ಜಸ್ಟೀಸ್ ಜೆ ಎಸ್ ಖೇಹರ್ ಸುಪ್ರೀಂಕೋರ್ಟ್ನ ಮುಂದಿನ ಮುಖ್ಯನ್ಯಾಯಮೂರ್ತಿ
ಸುಪ್ರೀಂಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಗದೀಶ್ ಸಿಂಗ್ ಖೇಹರ್ ಅವರು ನೇಮಕಗೊಳ್ಳುವುದು ಖಚಿತವಾಗಿದೆ. ಖೇಹರ್ ಅವರ ಹೆಸರನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಶಿಫಾರಸು ಮಾಡಿದ್ದಾರೆ. ಖೇಹರ್ ಅವರು 44ನೇ ಮುಖ್ಯನ್ಯಾಯಮೂರ್ತಿ. ಟಿ.ಎಸ್.ಠಾಕೂರ್ ರವರು ಜನವರಿ 7, 2017ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ಖೇಹರ್ ತುಂಬಲಿದ್ದಾರೆ. ಜನವರಿ 4, 2017ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಖೇಹರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಆ ಮೂಲಕ ಸಿಖ್ ಸಮುದಾಯದಿಂದ ಮುಖ್ಯನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಲಿರುವ ಮೊದಲಿಗರು. ಖೇಹರ್ ಅವರು ಎಂಟು ತಿಂಗಳು ಅಂದರೆ ಮುಂದಿನ ಆ. 27ರವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ.
ಜೆ ಎಸ್ ಖೇಹರ್:
- ಖೇಹರ್ ರವರು 28ನೇ ಆಗಸ್ಟ್ 1952ರಲ್ಲಿ ಜನಿಸಿದ್ದಾರೆ. 1977 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ 1979 ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಎಲ್ಎಲ್ಎಂ ಪದವಿಯನ್ನು ಪಡೆದುಕೊಂಡಿದ್ದಾರೆ.
- 1979 ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಖೇಹರ್ ರವರು ಪಂಜಾಬ್ ಮತ್ತು ಹೈಕೋರ್ಟ್ ನ್ಯಾಯಾಲಯ, ಚಂಡೀಗರ್ ನ್ಯಾಯಾಲಯ, ಹಿಮಾಚಲ ಪ್ರದೇಶ ಮತ್ತು ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
- ಖೇಹರ್ ರವರು 1999 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಪೀಠಕ್ಕೆ ನೇಮಕಗೊಂಡರು. 2008 ಮತ್ತು 2009 ರಲ್ಲಿ ಎರಡು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಆಕ್ಟಿಂಗ್ ಚೀಫ್ ಜಸ್ಟೀಸ್ ಆಗಿ ನೇಮಕಗೊಂಡಿದ್ದರು.
- 2009ರಲ್ಲಿ ಉತ್ತರಖಂಡ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಮಾಡಲಾಯಿತು. 2010ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
- 2011ರಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಖೇಹರ್ ಅವರು ಆಗಸ್ಟ್ 2017 ರಲ್ಲಿ ನಿವೃತ್ತಿ ಹೊಂದಲಿದ್ದಾರೆ.
- ರಾಷ್ಟ್ರೀಯ ನ್ಯಾಯಾಧೀಶರ ನೇಮಕಾತಿ ಸಮಿತಿ ಕಾಯಿದೆ ಮತ್ತು ನ್ಯಾಯಾಧೀಶರ ನೇಮಕಾತಿಗೆ ಸಂವಿಧಾನದ 99ನೇ ತಿದ್ದುಪಡಿ ಕಾಯಿದೆಯನ್ನು ಅಸಿಂಧೂಗೊಳಿಸಿದ ಸುಪ್ರೀಂಕೋರ್ಟ್ ಐದು ಜನರನ್ನು ಒಳಗೊಂಡದ ಪೀಠದ ನೇತೃತ್ವವಹಿಸಿದ್ದರು. ಅಲ್ಲದೇ ಜನವರಿ 2016 ರಲ್ಲಿ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಂವಿಧಾನ ಬಾಹಿರವೆಂದು ತೀರ್ಪು ನೀಡಿದ ಪೀಠದ ನೇತೃತ್ವವನ್ನು ಸಹ ಖೇಹರ್ ವಹಿಸಿದ್ದರು.
