ನ್ಯಾನೋ ಸೆರಾಮಿಕ್ ವಸ್ತುವನ್ನು ಸಂಶೋಧಿಸಿದ ವಿಜ್ಞಾನಿಗಳು
ಭಾರತೀಯ ವಿಜ್ಞಾನಿಯನ್ನು ಒಳಗೊಂಡ ಅಮೆರಿಕ ವಿಜ್ಞಾನಿಗಳ ತಂಡ ನ್ಯಾನೋ ಸೆರಾಮಿಕ್ ವಸ್ತುವನ್ನು ಪತ್ತೆಹಚ್ಚಿದ್ದಾರೆ. ಈ ನ್ಯಾನೋ ಸೆರಾಮಿಕ್ ಅನ್ನು ಸುರಕ್ಷಿತ ಮತ್ತು ಅಗ್ಗದ ಅಣು ರಿಯಾಕ್ಟರ್ ನಲ್ಲಿ ಬಳಸಬಹುದಾಗಿದೆ. ಅಲ್ಯೂಮಿನಿಯಂ ಆಕ್ಸೈಡ್ ನ್ಯಾನೋ ಸೆರಾಮಿಕ್ಸ್ ಲೇಪನದಿಂದ ಈ ಹೊಸ ವಸ್ತುವನ್ನು ಸೃಷ್ಟಿಸಲಾಗಿದೆ. ಅಧಿಕ ತಾಪಮಾನ, ಕಠಿಣ ವಿಕಿರಣ ಪರಿಣಾಮಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ.
ಪ್ರಮುಖ ಪ್ರಯೋಜನ:
- ಅಧಿಕ ತಾಪಮಾನ ಮತ್ತು ವಿಕಿರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಹಾಗೂ ಸುರಕ್ಷಿತವಾಗಿ ಹೆಚ್ಚು ಶಕ್ತಿಯನ್ನು ಉತ್ಪಾದಿಸುವ ಮುಂದಿನ ಪೀಳಿಗೆಯ ಅಣು ರಿಯಾಕ್ಟರ್ಗಳಲ್ಲಿ ಬಳಸಬಹುದಾಗಿದೆ.
ವಿಭಿನ್ನತೆ ಹೇಗೆ?
ಈ ಹಿಂದಿನಿಂದಲೂ ರಿಯಾಕ್ಟರ್ ನಲ್ಲಿ ಅಣು ವಿಧಳನ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಶಾಖವನ್ನು ಹೀರಿಕೊಳ್ಳಲು ನೀರನ್ನು ಪ್ರಾಥಮಿಕ ತಂಪುಕಾರಕವಾಗಿ ಬಳಸಲಾಗುತ್ತಿದೆ. ಆದರೆ ನೀರನ್ನು ತಂಪುಕಾರಕವಾಗಿ ಬಳಸುವುದರಿಂದ ತುಕ್ಕಿನಿಂದ ಹಾನಿ ಉಂಟಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ನೀರು ತಾಪದ ಮೀತಿಯನ್ನು ಹೊಂದಿರುವ ಕಾರಣ ಮುಂದುವರೆದ ರಿಯಾಕ್ಟರ್ ನಲ್ಲಿ ಬಳಸಲು ಸಾಧ್ಯವಿಲ್ಲ. ಹೊಸ ತಂಪುಕಾರಕಗಳಾದ ಸೀಸ ಮತ್ತು ಸೋಡಿಯಂ ದ್ರವದ ಲೋಹಗಳು ಹೆಚ್ಚಿನ ತಾಪಮಾನದಲ್ಲಿ ಪರಿಣಾಮಕಾರಿ. ಆದರೆ ರಿಯಾಕ್ಟರ್ನಲ್ಲಿ ಬಳಸಲಾಗುವ ವಸ್ತುಗಳಿಗೆ ತುಕ್ಕು ಹಿಡಿಯುವ ಸಂಭವ ಹೆಚ್ಚು.
ಮಧ್ಯ ಪ್ರದೇಶ ಸರ್ಕಾರದಿಂದ “ನರ್ಮದಾ ಸೇವಾ ಯಾತ್ರ”
ನರ್ಮದಾ ನದಿಯನ್ನು ಮಾಲಿನ್ಯ ಮುಕ್ತವನ್ನಾಗಿಸುವ ಸಲುವಾಗಿ ಮಧ್ಯ ಪ್ರದೇಶ ಸರ್ಕಾರ ಐದು ತಿಂಗಳ ದೀರ್ಘವಾಧಿಯ “ನರ್ಮದಾ ಸೇವಾ ಯಾತ್ರ”ವನ್ನು ಆರಂಭಿಸಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ರವರು ಅಮರಕಂಟಕ್ ನಲ್ಲಿ ಇದಕ್ಕೆ ಚಾಲನೆ ನೀಡಿದರು. ನದಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಇದರ ಧ್ಯೇಯ. ನದಿ ಮತ್ತು ಪರಿಸರವನ್ನು ಸಂರಕ್ಷಿಸಲು ಕೈಗೊಳ್ಳಲಾದ ವಿಶ್ವದ ದೊಡ್ಡ ಅಭಿಯಾನವಾಗಿದೆ.
