ತ್ರಿವಳಿ ತಲಾಕ್ ಅಸಂವಿಧಾನಿಕ: ಅಲಹಬಾದ್ ಹೈಕೋರ್ಟ್
ತ್ರಿವಳಿ ತಲಾಕ್ ಪದ್ಧತಿಯು ಸಂವಿಧಾನ ಬಾಹಿರ ಎಂದು ಅಲಹಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್ ಪದ್ದತಿ ಭಾರತ ಸಂವಿಧಾನದಲ್ಲಿ ಮಹಿಳೆಯರ ಹಕ್ಕುಗಳಿಗೆ ವಿರುದ್ದವಾಗಿದೆ ಎಂದು ಕೋರ್ಟ್ ಹೇಳಿದೆ. ತ್ರಿವಳಿ ತಲಾಕ್ ಪದ್ಧತಿಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಇಬ್ಬರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅವುಗಳ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಾಮೂರ್ತಿ ಸುನೀತ್ ಕುಮಾರ್ ರವರು ಈ ಮಹತ್ವದ ತೀರ್ಪನ್ನು ನೀಡಿದ್ದಾರೆ. ಅಲ್ಲದೇ ಯಾವುದೇ ವೈಯಕ್ತಿಕ ಕಾನೂನು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಕೋರ್ಟ್ ಹೇಳಿದೆ.
ಏನಿದು ವಿವಾದ?
- ಮುಸ್ಲಿಂ ಧರ್ಮದಲ್ಲಿ “ತಲಾಕ್-ಇ-ಬಿದಾತ್” ಪದ್ದತಿ ಎಂದರೆ ಮುಸ್ಲಿಂ ಪುರುಷ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳಿ ಏಕಪಕ್ಷೀಯವಾಗಿ ವಿಚ್ಛೇದನ ನೀಡುವುದು.
- ಆ ಮೂಲಕ ಬರಿ ಬಾಯಿಯಿಂದ ಉಚ್ಚರಿಸಿ ಮಾರ್ಪಡಿಸಲಾಗದ ವಿಚ್ಛೇದನವನ್ನು ತತ್ ತಕ್ಷಣ ನೀಡುವುದು. ಆದರೆ ಈ ಪದ್ದತಿ ಇಸ್ಲಾಮಿಕ್ ನ ಮೂಲ ಪದ್ದತಿಯಲ್ಲ ಎಂಬುದು ಅನೇಕರ ವಾದ.
- ಆದರೆ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (AIMPLB) ಪ್ರಕಾರ “ತಲಾಕ್-ಇ-ಬಿದಾತ್” ಪದ್ದತಿ ಇಸ್ಲಾಂ ಧರ್ಮದ ಭಾಗವಾಗಿದ್ದು, ಯಾವುದೇ ನ್ಯಾಯಾಲದ ಇದನ್ನು ಪ್ರಶ್ನಿಸುವಂತಿಲ್ಲ ಎಂದು ವಾದಿಸಿದೆ. ಇದರಿಂದ ಧಾರ್ಮಿಕ ಸ್ವಾತಂತ್ರ ಹಕ್ಕಿಗೆ ಚ್ಯುತಿ ಬರುತ್ತದೆ ಎಂಬುದು ಮಂಡಳಿಯ ಹೇಳಿಕೆ.
- ಸುಪ್ರೀಂಕೋರ್ಟ್ ಸಹ ತ್ರಿವಳಿ ತಲಾಕ್ ಪದ್ದತಿಯ ವಿರುದ್ದ ಸಲ್ಲಿಸಲಾದ ಅನೇಕ ವೈಯುಕ್ತಿಕ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.