ಪ್ರಸಿದ್ದ ಪತ್ರಕರ್ತ ಚೋ ರಾಮಸ್ವಾಮಿ ನಿಧನ
ಹಿರಿಯ ಪರ್ತಕರ್ತ, ರಾಜ್ಯಸಭಾ ಸದಸ್ಯ ಹಾಗೂ ರಾಜಕೀಯ ವಿಶ್ಲೇಷಕ ಚೋ ರಾಮಸ್ವಾಮಿ(82) ನಿಧನರಾದರು. ಕೆಲವು ದಿನಗಳಿಂದ ರಾಮಸ್ವಾಮಿ ರವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚೋ ರಾಮಸ್ವಾಮಿ ರವರು ವಕೀಲ, ನಟ, ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿ ಪ್ರಸಿದ್ದರಾಗಿದ್ದರು. ರಾಮಸ್ವಾಮಿ ಆವರು ‘ತುಘಲಕ್’ ತಮಿಳು ರಾಜಕೀಯ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರು.
ಚೋ ರಾಮಸ್ವಾಮಿ:
- ಅಕ್ಟೋಬರ್ 5, 1934ರಲ್ಲಿ ಜನಿಸಿದ ರಾಮಸ್ವಾಮಿ ರವರು ಆರಂಭದಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ರಂಗಭೂಮಿ, ಸಿನಿಮಾಗಳಲ್ಲಿ ನಟನೆ ಮತ್ತು ಅಂತಿಮವಾಗಿ ಪತ್ರಕರ್ತರಾಗಿ ಉಳಿದರು.
- ಚೋ ರವರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಹಾಗೂ 4 ಸಿನಿಮಾಗಳನ್ನು ನಿರ್ದೇಶಿಸಿದ್ದರು. ತಮಿಳು ಸಿನಿಮಾದ ದಿಗ್ಗಜರಾದ ಎಂ.ಜಿ.ರಾಮಚಂದ್ರನ್, ಜಯಲಲಿತಾ, ಕಮಲ್ ಹಾಸನ್, ರಜನಿ ಕಾಂತ್ ರವರ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹಲವಾರು ತಮಿಳು ನಾಟಕಗಳನ್ನು ನಿರ್ದೇಶಿಸಿದ್ದರು. ರಾಜಕೀಯ ವಿಡಂಬನೆಯಿಂದ ಕೂಡಿದ್ದ ಇವರ ನಾಟಕಗಳು ಜನಪ್ರಿಯವಾಗಿದ್ದವು.
- ಪತ್ರಿಕೋದ್ಯಮದಲ್ಲಿ ಉತ್ಕೃಷ್ಟತೆಗಾಗಿ ನೀಡಲಾಗುವ ಬಿ ಡಿ ಗೋಯೆಂಕಾ ಪ್ರಶಸ್ತಿಯನ್ನು ರಾಮಸ್ವಾಮಿ ರವರು ಪಡೆದುಕೊಂಡಿದ್ದರು.
- ರಾಮಸ್ವಾಮಿ ರವರು 1999 ರಿಂದ 2005 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. ಅಂದಿನ ಎನ್ ಡಿ ಎ ಸರ್ಕಾರ ಇವರನ್ನು ರಾಜ್ಯಸಭಾಗೆ ನೇಮಕಮಾಡಿತ್ತು.
