ಡಿಜಿಟಲ್ ಮತ್ತು ನಗದು ರಹಿತ ವ್ಯವಹಾರ ಉತ್ತೇಜನಕ್ಕೆ ಹಲವು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ
ದೇಶದಲ್ಲಿ ನಗದು ರಹಿತ ವಹಿವಾಟು ಉತ್ತೇಜನಕ್ಕೆ ಸರ್ಕಾರ ಹಲವು ವಿನಾಯಿತಿಗಳನ್ನು ಘೋಷಿಸಿದೆ. ವಿವಿಧ ಸೇವೆಗಳ ಶುಲ್ಕ ಪಾವತಿಗೆ ಡೆಬಿಟ್/ಕ್ರೆಡಿಟ್ ಕಾರ್ಡ್, ಆನ್‌ಲೈನ್ ಪಾವತಿ ಮತ್ತು ಇ–ವಾಲೆಟ್‌ಗಳನ್ನು ಬಳಸಿದರೆ ಗರಿಷ್ಠ ಶೇ 10ರಷ್ಟು ರಿಯಾಯಿತಿ ಘೋಷಿಸಿದೆ.
- ಡಿಜಿಟಲ್ ವ್ಯವಸ್ಥೆ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸುವ ಗ್ರಾಹಕರಿಗೆ 0.75% ರಿಯಾಯಿತಿ ದೊರೆಯಲಿದೆ.
- ‘ಇ–ಪಾವತಿ ಮೂಲಕ ರೈಲು ಟಿಕೆಟ್ ಖರೀದಿಸಿದರೆ, ₹ 10 ಲಕ್ಷದ ಅಪಘಾತ ವಿಮೆ ದೊರೆಯಲಿದೆ.
- ಸರ್ಕಾರಿ ಕಚೇರಿ, ಸಾರ್ವಜನಿಕ ವಲಯದ ಕಂಪೆನಿಗಳ ಜತೆಗಿನ ವಹಿವಾಟಿನಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿದರೆ, ವಹಿವಾಟು ಶುಲ್ಕ ಇರುವುದಿಲ್ಲ.
- ಆನ್ ಲೈನ್ ಮೂಲಕ ವಿಮೆ ಖರೀದಿ ಮಾಡುವವರಿಗೆ ಜನರಲ್ ವಿಮೆ ಮೇಲೆ 10% ಹಾಗೂ ಹೊಸ ಜೀವಾ ವಿಮೆ ಪಾಲಿಸಿಗಳ ಮೇಲೆ 8% ರಿಯಾಯಿತಿ ದೊರೆಯಲಿದೆ.
- ರಾಷ್ಟ್ರೀಯ ಹೆದ್ದಾರಿಗಳಲ್ಲಿ RFID ಟ್ಯಾಗ್ ಬಳಸಿ ಟೋಲ್ ಶುಲ್ಕ ಪಾವತಿ ಮಾಡಿದರೆ ಶೇ 10% ರಿಯಾಯಿತಿ.
- 1 ಲಕ್ಷ ಗ್ರಾಮಗಳಿಗೆ ಸ್ವೈಪಿಂಗ್ ಯಂತ್ರ: 10 ಸಾವಿರ ಜನಸಂಖ್ಯೆ ಇರುವ ಪ್ರತಿ ಗ್ರಾಮಕ್ಕೆ ಎರಡು ಸ್ವೈಪಿಂಗ್ (ಕಾರ್ಡ್ ಮೂಲಕ ಹಣ ಪಾವತಿಸುವ ಯಂತ್ರ. ಪಾಂಯ್ಟ್ ಆಫ್ ಸೇಲ್– ಪಿಒಎಸ್ ಯಂತ್ರ) ಯಂತ್ರಗಳನ್ನು ಒದಗಿಸಲಾಗುವುದು. ಇದಕ್ಕಾಗಿ ಒಂದು ಲಕ್ಷ ಗ್ರಾಮಗಳನ್ನು ಆಯ್ಕೆ ಮಾಡಲಾಗುವುದು. ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘಗಳು ಒಳಗೊಂಡಂತೆ ಕೃಷಿ ಸಂಬಂಧಿ ವಹಿವಾಟು ನಡೆಸುವ ಕೇಂದ್ರಗಳಿಗೆ ಈ ಯಂತ್ರ ವಿತರಿಸಲಾಗುತ್ತದೆ.
- ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಗರಿಷ್ಠ ₹ 2,000 ವರೆಗಿನ ವಹಿ ವಾಟಿಗೆ ಸೇವಾ ತೆರಿಗೆ ಇಲ್ಲ.
ನ್ಯೂಸ್ ಪೇಪರ್ ನಲ್ಲಿ ಆಹಾರ ಪ್ಯಾಕಿಂಗ್ ನಿಷೇಧಿಸಿದ FSSAI
ತಿಂಡಿ ತಿನಿಸು ಮತ್ತು ಆಹಾರ ಪದಾರ್ಥಗಳನ್ನು ನ್ಯೂಸ್ ಪೇಪರ್ ನಿಂದ ಸುತ್ತಿ ಪ್ಯಾಕಿಂಗ್ ಮಾಡುವುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಷೇಧಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೊಲೆಯನ್ನು ಹೊರಡಿಸಲಾಗಿದ್ದು, ನ್ಯೂಸ್ ಪೇಪರ್ ಬಳಸಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡುವುದು ಮತ್ತು ಸಂಗ್ರಹಿಸಿಡುವುದನ್ನು ನಿಷೇಧಿಸುವಂತೆ ಆಹಾರ ಸುರಕ್ಷತೆ ಕಮೀಷನರ್ ಗಳಿಗೆ ಸೂಚನೆ ನೀಡಲಾಗಿದೆ.
FSSAI ಆಹಾರ ಪ್ಯಾಕಿಂಗ್ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಿರುವುದು ಇದೇ ಮೊದಲು. ಈ ಮುಂಚೆ ಆಹಾರ ಪದಾರ್ಥಗಳ ಗುಣಮಟ್ಟದ ಮೇಲಷ್ಟೆ ನಿಗಾವಹಿಸುತ್ತಿತ್ತು.
ನಿಷೇಧ ಏಕೆ?
- ಭಾರತದಲ್ಲಿ ಸಣ್ಣ ಹಾಗೂ ಬೀದಿ ಬದಿ ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ನ್ಯೂಸ್ ಪೇಪರ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಆಹಾರ ಪದಾರ್ಥಗಳ ಪ್ಯಾಕಿಂಗ್ ಗೆ ನ್ಯೂಸ್ ಪೇಪರ್ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನ್ಯೂಸ್ ಪೇಪರ್ ನಲ್ಲಿ ಬಳಸುವ ಇಂಕ್ ಆಹಾರ ಪದಾರ್ಥದೊಂದಿಗೆ ಕಲುಷಿತಗೊಳ್ಳುವುದೇ ಇದಕ್ಕೆ ಮುಖ್ಯ ಕಾರಣ.
- ನ್ಯೂಸ್ ಪೇಪರ್ ಮುದ್ರಣಕ್ಕೆ ಬಳಸುವ ಇಂಕ್ ನಲ್ಲಿ ಹಾನಿಕಾರಕ ರಾಸಾಯನಿಕಗಳು, ಬಣ್ಣಗಳು, ಜೈವಿಕ ಕ್ರಿಯಾಶೀಲ ವಸ್ತುಗಳು, ಸಂರಕ್ಷಕಗಳು, ರೋಗಕಾರಕ ಸೂಕ್ಷಜೀವಿಗಳಿದ್ದು ಮಾನವನ ಆರೋಗ್ಯದ ಮೇಲೆ ಅಪಾಯ ತಂದೊಡ್ಡುತ್ತವೆ.
- ಆದ್ದರಿಂದ ಚಿಕ್ಕಮಕ್ಕಳು, ವಯಸ್ಕರು ಮತ್ತು ಹಿರಿಯರಲ್ಲಿ ಕ್ಯಾನ್ಸರ್ ನಂತಹ ರೋಗಗಳು ಬರುವ ಸಂಭವ ಅಧಿಕವಾಗಿರುತ್ತದೆ.