ಸರ್ಕಾರದ ನಿಲುವು:
ಕೇಂದ್ರ ಸರ್ಕಾರ ಸಹ ತ್ರಿವಳಿ ತಲಾಕ್ ಪದ್ದತಿಯ ವಿರುದ್ದವಾಗಿ ಧ್ವನಿ ಎತ್ತಿದೆ. ಈ ಪದ್ದತಿ ಲಿಂಗ ಸಮಾನತೆ ವಿರುದ್ದವಾಗಿದೆ ಎಂದು ತನ್ನ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ಇಂಗ್ಲೀಷ್ ವಿಶ್ವದ ಅತ್ಯಂತ ಪ್ರಭಾವಶಾಲಿ ಭಾಷೆ: WEF
ವಿಶ್ವದ ಪ್ರಭಾವಿ ಭಾಷೆ ಸೂಚ್ಯಂಕ-2016 ರಲ್ಲಿ ಇಂಗ್ಲೀಷ್ ಮೊದಲ ಸ್ಥಾನವನ್ನು ಗಳಿಸಿದ್ದು, ವಿಶ್ವದ ಅತ್ಯಂತ ಪ್ರಭಾವಶಾಲಿ ಭಾಷೆಯಾಗಿ ಹೊರಹೊಮ್ಮಿದೆ. ವಿಶ್ವ ಆರ್ಥಿಕ ವೇದಿಕೆ ಈ ಸೂಚ್ಯಂಕವನ್ನು ಹೊರತರುತ್ತಿದೆ. ಭಾರತದ ರಾಷ್ಟ್ರ ಭಾಷೆ ಹಿಂದಿ ಈ ಸೂಚ್ಯಂಕದಲ್ಲಿ ಹತ್ತನೇ ಸ್ಥಾನವನ್ನು ಗಳಿಸಿದೆ.
ಸೂಚ್ಯಂಕದ ಪ್ರಮುಖಾಂಶಗಳು:
- ಸೂಚ್ಯಂಕದ ಪ್ರಕಾರ ವಿಶ್ವದಲ್ಲಿ ಸುಮಾರು 6000 ಭಾಷೆಗಳು ಬಳಕೆಯಲ್ಲಿವೆ. ಇವುಗಳ ಪೈಕಿ ಸುಮಾರು 2000 ಭಾಷೆಗಳನ್ನ ಕೇವಲ 1000 ಜನಕ್ಕಿಂತ ಕಮ್ಮಿ ಜನರು ಮಾತನಾಡುತ್ತಿದ್ದಾರೆ.
- ಕೇವಲ 15 ಭಾಷೆಗಳು ವಿಶ್ವದ ಅರ್ಧದಷ್ಟು ಜನರು ಮಾತನಾಡುವ ಭಾಷೆಗಳಾಗಿವೆ. ಜಿ-7 ರಾಷ್ಟ್ರಗಳ ಪೈಕಿ ಮೂರು ರಾಷ್ಟ್ರಗಳಾದ ಯುಎಸ್, ಯುಕೆ ಮತ್ತು ಕೆನಡಾದಲ್ಲಿ ಇಂಗ್ಲೀಷ್ ಪ್ರಭಾವಿ ಭಾಷೆಯಾಗಿದೆ.
- ಟಾಪ್ ಹತ್ತು ಪ್ರಭಾವಿ ಭಾಷೆಗಳು: ಇಂಗ್ಲೀಷ್, ಮ್ಯಾಂಡರಿನ್, ಫ್ರೆಂಚ್, ಸ್ಪ್ಯಾನಿಷ್, ಅರೇಬಿಕ್, ರಷ್ಯನ್, ಜರ್ಮನ್, ಜಪಾನೀಸ್, ಪೋರ್ಚುಗೀಸ್ ಮತ್ತು ಹಿಂದಿ.
- ಟಾಪ್ ಹತ್ತು ಭಾಷೆಗಳ ಪೈಕಿ ಮೊದಲ ಆರು ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿವೆ.
- ಹಿಂದಿ ಭಾರತದಲ್ಲಿ ಬಳಕೆಯಲ್ಲಿರುವ ಪ್ರಭಾವಿ ಭಾಷೆಯಾಗಿದೆ. ಶೇ 41% ಜನರು ಭಾರತದಲ್ಲಿ ಹಿಂದಿಯನ್ನು ತಮ್ಮ ಭಾಷೆಯನ್ನಾಗಿ ಬಳಸುತ್ತಿದ್ದಾರೆ.
