿಕಟ ಮತ್ತು ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ. ಖತಾರ್ ರಾಷ್ಟ್ರ ಭಾರತದ ಪ್ರಮುಖ ವ್ಯಾಪಾರ ವ್ಯವಹಾರ ಗಲ್ಪ್ ರಾಷ್ಟ್ರವಾಗಿದೆ. ಭಾರತದ ಇಂಧನ ಭದ್ರತೆಗೆ ಖತಾರ್ ರಾಷ್ಟ್ರದ ಕೊಡುಗೆ ಅಪಾರ. ಭಾರತಕ್ಕೆ ಎಲ್ಎನ್ ಜಿ (LNG) ಪೂರೈಸುವ ಅತಿ ದೊಡ್ಡ ರಾಷ್ಟ್ರ. 2015-16ನೇ ಸಾಲಿನಲ್ಲಿ ಶೇ 66% ಎಲ್ಎನ್ ಜಿಯನ್ನು ಭಾರತ ಖತಾರ್ ನಿಂದ ಆಮದು ಮಾಡಿಕೊಂಡಿದೆ.
ವಿಯೆಟ್ನಂ ಸುಖೋಯ್-30 ಫೈಟರ್ ಪೈಲಟ್ ಗಳಿಗೆ ತರಭೇತಿ ನೀಡಲಿರುವ ಭಾರತ
ವಿಯೆಟ್ನಂನ ಸುಖೋಯ್-30 ಫೈಟರ್ ಪೈಲಟ್ ಗಳಿಗೆ ತರಭೇತಿ ನೀಡಲು ಭಾರತ ಒಪ್ಪಿಗೆ ಸೂಚಿಸಿದೆ. ಭಾರತದ ಈ ನಿರ್ಧಾರ ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧವನ್ನು ಬಲಗೊಳಿಸಲಿದೆ. ಭಾರತದ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಮತ್ತು ವಿಯೆಟ್ನಂ ಪ್ರತಿನಿಧಿ ಜನರಲ್ ಗೊ ಕ್ಸುವಾನ್ ಲಿಚ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಪ್ರಮುಖಾಂಶಗಳು:
- ಒಪ್ಪಂದ ಅನ್ವಯ ಸಹಕಾರ ನೀಡುವ ಸಲುವಾಗಿ ಎರಡು ದೇಶಗಳ ವಾಯು ಸೇನಾ ಪಡೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
- ಅದರಂತೆ ಫೈಲಟ್ ಗಳಿಗೆ ತರಭೇತಿ ನೀಡುವುದು ಮತ್ತು ತಜ್ಞರ ವಿನಿಮಯ ಮಾಡಿಕೊಳ್ಳಲಾಗುವುದು.
- ವಿಯೆಟ್ನಾಂ ಫೈಲಟ್ ಗಳಿಗೆ ಭಾರತದಲ್ಲಿ ತರಭೇತಿ ನೀಡಲಾಗುವುದು. ತರಭೇತಿ ತಗಲುವ ವೆಚ್ಚ, ಭಾಗವಹಿಸಲಿರುವ ಪೈಲಟ್ ಗಳ ಸಂಖ್ಯೆಯನ್ನು ಎರಡು ದೇಶಗಳ ವಾಯು ಪಡೆಗಳು ನಿರ್ಧರಿಸಲಿವೆ.
- ವಿಯೆಟ್ನಂ ಮತ್ತು ಭಾರತ ಎರಡೂ ದೇಶಗಳು ಸುಖೋಯ್-30 ಯುದ್ದ ವಿಮಾನವನ್ನು ಕಾರ್ಯಾಚರಣೆಗೆ ಬಳಸುತ್ತಿವೆ. ಆದಾಗ್ಯೂ ಉಭಯ ದೇಶಗಳು ಸು-30 ಯುದ್ದ ವಿಮಾನವನ್ನು ಬಳಸುವ ಮಾದರಿ ಸ್ವಲ್ಪ ಭಿನ್ನವಾಗಿದೆ.
- ಭಾರತ ಈಗಾಗಲೇ ವಿಯೆಟ್ನಂ ನಾವಿಕರಿಗೆ “ಕಿಲೋ ಕ್ಲಾಸ್ ಜಲಂತರ್ಗಾಮಿ” ಕಾರ್ಯಾಚರಣೆ ಬಗ್ಗೆ ತರಭೇತಿ ನೀಡುತ್ತಿದೆ. ರಷ್ಯಾ ನಿರ್ಮಿತ “ಕಿಲೋ ಕ್ಲಾಸ್ ಜಲಂತರ್ಗಾಮಿ”ಯನ್ನು ವಿಯೆಟ್ನಂ 2014ರಲ್ಲಿ ಸೇನೆಗೆ ಸೇರ್ಪಡೆಗೊಳಿಸಿದೆ.