FSSAI:
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ರಡಿ ಸ್ಥಾಪಿಸಲಾಗಿದೆ. ಆಹಾರ ಗುಣಮಟ್ಟ ನಿಯಂತ್ರಣ ಮತ್ತು ಸುರಕ್ಷತೆ ಮೇಲ್ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ನೋಡಲ್ ಸಂಸ್ಥೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.
ಮಾನವ ಹಕ್ಕು ದಿನವನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ನೆನಪಿಗಾಗಿ ಡಿಸೆಂಬರ್ 10 ರಂದು ಮಾನವ ಹಕ್ಕು ದಿನವನ್ನು ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳನ್ನು ರಕ್ಷಿಸಲು, ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಈ ದಿನವನ್ನು ಆಚರಿಸಲಾಗುತ್ತದೆ.
2016 ಧ್ಯೇಯವಾಕ್ಯ: “ಇನ್ನೊಬ್ಬರ ಹಕ್ಕಿಗೆ ಇಂದು ಎದ್ದು ನಿಲ್ಲಿ”
ಹಿನ್ನಲೆ:
ಡಿಸೆಂಬರ್ 4, 1950 ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 317ನೇ ಸಭೆಯಲ್ಲಿ ಮಾನವ ಹಕ್ಕು ದಿನವನ್ನು ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಡಿಸೆಂಬರ್ 10, 1948 ರಲ್ಲಿ ವಿಶ್ವಸಂಸ್ಥೆ ಅಳವಡಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಸಲುವಾಗಿ ಈ ಘೋಷಣೆಯನ್ನು ಅಳವಡಿಸಿಕೊಳ್ಳಲಾಗಿದೆ.
ಜಾಗತಿಕ ಭಯೋತ್ಪಾದಕ ಸೂಚ್ಯಂಕದಲ್ಲಿ ಭಾರತಕ್ಕೆ 7ನೇ ಸ್ಥಾನ
ಜಾಗತಿಕ ಭಯೋತ್ಪಾದಕ ಸೂಚ್ಯಂಕದಲ್ಲಿ 2015ರಲ್ಲಿ ಭಯೋತ್ಪಾದನೆಗೆ ತುತ್ತಾದ 163 ರಾಷ್ಟ್ರಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ. ಸಿಡ್ನಿ ಮೂಲದ ಇನ್ಸ್ಟಿಟ್ಯೂಟ್ ಫಾರ್ ಎಕಾನಮಿಕ್ಸ್ ಅಂಡ್ ಪೀಸ್ ಈ ಸೂಚ್ಯಂಕವನ್ನು ಹೊರತಂದಿದೆ. ಭಯೋತ್ಪಾದನೆಗೆ ತುತ್ತಾದ ಟಾಪ್ ಹತ್ತು ರಾಷ್ಟ್ರಗಳ ಪೈಕಿ ಏಷ್ಯಾದ ಆರು ರಾಷ್ಟ್ರಗಳಿದ್ದು, ಅವುಗಳಲ್ಲಿ ಭಾರತ ಸಹ ಒಂದಾಗಿದೆ.
ಪ್ರಮುಖಾಂಶಗಳು:
- ಸೂಚ್ಯಂಕದ ಪ್ರಕಾರ 2015ರಲ್ಲಿ ಭೀಕರ ಭಯೋತ್ಪಾದನೆ ದಾಳಿಗೆ ಒಳಗಾದ ರಾಷ್ಟ್ರಗಳ ಪೈಕಿ ಇರಾನ್ ಮೊದಲ ಸ್ಥಾನದಲ್ಲಿದೆ. ಆಪ್ಘಾನಿಸ್ತಾನ ಮತ್ತು ನೈಜೀರಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಪಾಕಿಸ್ತಾನ ಮತ್ತು ಸಿರಿಯಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
- ಭಯೋತ್ಪಾದನೆ ದಾಳಿಯಿಂದ ಜಗತ್ತಿನಾದ್ಯಂತ ಸತ್ತವರ ಸಂಖ್ಯೆ 2014ಕ್ಕೆ ಹೋಲಿಸಿದರೆ ಶೇ 10% ಕಡಿಮೆಯಾಗಿದೆ. 2014ರಲ್ಲಿ 32,765 ಜನ ಸಾವನ್ನಪ್ಪಿದ್ದರೆ 2015 ರಲ್ಲಿ 29,376 ಜನ ಭಯೋತ್ಪಾದನೆಯಿಂದ ಸಾವನ್ನಪ್ಪಿದ್ದಾರೆ.