ಸೂಚ್ಯಂಕದ ಬಗ್ಗೆ:
- ವಿಶ್ವ ಪ್ರಭಾವಿ ಭಾಷೆ ಸೂಚ್ಯಂಕವನ್ನು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪರಿಣಾಮಕಾರಿತ್ವವನ್ನು ಆಧರಿಸಿ ಭಾಷೆಗಳಿಗೆ ಶ್ರೇಯಾಂಕವನ್ನು ನೀಡಲಾಗುತ್ತಿದೆ.
- ಸೂಚ್ಯಂಕ ಸಿದ್ದಪಡಿಸಲು ಭಾಷೆಯ ಮೇಲೆ ಪ್ರಭಾವ ಬೀರುವ 20 ಮಾನದಂಡಗಳನ್ನು ಬಳಸಲಾಗುತ್ತದೆ.
- ವಿಶ್ವ ಆರ್ಥಿಕ ವೇದಿಕೆ (WEF) ಈ ಸೂಚ್ಯಂಕವನ್ನು ಹೊರತರುತ್ತಿದೆ.
ಕೇರಳ ಸರ್ಕಾರದಿಂದ ಹರಿತ ಕೇರಳಂ ಮಿಷನ್ ಗೆ ಚಾಲನೆ
ಕೇರಳ ಸರ್ಕಾರ ಹರಿತ ಕೇರಳಂ ಮಿಷನ್ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದಲ್ಲಿ ಸಮಗ್ರ ಸುಸ್ಥಿರ ಅಭಿವೃದ್ದಿ ದೃಷ್ಟಿಕೋನವನ್ನು ರಚಿಸುವುದು ಯೋಜನೆ ಪ್ರಮುಖ ಉದ್ದೇಶವಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಕೇರಳದ ರಾಜಧಾನಿ ತಿರುವನಂತಪುರಂ ನಲ್ಲಿ ಯೋಜನೆಗೆ ಚಾಲನೆ ನೀಡಿದರು. ಗಾಯಕ ಯೇಸುದಾಸ್ ಮತ್ತು ನಟ ಮಂಜು ವರೈರ್ ಯೋಜನೆ ಪ್ರಚಾರ ರಾಯಭಾರಿಗಳಾಗಿದ್ದಾರೆ.
ಯೋಜನೆಯ ಪ್ರಮುಖಾಂಶಗಳು:
- ಹರಿತ ಕೇರಳಂ ಯೋಜನೆ ಬಹುಆಯಾಮದ ಅಭಿವೃದ್ದಿ ಯೋಜನೆಯಾಗಿದ್ದು, ಜಲ ಸಂರಕ್ಷಣೆ, ನೈರ್ಮಲ್ಯತೆ, ಪರಿಸರ ಸಂರಕ್ಷಣೆ ಹಾಗೂ ಭತ್ತ ಭಿತ್ತನೆ ಮೇಲೆ ಕೇಂದ್ರಿಕರಿಸಲಾಗಿದೆ.
- ರಾಜ್ಯದ ಎಲ್ಲಾ ನೀರಿನ ಮೂಲಗಳನ್ನು ಸ್ವಚ್ಚಗೊಳಿಸುವುದು, ಸೂಕ್ತ ಘನ ತ್ಯಾಜ್ಯ ವಿಲೇವಾರಿ ಮತ್ತು ತ್ಯಾಜ್ಯ ನೀರು ನಿರ್ಮೂಲನೆ ಹಾಗೂ ಭತ್ತ ಭಿತ್ತನೆ ಪ್ರದೇಶವನ್ನು ಹೆಚ್ಚಿಸುವುದು ಯೋಜನೆಯ ಗುರಿ.
- ಕೇರಳ LDF ಸರ್ಕಾರದ ಉದ್ದೇಶಿತ ನಾಲ್ಕು ಪ್ರಮುಖ ಯೋಜನೆಗಳಲ್ಲಿ ಇದು ಮೊದಲನೆಯದು. ಉಳಿದ ಯೋಜನೆಗಳಾದ ಆರೋಗ್ಯ, ಶಿಕ್ಷಣ ಮತ್ತು ವಸತಿ ಮಿಷನ್ ಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು.