ಹಿನ್ನಲೆ:
ದಕ್ಷಿಣಾ ಚೀನಾ ಸಮುದ್ರದ ಮೇಲೆ ಚೀನಾ ತನ್ನ ಸಾರ್ವಭೌಮತ್ವವನ್ನು ಸಾಧಿಸುತ್ತಿರುವ ಹೊತ್ತಲ್ಲಿ ಭಾರತ ಮತ್ತು ವಿಯೆಟ್ನಂ ನಡುವಿನ ರಕ್ಷಣಾ ಸಂಬಂಧ ಸ್ಥಿರವಾಗಿದ್ದು, ಉಭಯ ದೇಶಗಳು ಉತ್ತಮ ಸಂಬಂಧವನ್ನು ಹೊಂದಿವೆ. ಸೆಪ್ಟೆಂಬರ್ 2016 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ರವರು ವಿಯಟ್ನಂಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಆಯಕಟ್ಟಿನ ಪಾಲುದಾರಿಕೆಯಿಂದ ಕಾರ್ಯತಂತ್ರ ಪಾಲುದಾರಿಕೆಗೆ ಏರಿಸಲಾಯಿತು.
ಕೋಟ ಹರಿನಾರಾಯಣ ಮತ್ತು ಡಾ ಟಿ.ಕೆ.ಅಲೆಕ್ಸ್ ಅವರಿಗೆ ಆರ್ಯಭಟ ಪ್ರಶಸ್ತಿ
2014ನೇ ಸಾಲಿನ ಆರ್ಯಭಟ ಪ್ರಶಸ್ತಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿ ಡಾ. ಕೋಟ ಹರಿನಾರಾಯಣ ಅವರನ್ನು ಮತ್ತು 2015ನೇ ಸಾಲಿನ ಪ್ರಶಸ್ತಿಗೆ ಇಸ್ರೊದ ಡಾ. ಟಿ.ಕೆ. ಅಲೆಕ್ಸ್ ಅವರನ್ನು ಆಯ್ಕೆಮಾಡಲಾಗಿದೆ. ಆರ್ಯಭಟ ಪ್ರಶಸ್ತಿಯನ್ನು ವೈಮಾನಿಕ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್‌ಐ) ನೀಡುತ್ತಿದೆ. ಅದೇ ರೀತಿ ರಾಕೆಟ್ ತಂತ್ರಜ್ಞಾನ, ಬಾಹ್ಯಾಕಾಶ ನೌಕೆ ತಂತ್ರಜ್ಞಾನ, ಬಾಹ್ಯಾಕಾಶ ವ್ಯವಸ್ಥೆಯ ನಿರ್ವಹಣಾ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಿಆರ್‌ಡಿಒ ಮತ್ತು ಇಸ್ರೊದಲ್ಲಿನ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಹಲವು ವಿಜ್ಞಾನಿಗಳನ್ನು ವಿಶೇಷ ಚಿನ್ನದ ಪದಕಗಳಿಗೆ ಆಯ್ಕೆ ಮಾಡಲಾಗಿದೆ.
ಎಎಸ್‌ಐ ಚಿನ್ನದ ಪದಕ: ರಾಕೆಟ್, ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ: ಪ್ರೊ. ಆರ್.ಐ. ಸುಜಿತ್, ಐಐಟಿ ಮದ್ರಾಸ್ (2014 ), ಡಾ. ವಿ. ನಾರಾಯಣನ್, ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (ಎಲ್‌ಪಿಎಸ್‌ಸಿ–ವಿ) (2015).
ಗಗನನೌಕೆ, ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ: ಕೆವಿವಿಎಸ್‌ಎಸ್‌ಆರ್ ಆಂಜನೇಯುಲು, ಐಎಸ್‌ಟಿಆರ್‌ಎಸಿ (2014), ಡಾ. ಜಿ. ನಾಗೇಂದ್ರ ರಾವ್, ಎಲೆಕ್ಟ್ರೊ ಆಪ್ಟಿಕ್ಸ್ ಸಿಸ್ಟಮ್ಸ್ ಲ್ಯಾಬೊರೇಟರಿ (ಎಲ್‌ಇಒಎಸ್) (2015).
ಬಾಹ್ಯಾಕಾಶ ವ್ಯವಸ್ಥೆಗಳ ನಿರ್ವಹಣೆ: ಬಿ. ಜಯಕುಮಾರ್, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) (2014), ಕೆ.ಎಚ್. ನವಲಗುಂದ ಇಸ್ರೊ ಉಪಗ್ರಹ ಕೇಂದ್ರ (ಐಎಸ್‌ಎಸಿ) (2015).