- 2000 ದಿಂದ 2016 ರ 16 ವರ್ಷ ಅವಧಿಯೊಳಗೆ ಭಯೋತ್ಪಾದನೆಯಿಂದಾಗಿರುವ ಆಗಿರುವ ನಷ್ಟ ಸುಮಾರು 635 ಬಿಲಿಯನ್ ಡಾಲರ್. ಈ ಮೊತ್ತ ಈಜಿಪ್ಟ್ ಮತ್ತು ಮಲೇಷಿಯಾ ರಾಷ್ಟ್ರಗಳ ಒಟ್ಟಾರೆ ವಾರ್ಷಿಕ ಜಿಡಿಪಿಗೆ ಸಮನಾಗಿದೆ.
- ಆಫ್ರಿಕಾದ ಬೊಕೊ ಹರಮ್ ಅನ್ನು ಐಎಸ್ಐಎಸ್ ಹಿಂದಿಕ್ಕಿ ಐಎಸ್ಐಎಸ್ ವಿಶ್ವದ ಮಾರಣಾಂತಿಕ ಭಯೋತ್ಪಾದನೆ ಸಂಘಟನೆಯಾಗಿದೆ. ಐಎಸ್ಐಎಸ್ 2014 ರಲ್ಲಿ ಆರು ರಾಷ್ಟ್ರಗಳಲ್ಲಿ ಕಾರ್ಯಚಟುವಟಿಕೆಯನ್ನು ಹೊಂದಿತ್ತು ಆದರೆ 2015 ರಲ್ಲಿ 11 ರಾಷ್ಟ್ರಗಳಲ್ಲಿ ತನ್ನ ಅಸ್ಥಿತ್ವವನ್ನು ವಿಸ್ತರಿಸಿಕೊಂಡಿದೆ.
ಭಾರತಕ್ಕೆ ಸಂಬಂಧಿಸಿದಂತೆ:
- ಭಾರತದಲ್ಲಿ 2015 ರಲ್ಲಿ ಸರಿಸುಮಾರು 797 ಭಯೋತ್ಪಾದನೆ ದಾಳಿ ಪ್ರಕರಣಗಳು ದಾಖಲಾಗಿದ್ದು, 2014ಕ್ಕೆ ಹೋಲಿಸಿದರೆ ಶೇ 4% ಹೆಚ್ಚಳವಾಗಿದೆ. ಹಾಗೆಯೇ 289 ಭಯೋತ್ಪಾದನೆ ದಾಳಿ ಸಂಬಂಧಿಸಿದ ಸಾವು ಪ್ರಕರಣಗಳು ಸಂಭವಿಸಿದ್ದು, 2014ಕ್ಕೆ ಹೋಲಿಸಿದರೆ ಶೇ 45% ತಗ್ಗಿದೆ.
- ಭಯೋತ್ಪಾದನೆ ದಾಳಿಯಿಂದ ಸಾವನ್ನಪಿದ್ದ ಭಾರತೀಯ ಸೈನಿಕರು ಮತ್ತು ಪ್ಯಾರಮಿಲಿಟರಿ ಸಿಬ್ಬಂದಿ ಸಂಖ್ಯೆ ಎಂಟು ವರ್ಷಗಳಲ್ಲೇ ಅಧಿಕವಾಗಿದೆ.
- ಜಾಗತಿಕ ಮಟ್ಟದಲ್ಲಿ ಸಂಭವಿಸಿದ ಭಯೋತ್ಪಾದನೆ ದಾಳಿಯಲ್ಲಿ ಶೇ 7% ರಷ್ಟು ಪ್ರಕರಣಗಳು ಭಾರತದಲ್ಲಿ ಸಂಭವಿಸಿದೆ. ಇರಾಕ್ (20%), ಆಫ್ಗಾನಿಸ್ತಾನ (14%) ಮತ್ತು ಪಾಕಿಸ್ತಾನ (7%) ನಂತರ ಭಾರತ ನಾಲ್ಕನೇ ಸ್ತಾನದಲ್ಲಿದೆ.