ಶಾಂತಿಯುತ ಉದ್ದೇಶಕ್ಕೆ ಬಾಹ್ಯಕಾಶ ಬಳಕೆಗೆ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಒಪ್ಪಂದ
ಶಾಂತಿಯುತ ಉದ್ದೇಶಕ್ಕೆ ಬಾಹ್ಯಕಾಶ ತಂತ್ರಜ್ಞಾನ ಬಳಕೆ ಮಾಡಲು ಪರಸ್ಪರ ಸಹಕಾರಕ್ಕೆ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಒಡಂಬಡಿಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ಬಾಹ್ಯಕಾಶ ತಂತ್ರಜ್ಞಾನ ಬಳಸುವುದು ಒಪ್ಪಂದದ ಉದ್ದೇಶವಾಗಿದೆ. ಕೃಷಿ, ಶಿಕ್ಷಣ, ಹವಾಮಾನ ಮುನ್ಸೂಚನೆ, ಗ್ರಾಮೀಣ ಆರೋಗ್ಯ, ದೂರಸಂಪರ್ಕ, ನಗರಾಭಿವೃದ್ದಿ, ನೈರ್ಮಲ್ಯ, ದೂರ ಸಂವೇದನೆ ಮುಂತಾದವುಗಳನ್ನು ಕ್ಷೇತ್ರಗಳನ್ನು ಇದು ಒಳಗೊಂಡಿದೆ.
ಒಡಂಬಡಿಕೆಯ ಉಪಯೋಗ:
- ಅಫ್ಘಾನಿಸ್ತಾನದಲ್ಲಿ ಬಾಹ್ಯಕಾಶ ಕೇಂದ್ರವನ್ನು ಅಭಿವೃದ್ದಿಪಡಿಸುವುದು ಮತ್ತು ಬಾಹ್ಯಕಾಶ ಕ್ಷೇತ್ರದಲ್ಲಿ ಅಫ್ಘಾನಿಸ್ತಾನವನ್ನು ಸ್ವವಲಂಬಿಯನ್ನಾಗಿಸಲು ಸಹಾಯವಾಗಲಿದೆ.
- ಬಾಹ್ಯಕಾಶ ಕ್ಷೇತ್ರ ತಂತ್ರಜ್ಞಾನದಲ್ಲಿ ಭಾರತದ ವಿಶ್ವಾಸವನ್ನು ಹೆಚ್ಚಿಸುವ ಮೂಲಕ ವಿವಿಧ ದೇಶಗಳಿಗೆ ತಂತ್ರಜ್ಞಾನ ನೆರವು ನೀಡಲು ಅನುಕೂಲವಾಗಲಿದೆ.
- ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧವನ್ನು ಉತ್ತಮಪಡಿಸಲು ಹಾಗೂ ಅಫ್ಘಾನಿಸ್ತಾನದ ಬಾಹ್ಯಕಾಶ ಮತ್ತು ದೂರಸಂಪರ್ಕ ಕ್ಷೇತ್ರದಲ್ಲಿ ಭಾರತ ದಾಪುಗಾಲಿಡಲು ಪ್ರಯೋಜನವಾಗಲಿದೆ.
- ಎರಡು ದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗಲಿದೆ.
ರಿಸೋರ್ಸ್ ಸ್ಯಾಟ್-2ಎ (Resourcesat-2A) ಉಪಗ್ರಹ ಉಡಾವಣೆ ಯಶಸ್ವಿ
ದೂರ ಸಂವೇದಿ ಉಪಗ್ರಹ ರಿಸೋರ್ಸ್ ಸ್ಯಾಟ್-2ಎಯನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಈ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)-ಸಿ36 ಬಳಸಿ ಶ್ರೀಹರಿಕೋಟ ಬಾಹ್ಯಕಾಶ ಕೇಂದ್ರದಲ್ಲಿ ಉಡಾಯಿಸಲಾಯಿತು. ಇದರೊಂದಿಗೆ ಪಿಎಸ್‌ಎಲ್‌ವಿ ಉಡ್ಡಯನ ವಾಹನವು 38 ನೇ ಉಡಾವಣಾ ಹೆಗ್ಗಳಿಕೆಗೂ ಪಾತ್ರವಾಯಿತು.