ಪ್ರಮುಖಾಂಶಗಳು:
- ನದಿ ದಡದ ಮೇಲಿರುವ ಎಲ್ಲಾ ಹಳ್ಳಿಗಳಲ್ಲಿ ನರ್ಮದಾ ಸೇವಾ ಸಮಿತಿಯನ್ನು ಸ್ಥಾಪಿಸಲಾಗುವುದು. ನದಿ ಸಂರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಈ ಸಮಿತಿಗಳು ತೆಗೆದುಕೊಳ್ಳಲಿವೆ.
- ಸಾರ್ವಜನಿಕರು ಮತ್ತು ಸಮಾಜದ ಭಾಗವಹಿಸುವಿಕೆಯೊಂದಿಗೆ ನರ್ಮದಾ ನದಿಯ ದಡದ ಮೇಲೆ ಗಿಡಗಳನ್ನು ನೆಡಲಾಗುವುದು. ರಾಜ್ಯದ 16 ಜಿಲ್ಲೆಗಳಲ್ಲಿ ಸುಮಾರು 1,900 ಕಿ.ಮೀ ದೂರ ಗಿಡಗಳನ್ನು ನೆಡಲಾಗುವುದು.
- ನದಿ ದಂಡೆಯಲ್ಲಿರುವ ಜಿಲ್ಲೆಗಳು ಹಾಗೂ ಹಳ್ಳಿಗಳಲ್ಲಿ ಚರಂಡಿ ನೀರನ್ನು ನದಿಗೆ ಹರಿಸುವ ಮುಂಚೆ ಸಂಸ್ಕರಿಸಲು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುವುದು.
- ಸೇವಾ ಯಾತ್ರದಲ್ಲಿ ನರ್ಮದಾ ನದಿಯ ಸಂರಕ್ಷಣೆಗೆ ನದಿಯ ಧಾರ್ಮಿಕ, ಸಾಮಾಜಿಕ ಮತ್ತು ವೈಜ್ಞಾನಿಕ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ವಿಶ್ವದ ಅತಿ ದೊಡ್ಡ ರೈಲು ಸುರಂಗ “ಗೊಥ್ವಾರ್ಡ್ ಸುರಂಗ ಮಾರ್ಗ” ಸೇವೆ ಆರಂಭ
ಜಗತ್ತಿನ ಅತಿ ದೊಡ್ಡ ರೈಲು ಸುರಂಗ “ಗೊಥ್ವಾರ್ಡ್ ಸುರಂಗ ಮಾರ್ಗ”ವನ್ನು ಅಧಿಕೃತವಾಗಿ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಸುರಂಗ ಮಾರ್ಗದ ಮೂಲಕ ಜೂರಿಜ್ ನಿಂದ ಲುಗನೊ ವರೆಗೆ ಮೊದಲ ರೈಲು ಸಂಚಾರ ಆರಂಭಿಸಿತು. ಎರಡು ಸುರಂಗ ಮಾರ್ಗಗಳನ್ನು ಹೊಂದಿರುವ 57 ಕಿ.ಮೀ ಉದ್ದದ ಇದು ವಿಶ್ವದ ಅತಿ ದೊಡ್ಡ ಮತ್ತು ಆಳವಾದ ಸುರಂಗ ಮಾರ್ಗವಾಗಿದೆ. ಜಪಾನಿನ 53.9 ಕಿ.ಮೀ ಉದ್ದದ ಸೈಕನ್ ಸುರಂಗ ಮಾರ್ಗ ಇದುವರೆಗೂ ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗವೆನಿಸಿತ್ತು.
- ಸ್ವಿಜಲ್ಯಾಂಡಿನ ಆಲ್ಪ್ಸ್ ಪರ್ವತದ 2.3 ಕಿ.ಮೀ ಆಳದಲ್ಲಿ ಹಾಗೂ 57 ಕಿ.ಮೀ ಉದ್ದದ ಸುರಂಗ ಮಾರ್ಗ ಇದಾಗಿದೆ.
- ಉತ್ತರ ಮತ್ತು ದಕ್ಷಿಣ ಯುರೋಪ್ ಗೆ ಇದು ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಅನೇಕ ರೈಲು ಸಂಚಾರಗಳ ಸಮಯ ಕಡಿಮೆಯಾಗಲಿದೆ.