ಜಾಗತಿಕ ಭಯೋತ್ಪಾದನೆ ಸೂಚ್ಯಂಕ:
ಜಾಗತಿಕ ಭಯೋತ್ಪಾದನೆ ಸೂಚ್ಯಂಕದಲ್ಲಿ ವಿಶ್ವದ ಭಯೋತ್ಪಾದನೆ ಚಟುವಟಕೆ ಆಧಾರದ ಮೇಲೆ ರಾಷ್ಟ್ರವನ್ನು ಅಳೆಯಲಾಗುತ್ತದೆ. ವರ್ಷದಲ್ಲಾದ ಒಟ್ಟಾರೆ ಭಯೋತ್ಪಾದನೆ ಪ್ರಕರಣಗಳು, ಗಾಯಗಳು, ಸಾವುನೋವು ಮತ್ತು ಆಸ್ತಿಪಾಸ್ತಿ ನಷ್ಟ ಈ ನಾಲ್ಕು ಮಾನದಂಡಗಳ ಆಧಾರದ ಮೇಲೆ ಸೂಚ್ಯಂಕವನ್ನು ಹೊರತರಲಾಗುತ್ತದೆ.
ಡಿಜಿಟಲ್ ಪಾವತಿ ಉತ್ತೇಜಿಸಲು “ಡಿಜಿಶಾಲಾ ಚಾನೆಲ್” ಆರಂಭಿಸಿದ ಕೇಂದ್ರ ಸರ್ಕಾರ
ಡಿಜಿಟಲ್ ವಹಿವಾಟಿನ ಕುರಿತು ಜನರಿಗೆ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಡಿಜಿಧನ್ ಅಭಿಯಾನದ ಅಡಿ ‘ಡಿಜಿಶಾಲಾ’ ಟಿವಿ ಚಾನಲ್ ಹಾಗೂ ‘ಡಿಜಿಧನ್’ ವೆಬ್‌ಸೈಟ್‌ಗೆ ಸರ್ಕಾರ ಚಾಲನೆಗೆ ನೀಡಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಡಿಜಿಶಾಲಾ ಟಿವಿ ಮತ್ತು ಡಿಜಿಧನ್ ಜಾಲತಾಣಕ್ಕೆ ಚಾಲನೆ ನೀಡಿದ್ದಾರೆ. ಡಿಜಿಶಾಲಾ ಟಿವಿ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.
ಪ್ರಮುಖಾಂಶಗಳು:
- ಡಿಜಿಶಾಲಾ” ಚಾನೆಲ್ 24*7 ಹಾಗೂ 365 ದಿನ ಪ್ರಸಾರವಾಗುವ ಉಚಿತ ಚಾನೆಲ್ ಆಗಿದೆ. ಸಾರ್ವಜನಿಕರಿಗೆ ಡಿಜಿಟಲ್ ಪಾವತಿ, ಅದರ ಅನುಕೂಲಗಳು ಮತ್ತು ವಿಧಾನದ ಬಗ್ಗೆ ಮಾಹಿತಿ ನೀಡಲು ಆರಂಭಿಸಲಾಗಿದೆ.
- ಈ ಉಪಗ್ರಹ ಆಧರಿತ ಚಾನೆಲ್ ಅನ್ನು ದೂರದರ್ಶನ ನಿರ್ವಹಿಸಲಿದೆ. ಡಿಡಿ ಉಚಿತ ಡಿಟಿಎಚ್ ಸೇವೆ ಮೂಲಕ ರಾಷ್ಟ್ರವ್ಯಾಪ್ತಿ ಭಿತ್ತರಿಸಲಾಗುವುದು.
- ಇ-ವ್ಯಾಲೆಟ್, ಯುಎಸ್ಎಸ್ ಡಿ, ಯುಪಿಐ ಸೇರಿದಂತೆ ವಿವಿಧ ಬಗೆಯ ಡಿಜಿಟಲ್ ಪಾವತಿ ವ್ಯವಸ್ಥೆ ಬಗ್ಗೆ ಮಾಹಿತಿ ಡೆಮೊ ಮೂಲಕ ಮಾಹಿತಿಯನ್ನು ನೀಡಲಿದೆ.