ಬಾಹ್ಯಾಕಾಶ ವಿಜ್ಞಾನಗಳು ಮತ್ತು ಅನ್ವಯಗಳು: ಪ್ರೊ. ಎ. ಚಂದ್ರಶೇಖರ್, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಎಸ್‌ಟಿ) (2014), ಪ್ರೊ. ಶ್ಯಾಮ್ ಎನ್. ಟಂಡನ್ ಅಂತರ್ ವಿಶ್ವವಿದ್ಯಾಲಯ ಖಗೋಳ ವಿಜ್ಞಾನ ಮತ್ತು ಖಭೌತ ವಿಜ್ಞಾನಗಳ ಕೇಂದ್ರ (ಐಯುಸಿಎಎ) (2015)
ಇಸ್ರೊ–ಎಎಸ್‌ಐ ಪ್ರಶಸ್ತಿ:
ರಾಕೆಟ್, ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ: ಶಾಮ್ ದಯಾಳ ದೇವ್ ಡಿ. ಇಸ್ರೊ ಇಂಟರ್ನಲ್ ಸಿಸ್ಟಮ್ಸ್ ಯೂನಿಟ್ (ಐಐಎಸ್‌ಯು) (2014), ಟಿ.ಟಿ. ಮರ್ಸಿ, ವಿಎಸ್‌ಎಸ್‌ಸಿ (2015).
ಗಗನನೌಕೆ ಮತ್ತು ಸಂಬಂಧಿಸಿದ ತಂತ್ರಜ್ಞಾನ: ಜಿ.ಎನ್.ವಿ. ಪ್ರಸಾದ್ ಐಎಸ್‌ಎಸಿ (2014), ಸದಾನಂದ ರಾವ್ ಎಂ.ಎ., ಐಎಸ್‌ಎಸಿ (2015).
ಬಾಹ್ಯಾಕಾಶ ವ್ಯವಸ್ಥೆಗಳ ನಿರ್ವಹಣೆ: ವಿ. ಮಹಾದೇವನ್, ಐಎಸ್‌ಎಸಿ (2014), ಉಮಾ ಮಹೇಶ್ವರನ್ ಆರ್, ವಿಎಸ್‌ಎಸ್‌ಸಿ (2015).
ಬಾಹ್ಯಾಕಾಶ ವಿಜ್ಞಾನಗಳು ಮತ್ತು ಅನ್ವಯ: ಡಾ. ಪಿ.ಜಿ. ದಿವಾಕರ್ ಇಸ್ರೊ– ಪ್ರಧಾನ ಕಚೇರಿ (2014), ಡಾ. ಪ್ರದೀಪ್ ಕುಮಾರ್ ತಪ್ಲಿಯಾಳ್, ಸ್ಪೇಸ್ ಅಪ್ಲಿಕೇಷನ್ ಸೆಂಟರ್ (ಎಸ್‌ಎಸಿ) (2015).
ಇಸ್ರೊ–ಎಎಸ್‌ಐ ಉತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ: ಜಿ. ವಿದ್ಯಾ, ವಿಎಸ್‌ಎಸ್‌ಸಿ (2014), ಲಕ್ಷ್ಮೀ ವಿ. ಐಎಸ್‌ಎಸಿ (2015).
ಇಸ್ರೊ–ಎಎಸ್‌ಐ ಯುವ ವಿಜ್ಞಾನಿ ಪ್ರಶಸ್ತಿ: ಬಿಜೋಯ್ ಕೃಷ್ಣ ಹಂಡಿಕ್ (ಎಮ್‌ಇಎಸ್‌ಎಸಿ) (2014), ಲಕ್ಷ್ಮೀ ಎಸ್. ರಾಜನ್ (ಎಲ್‌ಇಒಎಸ್) (2015).