- 70 ವರ್ಷಗಳ ಹಿಂದೆಯೇ ಸ್ವಿಸ್ ತಜ್ಞರು ಈ ಹಾದಿಯ ಬಗೆಗೆ ನೀಲಿನಕ್ಷೆಯನ್ನು ತಯಾರಿಸಿದ್ದರು. ಅದರ ವಿವಿಧ ಹಂತದ ಪರಿಶೀಲನೆಗಳು ನಡೆದು 1996ರಲ್ಲಿ ಕೆಲಸ ಉದ್ಘಾಟನೆಗೊಂಡಿತು. ಆದರೆ ಇದಕ್ಕೆ ಪೂರ್ಣವಾಗಿ ಕೆಲಸ ನಡೆದಿರುವುದು ಸತತ ಹದಿನೇಳು ವರ್ಷಗಳ ಕಾಲ. ಸರಾಸರಿ ದಿನಕ್ಕೆ ಎರಡು ಸಾವಿರ ಕಾರ್ಮಿಕರ ದುಡಿಮೆ ಇದಕ್ಕಾಗಿ ವ್ಯಯವಾಗಿದೆ. ಆದರೂ ದಿನದಲ್ಲಿ ಕೊರೆದ ಸುರಂಗ ಕೇವಲ ನೂರು ಅಡಿಗಳಷ್ಟು ಮಾತ್ರ.
- ಈ ಸುರಂಗದ ನಿರ್ಮಾಣದಿಂದಾಗಿ ಪ್ರತಿದಿನ ಎರಡೂ ಮಾರ್ಗಗಳಲ್ಲಿ 260 ಸರಕು ಸಾಗಣೆ ಮತ್ತು 65 ಪ್ರಯಾಣಿಕರ ರೈಲುಗಳು ಸಂಚರಿಸಲಿವೆ. ಇಟಲಿ, ಜಿನೋವಾಗಳಿಗೆ ಸುಲಭ ಸಂಪರ್ಕವಾಗಲಿದೆ.
“100 ಮಿಲಿಯನ್ ಫಾರ್ 100 ಮಿಲಿಯನ್” ಅಭಿಯಾನಕ್ಕೆ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಚಾಲನೆ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು “100 ಮಿಲಿಯನ್ ಫಾರ್ 100 ಮಿಲಿಯನ್” ಅಭಿಯಾನಕ್ಕೆ ರಾಷ್ಟ್ರಪತಿ ಭವನದಲ್ಲಿ ಚಾಲನೆ ನೀಡಿದರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ರವರು ಅಭಿಯಾನದ ರೂವಾರಿಯಾಗಿದ್ದು, ಕೈಲಾಸ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್ ಆಯೋಜಿಸಿತ್ತು.
ಪ್ರಮುಖಾಂಶಗಳು:
- ವಿಶ್ವದಾದ್ಯಂತ 100 ಮಿಲಿಯನ್ ಬಡ ಮಕ್ಕಳಿಗೆ 100 ಯುವಕರು ಮತ್ತು ಮಕ್ಕಳನ್ನು ಸಜ್ಜುಗೊಳಿಸುವುದು ಅಭಿಯಾನದ ಗುರಿಯಾಗಿದೆ.
- ಮುಂದಿನ ಐದು ವರ್ಷಗಳಲ್ಲಿ ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಗುಲಾಮಗಿರಿ ಮತ್ತು ಮಕ್ಕಳ ವಿರುದ್ದ ಶೋಷಣೆಯನ್ನು ನಿರ್ಮೂಲನೆ ಮಾಡುವುದು ಅಭಿಯಾನದ ಉದ್ದೇಶ.
- ಅಲ್ಲದೇ ಪ್ರತಿ ಮಗುವಿನ ಹಕ್ಕು, ಶಿಕ್ಷಣ ಹಾಗೂ ಸುರಕ್ಷತೆಯನ್ನು ಪ್ರೋತ್ಸಾಹಿಸುವುದು.
- ಭಯಾನಕ ಸ್ಥಿತಿಯಲ್ಲಿ ವಾಸಿಸುತ್ತಿರುವ ದುರಾದೃಷ್ಟ ಮಕ್ಕಳ ಪರ ಧ್ವನಿಯಾಗಿ ಮಕ್ಕಳ ಸ್ನೇಹಿ ವಾತಾವರಣವನ್ನು ರೂಪಿಸಲು 100 ಮಿಲಿಯನ್ ಮಕ್ಕಳನ್ನು ಪ್ರೇರೆಪಿಸುವುದು.