- ಪ್ರಾರಂಭಿಕ ಹಂತದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಸೇವೆ ಲಭ್ಯವಾಗಲಿದೆ, ನಂತರದ ದಿನಗಳಲ್ಲಿ ಇತರೆ ಭಾಷೆಯಲ್ಲೂ ಸೇವೆಯನ್ನು ಆರಂಭಿಸಲಾಗುವುದು.
ಭಾರತ-ವಿಯೆಟ್ನಂ ನಡುವೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ
ಭಾರತ ಮತ್ತು ವಿಯೆಟ್ನಂ ನಡುವೆ ನಾಗರಿಕ ಪರಮಾಣ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಭಾರತದೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ 14ನೇ ರಾಷ್ಟ್ರ ವಿಯೆಟ್ನಂ. ಅಣು ಶಕ್ತಿ ಇಲಾಖೆ ಕಾರ್ಯದರ್ಶಿ ಶೇಖರ್ ಬಸು ಮತ್ತು ವಿಯೆಟ್ನಂನ ವಿಜ್ಞಾನ ಮತ್ತು ತಂತ್ರಜ್ಞಾನ ಉಪ ಸಚಿವ ಫಾಮ್ ಕಾಂಗ್ ಟಾಕ್ ನಡುವೆ ನವದೆಹಲಿಯಲ್ಲಿ ಈ ಒಪ್ಪಂದಕ್ಕೆ ಸಹಿಹಾಕಲಾಯಿತು.
- ಉಭಯ ದೇಶಗಳ ನಡುವೆ ಇತರೆ ಮೂರು ಒಪ್ಪಂದಗಳಿಗೆ ಇದೇ ಸಂದರ್ಭದಲ್ಲಿ ಸಹಿ ಹಾಕಲಾಯಿತು. ಅವುಗಳೆಂದರೆ ಇಂಧನ, ವಿಮಾನಯಾನ ಹಾಗೂ ಸರ್ಕಾರ ಸಹಕಾರ.
- ಈ ಒಪ್ಪಂದಗಳ ಮೂಲಕ ಉಭಯ ದೇಶಗಳ ನಡುವೆ ವಿಮಾನಯಾನ ಸಂಪರ್ಕ, ಇಂಧನ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮತ್ತು ಎರಡು ದೇಶಗಳ ನಡುವೆ ಸಂಸದೀಯ ಸಹಕಾರವನ್ನು ಉತ್ತೇಜಿಸುವುದಾಗಿದೆ.
ಬಾಹ್ಯಕಾಶ ತ್ಯಾಜ್ಯ ಸಂಗ್ರಹಣೆಗೆ ಜಪಾನ್ ನಿಂದ ಬಾಹ್ಯಕಾಶ ನೌಕೆ
ಬಾಹ್ಯಾಕಾಶದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವ ಸಲುವಾಗಿ ಜಪಾನ್ ಬಾಹ್ಯಕಾಶ ಸಂಸ್ಥೆ (JAXA) ಕೌನೊಟರಿ-6 (Kounotari-6) ಹೆಸರಿನ ಬಾಹ್ಯಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಆ ಮೂಲಕ ಬಾಹ್ಯಕಾಶದಲ್ಲಿರುವ ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸಲು ದೊಡ್ಡ ಕಾಂತೀಯ ಬಲೆಯ ತಂತ್ರಜ್ಞಾನವನ್ನು ಕಳುಹಿಸಿಕೊಡಲಾಗಿದೆ. H-IIB ರಾಕೆಟ್ ಬಳಸಿ ಟನೆಗಶಿಮಾದ ಅಂತರಾಷ್ಟ್ರೀಯ ಬಾಹ್ಯಕಾಶ ಕೇಂದ್ರದಿಂದ ಇದನ್ನು ಉಡಾವಣೆಗೊಳಿಸಿದೆ.