ತಂಡ ಸಾಧನೆ ಪ್ರಶಸ್ತಿ: ಮ್ಯಾಥ್ಯೂ ಮತ್ತು ತಂಡ, ವಿಎಸ್‌ಎಸ್‌ಸಿ (2014), ಶ್ರೀನಿವಾಸ ಬಾಬು ಮತ್ತು ತಂಡ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಅಇ–ಎಸ್‌ಎಚ್‌ಎಆರ್) (2015)
ಎಸ್ಐ ಬಾಹ್ಯಾಕಾಶ ಚಿನ್ನದ ಪದಕ: ಎಂ. ಪ್ರೇಮದಾಸ್ (ವಿಎಸ್‌ಎಸ್‌ಸಿ), ಎ.ಕೆ. ಕುಲಕರ್ಣಿ (ಐಎಸ್‌ಎಸಿ), ವಿನಿತಾ ಪಿ.ನಾಯರ್ (ಎಲ್‌ಪಿಎಸ್‌ಸಿ–ಬಿ) ಮತ್ತು ಮುಕೇಶ್ ಸಿ. ಗಜ್ಜಾರ್ (ಎಸ್‌ಎಸಿ) (ಎಲ್ಲರಿಗೂ 2014ನೇ ಸಾಲಿನ ಪ್ರಶಸ್ತಿ). ಬಿ. ವೆಂಕಟ ರಮಣ (ಐಎಸ್ಎಸ್‌ಯು), ಡಾ. ಎಸ್. ಶಂಕರನ್ (ಎಸ್‌ಡಿಎಸ್‌ಅಇ–ಎಸ್‌ಎಚ್‌ಎಆರ್), ಜಯಂತಿ ರಾಜೇಶ್ (ಐಎಸ್‌ಎಸಿ) ಮತ್ತು ರಾಜೇಶ್ ಕುಮಾರ್ ಎಂ.ಆರ್ (ವಿಎಸ್‌ಎಸ್‌ಸಿ) (ಎಲ್ಲರಿಗೂ 2015ನೇ ಸಾಲಿನ ಪ್ರಶಸ್ತಿ).
ಒ ಪನ್ನೀರುಸೆಲ್ವಂ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಕ್ಷದ ಪ್ರಮುಖ ನಾಯಕರಾದ ಒ ಪನ್ನೀರು ಸೆಲ್ವಂ ರವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚೆನ್ನೈನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ ರಾವ್ ರವರು ಪನ್ನೀರು ಸೆಲ್ವಂ ಅವರಿಗೆ ಪ್ರಮಾಣ ವಚನ ಭೋದಿಸಿದರು. ಸೆಲ್ವಂ ರವರು ಮೂರನೇ ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿವಿಧ ನ್ಯಾಯಾಲಯ ಪ್ರಕರಣಗಳಲ್ಲಿ ಜಯಲಲಿತಾರವರನ್ನು ದೋಷಿತರೆಂದು ಸಾಬೀತಾದ ವೇಳೆ 2001-02 ಮತ್ತು 2014-15ರಲ್ಲಿ ಸೆಲ್ವಂ ರವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಜಯಲಲಿತಾ ಸರ್ಕಾರ ಇನ್ನು ನಾಲ್ಕು ವರ್ಷ ಕಾಲ ಇರುವುದರಿಂದ ಸೆಲ್ವಂ ರವರ ಅಧಿಕಾರ ಅವಧಿ ಅಲ್ಲಿಯವರೆಗೂ ಇರಲಿದೆ. ಜಯಲಲಿತಾ ಸರ್ಕಾರದಲ್ಲಿ ಸೆಲ್ವಂ ರವರು ಹಣಕಾಸು ಮತ್ತು ಪಬ್ಲಿಕ್ ವರ್ಕ್ ಡಿಪಾರ್ಟ್ಮೆಂಟ್ ಸಚಿವರಾಗಿ ಸೇವೆಸಲ್ಲಿಸಿದ್ದರು.
- ಪನ್ನೀರು ಸೆಲ್ವಂ ರವರು ಜನವರಿ 14, 1951 ರಲ್ಲಿ ತಮಿಳುನಾಡಿನ ಪೆರಿಯಕುಲಂನಲ್ಲಿ ಜನಿಸಿದರು. ಪೆರಿಯಕುಲಂ ಮುನಿಸಿಪಾಲಿಟಿ ಅಧ್ಯಕ್ಷರಾಗಿ 1996-2001 ರವರೆಗೆ ಸೇವೆ ಸಲ್ಲಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು.
- ಜಯಲಲಿತಾ ಸರ್ಕಾರದಲ್ಲಿ ಸೆಲ್ವಂ ರವರು ವಿವಿಧ ಖಾತೆಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ 2002 ರಿಂದ ಡಿಸೆಂಬರ್ 2002 ರವರೆಗೆ ಕಂದಾಯ ಇಲಾಖೆ ಸಚಿವರಾಗಿ, ಡಿಸೆಂಬರ್ 2002 ರಿಂದ ಮೇ 2006 ರವರೆಗೆ ಪಬ್ಲಿಕ್ ವರ್ಕ್ ಇಲಾಖೆ ಸಚಿವರಾಗಿ ಮತ್ತು ಮೇ 2011 ರಿಂದ ಸೆಪ್ಟೆಂಬರ್ 2014 ರವರೆಗೆ ಹಣಕಾಸು ಸಚಿವರಾಗಿದ್ದರು.