ರಿಸೋರ್ಸ್ ಸ್ಯಾಟ್-2ಎ:
- 2003 ಮತ್ತು 2011 ರಲ್ಲಿ ಉಡಾಯಿಸಲಾದ ರಿಸೋರ್ಸ್ ಸ್ಯಾಟ್-1 ಮತ್ತು ರಿಸೋರ್ಸ್ ಸ್ಯಾಟ್-2 ಉಪಗ್ರಹಗಳ ಮುಂದುವರೆದ ಮಿಷನ್ ರಿಸೋರ್ಸ್ ಸ್ಯಾಟ್-2ಎ. ಈ ಎರಡು ಉಪಗ್ರಹಗಳ ಜೊತೆಗೆ ಜಾಗತಿಕ ಬಳಕೆದಾರರಿಗೆ ದೂರ ಸಂವೇದಿ ಸೇವೆಯನ್ನು ನೀಡುವ ಸಲುವಾಗಿ ಈ ಉಪಗ್ರಹವನ್ನು ಉಡಾಯಿಸಲಾಗಿದೆ.
- ರಿಸೋರ್ಸ್ ಸ್ಯಾಟ್-2ಎ ಉಪಗ್ರಹದ ತೂಕ 1235 ಕೆ.ಜಿ ಹಾಗೂ ಈ ಉಪಗ್ರಹವನ್ನು 817 ಕಿ.ಮೀ ಎತ್ತರದಲ್ಲಿರುವ ಧ್ರುವೀಯ ಸೂರ್ಯಸ್ಥಾಯಿ ಕಕ್ಷೆ(Polar Sun synchronous orbit)ಗೆ ಸೇರಿಸಲಾಗಿದೆ.
- ರಿಸೋರ್ಸ್ ಸ್ಯಾಟ್-2ಎ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಪೇಲೋಡ್ ಗಳನ್ನು ಹೊಂದಿದೆ. ಅವುಗಳೆಂದರೆ ಹೈ ರೆಸಲ್ಯೂಶನ್ ಲೀನಿಯರ್ ಇಮೇಜಿಂಗ್ ಸೆಲ್ಫ್ ಸ್ಕ್ಯಾನರ್ (LISS-4), ಮೀಡಿಯಂ ರೆಸಲ್ಯೂಶನ್ LISS-3 ಕ್ಯಾಮೆರಾ ಮತ್ತು ಅಡ್ವಾನ್ಸಡ್ ವೈಡ್ ಫೀಲ್ಡ್ ಸೆನ್ಸರ್ ಕ್ಯಾಮೆರಾ.
- ರಿಸೋರ್ಸ್ ಸ್ಯಾಟ್ –2 ಎ ಕಳುಹಿಸುವ ಮಾಹಿತಿ ಮತ್ತು ಚಿತ್ರಗಳು ವಿಶೇಷವಾಗಿ ರೈತರಿಗೆ ಪ್ರಯೋಜನವಾಗಲಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ. ವಿವಿಧ ಬೆಳೆಗಳ ಪ್ರದೇಶದ ವ್ಯಾಪ್ತಿ, ಕೃಷಿ ಉತ್ಪಾದನೆಯಲ್ಲಿ ಅಂದಾಜು, ಬರ ಪ್ರದೇಶದ ಮಾಹಿತಿ, ಸಾಯಿಲ್ ಮ್ಯಾಪಿಂಗ್, ಇಳುವರಿ ವ್ಯವಸ್ಥೆಯ ವಿಶ್ಲೇಷಣೆಗೆ ಮತ್ತು ತೋಟದ ಬೆಳೆಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ.
ಪಿಎಸ್ಎಲ್ವಿ:
ಪಿಎಸ್‌ಎಲ್‌ವಿ ನಾಲ್ಕು ಹಂತದ, ಸ್ವದೇಶಿ ಎಂಜಿನ್ ಒಳಗೊಂಡಿರುವ ರಾಕೆಟ್. ಘನ ಮತ್ತು ದ್ರವ ಇಂಧನ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 1994 ಮತ್ತು 2016ರ ನಡುವೆ ಪಿಎಸ್ಎಲ್ವಿ 122 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಭಾರತೀಯ ಉಪಗ್ರಹಗಳ ಸಂಖ್ಯೆ 43 ಮತ್ತು ವಿದೇಶಿ ಉಪಗ್ರಹಗಳ ಸಂಖ್ಯೆ 79.