- ನಿಗದಿತ ಜಾಗಕ್ಕೆ ರಾಕೆಟ್ ತಲುಪುತ್ತಿದ್ದಂತೆ ಬೃಹತ್ ಗಾತ್ರದ ಬಲೆ ಬಿಚ್ಚಿಕೊಳ್ಳಲಿದೆ. ಬಾಹ್ಯಾಕಾಶದಲ್ಲಿನ ಅಪಾರ ತ್ಯಾಜ್ಯಗಳನ್ನು ಈ ಮೀನಿನ ಬಲೆಯಲ್ಲಿ ಸಂಗ್ರಹಿಸಲಾಗುತ್ತದೆ.
- ಈ ತ್ಯಾಜ್ಯಗಳನ್ನು ಬಲೆಯ ಸಮೇತ ಸ್ಪೋಟಗೊಳಿಸುವ ಮೂಲಕ ನಾಶ ಪಡಿಸಲಾಗುತ್ತದೆ. ಈ ರೀತಿ ಒಂದು ಬಾರಿಗೆ ನೂರಾರು ಟನ್ ತ್ಯಾಜ್ಯವನ್ನು ನಾಶ ಮಾಡಬಹುದಾಗಿದೆ.
- ಜಪಾನ್ ಬಾಹ್ಯಕಾಶ ಸಂಸ್ಥೆ ಮತ್ತು ಜಪಾನ್ ಮೀನು ಬಲೆ ತಯಾರಕ ನಿಟ್ಟೊ ಸೀಮೊ ಇದನ್ನು ಅಭಿವೃದ್ದಿಪಡಿಸಿವೆ.
ಬಾಹ್ಯಕಾಶ ತ್ಯಾಜ್ಯ ಸಂಗ್ರಹಣೆ ಅವಶ್ಯಕತೆ ಏಕೆ?
1957 ರಲ್ಲಿ ಉಡಾಯಿಸಲಾದ ರಷ್ಯಾದ ಸ್ಪುಟ್ನಿಕ್ ಉಪಗ್ರಹದಿಂದ ಇಲ್ಲಿಯವರೆಗೆ ಅಂದರೆ ಐದು ದಶಕಗಳಲ್ಲಿ ನಡೆಸಲಾಗಿರುವ ಬಾಹ್ಯಕಾಶ ಪ್ರಯೋಗದಿಂದ ಬಾಹ್ಯಕಾಶದಲ್ಲಿ ಉಪಗ್ರಹ ಸೇರಿದಂತೆ ಅನೇಕ ಮಾನವ ನಿರ್ಮಿತ ತ್ಯಾಜ್ಯಗಳು ಸೇರ್ಪಡೆಗೊಂಡಿವೆ. ಅಂದಾಜಿನ ಪ್ರಕಾರ ಸುಮಾರು 100 ಮಿಲಿಯನ್ ಚೂರುಗಳು ನಮ್ಮ ಗ್ರಹವನ್ನು ಸುತ್ತುತ್ತಿದ್ದು, ಭವಿಷ್ಯದಲ್ಲಿ ಹೊಸ ಉಪಗ್ರಹಗಳ ಉಡಾವಣೆ, ವಿವಿಧ ಸಂಶೋಧನೆಗಳಿಗೆ ಅಡ್ಡಿ ಉಂಟು ಮಾಡಲಿದೆ.
ಕೆಸ್ಲರ್ ಸಿಂಡ್ರೋಮ್ (Kessler Syndrome): ಬಾಹ್ಯಕಾಶದ ತ್ಯಾಜ್ಯಗಳು ಅತ್ಯಂತ ವೇಗದಲ್ಲಿ ಚಲಿಸುತ್ತಿರುತ್ತವೆ. ಹೀಗೆ ಚಲಿಸುತ್ತಿರುವ ಚೂರುಗಳು ಉಪಗ್ರಹ ಅಥವಾ ಬಾಹ್ಯಕಾಶ ನೌಕೆಗೆ ಡಿಕ್ಕಿ ಹೊಡೆದಾಗ ಅಪಾರ ಹಾನಿ ಸಂಭವಿಸುತ್ತದೆ. ಇದಕ್ಕೆ ಕೆಸ್ಲರ್ ಸಿಂಡ್ರೋಮ್ ಎನ್ನಲಾಗುತ್ತದೆ.