ಜಾನ್ ಗ್ಲೆನ್: ಅಂತರಿಕ್ಷದಲ್ಲಿ ಭೂಮಿಗೆ ಸುತ್ತು ಹಾಕಿದ ಅಮೆರಿಕದ ಮೊದಲ ವ್ಯಕ್ತಿ ನಿಧನ
ಅಮೆರಿಕದ ಮಾಜಿ ವಿಮಾನ ಚಾಲಕ, ಹಿರಿಯ ಗಗನಯಾತ್ರಿ ಜಾನ್ ಗ್ಲೆನ್ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕೊಲಂಬಸ್, ಓಹಿಯೋ ಅಮೆರಿಕದಲ್ಲಿ ನಿಧನರಾದರು. ಗ್ಲೆನ್ ರವರು ಅಮೆರಿಕದ “ಮರ್ಕ್ಯೂರಿ ಸೆವೆನ್ ಮಿಷನ್” ನ ಕೊನೆಯ ಜೀವಂತ ಸದಸ್ಯರಾಗಿದ್ದರು. ಗ್ಲೆನ್ ಅಂತರಿಕ್ಷದಲ್ಲಿ ಭೂಮಿಗೆ ಸುತ್ತು ಹಾಕಿದ ಅಮೆರಿಕದ ಮೊದಲ ವ್ಯಕ್ತಿ. 1962ರಲ್ಲಿ ಮೂರು ಬಾರಿ ಭೂಮಿಯನ್ನು ಪ್ರದಕ್ಷಿಣೆ ಹಾಕಿದ್ದರು.
ಜಾನ್ ಗ್ಲೆನ್:
- ಜುಲೈ 28, 1921 ರಲ್ಲಿ ಜಾನ್ ಹರ್ಷಲ್ ಗ್ಲೆನ್ ಜ್ಯೂನಿಯರ್ ಆಗಿ ಕ್ಯಾಂಬ್ರಿಡ್ಜ್, ಓಹಿಯೋ, ಅಮೆರಿಕದಲ್ಲಿ ಜನಿಸಿದರು.
- ಎರಡನೇ ವಿಶ್ವ ಯುದ್ದ ಮತ್ತು ಕೊರಿಯಾ ಯುದ್ದ ಸಂದರ್ಭದಲ್ಲಿ ಯುದ್ದ ವಿಮಾನ ಚಾಲಕರಾಗಿ ಪರಿಣಿತಿರಾಗಿದ್ದರು. ಆ ನಂತರ ಅಮೆರಿಕದ ಬಾಹ್ಯಕಾಶ ಏಜೆನ್ಸಿ ನಾಸಾಗೆ ಸೇರ್ಪಡೆಗೊಂಡರು.
- ಗ್ಲೆನ್ 1962 ರಲ್ಲಿ “ಫ್ರೆಂಡ್ ಶಿಪ್ 7 ಮಿಷನ್” ಮೂಲಕ ಭೂಮಿಗೆ ಸುತ್ತು ಹಾಕಿದ್ದರು. ಆ ಮೂಲಕ ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತುಹಾಕಿದ ಅಮೆರಿಕದ ಮೊದಲ ವ್ಯಕ್ತಿ ಎನಿಸಿದರು.
- 1974 ರಲ್ಲಿ ಗ್ಲೆನ್ ಯುಸ್ ಸೆನೆಟ್ ಗೆ ಸಂಸದರಾಗಿ ನೇಮಕಗೊಂಡರು. 1974 ರಿಂದ 1999 ರವರೆಗೆ 24 ವರ್ಷಗಳ ಕಾಲ ಸೆನೆಟ್ ನಲ್ಲಿ ಸೇವೆ ಸಲ್ಲಿಸಿದರು.
- 1998 ರಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಂಡು ಇತಿಹಾಸ ನಿರ್ಮಿಸಿದ್ದರು.
ಪ್ರಶಸ್ತಿಗಳು:
- 1990 ರಲ್ಲಿ ಅಮೆರಿಕದ ಅಸ್ಟ್ರೋನಾಟ್ ಹಾಲ್ ಆಫ್ ಫೇಮ್ ಗೆ ಸೇರ್ಪಡೆ.
- ನಾಸಾದ ವಿಶಿಷ್ಟ ಸೇವಾ ಪದಕ ಪ್ರಶಸ್ತಿ, 2012 ರಲ್ಲಿ ಪ್ರೆಸಿಡೆಂಟ್ ಫ್ರೀಡಂ ಆಫ್ ಮೆಡಲ್ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
2016 ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವಕ್ಕೆ ನವದೆಹಲಿಯಲ್ಲಿ ಚಾಲನೆ
2016 ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (India International Science Festival)ಕ್ಕೆ ನವದೆಹಲಿಯ ಸಿಎಸ್ಐಆರ್-ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿಯ ಆವರಣದಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರು ಈ ಉತ್ಸವವನ್ನು ಉದ್ಘಾಟಿಸಿದರು. “ಸೈನ್ ಫಾರ್ ದಿ ಮಾಸಸ್ (Science for the Masses)” ಇದು ಈ ವರ್ಷದ ಧ್ಯೇಯವಾಕ್ಯ.
ಪ್ರಮುಖಾಂಶಗಳು:
- IISF-2016 ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಭಾರತಿ ಆಯೋಜಿಸಿದೆ.
- ಭಾರತೀಯ ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ದಿಪಡಿಸಲಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವುದು ಹಾಗೂ ಜನಸಾಮಾನ್ಯರ ನಡುವೆ ವೈಜ್ಞಾನಿಕ ಮನೋಭಾವವನ್ನು ಭಿತ್ತುವ ಸಲುವಾಗಿ ಉತ್ಸವವನ್ನು ಆಯೋಜಿಸಲಾಗುತ್ತಿದೆ.
- ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಭಾವ, ಪರಿಕಲ್ಪನೆ ಹಾಗೂ ಜ್ಞಾನ ಮಿನಿಮಯಕ್ಕೆ ಇದು ವೇದಿಕೆಯಾಗಲಿದೆ.
- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತ ನೀಡಿರುವ ಇತ್ತೀಚಿನ ಕೊಡುಗೆಯನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುವುದು.
ಹಿನ್ನಲೆ:
ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ಮೊದಲ ಬಾರಿಗೆ 2015 ರಲ್ಲಿ ಐಐಟಿ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಸುಮಾರು ನಾಲ್ಕು ಲಕ್ಷ ಜನರು ಈ ಉತ್ಸವವಕ್ಕೆ ಭೇಟಿ ನೀಡುವ ಮೂಲಕ ಅದ್ಭುತ ಯಶಸ್ಸನ್ನು ಕಂಡಿತ್ತು.
ಡಿಸೆಂಬರ್ 9: ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಡಿಸೆಂಬರ್ 9 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಜನರು ಭ್ರಷ್ಟಾಚಾರವನ್ನು ಹೇಗೆ ತಡೆಬಹುದು ಎಂಬುದನ್ನು ತಿಳಿಸಲು ಈ ದಿನವನ್ನು ಬಳಸಿಕೊಳ್ಳಲಾಗುವುದು. ಭ್ರಷ್ಟಾಚಾರವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಕ್ರಮಗಳನ್ನು ಬಲಪಡಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶ.
2016 ಧ್ಯೇಯವಾಕ್ಯ: “ಅಭಿವೃದ್ದಿ, ಶಾಂತಿ ಮತ್ತು ಭದ್ರತೆಗಾಗಿ ಭ್ರಷ್ಟಾಚಾರದ ವಿರುದ್ದ ಒಗ್ಗೂಡುವುದು”.
ಹಿನ್ನಲೆ:
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 3, 2003 ರಲ್ಲಿ ಡಿಸೆಂಬರ್ 9 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಿತು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಮತ್ತು ತಡೆಯಲು ವಿಶ್ವಸಂಸ್ಥೆಯ ಭ್ರಷ್ಟಾಚಾರ ವಿರೋಧಿ ಸಮ್ಮೇಳನದ ಮಹತ್ವವನ್ನು ಸಾರುವುದು ಹಾಗೂ ವಿಶ್ವದ ಜನತೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.